ಅವರವರೇ ಹೊಡೆದಾಡಿಕೊಳ್ಳುತ್ತಾರೆ. ಹೀಗಾಗಿ ನಮ್ಮ ಗೆಲುವು ಸುಲಭ ಎಂದುಕೊಂಡು ನಿರಾಳವಾಗಿ ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಂಗಳದಲ್ಲೀಗ ಆತಂಕದ ಬಿರುಗಾಳಿ ಎದ್ದಿದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ (ಏ.2) : ಅವರವರೇ ಹೊಡೆದಾಡಿಕೊಳ್ಳುತ್ತಾರೆ. ಹೀಗಾಗಿ ನಮ್ಮ ಗೆಲುವು ಸುಲಭ ಎಂದುಕೊಂಡು ನಿರಾಳವಾಗಿ ಚುನಾವಣೆ ಎದುರಿಸಲು ಸಿದ್ಧರಾಗುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಂಗಳದಲ್ಲೀಗ ಆತಂಕದ ಬಿರುಗಾಳಿ ಎದ್ದಿದೆ. ಸದಾ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದ, ಹಾವು ಮುಂಗುಸಿಯಂತೆ ಪರಸ್ಪರ ಬುಸುಗುಡುತ್ತಿದ್ದ ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್(Kimmane ratnakar) ಮತ್ತು ಆರ್.ಎಂ. ಮಂಜುನಾಥಗೌಡ(RM Manjunath gowda) ಇದ್ದಕ್ಕಿದ್ದಂತೆ ಒಂದಾಗಿ ಬಿಟ್ಟಿದ್ದಾರೆ. ಯಾರಿಗೇ ಟಿಕೆಟ್ ಸಿಕ್ಕರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಶಪಥ ಮಾಡಿದ್ದಾರೆ. ಅದೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ಎದುರಿನಲ್ಲಿಯೇ..!!
ಬೆಂಗಳೂರಿನಲ್ಲಿ(Bengaluru) ಶನಿವಾರ ಇಂತಹ ಘಟನೆಗೆ ಈ ಇಬ್ಬರೂ ನಾಯಕರ ಬೆಂಬಲಿಗರೇ ಸಾಕ್ಷಿಯಾಗಿದ್ದರು. ‘ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಇದಕ್ಕಾಗಿ ನಾವು ಎಲ್ಲ ಮರೆತು ಒಂದಾಗುತ್ತೇವೆ. ಯಾರಿಗೇ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇವೆ’ ಎಂದು ಒಪ್ಪಿಕೊಂಡರಲ್ಲದೆ, ಟಿಕೆಟ್ ಬಿಟ್ಟುಕೊಟ್ಟವರಿಗೆ ಮುಂದಿನ ದಿನಗಳಲ್ಲಿ ಎಂಎಲ್‌ಸಿ ಮಾಡುವ ಪ್ರಸ್ತಾಪವನ್ನು ಕೂಡ ಖುಷಿಯಿಂದಲೇ ಒಪ್ಪಿಕೊಂಡರು.
ಶಿವಮೊಗ್ಗ: ಭರ್ಜರಿ ಕಾರ್ಯಾಚರಣೆ: ₹6 ಕೋಟಿಗೂ ಅಧಿಕ ಮೌಲ್ಯದ ಹಣ, ವಸ್ತುಗಳ ವಶ!
