ಸಮಾಜವಾದಿ ಪಕ್ಷ, ಕಾಂಗ್ರೆಸ್, ಜನತಾ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ, ಬಿಜೆಪಿ, ಹೀಗೆ ಬೇರೆ, ಬೇರೆ ಪಕ್ಷಗಳಿಂದ ಸ್ಪರ್ಧಿಸಿದಾಗಲೂ ಬಂಗಾರಪ್ಪ ಅವರನ್ನು ಗೆಲ್ಲಿಸುತ್ತಾ ಬಂದಿದ್ದ ಈ ಕ್ಷೇತ್ರ ಬಂಗಾರಪ್ಪ ಕುಟುಂಬಕ್ಕೆ ಫೇವರೇಟ್.
ಗೋಪಾಲ್ ಯಡಗೆರೆ
ಶಿವಮೊಗ್ಗ (ಮಾ.08): ಸೋಲರಿಯದ ಸರದಾರ ಎಂದೇ ಖ್ಯಾತರಾಗಿದ್ದ ದಿ.ಸಾರೆಕೊಪ್ಪ ಬಂಗಾರಪ್ಪ ಅವರ ತವರು ಕ್ಷೇತ್ರವಾಗಿದ್ದ ಸೊರಬ, ರಾಜ್ಯದ ಹಾಟ್ ಕ್ಷೇತ್ರಗಳಲ್ಲಿ ಒಂದು. ತನ್ನ ಇತಿಹಾಸದಲ್ಲಿ ಬಂಗಾರಪ್ಪ ಕುಟುಂಬದ ಹೊರತಾಗಿ ಒಮ್ಮೆ ಮಾತ್ರ ಬೇರೆಯವರಿಗೆ ಒಲಿದಿರುವ ಈ ಕ್ಷೇತ್ರ, ಈಗಲೂ ಆ ಕುಟುಂಬದ ಪುತ್ರರ ನಡುವಿನ ಪೈಪೋಟಿಗೆ ಸಾಕ್ಷಿಯಾಗಿ ನಿಲ್ಲುವ ಸಾಧ್ಯತೆಯಿದೆ.
ಸಮಾಜವಾದಿ ಪಕ್ಷ, ಕಾಂಗ್ರೆಸ್, ಜನತಾ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಕ್ಷ, ಬಿಜೆಪಿ, ಹೀಗೆ ಬೇರೆ, ಬೇರೆ ಪಕ್ಷಗಳಿಂದ ಸ್ಪರ್ಧಿಸಿದಾಗಲೂ ಬಂಗಾರಪ್ಪ ಅವರನ್ನು ಗೆಲ್ಲಿಸುತ್ತಾ ಬಂದಿದ್ದ ಈ ಕ್ಷೇತ್ರ ಬಂಗಾರಪ್ಪ ಕುಟುಂಬಕ್ಕೆ ಫೇವರೇಟ್. 1983ರಲ್ಲಿ ನಾಮಪತ್ರ ಸಲ್ಲಿಸಿ, ಇಡೀ ರಾಜ್ಯದ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಜನತಾಪಕ್ಷದ ಅಭ್ಯರ್ಥಿ ಎಸ್.ಬಂಗಾರಪ್ಪ, ಮತ ಹಾಕಲು ಮಾತ್ರ ತಮ್ಮ ಕ್ಷೇತ್ರಕ್ಕೆ ಮರಳಿದ್ದರು. ಆದರೆ, ಜನರು ಮಾತ್ರ ಮಾತು ಕೊಟ್ಟಂತೆ ಬಂಗಾರಪ್ಪರನ್ನು ಗೆಲ್ಲಿಸಿದ್ದರು. ಬಳಿಕ, ಅವರು ಹಿಂತಿರುಗಿ ನೋಡಲಿಲ್ಲ. ಆದರೆ, 2008ರಲ್ಲಿ ಸೋದರರ ನಡುವಿನ ಕದನದಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ಸುಲಭವಾಗಿ ಗೆದ್ದಿದ್ದರು. ಆಗ ಬಂಗಾರಪ್ಪನವರ ಪುತ್ರರಾದ ಕುಮಾರ್ ಬಂಗಾರಪ್ಪ ಕಾಂಗ್ರೆಸ್‌ನಿಂದ ಮತ್ತು ಮಧು ಬಂಗಾರಪ್ಪ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ್ದರು.
ಮನೆಯಲ್ಲಿ ಸಿಕ್ಕಿದ್ದು ನಮ್ಮದೇ ಹಣ, ದಾಖಲೆ ಇದೆ: ಮಾಡಾಳು ವಿರೂಪಾಕ್ಷಪ್ಪ
2018ರಲ್ಲಿ ಕುಮಾರ್ ಬಂಗಾರಪ್ಪನವರು ಕಾಂಗ್ರೆಸ್ ತೊರೆದು, ಬಿಜೆಪಿಯಿಂದ ಸ್ಪರ್ಧಿಸಿ, ಗೆದ್ದಿದ್ದರು. ಆಗ ಜೆಡಿಎಸ್‌ನಲ್ಲಿದ್ದ ಮಧು ಬಂಗಾರಪ್ಪ, ಈಗ ಕಾಂಗ್ರೆಸ್ ಸೇರಿ ಆ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ. 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಪುನ: ಕುಮಾರ್ ಬಂಗಾರಪ್ಪ ಅವರೇ ಸ್ಪರ್ಧಿಸುತ್ತಾರಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ರಾಜು ಎಂ.ತಲ್ಲೂರು ಇದೀಗ ಬಿಜೆಪಿ ಸೇರಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು, ಜೆಡಿಎಸ್‌ನಿಂದ ತಾವೇ ಅಭ್ಯರ್ಥಿ ಎಂದು ಇದುವರೆಗೆ ಹೇಳಿಕೊಳ್ಳುತ್ತ ಪ್ರಚಾರ ಆರಂಭಿಸಿದ್ದ ಬಾಸೂರು ಚಂದ್ರೆಗೌಡಗೆ ಇದೀಗ ಪಕ್ಷ ಸೇರಿರುವ ಪ್ರಸನ್ನಕುಮಾರ್ ಸಮನವಳ್ಳಿ ಚೆಕ್‌ಮೇಟ್ ಇಟ್ಟಿದ್ದಾರೆ. ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.
ಕ್ಷೇತ್ರ ಹಿನ್ನೆಲೆ: 1967ರಲ್ಲಿ ಸ್ವತಂತ್ರ ವಿಧಾನಸಭಾ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದ ಸೊರಬದಲ್ಲಿ ಎಸ್.ಬಂಗಾರಪ್ಪ ಅವರದ್ದೇ ಪಾರುಪತ್ಯ. ಅವರು ಯಾವುದೇ ಪಕ್ಷ, ಚಿಹ್ನೆಯಿಂದ ಸ್ಪರ್ಧಿಸಿದರೂ ಅವರ ಜೊತೆ ನಿಲ್ಲುತ್ತಿದ್ದ ಈ ಕ್ಷೇತ್ರದ ಮತದಾರರು 2008ರಲ್ಲಿ ಮಾತ್ರ ಸೋದರರ ನಡುವಿನ ಕಾದಾಟದಲ್ಲಿ ಬಿಜೆಪಿಯ ಹರತಾಳು ಹಾಲಪ್ಪ ಅವರನ್ನು ಗೆಲ್ಲಿಸಿದ್ದರು. 1967ರಲ್ಲಿ ಸೋಷಿಯಲ್ ಪಾರ್ಟಿ, 1972ರಲ್ಲಿ ಸಂಯುಕ್ತ ಸೋಷಿಯಲ್ ಪಾರ್ಟಿ, 1978ರಲ್ಲಿ ಕಾಂಗ್ರೆಸ್, 1983ರಲ್ಲಿ ಜನತಾ ಪಾರ್ಟಿ, 1985 ಮತ್ತು 1989ರಲ್ಲಿ ಕಾಂಗ್ರೆಸ್, 1994 ಮತ್ತು 1996ರಲ್ಲಿ ಕರ್ನಾಟಕ ಕಾಂಗ್ರೆಸ್ ಪಾರ್ಟಿ, 1999 ಮತ್ತು 2004ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಬಂಗಾರಪ್ಪ ಗೆದ್ದಿದ್ದಾರೆ. 2013ರಲ್ಲಿ ಜೆಡಿಎಸ್‌ನಿಂದ ಮಧು ಬಂಗಾರಪ್ಪ, 2018ರಲ್ಲಿ ಬಿಜೆಪಿಯಿಂದ ಕುಮಾರ್ ಬಂಗಾರಪ್ಪ ಗೆದ್ದಿದ್ದಾರೆ.
ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು: ವಿವಾದದ ವಿಜಯೋತ್ಸವ!
ಜಾತಿವಾರು ಲೆಕ್ಕಾಚಾರ: ಒಟ್ಟು 1,98,396 ಮತದಾರರಿರುವ ಈ ಕ್ಷೇತ್ರದಲ್ಲಿ ಈಡಿಗರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಸಾಮೂಹಿಕವಾಗಿ ಇವರು ಯಾರನ್ನು ಬೆಂಬಲಿಸುತ್ತಾರೋ ಅವರು ಗೆಲ್ಲುತ್ತಾರೆ. ಜೊತೆಗೆ, ಲಿಂಗಾಯತರು ಎರಡನೇ ಸ್ಥಾನದಲ್ಲಿದ್ದು, ಇವರು ಕೂಡ ಫಲಿತಾಂಶದ ಮೇಲೆ ಪರಿಣಾಮ ಬೀರಲಿದ್ದಾರೆ. ಉಳಿದಂತೆ ದಲಿತರು, ಮಡಿವಾಳರು, ಗಂಗಾಮತಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಡಿಗ ಸಮುದಾಯ ಸದಾ ಕಾಲ ಬಂಗಾರಪ್ಪ ಕುಟುಂಬದ ಜೊತೆಗೆ ನಿಂತಿತ್ತು. ಆದರೆ, ಹಾಲಪ್ಪ ಈ ಕ್ಷೇತ್ರ ಪ್ರವೇಶ ಮಾಡಿದ ಬಳಿಕ ಸಮುದಾಯದ ಮತಗಳು ಬಿಜೆಪಿಯತ್ತ ಹರಿದು ಬಂದಿವೆ. ಕುಮಾರ್ ಬಂಗಾರಪ್ಪ ಜೊತೆ ಈ ವರ್ಗ ಸ್ವಲ್ಪ ಮಟ್ಟಿಗೆ ನಿಂತಿದೆ. ಲಿಂಗಾಯತ ವರ್ಗ ಬಿಜೆಪಿಗೆ ಬೆಂಬಲವಾಗಿ ನಿಂತಿದ್ದು, ಯಡಿಯೂರಪ್ಪನವರ ಪ್ರಭಾವ ಈ ವರ್ಗದ ಮೇಲೆ ದಟ್ಟವಾಗಿದೆ.