
ಬೆಂಗಳೂರು (ಮೇ.13) : ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಸಾಧ್ಯತೆ ಇದೆ ಎಂಬ ಮತಗಟ್ಟೆಸಮೀಕ್ಷೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳು ಹೈಜಾಕ್ ಮಾಡಬಹುದು ಎಂಬ ಭೀತಿಯಿಂದ ಜೆಡಿಎಸ್ ತನ್ನವರನ್ನು ಹಿಡಿದಿಟ್ಟುಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದೆ.
ಶನಿವಾರ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ತಮ್ಮ ಪಕ್ಷದ ಶಾಸಕರನ್ನೇ ಗುರಿಯಾಗಿಸಿಕೊಂಡು ಸೆಳೆಯುವ ಪ್ರಯತ್ನ ಮಾಡಬಹುದು ಎಂಬ ಉದ್ದೇಶದಿಂದ ಜೆಡಿಎಸ್ ನಾಯಕರು ಗುರುವಾರ ಮತ್ತು ಶುಕ್ರವಾರ ಎರಡು ದಿನಗಳ ಕಾಲ ಗೆಲ್ಲಬಲ್ಲ ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ನಮ್ದೇ ಸರ್ಕಾರ, ನಾನೇ ಸಿಎಂ, ಮೈತ್ರಿಗೆ 9 ಕಂಡೀಷನ್ ಹಾಕಿದ ಹೆಚ್‌ಡಿಕೆ!
ಪಕ್ಷದ ವರಿಷ್ಠ ನಾಯಕ ಎಚ್.ಡಿ.ದೇವೇಗೌಡ ಅವರು ಬೆಂಗಳೂರಿನ ತಮ್ಮ ನಿವಾಸದಿಂದ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಿಂಗಾಪುರದಿಂದ ಗೆಲ್ಲುವ ಸಾಧ್ಯತೆಯಿರುವ ಅಭ್ಯರ್ಥಿಗಳ ಜತೆ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಅನ್ಯ ಪಕ್ಷಗಳ ಆಮಿಷಕ್ಕೆ ಬಲಿಯಾಗದಂತೆ ಮನವೊಲಿಸುವ ಪ್ರಯತ್ನ ಮಾಡಿದರು ಎನ್ನಲಾಗಿದೆ.
ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳನ್ನು ಮನವೊಲಿಸಿ ಅವರ ಮೇಲೆ ನಿಗಾ ಇಡುವ ಜವಾಬ್ದಾರಿಯನ್ನು ಪಕ್ಷದ ಹಿರಿಯ ಮುಖಂಡರಾಗಿರುವ ಬಂಡೆಪ್ಪ ಕಾಶೆಂಪೂರ್ ಅವರಿಗೆ ಮತ್ತು ಹಳೆ ಮೈಸೂರು ಭಾಗದ ಅಭ್ಯರ್ಥಿಗಳನ್ನು ಹಿಡಿದಿಡುವ ಹೊಣೆಯನ್ನು ಹಿರಿಯ ಮುಖಂಡ ಜಿ.ಟಿ.ದೇವೇಗೌಡ ಅವರಿಗೆ ವಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕ್ವಿಕ್ ರಾಜಕೀಯ, ಮತ್ತೆ ಶುರುವಾಯ್ತು ರೆಸಾರ್ಟ್ ಪಾಲಿಟಿಕ್ಸ್..!
ಶನಿವಾರ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರೊಂದಿಗೆ ಸುಮಾರು ಒಂದು ತಾಸಿಗಿಂತ ಹೆಚ್ಚು ಕಾಲ ಸಮಾಲೋಚನೆ ನಡೆಸಿದ ಎಚ್.ಡಿ.ದೇವೇಗೌಡ ಅವರು, ಹಳೇ ಮೈಸೂರು ಭಾಗ ಜೆಡಿಎಸ್‌ನ ಭದ್ರಕೋಟೆ ಎನ್ನಿಸಿಕೊಂಡಿದೆ. ಈ ಭಾಗದಲ್ಲಿ ಜೆಡಿಎಸ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗಿ ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇವರನ್ನು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರ ರಚಿಸಲು ಸೆಳೆಯುವ ಸಾಧ್ಯತೆ ಇದೆ. ಹೀಗಾಗಿ ಹಳೇ ಮೈಸೂರು ಭಾಗದಲ್ಲಿ ಗೆದ್ದು ಬರುವ ಶಾಸಕರನ್ನು ಹಿಡಿದಿಟ್ಟುಕೊಳ್ಳುವಂತೆ ಸೂಚನೆ ನೀಡಿದರು ಎಂದು ಹೇಳಲಾಗಿದೆ.
ಈ ನಡುವೆ ಬಂಡೆಪ್ಪ ಕಾಶಂಪೂರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳೊಂದಿಗೆ ನಿಕಟ ಸಂಪರ್ಕದಲ್ಲಿ ಇರುವಂತೆ ಸಲಹೆ ನೀಡಿದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.