ಬಿಜೆಪಿ ಧರ್ಮಸ್ಥಳ ಸಭೆಗೆ ಹಿರಿಯರ ವಿರೋಧ, ಕುದುರೆ ವ್ಯಾಪಾರ ಮಾಡಿದವರು ಬಂದು ಪ್ರಮಾಣ ಮಾಡ್ಲಿ ಎಂದ ಆರ್ ಅಶೋಕ್

Published : Jun 22, 2026, 01:28 PM IST
R Ashoka

ಸಾರಾಂಶ

ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನವು ಬಿಜೆಪಿಯಲ್ಲಿ ತೀವ್ರ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವ ನಿರ್ಧಾರಕ್ಕೆ ಪಕ್ಷದ ಹಿರಿಯ ನಾಯಕರೇ ವಿರೋಧ ವ್ಯಕ್ತಪಡಿಸಿದ್ದು, ಈ ವಿವಾದ ಇದೀಗ ದೆಹಲಿ ಹೈಕಮಾಂಡ್ ಅಂಗಳ ತಲುಪಿದೆ. ಈ ಬೆಳವಣಿಗೆಗಳ ಬಗ್ಗೆ ಮೈತ್ರಿಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕೂಡ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಡ್ಡಮತದಾನ (Cross Voting) ಹಾಗೂ ಇದಕ್ಕೆ ತನಿಖೆ ನಡೆಸಲು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಆಣೆ-ಪ್ರಮಾಣ ಮಾಡಿಸಲು ಮುಂದಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿರ್ಧಾರಕ್ಕೆ ಸ್ವಪಕ್ಷದಲ್ಲೇ ತೀವ್ರ ಅಪಸ್ವರ ಕೇಳಿಬಂದಿದೆ. ಈ ಸೂಕ್ಷ್ಮ ವಿಚಾರ ಈಗ ದಿಲ್ಲಿ ಅಂಗಳ ತಲುಪಿದ್ದು, ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಹೈಕಮಾಂಡ್ ನಾಯಕರ ಭೇಟಿಗೆ ಸಜ್ಜಾಗಿದ್ದಾರೆ. ಮತ್ತೊಂದೆಡೆ, ಮೈತ್ರಿ ಪಕ್ಷದ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.

1. ಧರ್ಮಸ್ಥಳ ಆಣೆ-ಪ್ರಮಾಣ ಬೇಡ:  ಆರ್‌ ಅಶೋಕ್ 

ಧರ್ಮಸ್ಥಳದಲ್ಲಿ ಶಾಸಕರಿಂದ ಪ್ರಮಾಣ ಮಾಡಿಸುವ ವಿಚಾರದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್, ಹಿರಿಯರ ಸಲಹೆಯಂತೆ ನಡೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

"ನಮ್ಮ ಪಕ್ಷದ ಹಿರಿಯ ನಾಯಕರಾದ ಸುರೇಶ್ ಕುಮಾರ್, ಡಿ.ವಿ. ಸದಾನಂದಗೌಡ ಸೇರಿದಂತೆ ಹಲವರು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿರಿಯರ ಈ ನಡೆ ಮತ್ತು ಒಟ್ಟಾರೆ ಜನಾಭಿಪ್ರಾಯದಂತೆಯೇ ನಾವು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದು ಅಶೋಕ್ ಹೇಳಿದರು.

