ವಿಧಾನಸಭಾ ಚುನಾವಣೆಗೆ ಮೂರ್ನಾಲ್ಕು ತಿಂಗಳು ಬಾಕಿಯಿರುವ ಕಾರಣ ಹಳೇ ಮೈಸೂರಿನಲ್ಲಿ ನೆಲೆ ಕಂಡುಕೊಳ್ಳಲು ಹಾತೊರೆಯುತ್ತಿರುವ ಬಿಜೆಪಿ ಇದೀಗ ಶ್ರೀರಾಮನ ಜಪ ಮಾಡಲು ಆರಂಭಿಸಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಡಿ.30): ವಿಧಾನಸಭಾ ಚುನಾವಣೆಗೆ ಮೂರ್ನಾಲ್ಕು ತಿಂಗಳು ಬಾಕಿಯಿರುವ ಕಾರಣ ಹಳೇ ಮೈಸೂರಿನಲ್ಲಿ ನೆಲೆ ಕಂಡುಕೊಳ್ಳಲು ಹಾತೊರೆಯುತ್ತಿರುವ ಬಿಜೆಪಿ ಇದೀಗ ಶ್ರೀರಾಮನ ಜಪ ಮಾಡಲು ಆರಂಭಿಸಿದೆ. ಜೆಡಿಎಸ್- ಕಾಂಗ್ರೆಸ್ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸುವುದು ಹಾಗೂ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಧಾರ್ಮಿಕ ಭಾವನೆಯಲ್ಲಿ ಕಟ್ಟಿಹಾಕುವ ಪ್ಲಾನ್ ಬಿಜೆಪಿಯದು. ಇದಕ್ಕಾಗಿಯೇ ರಾಮನಗರದಲ್ಲಿರುವ ರಾಮದೇವರ ಬೆಟ್ಟವನ್ನು ಅಯೋಧ್ಯೆ ದಕ್ಷಿಣ ಕೇಂದ್ರವನ್ನಾಗಿ ಮಾಡಿ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ದಾಳ ಉರುಳಿಸಿದೆ.
ಅಲ್ಲದೆ, ಮುಜರಾಯಿ ಇಲಾಖೆಯ ಅಧೀನದಲ್ಲಿರುವ ರಾಮದೇವರ ಬೆಟ್ಟದಲ್ಲಿರುವ 19 ಎಕರೆ ಪ್ರದೇಶದಲ್ಲಿ ಅಯೋಧ್ಯೆಯ ರಾಮ ಮಂದಿರದಂತೆಯೇ ಒಂದು ದೇಗುಲ ನಿರ್ಮಿಸಲು ತ್ವರಿತವಾಗಿ ಒಂದು ಅಭಿವೃದ್ಧಿ ಸಮಿತಿಯನ್ನು ರಚಿಸಬೇಕೆಂದು ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಪತ್ರ ಕೂಡ ಬರೆದಿದ್ದಾರೆ. ಇದೆಲ್ಲ ಕಾರಣದಿಂದಾಗಿ ರಾಮದೇವರ ಬೆಟ್ಟ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜಾತಿ, ಧರ್ಮಾಧಾರಿತ ರಾಜಕೀಯಕ್ಕೆ ಮನ್ನಣೆ ನೀಡಲ್ಲ: ಅನಿತಾ ಕುಮಾರಸ್ವಾಮಿ
ರಾಮದೇವರ ಬೆಟ್ಟ ಪರಿಸರ ಸೂಕ್ಷ್ಮ ವಲಯ: ‘ಶೋಲೆ’ ಸಿನಿಮಾ ಮೂಲಕ ಖ್ಯಾತಿಗೆ ಬಂದ ಶ್ರೀ ರಾಮದೇವರ ಬೆಟ್ಟಕ್ಕೆ ಪೌರಾಣಿಕ ಇತಿಹಾಸವಿದೆ. ಜೊತೆಗೆ ರಣಹದ್ದುಗಳ ವನ್ಯಜೀವಿಧಾಮ ಎಂಬ ಹೆಗ್ಗಳಿಕೆಯೂ ಇದೆ. ಈ ಬೆಟ್ಟದಲ್ಲಿರುವ ಅಪರೂಪದ ಲಾಂಗ್ ಬಿಲ್ಡ್ ಹಾಗೂ ವೈಟ್‌ಬ್ಯಾಕ್ ರಣಹದ್ದುಗಳನ್ನು ಸಂರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ 2012ರಲ್ಲಿಯೇ ಶ್ರೀ ರಾಮದೇವರ ಬೆಟ್ಟವನ್ನು ಅಭಯಾರಣ್ಯ ಎಂದು ಘೋಷಿಸಿದೆ.
