'ಕರುನಾಡ ಜನತೆಗೆ ಜೆಡಿಎಸ್‌ ಪರಿಹಾರ' ಎಂಬ ಹೆಸರಲ್ಲಿ 12 ಭರವಸೆಗಳನ್ನು ಘೋಷಿಸಿದ ದೇವೇಗೌಡ

Published : Apr 16, 2023, 04:00 AM IST
'ಕರುನಾಡ ಜನತೆಗೆ ಜೆಡಿಎಸ್‌ ಪರಿಹಾರ' ಎಂಬ ಹೆಸರಲ್ಲಿ 12 ಭರವಸೆಗಳನ್ನು ಘೋಷಿಸಿದ ದೇವೇಗೌಡ

ಸಾರಾಂಶ

ವಿಧಾನಸಭೆ ಚುನಾವಣಾ ಅಖಾಡ ರಂಗೇರುತ್ತಿದ್ದು, ಜೆಡಿಎಸ್‌ ಪ್ರಣಾಳಿಕೆ ರೂಪದಲ್ಲಿ 12 ಅಂಶಗಳ ಭರವಸೆಗಳನ್ನು ಬಿಡುಗಡೆ ಮಾಡಿದೆ. ‘ಕರುನಾಡ ಜನತೆಗೆ ಜೆಡಿಎಸ್‌ ಪರಿಹಾರ’ ಎಂಬ ಹೆಸರಲ್ಲಿ ಸಂಕ್ಷಿಪ್ತ ಭರವಸೆಗಳ ಪತ್ರಗಳನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಬಿಡುಗಡೆ ಮಾಡಿದರು.

ಬೆಂಗಳೂರು (ಏ.16): ವಿಧಾನಸಭೆ ಚುನಾವಣಾ ಅಖಾಡ ರಂಗೇರುತ್ತಿದ್ದು, ಜೆಡಿಎಸ್‌ ಪ್ರಣಾಳಿಕೆ ರೂಪದಲ್ಲಿ 12 ಅಂಶಗಳ ಭರವಸೆಗಳನ್ನು ಬಿಡುಗಡೆ ಮಾಡಿದೆ. ‘ಕರುನಾಡ ಜನತೆಗೆ ಜೆಡಿಎಸ್‌ ಪರಿಹಾರ’ ಎಂಬ ಹೆಸರಲ್ಲಿ ಸಂಕ್ಷಿಪ್ತ ಭರವಸೆಗಳ ಪತ್ರಗಳನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಬಿಡುಗಡೆ ಮಾಡಿದರು. ಶನಿವಾರ ಪದ್ಮನಾಭನಗರ ನಿವಾಸದಲ್ಲಿ ಪಕ್ಷದ ಭರವಸೆಗಳನ್ನು ರಾಜ್ಯದ ಜನತೆಯ ಮುಂದಿಟ್ಟರು. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಘೋಷಣೆ ಮಾಡಲಾಗಿದೆ. 

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪ್ರಣಾಳಿಕೆ ಕರಡು ರಚನಾ ಸಮಿತಿಯ ಅಧ್ಯಕ್ಷ ಬಿ.ಎಂ.ಫಾರೂಕ್‌, ಮಾಜಿ ಸಂಸದ ಕುಪೇಂದ್ರರೆಡ್ಡಿ ಇತರರು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಕಾಂಗ್ರೆಸ್ ಟಿಕೆಟ್ ತಪ್ಪಿದ್ದಕ್ಕೆ ಗಳಗಳನೆ ಅತ್ತ ಗೋಪಿಕೃಷ್ಣ: ಕಾರ್ಯಕರ್ತರಿಂದ ಭುಗಿಲೆದ್ದ ಆಕ್ರೋಶ

