ಧಾರವಾಡ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ರಂಗು ದಿನದಿಂದ ದಿನಕ್ಕೆ ಏರುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ಗ್ರಾಮೀಣ ಪ್ರದೇಶಗಳಲ್ಲೀಗ ಆಣೆ ಪ್ರಮಾಣದ ಕಸರತ್ತು ಶುರುವಾಗಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಫೆ.23) : ಧಾರವಾಡ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ರಂಗು ದಿನದಿಂದ ದಿನಕ್ಕೆ ಏರುತ್ತಿದೆ. ಚುನಾವಣೆ ಘೋಷಣೆಗೂ ಮುನ್ನವೇ ಗ್ರಾಮೀಣ ಪ್ರದೇಶಗಳಲ್ಲೀಗ ಆಣೆ ಪ್ರಮಾಣದ ಕಸರತ್ತು ಶುರುವಾಗಿದೆ.
ಚುನಾವಣೆಗಳಲ್ಲಿ ಆಣೆ, ಪ್ರಮಾಣಗಳೆಲ್ಲ ಮಾಮೂಲು. ಮತದಾರರನ್ನು ಹಿಡಿದಿಟ್ಟುಕೊಳ್ಳಬೇಕು. ತಮ್ಮನ್ನು ಬಿಟ್ಟು ಮತದಾರರು ಬೇರೆಡೆ ಹೋಗಬಾರದೆಂಬ ಉದ್ದೇಶದಿಂದ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಆಣೆ ಪ್ರಮಾಣಗಳ ಮೊರೆ ಹೋಗುವುದು ಮಾಮೂಲು. ಈ ರೀತಿಯ ಆಣೆ ಪ್ರಮಾಣಗಳೆಲ್ಲ ಚುನಾವಣೆ ಘೋಷಣೆಯಾಗಿ ಮತದಾನಕ್ಕೆ ನಾಲ್ಕೈದು ದಿನಗಳಿದ್ದಾಗ ನಡೆಯುತ್ತಿದ್ದವು. ಆದರೆ, ಈ ಸಲ ಕೊಂಚ ಡಿಫರೆಂಟ್ ಆಗಿದೆ. ಚುನಾವಣೆ ಘೋಷಣೆಯೂ ಆಗಿಲ್ಲ. ಯಾವ ಪಕ್ಷವೂ ಅಭ್ಯರ್ಥಿಯನ್ನು ಅಖೈರುಗೊಳಿಸಿಲ್ಲ. ಆದರೆ, ಈಗಲೇ ಆಕಾಂಕ್ಷಿಗಳೆಲ್ಲ ತಮಗೆ ಟಿಕೆಟ್ ಖಚಿತ ಎಂದು ಸ್ವಯಂ ಆಗಿ ಘೋಷಿಸಿಕೊಂಡು ಆಣೆ ಪ್ರಮಾಣವನ್ನು ಶುರು ಹಚ್ಚಿಕೊಂಡಿದ್ದಾರೆ.
ಹುಬ್ಬಳ್ಳಿ - ಧಾರವಾಡ ಪಾಲಿಕೆಗೆ ಸರ್ಕಾರದಿಂದ ಬರಬೇಕಿದೆ 250 ಕೋಟಿಗೂ ಅಧಿಕ!
ಎಲ್ಲೆಲ್ಲಿ ಜೋರು!
ಹಾಗೆ ನೋಡಿದರೆ ಸಿಟಿಗಳಲ್ಲಿ ಇದು ಅಷ್ಟೊಂದು ಕಂಡು ಬರುತ್ತಿಲ್ಲ. ಆದರೆ ಕಲಘಟಗಿ(Kalaghatagi), ಧಾರವಾಡ ಗ್ರಾಮಾಂತರ, ನವಲಗುಂದ ಕ್ಷೇತ್ರಗಳಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಂತೂ ಪ್ರತಿದಿನ ಯಾವುದಾದರೂ ಒಂದು ದೇವಸ್ಥಾನಗಳಲ್ಲಿ ಮತದಾರರನ್ನು ಕರೆದುಕೊಂಡು ಹೋಗಿ ಆಣೆ ಪ್ರಮಾಣ ಮಾಡಿಸಲಾಗುತ್ತಿದೆ. ಈ ವರ್ಷ ನಾವು ಇಂಥವರಿಗೆ ಮತ ಚಲಾಯಿಸಬೇಕು. ಜತೆಗೆ ಎದುರಾಳಿಯ ಹೆಸರು ಹೇಳದೇ ಕೊಲೆಗಡುಕರಿಗೆ, ರೌಡಿಗಳಿಗೆ ಮತಚಲಾಯಿಸುವುದಿಲ್ಲ. ಬದಲಿಗೆ ನಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿರುವ ಇಂಥ ಅಭ್ಯರ್ಥಿಗೆ ಮತ ಚಲಾಯಿಸುತ್ತೇವೆ ಎಂದು ಇಂಥ ದೇವರ ಮೇಲೆ ಪ್ರಮಾಣ ಮಾಡುತ್ತೇವೆ ಎಂದು ಪ್ರತಿಜ್ಞಾ ವಿಧಿ ಬೋಧಿಸಿದಂತೆ ಆಕಾಂಕ್ಷಿಗಳ ಬೆಂಬಲಿಗರು ಬೋಧಿಸುತ್ತಾರೆ. ಅಲ್ಲಿ್ಕ ನೆರೆದ ಜನಸ್ತೋಮ ಕೂಡ ಪ್ರತಿಜ್ಞಾ ವಿಧಿ ಸ್ವೀಕರಿಸುತ್ತಿದೆ. ಕೆಲವೆಡೆಯಂತೂ ಮತದಾರರ ಮನೆಗಳಿಗೆ ತೆರಳಿ ಕುಂಕುಮ ಕೊಟ್ಟು, ಹಾಲಿನಲ್ಲಿ ಬೆರಳಿಟ್ಟು ಆಣೆ ಮಾಡಿಸುತ್ತಿದ್ದಾರೆ. ಆಣೆ ಪ್ರಮಾಣ ಮಾಡಿಸಿ ವಾಪಸ್ ಬರುವಾಗ ‘ನಿಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿದ್ದೀರಿ. ಯಾವುದೇ ಕಾರಣಕ್ಕೂ ಮಾತಿಗೆ ತಪ್ಪಬಾರದು. ಇಂಥವರಿಗೆ ಮತ ಚಲಾಯಿಸಬೇಕು. ಒಂದು ವೇಳೆ ತಪ್ಪಿದರೆ ದೇವರ ಶಾಪ ತಟ್ಟುತ್ತೆ..’ ಎಂದು ಸಣ್ಣದಾಗಿ ಎಚ್ಚರಿಕೆ ನೀಡಿ ಹೊರಬರುತ್ತಾರೆ.
ಟಿಕೆಟ್ ತಪ್ಪಿದರೆ ಹೇಗೆ?
ಇನ್ನು ಕೆಲ ಕಿಲಾಡಿ ಯುವಕರು, ‘ಈಗೇನು ನೀವು ನಿಮ್ಮ ಅಭ್ಯರ್ಥಿಗೆ ಮತಚಲಾಯಿಸಿ ಎಂದು ಪ್ರಮಾಣ ಮಾಡಿಸುತ್ತಿದ್ದೀರಿ. ಆದರೆ, ಒಂದು ವೇಳೆ ಪಕ್ಷ ಅವರಿಗೆ ಟಿಕೆಟ್ ಕೊಡಲೇ ಇಲ್ಲ ಎಂದರೆ ಹೇಗೆ?’ ಎಂದು ಮರಳಿ ಪ್ರಶ್ನೆ ಕೇಳುತ್ತಿರುವುದು ಕಂಡು ಬರುತ್ತಿದೆ. ಆಗ ಆಕಾಂಕ್ಷಿಯ ಬೆಂಬಲಿಗರು, ಇಲ್ಲ ಹಾಗೇನೂ ಆಗಲ್ಲ. ನಮ್ಮ ಅಭ್ಯರ್ಥಿಗೆ ಟಿಕೆಟ್ ಸಿಗುವುದು ನೂರಕ್ಕೆ ನೂರರಷ್ಟುಗ್ಯಾರಂಟಿ. ಇದರಲ್ಲಿ ಯಾವುದೇ ಸಂಶಯಬೇಡ ಎಂದು ಸಮಾಜಾಯಿಷಿ ನಿಡುತ್ತಿದ್ದಾರೆ.
Karnataka Budget 2023: ಬಿಜೆಪಿ ಸರ್ಕಾರದ್ದು ಸುಳ್ಳಿನ ಬಜೆಟ್: ಸುರ್ಜೆವಾಲಾ
ನಮಗೆ ದೇವಸ್ಥಾನದಲ್ಲಿ ಮೀಟಿಂಗ್ ಇದೆ ಅಂತ್ಹೇಳಿಕೊಂಡು ಬಸವಣ್ಣ ದೇವರ ದೇವಸ್ಥಾನಕ್ಕೆ ಕರೆದಿದ್ದರು. ಅಲ್ಲಿ ಹೋಗಿ ನೋಡಿದ ಮೇಲೆ ಚುನಾವಣೆ ಪ್ರಚಾರ ಇತ್ತು. ಸಭೆ ಮುಗಿದ ಬಳಿಕ ಇಂಥವರಿಗೆ ಮತ ಚಲಾಯಿಸಬೇಕು. ನಿಮ್ಮೂರಿಗೆ ಎಲ್ಲ ಸೌಕರ್ಯ ಕಲ್ಪಿಸಿಕೊಡುತ್ತೇವೆ ಎಂದು ದೇವರ ಮೇಲೆ ಪ್ರಮಾಣ ಮಾಡಿಸಿದ್ದಾರೆ.
ಕಲ್ಲಪ್ಪ, ಮತದಾರ