ದಕ್ಷಿಣ ಭಾರತದಲ್ಲಿರುವ ಏಕೈಕ ರಣಹದ್ದುಗಳ ವನ್ಯಧಾಮವಾದ ಶ್ರೀ ರಾಮದೇವರಬೆಟ್ಟವನ್ನು ಕೇಂದ್ರ ಸರ್ಕಾರ 2016ರಲ್ಲಿ ಪರಿಸರ ಸೂಕ್ಷ್ಮ ವಲಯವೆಂದು ಗೆಜೆಟ್ ಮೂಲಕ ಘೋಷಿಸಿದೆ. ಬೆಟ್ಟದ ಅಂಚಿನಿಂದ ಸುತ್ತಮುತ್ತ 1.80 ಕಿ.ಮೀ. ವ್ಯಾಪ್ತಿಯಲ್ಲಿ (ಹರೀಸಂದ್ರ, ವಡೇರಹಳ್ಳಿ, ಮಾದಾಪುರ, ಕೇತೋಹಳ್ಳಿ, ಸಂಗಬಸವನದೊಡ್ಡಿ, ಬಸನವಪುರ, ಹಳ್ಳಿಮಾಳ ಗ್ರಾಮಗಳ ಕೆಲವು ಭಾಗಗಳು, ಬೆಂಗಳೂರು - ಮೈಸೂರು ಹೆದ್ದಾರಿಯ ಕೆಲವು ಭಾಗ ಸೂಕ್ಷ್ಮ ವಲಯಕ್ಕೆ ಒಳಪಟ್ಟಿದೆ) ಪರಿಸರ ಸೂಕ್ಷ್ಮ ವಲಯ ವಿಸ್ತರಿಸಲಾಗಿದೆ.
ಬೆಟ್ಟದಲ್ಲಿ ವಿನಾಶದ ಅಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ ವಾಸಸ್ಥಾನವಾಗಿದೆ. ಕೇವಲ ಬೆರಳಣಿಕೆಯಷ್ಟಿದ್ದ ಉದ್ದಕೊಕ್ಕಿನ ರಣಹದ್ದುಗಳನ್ನು ರಕ್ಷಿಸುವ ಸಲುವಾಗಿಯೇ ರಾಜ್ಯ ಸರ್ಕಾರ ಈ ಪ್ರದೇಶವನ್ನು ವನ್ಯಜೀವಿಧಾಮವನ್ನಾಗಿ, ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿದೆ. ಈ ಹಿಂದೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ರಾಮದೇವರ ಬೆಟ್ಟದಲ್ಲಿ ಸುಮಾರು 7.50 ಕೋಟಿ ರುಪಾಯಿ ವೆಚ್ಚದಲ್ಲಿ ತ್ರೀ ಡಿ ವರ್ಚುವಲ್ ರಿಯಾಲಿಟಿ ವಿಲೇಜ್ ಅನ್ನು ನಿರ್ಮಾಣ ಮಾಡಲು ನಿರ್ಧರಿಸಿತ್ತು.
ಮಂದಿರ ನಿರ್ಮಾಣ ಸಚಿವರ ಸಂಕಲ್ಪ: ಶೋಲೆ ಸಿನಿಮಾ ಚಿತ್ರೀಕರಣ ವೇಳೆ ಹಳ್ಳಿಯ ಸೆಟ್ ಸೃಷ್ಟಿಸಲಾಗಿತ್ತು. ಅದೇ ಹಳ್ಳಿಯನ್ನು ಮತ್ತೆ ಸೃಷ್ಟಿಸುವುದು ತ್ರೀ ಡಿ ವರ್ಚುವಲ್ ರಿಯಾಲಿಟಿ ವಿಲೇಜ್ ನ ಉದ್ದೇಶವಾಗಿತ್ತು. ಆದರೆ, ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಕೈ ಬಿಡಲಾಯಿತು. ಆದರೀಗ ರಾಮದೇವರ ಬೆಟ್ಟದ ಜೀರ್ಣೋದ್ಧಾರದ ಜೊತೆಗೆ ಅಯೋಧ್ಯೆ ಮಾದರಿ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದ ಸಚಿವರೇ ಸಂಕಲ್ಪ ಮಾಡಿರುವುದು ರಾಜಕೀಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಅನುಮತಿ ಸಿಗುವುದು ಅನುಮಾನ: ಲಾಂಗ್ ಬಿಲ್ಡ್ ವಲ್ಚರ್ಸ್ ಒಂದು ಬಾರಿಗೆ ಒಂದೇ ಮೊಟ್ಟೆಯಿಡುವ ಕಾರಣ ಇವುಗಳ ಸಂತತಿ ಬೇಗನೆ ಹೆಚ್ಚಾಗುವುದಿಲ್ಲ. ಹಾಗಾಗಿ ಸೂಕ್ಷ್ಮವಾಗಿ ಇವುಗಳನ್ನು ಕಾಪಾಡಬೇಕಾಗಿದೆ. ಈ ಬೆಟ್ಟವು ದೇಶದ ಏಕೈಕ ರಣಹದ್ದು ಸಂರಕ್ಷಿತಾ ವಲಯ. ಅಲ್ಲದೆ, ರಣಹದ್ದುಗಳಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ರಕ್ಷಣೆ ನೀಡಲಾಗಿದೆ. ಕರ್ನಾಟಕ ಅರಣ್ಯ ಇಲಾಖೆ ರಾಮದೇವರ ಬೆಟ್ಟದ ಸುತ್ತಲು ಸಸಿಗಳನ್ನು ನೆಟ್ಟು ಹಸಿರನ್ನು ಹೆಚ್ಚಿಸುವ ಪ್ರಯತ್ನದಲ್ಲಿದೆ. ಇಲ್ಲಿ ಭೇಟಿ ನೀಡಲು ಇಲಾಖೆಯಿಂದ ಅನುಮತಿ ಬೇಕು. ಹೀಗಾಗಿ ಈ ಜಾಗದಲ್ಲಿ ಮನರಂಜನಾ, ಕಟ್ಟಡ ನಿರ್ಮಾಣದಂತಹ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ನೀಡದೆ ಅರಣ್ಯಇಲಾಖೆಯೇ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಗಳಿವೆ.