ಜೆಡಿಎಸ್‌ನ 12 ಅಂಶಗಳ ಭರವಸೆ
1. ಕನ್ನಡಕ್ಕೆ ಅಗ್ರ ಮನ್ನಣೆ:
ಕೇಂದ್ರ ಸರ್ಕಾರದ ನಾಗರಿಕ ಸೇವೆಗಳಾದ ರೈಲ್ವೆ, ಬ್ಯಾಂಕಿಂಗ್‌, ರಾಜ್ಯದಲ್ಲಿರುವ ಕೇಂದ್ರ ಸಾರ್ವಜನಿಕ ಉದ್ಯಮಗಳು, ಕೇಂದ್ರ ಭದ್ರತಾ ಪಡೆ ಇತರೆ ನೇಮಕದಲ್ಲಿ ಕನ್ನಡದಲ್ಲಿಯೇ ಪರೀಕ್ಷೆ ನಡೆಸಿ ಕನ್ನಡಿಗರಿಗ ಆದ್ಯತೆ ನೀಡಲು ಕೇಂದ್ರದ ಮೇಲೆ ಒತ್ತಡ. ಖಾಸಗಿ ಉದ್ಯಮದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಅಗತ್ಯ ಕಾಯ್ದೆ ಜಾರಿ.

2. ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ: ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ, ವರ್ಷಕ್ಕೆ ಐದು ಅಡುಗೆ ಅನಿಲ ಸಿಲಿಂಡರ್‌ ಉಚಿತ, ಗರ್ಭಿಣಿಯರ ಅಗತ್ಯತೆ ಪೂರೈಕೆಗೆ ಆರು ತಿಂಗಳ ಕಾಲ ಆರು ಸಾವಿರ ರು. ಭತ್ಯೆ, ವಿಧವಾ ವೇತನ 900 ರು.ನಿಂದ 2,500ರು.ಗೆ ಹೆಚ್ಚಳ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಐದು ಸಾವಿರ ರು. ವರೆಗೆ ಹೆಚ್ಚಿನ ವೇತನ, ಕನಿಷ್ಠ 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯಕರ್ತೆಯರಿಗೆ ಪಿಂಚಣಿ.

3. ಶಿಕ್ಷಣವೇ ಆಧುನಿಕ ಶಕ್ತಿ: ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6.8 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ 18 ವರ್ಷ ತುಂಬಿರುವ 60 ಸಾವಿರ ವಿದ್ಯಾರ್ಥಿಯರಿಗೆ ವಿದ್ಯುತ್‌ ಚಾಲಿತ ಮೊಪೆಡ್‌.

4. ಆರೋಗ್ಯ ಸಂಪತ್ತು: ನಿಮ್ಹಾನ್ಸ್‌ ಮಾದರಿಯಲ್ಲಿ 500 ಹಾಸಿಗೆಯುಳ್ಳ ಆಧುನಿಕ ನರವಿಜ್ಞಾನ ವೈದ್ಯಕೀಯ ಸಂಸ್ಥೆ ಸ್ಥಾಪನೆ. ಆಯುಷ್ಮಾನ್‌ ಭಾರತ್‌, ಯಶಸ್ವಿನಿ ಯೋಜನೆಯಡಿಯಲ್ಲಿ ಸೇರ್ಪಡೆಯಾಗದ ಮತ್ತು ದುಬಾರಿ ವೆಚ್ಚದ ವೈದ್ಯಕೀಯ ಶಸ್ತ್ರ ಚಿಕಿತ್ಸೆಗಳಾದ ಮೂಳೆಮಜ್ಜೆ ಚಿಕಿತ್ಸೆ, ಹೃದಯ, ಶ್ವಾಸಕೋಶ ಮತ್ತು ಯಕೃತ್‌ ಬದಲಾಯಿಸುವ ಶಸ್ತ್ರಚಿಕಿತ್ಸೆಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರು.ವರೆಗಿನ ಪರಿಹಾರವನ್ನು 24 ಗಂಟೆ ಅವಧಿಯಲ್ಲಿ ನೀಡಿಕೆ.

