ಸಿಎಂ ಆಗಲು ಡಿ.ಕೆ. ಶಿವಕುಮಾರ್ ಪೈಪೋಟಿಗೆ ಬ್ರೇಕ್ ಹಾಕಲು ತಂತ್ರಗಾರಿಕೆ ಮಾಡುತ್ತಿದ್ದು, ಸಿದ್ದರಾಮಯ್ಯ ಬಣ ಪ್ರತ್ಯೇಕ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ ಎಂದೂ ಹೇಳಲಾಗುತ್ತಿದೆ.
ಬೆಂಗಳೂರು (ಮೇ 14, 2023): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದೆ. ಈ ಹಿನ್ನೆಲೆ ಇಂದು ಕೈ ಪಕ್ಷ ಶಾಸಕಾಂಗ ಸಭೆ ನಡೆಸುತ್ತಿದ್ದು,ಈ ಸಭೆ ಮಹತ್ವ ಪಡೆದುಕೊಂಡಿದೆ. ಸಂಜೆ 5.30 ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಶಾಸಕರ ಅಭಿಪ್ರಾಯ ಆಧರಿಸಿ ಸಿಎಂ ಆಯ್ಕೆ ಎಂದು ಹೈಕಮಾಂಡ್ ಹೇಳಿದ್ದು, ಈ ಹಿನ್ನೆಲೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣದ ನಡುವೆ ಪ್ಲ್ಯಾನ್ ಶುರುವಾಗಿದೆ.
ಶಾಸಕರ ಅಭಿಪ್ರಾಯ ಆಧರಿಸಿ ಸಿಎಂ ಆಯ್ಕೆ ಎಂದು ಹೈಕಮಾಂಡ್ ಹೇಳಿರುವ ಹಿನ್ನೆಲೆ ಮುಂದಿನ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದ ಶಾಸಕರ ವಿಶ್ವಾಸ ಗಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ, ಡಿಕೆ ಶಿವಕುಮಾರ್ ಹಳೇ ಮೈಸೂರು ಮಧ್ಯ ಕರ್ನಾಟಕ ಭಾಗದ ಶಾಸಕರ ಬೆಂಬಲದ ವಿಶ್ವಾಸದಲ್ಲಿದ್ದಾರೆ.
ಇದನ್ನು ಓದಿ: ಜಯನಗರದಲ್ಲಿ ಹಾವು ಏಣಿ ಆಟ ಅಂತ್ಯ: 16 ಮತಗಳಿಂದ ಗೆದ್ದ ಸಿ.ಕೆ. ರಾಮ ಮೂರ್ತಿ; ಕಣ್ಣೀರಿಟ್ಟ ಸೌಮ್ಯಾರೆಡ್ಡಿ
ಟಿಕೆಟ್ ಹಂಚಿಕೆ ವೇಳೆ ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಅವಕಾಶ ಕೊಡಿಸಿದ್ದರು. ಈ ಹಿನ್ನೆಲೆ, ಇದೀಗ ಶಾಸಕಾಂಗ ನಾಯಕನ ಆಯ್ಕೆ ವೇಳೆ ಯಾರು ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದು ಮಹತ್ವ ಪಡೆದುಕೊಂಡಿದೆ.
ಶಾಸಕರ ಬೆಂಬಲ ಪಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ವರ್ಕೌಟ್ ಆಡುತ್ತಿದ್ದು, ಆಪ್ತ ಶಾಸಕರ ಜೊತೆಗೆ ಸಿದ್ದರಾಮಯ್ಯ ರಹಸ್ಯ ಚರ್ಚೆ ನಡೆಸುತ್ತಿದ್ದಾರೆ. ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಖಾಸಗಿ ಕಟ್ಟಡದಲ್ಲಿ ಸಿದ್ದರಾಮಯ್ಯ ರಹಸ್ಯ ಮಾತುಕತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಶಾಸಕರ ಬೆಂಬಲ ದೊಡ್ಡ ಪ್ರಮಾಣದಲ್ಲಿ ಸಿಕ್ಕಿದರೆ ಸಿಎಂ ಆಗೋ ಅವಕಾಶ ಸಿಗುತ್ತೆ ಅನ್ನೋದು ಸಿದ್ದರಾಮಯ್ಯ ಅವರ ಪ್ಲ್ಯಾನ್.