ತೀರ್ಥಹಳ್ಳಿ ಕ್ಷೇತ್ರ(Teerthahalli assembly constituency)ದಲ್ಲಿ ತಮಗೇ ಟಿಕೆಟ್ ನೀಡುವಂತೆ ಇಬ್ಬರೂ ಬೇಡಿಕೆ ಇಟ್ಟಿದ್ದರು. ತೆರೆಮರೆಯಲ್ಲಿ ಇಬ್ಬರೂ ತಮ್ಮ ಪ್ರಯತ್ನ ಮುಂದುವರಿಸಿದ್ದರು. ಕಿಮ್ಮನೆ ರತ್ನಾಕರ್ ಅವರು ಸಿದ್ದರಾಮಯ್ಯ(Siddaramaiah) ಅವರ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಆರ್.ಎಂ. ಮಂಜುನಾಥಗೌಡ ಅವರು ಕಾಂಗ್ರೆಸ್‌ಗೆ ಬಂದಿದ್ದೇ ಡಿಕೆಶಿ ಆಹ್ವಾನದಿಂದ. ಟಿಕೆಟ್ ಖಚಿತಪಡಿಸಿಕೊಂಡೇ ಪಕ್ಷಕ್ಕೆ ಕಾಲಿಟ್ಟು ಸಂಘಟನೆಯನ್ನು ಬಲವಾಗಿಯೇ ಕಟ್ಟುವಲ್ಲಿ ಕೈಜೋಡಿಸಿದ್ದರು. ತೀರ್ಥಹಳ್ಳಿ ಪ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ್ದರು.
ಕೊನೆಗೆ ತೀರ್ಥಹಳ್ಳಿ ಕ್ಷೇತ್ರದ ಟಿಕೆಟ್ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ಡಿ.ಕೆ. ಶಿವಕುಮಾರ್ ಹೆಗಲಿಗೆ ಹಾಕಿತ್ತು. ಇದನ್ನು ಯಶಸ್ವಿಯಾಗಿ ನಿಭಾಯಿಸಿದ ಡಿ.ಕೆ. ಶಿವಕುಮಾರ್ ಇಬ್ಬರನ್ನೂ ಮುಖಾಮುಖಿ ಕೂರಿಸಿದರು. ಜೊತೆಗೆ ಬೆಂಬಲಿಗರನ್ನು ಜೊತೆಗಿಟ್ಟುಕೊಂಡರು. ಪರಿಸ್ಥಿತಿಯನ್ನು ವಿವರಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಕೈಚೆಲ್ಲಬಾರದು. ಇದಕ್ಕಾಗಿ ಎಂತಹ ತ್ಯಾಗ ಕೂಡ ಮಾಡಬೇಕಾದ ಅನಿವಾರ್ಯತೆಯನ್ನು ವಿವರಿಸಿದರು. ಟಿಕೆಟ್ ಬಿಟ್ಟುಕೊಟ್ಟು ಪಕ್ಷಕ್ಕಾಗಿ ದುಡಿಯುವವರಿಗೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಪರಿಷತ್ ಸ್ಥಾನ ನೀಡುವ ಸ್ಪಷ್ಟಭರವಸೆ ನೀಡಿದರು.
ಈ ಮಾತಿಗೆ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ. ಮಂಜುನಾಥಗೌಡ ಇಬ್ಬರು ಯಾವುದೇ ಬಿಗುಮಾನ, ಇಗೋ ಇಲ್ಲದೆ ಒಪ್ಪಿಕೊಂಡರು. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಪಕ್ಷ ಗೆಲ್ಲಿಸುವ ನಿಲುವಿನಿಂದ ನಾವು ಹಿಂದೆ ಸರಿಯುವುದಿಲ್ಲ. ಜೊತೆಗೂಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಇಬ್ಬರೂ ಭರವಸೆ ನೀಡಿದರು. ತಮ್ಮದು ಇದು ಕೊನೆಯ ಚುನಾವಣೆಯಾದ್ದರಿಂದ ತಮಗೆ ಅವಕಾಶ ನೀಡಿ ಎಂದು ಹೇಳುವದನ್ನು ಕಿಮ್ಮನೆ ರತ್ನಾಕರ್ ಈ ಸಂದರ್ಭದಲ್ಲಿಯೂ ಮರೆಯಲಿಲ್ಲ ಎಂದು ಮೂಲಗಳು ತಿಳಿಸಿವೆ.
