ಸಚಿವ ಸುಧಾಕರ್‌ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ಆಗುತ್ತಾ?: ಕಾಂಗ್ರೆಸ್‌ ಅಭ್ಯರ್ಥಿ ಇನ್ನೂ ನಿಗೂಢ

By Kannadaprabha NewsFirst Published Feb 25, 2023, 10:12 AM IST
Highlights

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡ ರಂಗೇರಿದೆ. ಸಚಿವ ಸುಧಾಕರ್‌ ಅವರು ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದ್ದು, ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಜೆಡಿಎಸ್‌, ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿವೆ. 

ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ (ಫೆ.25): ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಪ್ರತಿನಿಧಿಸುವ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡ ರಂಗೇರಿದೆ. ಸಚಿವ ಸುಧಾಕರ್‌ ಅವರು ಈ ಬಾರಿಯೂ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದ್ದು, ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಲು ಜೆಡಿಎಸ್‌, ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿವೆ. 2013ರಲ್ಲಿ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಶಾಸಕರಾಗಿದ್ದ ಡಾ.ಕೆ.ಸುಧಾಕರ್‌, 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 2ನೇ ಬಾರಿಗೆ ಶಾಸಕರಾದರು. ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದ ಸ್ಥಿತಿಯಲ್ಲಿ 2019ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ನಂತರ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಅಖಾಡಕ್ಕೆ ಇಳಿದು, ಸತತ 3ನೇ ಬಾರಿಗೆ ಗೆಲುವು ಸಾಧಿಸಿದರು. 

Latest Videos

ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು, ತಮ್ಮದೇ ಆದ ಹವಾ ಸೃಷ್ಟಿಸಿಕೊಂಡಿರುವ ಸುಧಾಕರ್‌, ಈಗ ನಾಲ್ಕನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಹೀಗಾಗಿ, ಬಿಜೆಪಿಯಿಂದ ಬೇರೆ ಟಿಕೆಟ್‌ ಆಕಾಂಕ್ಷಿಗಳ ಹೆಸರು ಅಷ್ಟಾಗಿ ಕೇಳಿ ಬರುತ್ತಿಲ್ಲ. ಇನ್ನು, ಚಿಕ್ಕಬಳ್ಳಾಪುರ ಸಾಮಾನ್ಯ ಕ್ಷೇತ್ರವಾದ ಬಳಿಕ ಮೊದಲ ಬಾರಿಗೆ 2008ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಗೊಂಡಿದ್ದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, 2013, 2018ರಲ್ಲಿ ಎರಡು ಬಾರಿ ಸುಧಾಕರ್‌ ವಿರುದ್ದ ಸೋತಿದ್ದರು. 

2 ದಿನದಲ್ಲಿ ಎನ್ನೆಚ್ಚೆಂ ನೌಕರರ ವೇತನ 15% ಹೆಚ್ಚಳ: ಸಚಿವ ಸುಧಾಕರ್‌

ಅನಿರೀಕ್ಷಿತವಾಗಿ 2019ರಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಶಾಸಕ ಸುಧಾಕರ್‌ ರಾಜೀನಾಮೆಯಿಂದ ಉಪ ಚುನಾವಣೆಗೆ ಸಾಕ್ಷಿಯಾದರೂ, ಕೆ.ಪಿ.ಬಚ್ಚೇಗೌಡರು ಚುನಾವಣಾ ಅಖಾಡಕ್ಕೆ ಇಳಿಯಲಿಲ್ಲ. ಬದಲಾಗಿ, ಶಿಡ್ಲಘಟ್ಟದ ರಾಧಾಕೃಷ್ಣ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ, ಈಗ 2023ರ ಚುನಾವಣೆಗೆ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರನ್ನೇ ತನ್ನ ಅಧಿಕೃತ ಅಭ್ಯರ್ಥಿ ಎಂದು ಜೆಡಿಎಸ್‌ ಘೋಷಿಸಿದೆ. ಇನ್ನು, ಕಾಂಗ್ರೆಸ್‌ನಿಂದ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ನಿಗೂಢತೆ ಇನ್ನೂ ಮುಂದುವರಿದಿದೆ. ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ, ಎಂ.ಎಸ್‌.ರಾಮಯ್ಯ ಮೊಮ್ಮಗ ರಕ್ಷರಾಮಯ್ಯ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ. 