ಇದನ್ನೂ ಓದಿ: Karnataka Assembly Election 2023: ಜನರ ಆಶೋತ್ತರಗಳನ್ನು ಕಾಂಗ್ರೆಸ್ ಈಡೇರಿಸಲಿಎಂದ ಮೋದಿ
ಅಲ್ಲದೆ, ಸಿಎಂ ಆಗಲು ಡಿ.ಕೆ. ಶಿವಕುಮಾರ್ ಪೈಪೋಟಿಗೆ ಬ್ರೇಕ್ ಹಾಕಲು ತಂತ್ರಗಾರಿಕೆ ಮಾಡುತ್ತಿದ್ದು, ಸಿದ್ದರಾಮಯ್ಯ ಬಣ ಪ್ರತ್ಯೇಕ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ ಎಂದೂ ಹೇಳಲಾಗುತ್ತಿದೆ.
ಕರುನಾಡ ಸಿಎಂ ಯಾರಾಗಬೇಕು ಎಂದು ನಡೆದ ಏಷ್ಯಾನೆಟ್ ಸುವರ್ಣ ಸರ್ವೇಯಲ್ಲಿ ಸಿದ್ದರಾಮಯ್ಯ ಮುಂದಿನ ಸಿಎಂ ಆಗ್ಬೇಕೆಂದು ಶೇ. 66 ರಷ್ಟು ಜನರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು, ಡಿಕೆಶಿ ಸಿಎಂ ಆಗ್ಬೇಕೆಂದು ಶೇ. 33ರಷ್ಟು ಜನರು ಮಾತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಳೆ ಸಂಪ್ರದಾಯದ ಮೊರೆ ಹೋದ ಕಾಂಗ್ರೆಸ್
ಭರ್ಜರಿ ಬಹುಮತ ಪಡೆದಿರುವ ಕಾಂಗ್ರೆಸ್‌ಗೆ ಸಿಎಂ ಆಯ್ಕೆಯೇ ಕಗ್ಗಂಟಾಗಿದೆ. ಈ ಹಿನ್ನೆಲೆ, ಕಾಂಗ್ರೆಸ್ ಮತ್ತೊಮ್ಮೆ ತಮ್ಮ ಹಳೇ ಸಂಪ್ರದಾಯದ ಮೊರೆ ಹೋಗಿದೆ ಎಂದು ತಿಳಿದುಬಂದಿದೆ. ಅಂದರೆ, ಕಾಂಗ್ರೆಸ್ ಈ ಬಾರಿಯೂ ಮತ್ತೆ ಲಕೋಟೆ ಸಿಎಂ ಸಂಪ್ರದಾಯದ ಮೊರೆ ಹೋಗಿದೆ ಎನ್ನಲಾಗ್ತಿದೆ. ದೆಹಲಿಯಿಂದ ಲಕೋಟೆಯಲ್ಲಿ ರಜ್ಯದ ಮುಕ್ಯಮಂತ್ರಿಯ ಹೆಸರು ಬರಲಿದ್ದು, ಈ ಹಿನ್ನೆಲೆ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಮಲ್ಲಿಕಾರ್ಜುನ ಖರ್ಗೆ ಅವರೇ ಸಿಎಂ ತೀರ್ಮಾನ ಕೈಗೊಂಡರೆ ಪಕ್ಷಪಾತದ ಆರೋಪ ಎದುರಾಗಲಿದೆ. ಹೀಗಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಸಿಎಂ ಆಯ್ಕೆಯ ಜವಾಬ್ದಾರಿ ನೀಡಲಿದ್ದಾರೆ ಎಂದು ತಿಳಿದುಬಂದಿದ್ದು, ನೂತನ ಸಿಎಂ ಹೆಸರನ್ನ ಎಐಸಿಸಿ ವೀಕ್ಷಕರು ಲಕೋಟೆಯಲ್ಲಿ ತಂದು ಘೋಷಣೆ ಮಾಡಲಿದ್ದಾರೆ. ಈ ಹಿಂದೆ ಬಂಗಾರಪ್ಪ, ವೀರಪ್ಪ ಮೊಯ್ಲಿ ಆಯ್ಕೆಗೆ ಇದೇ ಲಕೋಟೆ ಸಿಎಂ ಪ್ರಕ್ರಿಯೆ ಅನುಸರಿಸಿದ್ದ ಎಐಸಿಸಿ. ಈ ಬಾರಿ ಸಹ ಕಾಂಗ್ರೆಸ್ ಹೈಕಮಾಂಡ್ ಇದೇ ಪ್ರಕ್ರಿಯೆ ಅನುಸರಿಸಲಿದೆ ಎಂದು ತಿಳಿದುಬಂದಿದೆ.
16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.
ಇದನ್ನೂ ಓದಿ: ಕಾಂಗ್ರೆಸ್ ದಿಗ್ವಿಜಯ: ಕಮಲಕ್ಕೆ ನಾಳೆಯ ಪಾಠ, ಟ್ರಬಲ್ ಎಂಜಿನ್‌ಗೆ ಸೋಲು ಎಂದ ಮಮತಾ ಬ್ಯಾನರ್ಜಿ