19 ಸಂಘಟನಾತ್ಮಕ ಜಿಲ್ಲಾ ಸಮಿತಿ ಜೊತೆ ರಾಜ್ಯ ಕೋರ್ ಕಮಿಟಿ ಸಭೆ, ಜಿಲ್ಲಾ ಸಮಿತಿಗಳಿಂದ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹ.
ಬೆಂಗಳೂರು(ಏ.02): ಪ್ರಸಕ್ತ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪ್ರತಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಮುಖಂಡರು ಹಾಗೂ ಪದಾಧಿಕಾರಿಗಳಿಂದ ಮತದಾನ ಮಾದರಿಯಲ್ಲಿ ಅಭಿಪ್ರಾಯ ಸಂಗ್ರಹಿಸಿದ ಮರು ದಿನವಾದ ಶನಿವಾರ ಜಿಲ್ಲಾ ಕೋರ್ ಕಮಿಟಿಗಳ ಸದಸ್ಯರೊಂದಿಗೆ ರಾಜ್ಯ ಕೋರ್ ಕಮಿಟಿ ಸದಸ್ಯರು ಸಮಾಲೋಚನೆ ನಡೆಸಿದ್ದಾರೆ.
ನಗರದ ಹೊರವಲಯದ ಗೋಲ್ಡನ್ ಪಾಮ್ ರೆಸಾರ್ಚ್‌ನಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನಡೆದ ಸಭೆಯಲ್ಲಿ ರಾಜ್ಯ ಘಟಕದ ಹಿರಿಯ ನಾಯಕರು ಒಟ್ಟು 39 ಸಂಘಟನಾತ್ಮಕ ಜಿಲ್ಲೆಗಳ ಪೈಕಿ ಸುಮಾರು 19 ಸಂಘಟನಾತ್ಮಕ ಜಿಲ್ಲೆಗಳ ಕೋರ್ ಕಮಿಟಿಗಳ ಸದಸ್ಯರೊಂದಿಗೆ ಚರ್ಚಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ವೇಗ ನೀಡಿದರು.
ಯಡಿಯೂರಪ್ಪ ನನ್ನ ತಂದೆ ಸಮಾನ, ನಮ್ಮ ಮೇಲೆ ಅವರಿಗೆ ಬಹಳ ಪ್ರೀತಿ: ಸಚಿವ ನಾರಾಯಣಗೌಡ
ಪ್ರತಿ ಜಿಲ್ಲಾ ಕೋರ್ ಕಮಿಟಿಗೆ ಹೆಚ್ಚೂ ಕಡಮೆ ಅರ್ಧ ಗಂಟೆ ಸಮಯ ನೀಡಲಾಗಿತ್ತು. ಹೆಚ್ಚು ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಗಳ ಕೋರ್ ಕಮಿಟಿಗಳ ಸದಸ್ಯರು ಹೆಚ್ಚು ಸಮಯ ತೆಗೆದುಕೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಹಾಲಿ ಶಾಸಕರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವುದು ಸೂಕ್ತ ಎಂಬ ಅಭಿಪ್ರಾಯವೂ ಕೇಳಿಬಂದಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಹಿರಿಯ ನಾಯಕರು ಪಾಲ್ಗೊಂಡಿದ್ದ ಈ ಸಭೆ ಭಾನುವಾರವೂ ಮುಂದುವರೆದು ಇತರ ಜಿಲ್ಲೆಗಳ ಕೋರ್ ಕಮಿಟಿ ಸದಸ್ಯರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಕಾಂಗ್ರೆಸ್ ಕೋಲಾರಕ್ಕೆ ರಾಹುಲ್‌ರನ್ನು ಕರೆಸಿದರೆ ನಾವು ಪ್ರಧಾನಿ ಮೋದಿ ಕರೆಸುತ್ತೇವೆ: ವರ್ತೂರು ಪ್ರಕಾಶ್
ಈ ಸಭೆಯಲ್ಲಿ ವ್ಯಕ್ತವಾಗುವ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ರಾಜ್ಯ ಕೋರ್ ಕಮಿಟಿ ಸದಸ್ಯರು ಇನ್ನೆರಡು ದಿನಗಳಲ್ಲಿ ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆಯಿದೆ. ಅಂತಿಮವಾಗಿ ಎಲ್ಲ ಮಾಹಿತಿ ಕ್ರೋಢಿಕರಿಸಿ ಪಕ್ಷದ ಕೇಂದ್ರ ಸಂಸದೀಯ ಮಂಡಳಿಗೆ ಕಳುಹಿಸಿಕೊಡಲಾಗುತ್ತದೆ. ಮೂರ್ನಾಲ್ಕು ದಿನಗಳಲ್ಲಿ ದೆಹಲಿಯಲ್ಲಿ ಸಂಸದೀಯ ಮಂಡಳಿ ಸಭೆ ಸೇರಿ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿ ಪಟ್ಟಿಪ್ರಕಟಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.