Karnataka Assembly Elections 2023: ಮೇ 2ನೇ ವಾರ ಕರ್ನಾಟಕ ವಿಧಾನಸಭೆ ಚುನಾವಣೆ ಸಾಧ್ಯತೆ

By Kannadaprabha NewsFirst Published Mar 19, 2023, 6:03 AM IST
Highlights

ಮಾಸಾಂತ್ಯಕ್ಕೆ ಚುನಾವಣೆ ಘೋಷಣೆ ಸಾಧ್ಯತೆ, ಮೇ 24ಕ್ಕೆ ವಿಧಾನಸಭೆ ಕಾರಾರ‍ಯವಧಿ ಅಂತ್ಯ, ಅಷ್ಟರೊಳಗೆ ಸಕಲ ಪ್ರಕ್ರಿಯೆ ಮುಕ್ತಾಯ ಗುರಿ, ಕಳೆದ ಚುನಾವಣೆ ಮೇ 12ಕ್ಕೆ ನಡೆದಿತ್ತು. 

ಬೆಂಗಳೂರು(ಮಾ.19):  ವಿಧಾನಸಭೆಯ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಸಂಪೂರ್ಣ ಸಿದ್ಧತೆಗಳನ್ನು ಈಗಾಲೇ ಕೈಗೊಂಡಿದ್ದು, ಬಹುತೇಕ ಇದೇ ತಿಂಗಳ ಕೊನೆಯ ವಾರದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ. ಮೇ 2ನೇ ವಾರ ಚುನಾವಣೆ ನಡೆವ ನಿರೀಕ್ಷೆಯಿದೆ.

ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ರಾಜ್ಯ ಮುಖ್ಯಚುನಾವಣಾಧಿಕಾರಿ ಕಚೇರಿಯ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಅಲ್ಲದೇ, ಇತ್ತೀಚೆಗಷ್ಟೇ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ರಾಜ್ಯಕ್ಕೆ ಆಗಮಿಸಿ ಮೂರು ದಿನಗಳ ಸಿದ್ಧತೆಗಳ ಕುರಿತು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆ. ದೆಹಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ದಿನಾಂಕವನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದ್ದು, ಇದೇ ತಿಂಗಳ ಕೊನೆಯ ವಾರದಲ್ಲಿ ಅಥವಾ ಏಪ್ರಿಲ್‌ನ ಮೊದಲ ವಾರದಲ್ಲಿ ಅಧಿಕೃತವಾಗಿ ಚುನಾವಣೆಯ ದಿನಾಂಕವನ್ನು ಪ್ರಕಟಿಸಲಿದೆ ಎಂದು ಮೂಲಗಳು ಹೇಳಿವೆ.

ಯುಗಾದಿ ಹಬ್ಬದಂದೇ 126 ಅಭ್ಯರ್ಥಿಗಳ ಕಾಂಗ್ರೆಸ್‌ ಪಟ್ಟಿ ಪ್ರಕಟ?: ಸಂಖ್ಯಾಶಾಸ್ತ್ರ ಆಧರಿಸಿ ಘೋಷಣೆ?

ಪ್ರಸಕ್ತ ಸರ್ಕಾರದ ಕಾರ್ಯಾವಧಿ ಮೇ 24ಕ್ಕೆ ಮುಕ್ತಾಯವಾಗುವ ಕಾರಣ 2018ರ ವೇಳಾಪಟ್ಟಿಯಂತೆಯೇ ಈ ಬಾರಿಯೂ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕಳೆದ ಬಾರಿ ಮೇ 12ರಂದು ಮತದಾನ ನಡೆದಿದ್ದು, ಈ ಬಾರಿಯೂ ಮೇ ಎರಡನೇ ವಾರದಲ್ಲಿ ಮತದಾನ ನಡೆಸುವ ನಿರೀಕ್ಷೆ ಇದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಅಂದಾಜಿಸಿದೆ. ಈ ಲೆಕ್ಕಾಚಾರದಲ್ಲಿಯೇ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಏಪ್ರಿಲ್‌ ತಿಂಗಳ ಎರಡನೇ ವಾರದಲ್ಲಿ ಅಧಿಸೂಚನೆ ಹೊರಡಿಸಿ ಏಪ್ರಿಲ್‌ ತಿಂಗಳಾಂತ್ಯ ಅಥವಾ ಮೇ ಮೊದಲ ವಾರದ ವೇಳೆಗೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಲು ಆಯೋಗವು ಚಿಂತನೆ ನಡೆಸಿದೆ ಎನ್ನಲಾಗಿದೆ.

ಈಗಾಗಲೇ ಪಿಯುಸಿ ಪರೀಕ್ಷೆಯು ಆರಂಭಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾ.31ರಿಂದ ಏ.15ರವರೆಗೆ ನಡೆಯಲಿದೆ. ಶಾಲಾ-ಕಾಲೇಜುಗಳ ಪರೀಕ್ಷೆಗಳು ಮುಕ್ತಾಯಗೊಳ್ಳುವುದರಿಂದ ಚುನಾವಣೆ ನಡೆಸಲು ಯಾವುದೇ ಸಮಸ್ಯೆಯಾಗುವುದಿಲ್ಲ. ಶಿಕ್ಷಕರು, ಉಪನ್ಯಾಸಕರನ್ನು ಸಹ ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವುದಕ್ಕೂ ಯಾವುದೇ ಅಡ್ಡಿಗಳಿರುವುದಿಲ್ಲ ಎಂಬುದು ಆಯೋಗದ ಅಧಿಕಾರಿಗಳ ಲೆಕ್ಕಾಚಾರವಾಗಿದೆ.

3 ಲಕ್ಷ ಸಿಬ್ಬಂದಿ ಅಗತ್ಯ:

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಗೆ ಸರಾಸರಿ 883 ಮತದಾರರಂತೆ 58,282 ಮತಗಟ್ಟೆಗಳನ್ನು ಸ್ಥಾಪಿಸಲು ಆಯೋಗವು ತೀರ್ಮಾನಿಸಿದೆ. ನಗರ ಪ್ರದೇಶಗಳಲ್ಲಿ 24,063 ಮತ್ತು ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ. 1320 ಮಹಿಳಾ ಮತಗಟ್ಟೆಗಳು, 224 ಯುವ ಅಧಿಕಾರಿಗಳು ನಿರ್ವಹಣೆಯ, 224 ವಿಶೇಷ ಚೇತನರು ಮತ್ತು 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಸುಮಾರು 58 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವುದರಿಂದ ಪ್ರತಿ ಮತಗಟ್ಟೆಗೆ ಕನಿಷ್ಠ 5-6 ಸಿಬ್ಬಂದಿಯಂತೆ ಚುನಾವಣಾ ಪ್ರಕ್ರಿಯೆ ನಡೆಸಲು ಮೂರು ಲಕ್ಷ ಸಿಬ್ಬಂದಿಗಳ ಅಗತ್ಯ ಇದೆ ಎಂದು ಅಂದಾಜಿಸಲಾಗಿದೆ. ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ ಎಂದು ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!