Karnataka assembly election: ಘಟಾನುಘಟಿ ರಾಜಕಾರಣಿಗಳನ್ನು ಕೊಟ್ಟ ದೊಡ್ಡಬಳ್ಳಾಪುರ

By Kannadaprabha News  |  First Published May 12, 2023, 10:16 PM IST

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಈ ಹಂತದಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಸೋಲು-ಗೆಲವಿನ ಲೆಕ್ಕಾಚಾರ ತಾರಕಕ್ಕೇರಿರುವ ಸಂದರ್ಭದಲ್ಲಿ ಕ್ಷೇತ್ರದ ರಾಜಕೀಯ ಇತಿಹಾಸದತ್ತ ಒಂದು ಅವಲೋಕನ ಇಲ್ಲಿದೆ.v


ದೊಡ್ಡಬಳ್ಳಾಪುರ (ಮೇ.12) : ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಈ ಹಂತದಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಸೋಲು-ಗೆಲವಿನ ಲೆಕ್ಕಾಚಾರ ತಾರಕಕ್ಕೇರಿರುವ ಸಂದರ್ಭದಲ್ಲಿ ಕ್ಷೇತ್ರದ ರಾಜಕೀಯ ಇತಿಹಾಸದತ್ತ ಒಂದು ಅವಲೋಕನ ಇಲ್ಲಿದೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ರಾಜ್ಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಏಕೈಕ ಉಪವಿಭಾಗ ಕೇಂದ್ರವೂ ಆಗಿರುವ ಈ ಕ್ಷೇತ್ರ ಜಿದ್ದಾಜಿದ್ದಿನ ಅಖಾಡ ಎಂದೇ ಖ್ಯಾತ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ ನೆಲಮಂಗಲ ಮತ್ತು ದೇವನಹಳ್ಳಿ ಪರಿಶಿಷ್ಟಜಾತಿಯ ಮೀಸಲು ಕ್ಷೇತ್ರಗಳಾಗಿವೆ. ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ಸಾಮಾನ್ಯ ಕ್ಷೇತ್ರಗಳಾಗಿವೆ.

Tap to resize

Latest Videos

undefined

ರಾಜ್ಯ ರಕ್ಷಿಸಲು ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ: ಡಿ.ಕೆ.ಶಿವಕುಮಾರ್‌

ಸಂವಿಧಾನ ಅಂಗೀಕಾರದ ನಂತರ 1952ರಲ್ಲಿ ರಚನೆಯಾದ ಪ್ರಜಾ ಪ್ರತಿನಿಧಿ ಪರಿಷತ್ತಿಗೆ ಮೊದಲ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾದವರು ಟಿ.ಸಿದ್ದಲಿಂಗಯ್ಯ. ಕರ್ನಾಟಕ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಸಿದ್ದಲಿಂಗಯ್ಯ ಸ್ವಾತಂತ್ರ್ಯ ಯೋಧರಾಗಿ, ಈ ಭಾಗದಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಪ್ರಚೋದಿಸಿದ ಅಪ್ಪಟ ಗಾಂಧಿವಾದಿ. ಶಿವಪುರ ಧ್ವಜ ಸತ್ಯಾಗ್ರಹದ ಸರ್ವಾಧ್ಯಕ್ಷರಾಗಿದ್ದ ಸಿದ್ದಲಿಂಗಯ್ಯ ಕೆ.ಸಿ.ರೆಡ್ಡಿ ಮತ್ತು ಕೆಂಗಲ್‌ ಹನುಮಂತಯ್ಯ ಅವರ ಕಾಲದಲ್ಲಿ ರಾಜ್ಯದ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 1952ರಲ್ಲಿ ಪ್ರಜಾಪ್ರತಿನಿಧಿ ಪರಿಷತ್ತಿನ ಶಾಸಕರಾಗಿದ್ದರು. ಭಾಷಾವಾರು ಪ್ರಾಂತ್ಯಗಳ ರಚನೆ, ಏಕೀಕರಣದ ನಂತರ ರಚನೆಯಾದ ವಿಶಾಲ ಮೈಸೂರು ರಾಜ್ಯದಲ್ಲಿ 1957ರಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಅವರು ಆಯ್ಕೆಯಾಗಿ ಸಚಿವರಾಗಿದ್ದರು.

21 ವರ್ಷ ಕ್ಷೇತ್ರ ಆಳಿದ ರಾಮೇಗೌಡ:

ನಂತರದ ಕಾಲಘಟ್ಟದಲ್ಲಿ ಕ್ಷೇತ್ರದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಗುರ್ತಿಸಿಕೊಂಡವರು ಜಿ.ರಾಮೇಗೌಡ, ದೊಡ್ಡಬಳ್ಳಾಪುರ ತಾಲೂಕಿನ ಗಡ್ಡಂಬಚ್ಚಹಳ್ಳಿ ಗ್ರಾಮದಿಂದ ಬಂದ ರಾಮೇಗೌಡರು, 2 ಬಾರಿ ಪಕ್ಷೇತರವಾಗಿ, 2 ಬಾರಿ ಕಾಂಗ್ರೆಸ್‌ ಪಕ್ಷದಿಂದ ಶಾಸಕರಾಗಿ 4 ಬಾರಿ ಶಾಸನ ಸಭೆ ಪ್ರವೇಶಿಸಿದ್ದರು. ಬರೋಬ್ಬರಿ 21 ವರ್ಷಗಳ ಕಾಲ ಕ್ಷೇತ್ರ ಶಾಸಕರಾಗಿದ್ದ ಅವರು, ನಿಜಲಿಂಗಪ್ಪ ಅವರ ಸಂಪುಟದಲ್ಲಿ ಅರಣ್ಯ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಹಳ್ಳಿಯಿಂದ ದಿಲ್ಲಿಗೇರಿದ ಜಾಲಪ್ಪ:

ರಾಮೇಗೌಡರ ನಂತರ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದು, ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ. ಮೊದಲ ಬಾರಿಗೆ 1983ರಲ್ಲಿ ಮೊದಲ ಬಾರಿಗೆ ಕ್ರಾಂತಿರಂಗದಿಂದ ರಾಜಕೀಯ ಪ್ರವೇಶ ಮಾಡಿ ಗೆಲವು ಸಾಧಿಸಿದ್ದರು. ನಂತರ ಒಮ್ಮೆ ಜನತಾ ಪಕ್ಷ, 2 ಬಾರಿ ಜನತಾದಳದಿಂದ ಶಾಸನ ಸಭೆಗೆ ಆಯ್ಕೆಯಾಗಿದ್ದರು. ರಾಮಕೃಷ್ಣ ಹೆಗ್ಗಡೆ ಅವರ ಸಚಿವ ಸಂಪುಟದಲ್ಲಿ ಒಮ್ಮೆ ಸಹಕಾರ ಸಚಿವರಾಗಿ, ಮತ್ತೊಮ್ಮೆ ಗೃಹ ಸಚಿವರಾಗಿ ಕೆಲಸ ಮಾಡಿದವರು. ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿಯಾದಾಗ ಕಂದಾಯ ಸಚಿವರಾಗಿದ್ದರು. ನಂತರ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಐ.ಕೆ.ಗುಜ್ರಾಲ್‌ ಸಂಪುಟದಲ್ಲಿ ಕೇಂದ್ರ ಜವಳಿ ಖಾತೆ ಸಚಿವರಾಗಿ ಕೆಲಸ ಮಾಡಿದರು. 3 ಬಾರಿ ಲೋಕಸಭಾ ಸದಸ್ಯರಾದದ್ದು ಹೆಗ್ಗಳಿಕೆ.

ಪಲ್ಲಟಗಳ ಪರ್ವ:

ಜಾಲಪ್ಪ ಸಂಸದರಾದ ವೇಳೆ 1996ರಲ್ಲಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆ ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿತ್ತು. ತಮ್ಮ ಶಿಷ್ಯ ಆರ್‌.ಜಿ.ವೆಂಕಟಾಚಲಯ್ಯ ಅವರನ್ನು ಶತಾಯಗತಾಯ ಪ್ರಯತ್ನ ನಡೆಸಿ ಜಾಲಪ್ಪ ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ನಂತರದ 1999ರ ಚುನಾವಣೆಯಲ್ಲಿ ಅವರು ಸೋಲನ್ನನುಭವಿಸಬೇಕಾಯಿತು. ಆಗ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಹೋಗಿದ್ದ ಗಂಟಿಗಾನಹಳ್ಳಿ ವಿ.ಕೃಷ್ಣಪ್ಪ ಗೆಲವು ಸಾಧಿಸಿದ್ದರು. 2004ರ ಚುನಾವಣೆಯಲ್ಲಿ ಅವರು ಮತ್ತೆ ಪಕ್ಷ ಬದಲಿಸಿ ಜೆಡಿಎಸ್‌ನಿಂದ ಚುನಾವಣೆಗೆ ನಿಂತು, ಜಾಲಪ್ಪ ಪುತ್ರ ಜೆ.ನರಸಿಂಹಸ್ವಾಮಿ ವಿರುದ್ದ ಸೋಲಬೇಕಾಯಿತು.

ಹ್ಯಾಟ್ರಿಕ್‌ ಸಾಧಕ ನರಸಿಂಹಸ್ವಾಮಿ:

ಜೆ.ನರಸಿಂಹಸ್ವಾಮಿ(J Narasimhaswamy) 2004 ಮತ್ತು 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ(Congress party) ದಿಂದ ಗೆದ್ದಿದ್ದರು. 2008ರಲ್ಲಿ ಗೆದ್ದ ಕೇವಲ 40 ದಿನಕ್ಕೇ ಆಪರೇಷನ್‌ ಕಮಲ ಮೂಲಕ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಅದೇ ವರ್ಷ ಬಂದ ಉಪಚುನಾವಣೆಯಲ್ಲಿ ಅವರು ಗೆಲ್ಲುವ ಮೂಲಕ ಕೊಳಗೇರಿ ಅಭಿವೃದ್ದಿ ಮಂಡಲಿಯ ಅಧ್ಯಕ್ಷ ಗಾದಿಯನ್ನು ಪಡೆದಿದ್ದರು. ಈ ಮೂಲಕ ಹ್ಯಾಟ್ರಿಕ್‌ ಗೆಲವಿನ ಸರದಾರ ಎನಿಸಿಕೊಂಡರು. ಆದರೆ ನರಸಿಂಹಸ್ವಾಮಿ ಜಯದ ಅಭಿಯಾನಕ್ಕೆ 2013ರ ಚುನಾವಣೆಯಲ್ಲಿ ಅಚ್ಚರಿಯ ಬ್ರೇಕ್‌ ಬಿದ್ದಿತ್ತು. ಅನಿರೀಕ್ಷಿತ ಎಂಬಂತೆ ನರಸಿಂಹಸ್ವಾಮಿ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿ ವೆಂಕಟರಮಣಯ್ಯ:

2013ರ ಚುನಾವಣೆಯಲ್ಲಿ ಟಿ.ವೆಂಕಟರಮಣಯ್ಯ(T Venkataramanaiah) ನಿರೀಕ್ಷೆಗಳನ್ನೂ ಮೀರಿ ಶಾಸಕರಾಗಿ ಆಯ್ಕೆಯಾದರು. ಸಕ್ರಿಯ ಹಾಗೂ ಚುರುಕಿನ ಕಾರ‍್ಯವೈಖರಿಯಿಂದ ಗಮನ ಸೆಳೆದು 2018ರಲ್ಲೂ ಮರು ಆಯ್ಕೆಯಾಗಿ ತಮ್ಮ ಸತತ ಗೆಲುವಿನ ಅಭಿಯಾನ ಮುಂದುವರೆಸಿದರು. ಈ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆಯಲ್ಲಿರುವ ವೆಂಕಟರಮಣಯ್ಯ ಹ್ಯಾಟ್ರಿಕ್‌ ನಿರೀಕ್ಷೆಯಲ್ಲಿದ್ದಾರೆ.

ದೊಡ್ಡಬಳ್ಳಾಪುರ: ಅಮೆರಿಕಾದ ಉದ್ಯೋಗ ಬಿಟ್ಟು ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಎಂಎಸ್‌ ಪದವೀಧರ..!

ಸೋತವರ ಕಥೆಯೂ ದೊಡ್ಡದು:

ಇನ್ನು 1952ರಿಂದ ಈವರೆಗೆ ನಡೆದ ಚುನಾವಣೆಗಳಲ್ಲಿ ಸೋತಿರುವ ಅಭ್ಯರ್ಥಿಗಳ ಹಿನ್ನಲೆಯೂ ವಿಶೇಷವಾಗಿದೆ. ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ನೇಕಾರ ಸಮುದಾಯದ ಅಭ್ಯರ್ಥಿಗಳೇ 6 ಚುನಾವಣೆಗಳಲ್ಲಿ ಸೋಲನ್ನನುಭವಿಸಿದ್ದಾರೆ. ಈವರೆಗೆ ಕ್ಷೇತ್ರದಲ್ಲಿ ನೇಕಾರ ಸಮುದಾಯದ ಶಾಸಕರನ್ನು ಕಾಣಲು ಸಾಧ್ಯವಾಗಿಲ್ಲ. ಸಿದ್ದಲಿಂಗಯ್ಯ, ರಾಮೇಗೌಡ, ಜಾಲಪ್ಪ, ವೆಂಕಟಾಚಲಯ್ಯ, ನರಸಿಂಹಸ್ವಾಮಿ ಮತ್ತು ವೆಂಕಟರಮಣಯ್ಯ ತಮ್ಮ ಮೊದಲ ಯತ್ನದಲ್ಲೇ ಯಶಸ್ಸು ಕಂಡಿದ್ದಾರೆ. ಎ.ನೀಲಕಂಠಯ್ಯ ಮತ್ತು ವಿ.ಕೃಷ್ಣಪ್ಪ ತಲಾ 3 ಬಾರಿ, ಆರ್‌.ಜಿ.ವೆಂಕಟಾಚಲಯ್ಯ, ಸಿ.ಚನ್ನಿಗಪ್ಪ, ಬಿ.ಮುನೇಗೌಡ ತಲಾ 2 ಬಾರಿ, ಹುಂಗಿ ಸುಬ್ಬಣ್ಣ, ಗಂಗಾಧರಪ್ಪ, ಪಿಳ್ಳೇಗೌಡ, ಸಚ್ಚಿದಾನಂದಸ್ವಾಮಿ, ಎ.ನರಸಿಂಹಯ್ಯ, ಜೆ.ನರಸಿಂಹಸ್ವಾಮಿ ತಲಾ ಒಂದು ಬಾರಿ ಸೋಲನ್ನನುಭವಿಸಿದ್ದಾರೆ. ವಿಶೇಷವೆಂದರೆ ಒಮ್ಮೆ ಶಾಸಕರಾಗಿ ಸೋತವರು ಮತ್ತೆ ಕ್ಷೇತ್ರದಲ್ಲಿ ಗೆದ್ದಿಲ್ಲ!

click me!