ಅಲ್ಲದೇ, ಸ್ಥಳೀಯವಾಗಿ ಕೆಪಿಸಿಸಿ ಸದಸ್ಯ ವಿನಯ್‌ ಶಾಮ್‌, ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್‌, ಮಾಜಿ ಜಿ.ಪಂ. ಅಧ್ಯಕ್ಷ ಗಂಗರೇಕಾಲುವೆ ನಾರಾಯಣಸ್ವಾಮಿ ಕೂಡ ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಕಾಂಗ್ರೆಸ್‌ ವರಿಷ್ಠರು ಯಾರಿಗೆ ಟಿಕೆಟ್‌ ಎಂಬ ಗುಟ್ಟನ್ನು ಇನ್ನೂ ಬಿಟ್ಟು ಕೊಟ್ಟಿಲ್ಲ. ಸಚಿವ ಸುಧಾಕರ್‌ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌ ಹಾಕಲೇ ಬೇಕು ಎಂಬ ನಿಟ್ಟಿನಲ್ಲಿ ಕಾಂಗ್ರೆಸ್‌ನಿಂದ ಪ್ರಬಲ ವ್ಯಕ್ತಿಯನ್ನು ಕಣಕ್ಕೆ ಇಳಿಸಲು ಚಿಂತನೆ ನಡೆದಿದೆ.

ಕ್ಷೇತ್ರ ಹಿನ್ನೆಲೆ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ, ಕಾಂಗ್ರೆಸ್‌ನ ಭದ್ರಕೋಟೆ. 30 ವರ್ಷಗಳಿಗೂ ಮಿಗಿಲಾಗಿ ಮೀಸಲು ಕ್ಷೇತ್ರವಾಗಿ ಪರಿಶಿಷ್ಟರು ರಾಜಕೀಯ ಅಧಿಕಾರ ಅನುಭವಿಸಿದ ಕ್ಷೇತ್ರ ಚಿಕ್ಕಬಳ್ಳಾಪುರ. 2008ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾದ ಬಳಿಕ ಕ್ಷೇತ್ರದ ರಾಜಕಾರಣದ ಛಾಯೆ ಬದಲಾಗಿದೆ. ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಸಚಿವ ಸುಧಾಕರ್‌, ಈಗ ಬಿಜೆಪಿಯಲ್ಲಿದ್ದಾರೆ. ಮೊದಲ ಸಾರ್ವತ್ರಿಕ ಚುನಾವಣೆಯಿಂದ ಈವರೆಗೆ ಕಾಂಗ್ರೆಸ್‌ ಪ್ರಾಬಲ್ಯ ಮೆರೆದಿದೆ. ಇಂದಿರಾ ಕಾಂಗ್ರೆಸ್‌, ಜನತಾಪಕ್ಷ, ಜೆಡಿಎಸ್‌ ಹಾಗೂ ಬಿಜೆಪಿ ತಲಾ ಒಂದು ಬಾರಿ ಗೆಲುವು ಸಾಧಿಸಿವೆ.

ಬಿಜೆಪಿ ಪ್ರಣಾಳಿಕೆಗೆ ಕ್ಯುಆರ್‌ ಕೋಡಲ್ಲೂ ಸಲಹೆ ನೀಡಿ: ಸುಧಾಕರ್‌

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಒಕ್ಕಲಿಗರು, ಬಲಿಜಿಗರ ಮತಗಳೇ ಪ್ರತಿ ಚುನಾವಣೆಯಲ್ಲಿ ಅಭ್ಯರ್ಥಿಯ ಗೆಲುವನ್ನು ನಿರ್ಧರಿಸುತ್ತವೆ. ಇತ್ತೀಚೆಗೆ ಒಕ್ಕಲಿಗರಿಗಿಂತ ಬಲಿಜಿಗರು ಇಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಕಂಡು ಬಂದಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಟ್ಟು 2,04,223 ಮತದಾರರಿದ್ದು, ಆ ಪೈಕಿ ಪರಿಶಿಷ್ಟರು 70 ಸಾವಿರಕ್ಕಿಂತ ಹೆಚ್ಚಿದ್ದಾರೆ. ಒಕ್ಕಲಿಗರು 43,000, ಬಲಜಿಗರು 35,000, ಅಲ್ಪಸಂಖ್ಯಾತರು 30,000, ಕುರುಬರು 17,000 ಇದ್ದಾರೆ.

click me!