ಮಾಸ್ಟರ್ ಪ್ಲಾನ್: ಪರಿಸರ ಸೂಕ್ಷ್ಮವಲಯಕ್ಕೆ ಸಂಬಂಧಿಸಿದಂತೆ ಜೋನಲ್ ಮಾಸ್ಟರ್ ಪ್ಲಾನ್ ರಾಜ್ಯ ಸರ್ಕಾರ ತಯಾರಿಸಬೇಕು. ಪರಿಸರ, ಅರಣ್ಯ, ನಗರಾಭಿವೃದ್ಧಿ, ನಗರಸಭೆ, ಪ್ರವಾಸೋದ್ಯಮ, ಕೃಷಿ, ಕಂದಾಯ, ಮಾಲಿನ್ಯ ನಿಯಂತ್ರಣ ಮಂಡಳಿ, ಲೋಕೋಪಯೋಗಿ ಇಲಾಖೆಗಳು ಸೇರಿ ಮಾಸ್ಟರ್ ಪ್ಲಾನ್ ಸಿದ್ದಪಡಿಸಬೇಕು.
Ramanagara: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಚುನಾವಣಾ ಸಮಿತಿ ಸಭೆ
ಪರಿಸರ ಸೂಕ್ಷ್ಮ ವಲಯ ಗಡಿಯಿಂದ 1 ಕಿ.ಮೀ. ಸುತ್ತಳತೆಯಲ್ಲಿ ನಿಷೇಧಿತ - ನಿರ್ಬಂಧಿತ ಚಟುವಟಿಕೆಗಳು
ನಿಷೇದಿತ ಚಟುವಟಿಕೆಗಳು: ಕಲ್ಲು ಗಣಿಗಾರಿಕೆ, ಸಾಮಿಲ್ ಸ್ಥಾಪನೆ, ವಾಯು, ಜಲ, ಶಬ್ದ, ಮಣ್ಣು ಮಾಲಿನ್ಯಕ್ಕೆ ಸಾಧ್ಯವಾಗುವ ಕೈಗಾರಿಕೆಗಳ ನಿರ್ಮಾಣ, ಜಲ ವಿದ್ಯುತ್ ಯೋಜನೆ, ಕೃಷಿ ನೀರಾವರಿ ಯೋಜನೆ, ರಾಕ್ ಕ್ಲೈಂಬಿಂಗ್, ದೊಟ್ಟಮಟ್ಟದ ಕೃಷಿ, ತೋಟಗಾರಿಕೆ ಕ್ಷೇತ್ರದ ಉತ್ಪಾದನಾ ಚಟುವಟಿಕೆ (ಕೈಗಾರಿಕೆ ರೀತಿ), ಮಾಂಸ ಸಂಸ್ಕರಣ ಘಟಕ, ಪ್ರಾಣಿ ಚಿಕಿತ್ಸೆಯಲ್ಲಿ ಡೈಕ್ಲೋಫೆನಾಕ್ ಔಷಧಿ ಬಳಕೆ.
ನಿರ್ಬಂಧಿತ ಚಟುವಟಿಕೆಗಳು: ಹೊಸದಾಗಿ ಹೋಟೆಲ್ ಗಳು, ರೆಸಾರ್ಚ್‌ಗಳ ಸ್ಥಾಪನೆ , ಹೊಸದಾಗಿ ಯಾವುದೇ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ವಿದ್ಯುತ್ ಅಥವಾ ಸಂಪರ್ಕ ಟವರ್ ಗಳ ಸ್ಥಾಪನೆಗೆ ನಿರ್ಬಂಧ. ರಸ್ತೆಗಳನ್ನು ಸಹ ಅಗಲೀಕರಣ ಮಾಡುವಂತಿಲ್ಲ. ಸ್ಥಳೀಯರು ತಮ್ಮ ವಾಸದ ಮನೆ ನಿರ್ಮಿಸಿಕೊಳ್ಳಲು ಅಡ್ಡಿಯಿಲ್ಲ. ಯಾವುದೇ ರೀತಿಯ ಮಾಲಿನ್ಯಕ್ಕೆ ಅವಕಾಶವಾಗದ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿದೆ.