ಇನ್ನು ಮುಂದೆಯೂ ಬಿಎಸ್‌ವೈ ಸುತ್ತವೇ ರಾಜ್ಯ ರಾಜಕಾರಣ ಗಿರಕಿ: ಬಿ.ವೈ.ವಿಜಯೇಂದ್ರ

Published : Mar 03, 2023, 11:51 AM IST
ಇನ್ನು ಮುಂದೆಯೂ ಬಿಎಸ್‌ವೈ ಸುತ್ತವೇ ರಾಜ್ಯ ರಾಜಕಾರಣ ಗಿರಕಿ: ಬಿ.ವೈ.ವಿಜಯೇಂದ್ರ

ಸಾರಾಂಶ

ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ವಿದಾಯ ಭಾಷಣ ಮಾಡಿದ್ದಾರೆ. 

ವಿಜಯ್‌ ಮಲಗಿಹಾಳ

ಬೆಂಗಳೂರು (ಮಾ.02): ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದು ವಿದಾಯ ಭಾಷಣ ಮಾಡಿದ್ದಾರೆ. ಮತ್ತೊಂದೆಡೆ ಒಂದೂವರೆ ವರ್ಷದ ಹಿಂದೆ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಬೆನ್ನಲ್ಲೇ ರಾಜ್ಯ ಉಪಾಧ್ಯಕ್ಷರೂ ಆಗಿರುವ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಬಿಜೆಪಿಯಲ್ಲಿ ಇನ್ನಷ್ಟು ಪ್ರವರ್ಧಮಾನಕ್ಕೆ ಬರತೊಡಗಿದ್ದಾರೆ. 

ಜತೆಗೆ ಇತ್ತೀಚೆಗೆ ಚುನಾವಣೆ ಉದ್ದೇಶದಿಂದ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳುತ್ತಿರುವ ಪಕ್ಷದ ವಿವಿಧ ಮೋರ್ಚಾಗಳ ಸಮಾವೇಶಗಳ ಸಂಚಾಲಕರನ್ನಾಗಿಯೂ ನೇಮಿಸಲಾಗಿದೆ. ಹೀಗಾಗಿಯೇ ಯಡಿಯೂರಪ್ಪ ನಿಧಾನವಾಗಿ ಪಕ್ಷದಲ್ಲಿ ಮೂಲೆಗುಂಪು ಆಗುತ್ತಿದ್ದಾರೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೆ ತಮ್ಮ ತಂದೆಯನ್ನು ಮೂಲೆಗುಂಪು ಮಾಡುವ ವಿಷಯವನ್ನು ಸಾರಾಸಗಟಾಗಿ ತಳ್ಳಿ ಹಾಕುವ ವಿಜಯೇಂದ್ರ, ಅವರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಖಡಕ್‌ ಆಗಿ ಹೇಳುತ್ತಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ‘ಮುಖಾಮುಖಿ’ಯಾಗಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಜೆಡಿಎಸ್‌ ಬಗ್ಗೆ ಚರ್ಚೆ ಮಾಡಬೇಡಿ: ಸಿದ್ಧರಾಮಯ್ಯಗೆ ಎಚ್‌ಡಿಕೆ ಟಾಂಗ್‌

ಸಂದರ್ಶನದ ವಿಸ್ತೃತ ಭಾಗ ಹೀಗಿದೆ:
* ಯಡಿಯೂರಪ್ಪ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿರುವುದು ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಬಹುದೇ?
ಯಡಿಯೂರಪ್ಪ ಅವರು ಪದೇ ಪದೇ ಹೇಳಿದ್ದಾರೆ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತಿದ್ದೇನೆ ಹೊರತು ಸಕ್ರಿಯ ರಾಜಕಾರಣದಿಂದ ಅಲ್ಲ ಎಂದು. ಅವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದರೆ ಅದು ಬೇರೆ ಆಗುತ್ತಿತ್ತು. ಈಗ ಇದರಲ್ಲಿ ಗೊಂದಲವೇನೂ ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೆಚ್ಚು ಸ್ಥಾನ ಗಳಿಸಲು ರಾಜ್ಯ ಪ್ರವಾಸ ಮಾಡುತ್ತೇನೆ. ನರೇಂದ್ರ ಮೋದಿ ಅವರ ಕೈಬಲಪಡಿಸುವುದೇ ತಮ್ಮ ಗುರಿ. ಅಲ್ಲಿವರೆಗೆ ವಿರಮಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

* ಹಿಂದೆ ಸರಿಯುವುದೇ ಆಗಿದ್ದಲ್ಲಿ ಸಿಎಂ ಸ್ಥಾನದಿಂದ ನಿರ್ಗಮಿಸುವ ಅಗತ್ಯವಿತ್ತೇ?
ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಬೇಕು ಎಂಬ ನಿರ್ಧಾರ ಯಡಿಯೂರಪ್ಪ ಅವರದ್ದು. ಈಗ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೂ ಅವರ ನಿರ್ಧಾರ. ಈ ಬಗ್ಗೆ ನಾನು ಹೆಚ್ಚೇನೂ ಹೇಳುವುದಿಲ್ಲ.

* ಚುನಾವಣೆ ಬಳಿಕ ಹೈಕಮಾಂಡ್‌ ಬಿಎಸ್‌ವೈರನ್ನು ಮೂಲೆಗುಂಪು ಮಾಡಲಿದೆ ಎಂಬ ಮಾತಿದೆ?
ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಉಧ್ಭವಿಸುವುದಿಲ್ಲ. ಅವರಿಗೆ ಎಲ್ಲಿವರೆಗೆ ದೇವರು ಶಕ್ತಿ ಕೊಟ್ಟಿರುತ್ತಾನೊ ಅಲ್ಲಿವರೆಗೆ ಕಾರ್ಯಕರ್ತರ ಮಧ್ಯೆ ಇದ್ದು ರಾಜ್ಯ ಪ್ರವಾಸ ಮಾಡಿಯೇ ಮಾಡುತ್ತಾರೆ. ಅವರಿಗೆ ಮುಂದೆ ಮುಖ್ಯಮಂತ್ರಿಯಾಗಬೇಕು ಅಥವಾ ಬೇರೊಂದು ಸ್ಥಾನಮಾನ ಬೇಕು ಎಂಬ ಉದ್ದೇಶವಿಲ್ಲ. ಯಡಿಯೂರಪ್ಪ ಅವರು ಕರ್ನಾಟಕ ರಾಜಕಾರಣದ ಅವಿಭಾಜ್ಯ ಅಂಗ. ರಾಜ್ಯ ರಾಜಕಾರಣ ಹಿಂದೆ ಕೂಡ ಯಡಿಯೂರಪ್ಪ ಸುತ್ತಲೇ ತಿರುಗುತ್ತಿತ್ತು. ಮುಂದೆಯೂ ಹಲವು ವರ್ಷಗಳ ಕಾಲ ಅವರ ಸುತ್ತಲೇ ತಿರುಗುತ್ತದೆ. ಅವರ ಶಕ್ತಿ ಅಂಥದ್ದು. ಯಡಿಯೂರಪ್ಪ ಅವರನ್ನು ಜನರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ಜನರಿಂದ ಯಡಿಯೂರಪ್ಪ ಅವರನ್ನು ದೂರವಿರಿಸಲು ಆಗುವುದಿಲ್ಲ. ಈ ರಾಜ್ಯದ ಜನರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಯಡಿಯೂರಪ್ಪ ಅವರ ಅವಿನಾಭಾವ ಸಂಬಂಧವಿದೆ. ಪಕ್ಷದ ಹೈಕಮಾಂಡ್‌ನಲ್ಲೂ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಆಲೋಚನೆ ಇಲ್ಲ. ಇದೆಲ್ಲವೂ ಪ್ರತಿಪಕ್ಷಗಳ ನಾಯಕರ ರಾಜಕೀಯ ಹುನ್ನಾರ ಅಷ್ಟೇ.

* ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಪದೇ ಪದೇ ಯಡಿಯೂರಪ್ಪ ಬಗ್ಗೆ ಅನುಕಂಪದ ಮಾತುಗಳನ್ನಾಡುತ್ತಿದ್ದಾರೆ?
ಪ್ರತಿಪಕ್ಷಗಳ ನಾಯಕರು ಯಡಿಯೂರಪ್ಪ ಅವರ ಬಗ್ಗೆ ಅನುಕಂಪದ ಮಾತುಗಳನ್ನಾಡುವ ಮೂಲಕ ವೀರಶೈವ ಲಿಂಗಾಯತ ಮತದಾರರನ್ನು ವಿಭಜಿಸುವ ಕುತಂತ್ರ ನೀತಿ ಅನುಸರಿಸುತ್ತಿದ್ದಾರೆ. ಹಾಗಂತ ಯಡಿಯೂರಪ್ಪ ಅವರಿಗೆ ಕೇವಲ ವೀರಶೈವ ಲಿಂಗಾಯತ ಸಮುದಾಯವಷ್ಟೇ ಅಲ್ಲ. ಇತರ ಹತ್ತಾರು ಸಮುದಾಯಗಳ ಜನರ ಒಲವು ಗಳಿಸಿದ್ದಾರೆ. ಯಡಿಯೂರಪ್ಪ ಒಬ್ಬ ಜನಪ್ರಿಯ ನಾಯಕ. ಇದು ಪ್ರತಿ ಸಂದರ್ಭದಲ್ಲೂ ರುಜುವಾತಾಗಿದೆ. ಹೀಗಿರುವಾಗ ಪ್ರತಿಪಕ್ಷಗಳ ನಾಯಕರು ಪದೇ ಪದೇ ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಅವರು ಅದರಲ್ಲಿ ಸಫಲರಾಗುವುದಿಲ್ಲ.

* ನಿಮ್ಮ ರಾಜಕೀಯ ಭವಿಷ್ಯಕ್ಕಾಗಿ ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರ ಬಿಟ್ಟರೇ?
ರಾಜಕೀಯ ಅಥವಾ ಇತರ ಯಾವುದೇ ಕ್ಷೇತ್ರದಲ್ಲಿ ಮಕ್ಕಳು ತಮ್ಮ ಸ್ವಂತ ಬಲದ ಮೇಲೆ ಬೆಳೆಯಬೇಕು ಎಂಬುದು ಯಡಿಯೂರಪ್ಪ ಅವರ ನಿಲುವು. ಯಡಿಯೂರಪ್ಪ ಅವರು ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಗಟ್ಟಿನಿರ್ಧಾರ ಕೈಗೊಂಡ ವೇಳೆ ಕ್ಷೇತ್ರದ ಜನರು, ಪಕ್ಷದ ಕಾರ್ಯಕರ್ತರು ವಿಜಯೇಂದ್ರ ಅವರನ್ನಾದರೂ ಕಳಿಸಿಕೊಡಿ ಎಂಬ ಬಲವಾದ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ನನ್ನ ಹೆಸರನ್ನು ಘೋಷಿಸಿದರು. ಅದು ಬಿಟ್ಟರೆ ಯಡಿಯೂರಪ್ಪ ಅವರಿಗೆ ಬೇರೆ ಉದ್ದೇಶ ಇರಲಿಲ್ಲ. ಅವರು ವಿಶಾಲ ಹೃದಯಿ. ಇದೆಲ್ಲ ಆಲೋಚನೆ ಮಾಡುವ ಮನಸ್ಥಿತಿಯೇ ಅವರಿಗಿಲ್ಲ.

* ನಿಮ್ಮ ಸ್ಪರ್ಧೆ ಶಿಕಾರಿಪುರದಿಂದಲೋ ಅಥವಾ ಬೇರೆಡೆಯೋ?
ಇಲ್ಲಿ ಮನಸ್ಸಿನ ಪ್ರಶ್ನೆ ಬರುವುದಿಲ್ಲ. ಪಕ್ಷ ಏನು ನಿರ್ಧಾರ ಮಾಡುತ್ತದೆಯೋ ಅದನ್ನು ಪಾಲಿಸುವುದಷ್ಟೇ. ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಿದರೂ ನಾನು ಸಿದ್ಧನಿದ್ದೇನೆ, ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ ಎಂದು ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದೇನೆ.