'ಆಪರೇಷನ್ ಹಸ್ತ'ದ ವಿರುದ್ಧ ಆಕ್ರೋಶ

ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಶೋಕ್, "ನಾವು ಅಧಿಕಾರದಲ್ಲಿದ್ದಾಗ ಶಾಸಕರನ್ನು ಸೆಳೆದಿದ್ದಕ್ಕೆ ಅದನ್ನು 'ಆಪರೇಷನ್ ಕಮಲ' ಎಂದು ಟೀಕಿಸುತ್ತಿದ್ದೀರಿ. ಆದರೆ ಈಗ ನೀವು ಮಾಡುತ್ತಿರುವ ಇಂತಹ ಹಲ್ಕಾ ಕೆಲಸಕ್ಕೆ 'ಆಪರೇಷನ್ ಹಸ್ತ' ಅನ್ನಬೇಕಾ? ಕುದುರೆ ವ್ಯಾಪಾರ ಮಾಡಿ, ಹಣ ನೀಡಿ ಅಡ್ಡಮತದಾನ ಮಾಡಿಸಿರುವವರೇ ಬಂದು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ. ಅಧಿಕಾರ ಇದೆ ಎಂದು ನೀವು ಮಾಡುತ್ತಿರುವ ಇಂತಹ ರಾಜಕೀಯ ಎಲ್ಲಿಗೂ ಹೋಗುವುದಿಲ್ಲ, ನಾಳೆ ತಿರುಗಿಸಿ ವಾಪಸ್ ನಿಮಗೇ ಸುತ್ತಿಕೊಳ್ಳುತ್ತದೆ" ಎಂದು ಎಚ್ಚರಿಸಿದರು.

2. ಕ್ರಾಸ್ ವೋಟಿಂಗ್ ಸುಳಿವು ಸಿಕ್ಕಿದೆ: ನಾಳೆ ಹೈಕಮಾಂಡ್ ಭೇಟಿ

ಅಡ್ಡಮತದಾನದ ಹಿನ್ನೆಲೆಯಲ್ಲಿ ಹೈಕಮಾಂಡ್ ಗರಂ ಆಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ ಆರ್‌ ಅಶೋಕ್, ನಾವೇ ಸ್ವತಃ ರಾಷ್ಟ್ರೀಯ ನಾಯಕರ ಭೇಟಿಗೆ ಸಮಯ ಕೇಳಿದ್ದೆವು ಎಂದು ಸ್ಪಷ್ಟಪಡಿಸಿದರು. "ನಾಳೆ (ಮಂಗಳವಾರ) ಮಧ್ಯಾಹ್ನ 12 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಅಪಾಯಿಂಟ್‌ಮೆಂಟ್ ಸಿಕ್ಕಿದೆ. ದೆಹಲಿಗೆ ತೆರಳಿ ಕ್ರಾಸ್ ವೋಟಿಂಗ್ ನಡೆದಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಯಾರು ಅಡ್ಡಮತದಾನ ಮಾಡಿದ್ದಾರೆ ಎಂಬ ಬಗ್ಗೆ ಈಗಾಗಲೇ ಸ್ಪಷ್ಟವಾದ ಸುಳಿವು ಸಿಕ್ಕಿದೆ. ಇದರ ತನಿಖೆಗೆ ಸಮಿತಿ ರಚಿಸಲಾಗಿದ್ದು, ಇವತ್ತು ಅಥವಾ ನಾಳೆ ವರದಿ ಕೈಸೇರಲಿದೆ. ಕೆಲವು ಶಾಸಕರ ಮೇಲೆ ತೀವ್ರ ಅನುಮಾನಗಳಿದ್ದು, ಅವರು ಹಣ ಪಡೆದೇ ಮತ ಹಾಕಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.

"ಕ್ಷೇತ್ರದ ಅಭಿವೃದ್ಧಿಗಾಗಿ ಅಂತ ಯಾರೋ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಕ್ಷೇತ್ರದ ಅಭಿವೃದ್ಧಿಗಾಗಿ ಮಾಡಿದ್ದಲ್ಲ, ಕೇವಲ ತಮ್ಮ ಸ್ವಂತ ಅಭಿವೃದ್ಧಿಗಾಗಿ (ಹಣಕ್ಕಾಗಿ) ಮಾಡಿರುವ ಕೆಲಸ"

— ಆರ್‌. ಅಶೋಕ್, ವಿರೋಧ ಪಕ್ಷದ ನಾಯಕ

3. ವಿಜಯೇಂದ್ರ ತೀರ್ಮಾನಕ್ಕೆ ಸ್ವಪಕ್ಷೀಯರೇ ರೆಡ್ ಸಿಗ್ನಲ್!