ಮೂರು ದಿನಗಳ ಹಿಂದಿನವರೆಗೂ ಬಹುತೇಕ ಕಿಮ್ಮನೆ ರತ್ನಾಕರ್ ಅವರಿಗೆ ಟಿಕೆಟ್ ಖಚಿತವಾಗಿದೆ ಎನ್ನುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ವಾತಾವರಣ ಬದಲಾಗಿ ಹೋಯಿತು. ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ. ಮಂಜುನಾಥಗೌಡ ಇಬ್ಬರನ್ನೂ ಬೆಂಗಳೂರಿಗೆ ಕರೆಸಿಕೊಂಡು ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಮತ್ತು ದೆಹಲಿ ಪ್ರತಿನಿಧಿ ಸುರ್ಜೆವಾಲಾ ಅವರು ಹೇಳಿದ ಕಿವಿಮಾತು ಇಷ್ಟುವರ್ಷಗಳ ಸಮಸ್ಯೆಗೆ ಸುಲಭವಾಗಿ ಪರಿಹಾರ ಸಿಕ್ಕಿದೆ ಎಂದು ಎರಡೂ ಬಣಗಳ ಬೆಂಬಲಿಗರು ಖುಷಿಪಟ್ಟಿದ್ದಾರೆ.
ಆದರೆ ಇವೆಲ್ಲ ಸಾಧ್ಯವಾ?:
ಈ ಪ್ರಶ್ನೆಗೆ ಈಗಲೂ ಸ್ಪಷ್ಟಉತ್ತರವಿಲ್ಲ. ಆದರೆ ಪಕ್ಷದೊಳಗೆ ಭವಿಷ್ಯದ ಬಾಗಿಲು ಹೀಗೆಯೇ ತೆರೆದೇ ಇರಬೇಕಾದರೆ ಇಬ್ಬರೂ ವರಿಷ್ಠರ ಮಾತನ್ನು ಚಾಚೂ ತಪ್ಪದೇ ಪಾಲಿಸಬೇಕು. ಇಬ್ಬರು ನಾಯಕರು ಕೂಡ ಮಾಧ್ಯಮಗಳ ಎದುರು ಈ ಮಾತನ್ನು ಒಪ್ಪಿಕೊಂಡಿದ್ದಾರೆ.
ತೀರ್ಥಹಳ್ಳಿ: ತೀರ್ಥಹಳ್ಳಿ ಪೊಲೀಸ್ ಠಾಣೆ ಮುಂದೆ ಕಿಮ್ಮನೆ ನೇತೃತ್ವದಲ್ಲಿ ಅಹೋ ರಾತ್ರಿ ಧರಣಿ
ಕಷ್ಟಕ್ಕೆ ಸಿಲುಕಿದ ಆರಗ ಗೆಲುವಿನ ಓಟ:
ಕಾಂಗ್ರೆಸ್‌ನ ಈ ಇಬ್ಬರು ನಾಯಕರ ಒಗ್ಗಟ್ಟು ಈಗ ಆರಗ ಜ್ಞಾನೇಂದ್ರ ಅವರ ನಿದ್ದೆಗೆಡಿಸಿರುವುದು ಮಾತ್ರ ನಿಜ. ಇದುವರೆಗೆ ಗೆಲುವು ಸುಲಭ ಎಂದುಕೊಂಡಿದ್ದ ಇವರ ಅಂಗಳದಲ್ಲೀಗ ಬಿರುಗಾಳಿ ಎದ್ದಿದೆ. ಕಾಂಗ್ರೆಸ್‌ನ ಇಬ್ಬರು ನಾಯಕರು ಒಟ್ಟಾದರೆ ಅದನ್ನು ಎದುರಿಸುವುದು ಸುಲಭದ ಮಾತಲ್ಲ ಎಂದು ಬಿಜೆಪಿ ಕೆಲ ಮುಖಂಡರೇ ಹೇಳುತ್ತಾರೆ.