* ಹೈಕಮಾಂಡ್‌ ಬೇಡ ಎಂದರೆ ಕಣಕ್ಕೆ ಇಳಿತೀರಾ?
ಅಂದಿನ ಪರಿಸ್ಥಿತಿ ಬೇರೆ. ಈಗಿನ ಪರಿಸ್ಥಿತಿ ಬೇರೆ. ಕಳೆದ ಐದು ವರ್ಷಗಳಿಂದ ನಾನು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಘಟಕದ ಉಪಾಧ್ಯಕ್ಷನಾಗಿ ಸಾಕಷ್ಟುರಾಜ್ಯ ಪ್ರವಾಸ ಮಾಡಿದ್ದೇನೆ. ಪಕ್ಷದ ಸಂಘಟನೆಯಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಆದರೂ ಪಕ್ಷದ ತೀರ್ಮಾನವೇ ಅಂತಿಮ. ಅದನ್ನು ತಲೆಬಾಗಿ ಒಪ್ಪಿಕೊಳ್ಳುತ್ತೇನೆ.

* ಶಿಕಾರಿಪುರ ಬಿಟ್ಟು ಬೇರೆಡೆ ಸ್ಪರ್ಧೆಗೆ ಸೂಚಿಸಿದರೆ?
ನಾನು ಅದರ ಬಗ್ಗೆ ಹೆಚ್ಚು ಚರ್ಚೆ ನಡೆಸಲು ಬಯಸುವುದಿಲ್ಲ. ಅದು ಸರಿ ಹೋಗಲಿಕ್ಕಿಲ್ಲ. ನಾನು ಈಗಾಗಲೇ ಶಿಕಾರಿಪುರ ಕ್ಷೇತ್ರದ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರವಾಸ ಆರಂಭಿಸಿದ್ದೇನೆ.

* ರಾಜ್ಯ ಬಿಜೆಪಿಯಲ್ಲಿ ನೀವು ಕೇಂದ್ರ ಬಿಂದುವಾಗುತ್ತಿದ್ದೀರಿ?
ನನಗೂ ಈ ವಿಷಯದ ಬಗ್ಗೆ ಹೆಮ್ಮೆಯೂ ಇದೆ. ಸಂತೋಷವೂ ಇದೆ. ರಾಜ್ಯದಲ್ಲಿ ಎಲ್ಲೇ ಹೋದರೂ ಹೆಚ್ಚು ಹೆಚ್ಚು ಯುವಕರು ಬೆಂಬಲ ನೀಡುತ್ತಿದ್ದಾರೆ. ಬೇರೆ ಸಭೆಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದೇನೆ. ನಾನು ಯಾವುದನ್ನೂ ಕಾಟಾಚಾರಕ್ಕೆ ಮಾಡುತ್ತಿಲ್ಲ. ಸಕ್ರಿಯ ರಾಜಕಾರಣಕ್ಕೆ ಬರುವುದು ನಿಶ್ಚಿತ ಇರಲಿಲ್ಲ. ಬಂದ ಮೇಲೆ ನಾನು ಅದಕ್ಕೆ ನ್ಯಾಯ ಕೊಡಬೇಕಾದದ್ದು ಧರ್ಮ. ಇನ್ನೂ ಹೆಚ್ಚು ಕೆಲಸ ಮಾಡಲು ಹುಮ್ಮಸ್ಸು, ಸ್ಫೂರ್ತಿ ಸಿಗುತ್ತಿದೆ.

* ತಂದೆಯ ನೆರಳಿನಿಂದ ಹೊರಬರುವ ಯತ್ನದ ಬಗ್ಗೆ?
ನಾನು ಯಡಿಯೂರಪ್ಪ ಅವರ ಮಗ ಎಂಬುದಕ್ಕೆ ಹೆಮ್ಮೆ ಇದೆ. ಯಡಿಯೂರಪ್ಪ ಮಗ ಎಂಬ ಕಾರಣಕ್ಕಾಗಿಯೂ ರಾಜ್ಯಾದ್ಯಂತ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಅದರ ಹೊರತಾಗಿಯೂ ನನ್ನದೇ ಆದ ರೀತಿಯಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಜನರು, ಕಾರ್ಯಕರ್ತರು ಇಷ್ಟಪಡುತ್ತಿದ್ದಾರೆ. ಕೆ.ಆರ್‌.ಪೇಟೆ, ಸಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಗೆಲುವು ಸಿಕ್ಕಾಗ ಅವರಿಗಿಂತ ಹತ್ತು ಪಟ್ಟು ನನಗೆ ಸಂತೋಷವಾಗಿತ್ತು. ಬಳಿಕ ಮಸ್ಕಿ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿದರೂ ಕಾರ್ಯಕರ್ತರು ತೋರಿದ ಪ್ರೀತಿ ಸ್ಫೂರ್ತಿ ಕೊಟ್ಟಿದೆ.

* ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಯಾರು? ನೀವೇ ಉತ್ತರಾಧಿಕಾರಿ ಎಂಬ ವಾತಾವರಣ ನಿರ್ಮಾಣವಾಗುತ್ತಿದೆಯೇ?
ನಮ್ಮದು ರಾಷ್ಟ್ರೀಯ ಪಕ್ಷ. ಪ್ರಾದೇಶಿಕ ಪಕ್ಷಗಳಲ್ಲಿ ಉತ್ತರಾಧಿಕಾರಿ ಪ್ರಶ್ನೆ ಉದ್ಬವಿಸಬಹುದು. ಆದರೆ, ರಾಷ್ಟ್ರೀಯ ಪಕ್ಷದಲ್ಲಿ ಅಲ್ಲ. ಕಾಲಕ್ಕೆ ತಕ್ಕಂತೆ ರಾಜ್ಯ, ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಜನರೂ ನಿರ್ಧರಿಸುತ್ತಾರೆ.

* ಮೋರ್ಚಾ ಸಮಾವೇಶಗಳ ಉಸ್ತುವಾರಿ ಏಕೆ?
ಚುನಾವಣೆ ಎನ್ನುವುದು ಯುದ್ಧವಿದ್ದಂತೆ. ಆ ಯುದ್ಧಕ್ಕೆ ನಮ್ಮ ಕಾರ್ಯಕರ್ತರನ್ನು ತಯಾರಿಗೊಳಿಸಲು, ಅವರಿಗೆ ಉತ್ಸಾಹ ನೀಡಲು ಈ ಸಮಾವೇಶಗಳು ಬಹಳ ಮುಖ್ಯ. ಯಶಸ್ವಿಯಾಗಿ ಮಾಡುತ್ತಿದ್ದೇವೆ. ಈ ಸಮಾವೇಶಗಳ ಮೂಲಕ ಹೆಚ್ಚು ಹೆಚ್ಚು ಮತದಾರರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.

* ರಾಜ್ಯದಲ್ಲಿ ನಾಯಕತ್ವ ಕೊರತೆ ಎದ್ದು ಕಾಣುತ್ತಿದೆಯೇ?
ಕೊರತೆ ಇಲ್ಲವೇ ಇಲ್ಲ. ಯಡಿಯೂರಪ್ಪ, ಬೊಮ್ಮಾಯಿ, ಕಟೀಲ್‌ ಸೇರಿದಂತೆ ಅನೇಕ ಹಿರಿಯ ನಾಯಕರಿದ್ದಾರೆ. ಪ್ರಧಾನಿ ಮೋದಿ ಅವರನ್ನು ದೇಶದ ಜನತೆ ಒಪ್ಪಿದ್ದಾರೆ. ಹೀಗಿರುವಾಗ ಮೋದಿ ಸೇರಿದಂತೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯಾದ್ಯಂತ ಸಂಚರಿಸುವುದು ಸಹಜ. ಇದು ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತದೆ. ಅವರು ಪ್ರವಾಸ ಮಾಡುತ್ತಿರುವುದರಿಂದ ರಾಜ್ಯದಲ್ಲಿ ನಾಯಕತ್ವ ಕೊರತೆ ಇದೆ ಎಂದುಕೊಳ್ಳಬೇಕಿಲ್ಲ.