ವಿಧಾನ ಪರಿಷತ್‌ ಚುನಾವಣೆಯ ಅಡ್ಡಮತದಾನದ ಸತ್ಯಾಸತ್ಯತೆ ಹೊರತರಲು ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಿರ್ಧಾರಕ್ಕೆ ಪಕ್ಷದ ಒಳಗಡೆಯೇ ಭಾರಿ ವಿರೋಧ ವ್ಯಕ್ತವಾಗಿದೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ: ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದಲ್ಲಿ ರಾಜಕೀಯ ಸಭೆ ನಡೆಸುವುದು ಹಾಗೂ ಆಣೆ-ಪ್ರಮಾಣ ಮಾಡಿಸುವ ನಿರ್ಧಾರವನ್ನು ಕೈಬಿಡುವಂತೆ ರಾಜ್ಯಾಧ್ಯಕ್ಷರಿಗೆ ಬಹಿರಂಗವಾಗಿಯೇ ಸಲಹೆ ನೀಡಿದ್ದಾರೆ.

ಮಾಜಿ ಸಿಎಂ ಡಿ.ವಿ. ಸದಾನಂದಗೌಡ ತೀವ್ರ ಅಸಮಾಧಾನ: "ರಾಜ್ಯಾಧ್ಯಕ್ಷರಿಗೆ ಕರೆ ಮಾಡಿ ನನ್ನ ವಿರೋಧ ತಿಳಿಸಿದ್ದೇನೆ. ಯಾವುದೇ ಕಾರಣಕ್ಕೂ ಪವಿತ್ರ ಧರ್ಮ ಕ್ಷೇತ್ರಕ್ಕೆ ರಾಜಕೀಯವನ್ನು ಎಳೆದು ತರಬೇಡಿ. ದೇವರ ಹತ್ತಿರವೂ ರಾಜಕೀಯ ಮಾಡುವುದಾದರೆ, ಎಲ್ಲವನ್ನೂ ದೇವರಿಗೇ ಬಿಟ್ಟುಬಿಡಿ. ನಮ್ಮಿಂದ ರಾಜಕೀಯ ಮಾಡಲು ಸಾಧ್ಯವಾಗದಿದ್ದರೆ ದೇವರೇ ರಾಜಕೀಯ ಮಾಡಲಿ" ಎಂದು ಮಾರ್ಮಿಕವಾಗಿ ಕಿಡಿಕಾರಿದ್ದಾರೆ.

ಶಾಸಕ ಎಸ್. ಸುರೇಶ್ ಕುಮಾರ್: ಪವಿತ್ರ ಧಾರ್ಮಿಕ ಕ್ಷೇತ್ರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಸಭೆ ಕರೆಯುವ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

4. 'ರಾಜ್ಯದಲ್ಲಿ ಬ್ಲ್ಯಾಕ್ ಮೇಲ್ ಸರ್ಕಾರ ನಡೆಯುತ್ತಿದೆ': ಹೆಚ್.ಡಿ. ಕುಮಾರಸ್ವಾಮಿ ಟೀಕೆ

ಧರ್ಮಸ್ಥಳದಲ್ಲಿ ಬಿಜೆಪಿ ಸಭೆ ಕರೆಯುವ ವಿಚಾರವಾಗಿ ಮೈತ್ರಿ ಪಕ್ಷದ ನಾಯಕ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಗೆ ಬೆಂಬಲ ನೀಡುತ್ತಲೇ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಧರ್ಮಸ್ಥಳಕ್ಕೆ ಶಾಸಕರನ್ನು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಪ್ರಸ್ತುತ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಸಂಪೂರ್ಣವಾಗಿ 'ಬ್ಲ್ಯಾಕ್ ಮೇಲ್' ತಂತ್ರ ನಡೆಯುತ್ತಿದೆ. ಕ್ರಾಸ್ ಓಟಿಂಗ್ ರಾಜಕೀಯಕ್ಕೆ ಹೊಸದೇನಲ್ಲ, ಇತ್ತೀಚೆಗಷ್ಟೇ ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ನದ್ದೇ ಶಾಸಕರು ಕ್ರಾಸ್ ಓಟ್ ಮಾಡಿದ್ದರು. ಹಣದ ಬಲ (Man power) ಮತ್ತು ತೋಳ್ಬಲ (Muscle power) ಬಳಸಿ ಇಂತಹ ಕೆಲಸಗಳನ್ನು ಮಾಡಿಸುತ್ತಾರೆ. ನಮ್ಮ ಬಿಜೆಪಿ ಸ್ನೇಹಿತರು ಇದಕ್ಕೆ ಹೆದರಬೇಕಾದ ಅಗತ್ಯವಿಲ್ಲ ಎಂದರು.