5. ರೈತ ಚೈತನ್ಯ: ಪ್ರತಿ ಎಕರೆಗೆ 10 ಸಾವಿರ ರು. ಸಹಾಯಧನ, ರೈತ ಯುವಕರನ್ನು ಮದುವೆಯಾಗುವ ಯುವತಿಯರಿಗೆ ಎರಡು ಲಕ್ಷ ರು. ಪ್ರೋತ್ಸಾಹ ಧನ, ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಮಾಸಿಕ ಎರಡು ಸಾವಿರ ರು. ಸಹಾಯಧನ.

6. ಹಿರಿಯ ನಾಗರಿಕರಿಗೆ ಸನ್ಮಾನ: ಹಿರಿಯ ನಾಗರಿಕರ ಮಾಸಾಶನ 1200 ರು.ನಿಂದ ಐದು ಸಾವಿರ ರು.ಗೆ ಹೆಚ್ಚಳ.

7. ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ: ನ್ಯಾ.ರಾಜೇಂದ್ರ ಸಾಚಾರ್‌ ಆಯೋಗದ ವರದಿ ಶಿಫಾರಸುಗಳ ಅನುಷ್ಠಾನ ಕುರಿತು ಅಧ್ಯಯನಕ್ಕೆ ಸಮಿತಿ ರಚನೆ ಮತ್ತು ಆ ಸಮಿತಿ ವರದಿ ಆಧರಿಸಿ ಜಾರಿಗೆ ಕ್ರಮ. ರಾಜ್ಯದಲ್ಲಿನ ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಉನ್ನತಮಟ್ಟದ ಸಮಿತಿ ರಚನೆ, ಅಗತ್ಯ ಅನುದಾನ ನೀಡಿದೆ. ಅಶಕ್ತ ಪುರುಷ ಮತ್ತು ಅಬಲೆಯರ ಆಶ್ರಯಕ್ಕೆ ಸಹಾರಾ ಯೋಜನೆ ಜಾರಿ.

8. ಯುವಜನ ಸಬಲೀಕರಣ: ಒಂದು ವರ್ಷದ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವ ಯುವಕ/ಯುವತಿಯರಿಗೆ ಮಾಸಿಕ ಎಂಟು ಸಾವಿರ ರು. ಮಾಸಿಕ ರು. ಭತ್ಯೆ. ಕೈಗಾರಿಕೆ ಉತ್ಪನ್ನ ಘಟಕ ಸ್ಥಾಪನೆಗೆ 10 ಲಕ್ಷ ರು. ಸಹಾಯಧನ. ತರಬೇತಿ ಮತ್ತು ಸೇವೆಗಳ ವಲಯದಲ್ಲಿ ಒದಗಿಸುವ ವಲಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಮೂರು ಲಕ್ಷ ರು. ಸಹಾಯಧನ. ಸಣ್ಣ ಉದ್ಯಮವಾಗಿ ವ್ಯಾಪಾರ, ವಹಿವಾಟು ನಡೆಸುವವರಿಗೆ ಎರಡು ಲಕ್ಷ ರು. ಸಹಾಯಧನ, ಸಣ್ಣ ಉದ್ಯಮ ನಡೆಸುವ ಮಹಿಳಾ ಉದ್ಯಮಿಗಳಿಗೆ ಮೇಲಾಧಾರ ಭದ್ರತೆ ರಹಿತ ಎರಡು ಕೋಟಿ ರು.ವರೆಗೆ ಬ್ಯಾಂಕ್‌ಗಳ ಮೂಲಕ ಸಾಲ.

9. ಅಂಗವಿಕಲರಿಗೆ ಆಸರೆ: ವಿಕಲಚೇತನ 600 ರು. ಪಿಂಚಣಿ 2,500 ರು.ಗೆ ಹೆಚ್ಚಳ.

10. ಆರಕ್ಷಕರಿಗೆ ಅಭಯ: ಔರಾದ್ಕರ್‌ ಸಮಿತಿ ವರದಿಯಲ್ಲಿ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡುವ ವೇತನ, ಸೌಲಭ್ಯಗಳಲ್ಲಿ ನ್ಯೂನತೆಗಳಿದ್ದು, ಈ ತಾರತಮ್ಯ ಹೋಗಲಾಡಿಸಿ, ನ್ಯಾಯಯುತ ವೇತನ, ಸೌಲಭ್ಯ ನೀಡಿಕೆ.