ಎಟಿ​ಆರ್‌, ಮಂಜು, ಸ್ವರೂಪ್‌ ‘ಕಾಂಗ್ರೆಸ್‌’ ಸಂಪ​ರ್ಕ​ದ​ಲ್ಲಿ​ದ್ದಾ​ರೆ: ಡಿ.ಕೆ.ಶಿವಕುಮಾರ್‌

* 40 ಪರ್ಸೆಂಟ್‌ ಕಮೀಷನ್‌ ಆರೋಪ ಮುಳುವಾಗಲಿದೆಯೇ?
ಕಾಂಗ್ರೆಸ್‌ ಪಕ್ಷ ಭ್ರಮೆಯಲ್ಲಿದ್ದಾರೆ. ಒಂದು ಸುಳ್ಳನ್ನು ಹಲವು ಬಾರಿ ಹೇಳಿ ಮತದಾರರ ಕಣ್ಣಿಗೆ ಮಣ್ಣೆರೆರಚಬಹುದು ಎಂಬ ಹಗಲುಗನಸು ಕಾಣುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲ. ಜನರಿಗೆ ಎಲ್ಲವೂ ಗೊತ್ತಿದೆ. ಅವರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ಹಿಂದೆ ಕಾಂಗ್ರೆಸ್‌ ಸರ್ಕಾರಗಳ ಅವಧಿಯಲ್ಲಿ ಯಾವ ಹಗರಣಗಳು ನಡೆದಿವೆ ಎಂಬುದು ಜಗಜ್ಜಾಹೀರಾಗಿದೆ. ಬಜೆಟ್‌ ದಿನ ಕಾಂಗ್ರೆಸ್‌ ಸದಸ್ಯರು ಕಿವಿಗೆ ಹೂ ಮುಡಿದುಕೊಂಡು ಬಂದರು. ಚುನಾವಣೆಯಲ್ಲಿ ಮತದಾರರು ಈ ಕಾಂಗ್ರೆಸ್‌ ನಾಯಕರ ಕಿವಿಗೆ ಹೂವು ಮುಡಿಸುವುದು ನಿಶ್ಚಿತ. ಪ್ರತಿಪಕ್ಷ ಸ್ಥಾನವೇ ಅವರಿಗೆ ಗಟ್ಟಿ.

* ಹಳಬರ ಬಿಟ್ಟು ಹೊಸಬರಿಗೆ ಟಿಕೆಟ್‌ ಸಾಧ್ಯವೇ?
ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಮಾತನ್ನೂ ನಾನು ಕೂಡ ಬೆಂಬಲಿಸುತ್ತೇನೆ. ಜನರು ಕೂಡ ಯುವಕರು ಮುಂದೆ ಬರಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ. ಅಂತಿಮವಾಗಿ ಆ ಬಗ್ಗೆ ಪಕ್ಷದ ರಾಜ್ಯ ಮತ್ತು ರಾಷ್ಟ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಜತೆಗೆ ಗೆಲ್ಲುವ ಸಾಮರ್ಥ್ಯವನ್ನೂ ಪರಿಗಣಿಸಬೇಕು. ನಾನು ಹೆಚ್ಚಿಗೆ ಹೇಳಲು ಹೋಗುವುದಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

24,300 ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಅಸ್ತು : ಯಾವ ಇಲಾಖೆಯ ಎಷ್ಟು ಹುದ್ದೆ ?
ಡಾ। ಯತೀಂದ್ರ ವಿರುದ್ಧ ಡಿಕೆಶಿ ಬಣ ಮತ್ತೆ ಬಾಣ