2028 ಕ್ಕೆ ಈ ಕೆಟ್ಟ ಸರ್ಕಾರ ತೊಲಗಲಿ

"ನಮ್ಮ ಜೆಡಿಎಸ್ ಪಕ್ಷದ 17 ಶಾಸಕರನ್ನು ಕರೆದು ನಾನು ಶಿಸ್ತಿನಿಂದ ಚರ್ಚೆ ನಡೆಸಿದ್ದೇನೆ. ಪ್ರಸ್ತುತ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಆದರೆ ಈಗಿನ ಮುಖ್ಯಮಂತ್ರಿಗಳು ಬಹಳ 'ದಾರಾಳ'ವಾಗಿದ್ದಾರೆ! ನಿಮ್ಮ ಕ್ಷೇತ್ರಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ಕೊಡುವುದಾಗಿ ಶಾಸಕರಿಗೆ ಆಮಿಷ ಒಡ್ಡಿದ್ದಾರೆ. ಹಾಗಾಗಿ ಶಾಸಕರು ಕ್ಷೇತ್ರದ ಅಭಿವೃದ್ಧಿ ಹೆಸರಲ್ಲಿ ಕ್ರಾಸ್ ವೋಟ್ ಮಾಡಿರಬಹುದು. ಈ ವಿಚಾರವನ್ನು ಇಲ್ಲಿಗೆ ಬಿಟ್ಟು, ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಕೆಟ್ಟ ಸರ್ಕಾರ ಮತ್ತೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದೇ ನಮ್ಮ ಮುಂದಿರುವ ಗುರಿ" ಎಂದು ಹೆಚ್‌ಡಿಕೆ ಕರೆ ನೀಡಿದರು.

ಒಟ್ಟಾರೆಯಾಗಿ, ಪರಿಷತ್ ಚುನಾವಣೆಯ ಅಡ್ಡಮತದಾನದ ಕಿಡಿ ಈಗ ಬಿಜೆಪಿಯಲ್ಲಿ ಆಂತರಿಕ ಭಿನ್ನಮತಕ್ಕೆ ಕಾರಣವಾಗಿದ್ದು, ಧರ್ಮಸ್ಥಳದ ಆಣೆ-ಪ್ರಮಾಣದ ಹಠಕ್ಕೆ ಹಿರಿಯ ನಾಯಕರು ಬ್ರೇಕ್ ಹಾಕಿದ್ದಾರೆ. ಅಂತಿಮವಾಗಿ ಹೈಕಮಾಂಡ್ ಈ ಶಾಸಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಜೆಪಿಗೆ ಡಿವಿ ಸದಾನಂದ ಗೌಡ ಬಿಗ್ ಶಾಕ್; ‘ಪ್ರೆಸ್ಟೀಜ್ ಅಪಾರ್ಟ್‌ಮೆಂಟ್’ ರಹಸ್ಯ ಸಭೆ ಬಯಲು ಮಾಡಿದ ಮಾಜಿ ಸಿಎಂ!
ಗ್ಯಾರಂಟಿ ಸಮಿತಿಯಲ್ಲಿ 55000 ಕಾಂಗ್ರೆಸ್ಸಿಗರಿಗೆ ಹುದ್ದೆ; ಡಿಕೆ ಮಾಸ್ಟರ್‌ಸ್ಟ್ರೋಕ್‌!