11. ಎಸ್‌ಸಿ/ಎಸ್‌ಟಿ ಏಳ್ಗೆ: ಕೆಎಸ್‌ಎಫ್‌ಸಿ ಪ್ರಸ್ತುತ ಶೇ.4ರಷ್ಟುಬಡ್ಡಿ ವಿಧಿಸುತ್ತಿದ್ದು, ಇದಕ್ಕೆ ಇನ್ನಷ್ಟುಸಬ್ಸಿಡಿ ನೀಡಿ ಎಸ್‌ಸಿ/ಎಸ್‌ಟಿ ಉದ್ದಿಮೆದಾರರಿಗೆ ಬಡ್ಡಿದರವನ್ನು ಶೇ.4ರಿಂದ ಶೇ.2ಕ್ಕೆ ಇಳಿಸುವುದು. ರಾಜ್ಯದಲ್ಲಿ ಅನುಷ್ಠಾನದಲ್ಲಿರುವ ವಿವಿಧ ವಸತಿ ಯೋಜನೆಯಡಿ ಎಸ್‌ಸಿ/ಎಸ್‌ಟಿ ಫಲಾನುಭವಿಗಳಿಗೆ ಶೇ.50 ರಿಯಾಯಿತಿ ದರದಲ್ಲಿ ಮನೆ ಹಂಚಿಕೆ.

12. ವೃತ್ತಿ ನಿರತ ವಕೀಲರ ಅಭ್ಯುದಯ: ವೃತ್ತಿ ನಿರತ ವಕೀಲರ ರಕ್ಷಣೆಗೆ ಕಾಯ್ದೆ ಜಾರಿ. ನೂತನವಾಗಿ ನೋಂದಾಯಿತ ವಕೀಲರಿಗೆ ಈಗ ನೀಡುವ ಮಾಸಿಕ ಭತ್ಯೆ ಎರಡು ಸಾವಿರ ರು.ನಿಂದ ಮೂರು ಸಾವಿರಕ್ಕೆ ಹೆಚ್ಚಳ.

ಬಿಜೆಪಿಯಂತಹ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ: ಸಿದ್ಧರಾಮಯ್ಯ

ಪ್ರಮುಖ ಭರವಸೆಗಳು
- ಕನ್ನಡದಲ್ಲಿಯೇ ನೇಮಕಾತಿ ಪರೀಕ್ಷೆ ನಡೆಸಲು ಕೇಂದ್ರದ ಮೇಲೆ ಒತ್ತಡ
- ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ, ಗರ್ಭಿಣಿಯರಿಗೆ 6000 ಭತ್ಯೆ
- ವಿಧವಾ ವೇತನ 2500ಕ್ಕೆ ಹೆಚ್ಚಳ. ಅಂಗನವಾಡಿ ಸಿಬ್ಬಂದಿಗೆ 5000 ಭತ್ಯೆ
- ಪ್ರೌಢಶಾಲಾ ಮಕ್ಕಳಿಗೆ ಸೈಕಲ್‌. ಡಿಗ್ರಿ ವಿದ್ಯಾರ್ಥಿಗಳಿಗೆ ಇ-ಮೊಪೆಡ್‌
- ಹೃದಯ, ಶ್ವಾಸಕೋಶ, ಯಕೃತ್‌ ಕಸಿಗೆ 24 ತಾಸಲ್ಲಿ 25 ಲಕ್ಷ ಪರಿಹಾರ
- ರೈತ ಯುವಕರನ್ನು ವರಿಸುವ ಯುವತಿಯರಿಗೆ .2 ಲಕ್ಷ ಪ್ರೋತ್ಸಾಹಧನ
- ಹಿರಿಯ ನಾಗರಿಕರ ಪಿಂಚಣಿ 1200ದಿಂದ 5 ಸಾವಿರಕ್ಕೆ ಹೆಚ್ಚಳ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