ಜಾತಿ ಗಣತಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕಂಗನಾ ಟಾಂಗ್ ಕೊಟ್ಟಿದ್ದು ಹೀಗೆ!
ಲೊಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿನಿತ್ಯವೂ ಒಂದೊಂದು ವಿಷಯಗಳನ್ನು ಕೆದಕಿ ಭಾಷಣ ಮಾಡುತ್ತಿರುವ ಕಾರಣ, ಇದಾಗಲೇ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಒಮ್ಮೊಮ್ಮೆ ಜಾತಿ ವಿಷಯ ಕೆದಕಿ, ಇನ್ನೊಮ್ಮೆ ಹಿಂದೂ ದೇವರ ವಿಷಯ ತೆಗೆದು, ಮತ್ತೊಮ್ಮೆ ಸಂವಿಧಾನದ ಕುರಿತು, ಮಗದೊಮ್ಮೆ ಸಂಪ್ರದಾಯಗಳ ಕುರಿತು... ಹೀಗೆ ಹಲವು ಬಾರಿ ವಿಷಯಗಳನ್ನು ಹೇಳುತ್ತಾ ಸದನದಲ್ಲಿ ಅಪ್ರಸ್ತುತ ಎನ್ನುವ ವಿಷಯ ಮಾತನಾಡುತ್ತಿದ್ದಾರೆ ಎಂದು ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದಾರೆ. ಇದಾಗಲೇ ಇವರ ವಿರುದ್ಧ ಕಂಗನಾ ಟೀಕಾ ಪ್ರಹಾರ ನಡೆಸಿದ್ದಾರೆ. ಈ ರೀತಿ ಮಾತನಾಡುತ್ತಿರುವ ರಾಹುಲ್ ಗಾಂಧಿಯವರು ಡ್ರಗ್ಸ್ ಸೇವನೆ ಮಾಡಿದಂತೆ ಕಾಣುತ್ತಿದೆ, ಅವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದಿರೋ ಕಂಗನಾ, ಇದೀಗ ಮತ್ತೊಮ್ಮೆ ತಮ್ಮ ಟೀಕೆಯನ್ನು ಮುಂದುವರೆಸಿದ್ದಾರೆ.
ಅಷ್ಟಕ್ಕೂ ಇದೀಗ ರಾಹುಲ್ ಗಾಂಧಿಯವರು ಜಾತಿ ಗಣತಿ ಕುರಿತು ಮಾತನಾಡುವ ಸಂದರ್ಭದಲ್ಲಿ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು, ಜಾತಿ ಗೊತ್ತಿಲ್ಲದವರು ಜಾತಿ ಗಣತಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹಾಸ್ಯ ಮಾಡಿದರು. ಇದು ರಾಹುಲ್ ಗಾಂಧಿ ಅವರನ್ನು ಕೆರಳಿಸಿತು. ಅನುರಾಗ್ ಠಾಕೂರ್ ನನ್ನನ್ನು ಅವಮಾನಿಸಿದ್ದಾರೆ. ಅವರೇನೂ ನನಗೆ ಕ್ಷಮೆ ಕೋರುವುದು ಬೇಡ ಎನ್ನುತ್ತಲೇ ಜಾತಿಯ ಬಗ್ಗೆ ಮಾತನಾಡಿದರು. ಬಿಜೆಪಿ ಸರ್ಕಾರ ಹಿಂದುಳಿದವರನ್ನು, ಎಸ್ಸಿ, ಎಸ್ಟಿ ಸಮುದಾಯದವರನ್ನು ಕಡೆಗಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು. ಈ ವಿಷಯ ಸದನದಲ್ಲಿ ಬಹು ಸುದೀರ್ಘ ಚರ್ಚೆಗೆ ಕಾರಣವಾಗಿತ್ತು. ಕರ್ನಾಟಕದಲ್ಲಿನ ಎಸ್ಸಿ ಎಸ್ಟಿಗೆ ಮೀಸಲು ಇಟ್ಟಿದ್ದ ಕೋಟ್ಯಂತರ ರೂಪಾಯಿ ತೆಗೆದಿರುವ ಬಗ್ಗೆಯೂ ಮಾತುಕತೆ ನಡೆದಿತ್ತು. ಇದರ ನಡುವೆಯೇ ಸಂಸದೆ ಕಂಗನಾ ರಣಾವತ್ ರಾಹುಲ್ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದ್ದಾರೆ.
ಸಂಸತ್ತಿಗೆ ಬರುವ ಮೊದಲು ರಾಹುಲ್ ಗಾಂಧಿ ಪರೀಕ್ಷೆ ನಡೆಸಿ ಎಂದ ಕಂಗನಾ! ಏನಿದು ಹೊಸ ವರಸೆ?
ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಷ್ಟ್ರವ್ಯಾಪಿ ಜನಗಣತಿ ನಡೆಸುವುದಾಗಿ ಭರವಸೆ ನೀಡಿದ ರಾಹುಲ್, “ನೀವು ನನ್ನನ್ನು ಎಷ್ಟು ಬೇಕಾದರೂ ಅವಮಾನಿಸಬಹುದು. ಆದರೆ ನಾವು ಸಂಸತ್ತಿನಲ್ಲಿ ಜಾತಿ ಗಣತಿಯನ್ನು ಅಂಗೀಕರಿಸುತ್ತೇವೆ. ಅನುರಾಗ್ ಠಾಕೂರ್ ನನ್ನನ್ನು ನಿಂದಿಸಿದ್ದಾರೆ ಮತ್ತು ಅವಮಾನಿಸಿದ್ದಾರೆ. ಆದರೆ ನಾನು ಅವರಿಂದ ಯಾವುದೇ ಕ್ಷಮೆಯನ್ನು ಬಯಸುವುದಿಲ್ಲ ಎಂದು ಹೇಳಿದ್ದರು. ಅದಕ್ಕೆ ಕಂಗನಾ, ತಮ್ಮ ಸ್ವಂತ ಜಾತಿ ಯಾವುದು ಎಂದು ಗೊತ್ತಿಲ್ಲದವರು, ಜಾತಿಯ ಬಗ್ಗೆ ಮಾತನಾಡಲು ಬರುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಅವರಿಗೆ ತಮ್ಮ ಸ್ವಂತ ಜಾತಿ ಯಾವುದು ಎಂದೇ ಗೊತ್ತಿಲ್ಲ. ತಾತ ಮುಸ್ಲಿಂ, ತಂದೆ ಪಾರ್ಸಿ, ತಾಯಿ ಕ್ರಿಶ್ಚಿಯನ್.... ಈಗ ಜಾತಿಯ ಬಗ್ಗೆ ಮಾತನಾಡುತ್ತಾ ಇದ್ದಾರೆ. ಇದು ಹೇಗಿದೆ ಎಂದರೆ, ಯಾರೋ ಪಾಸ್ತಾಗೆ ಕರಿಬೇವಿನ ಒಗ್ಗರಣೆ ಕೊಟ್ಟು ಖಿಚಡಿ ಮಾಡಲು ಪ್ರಯತ್ನಿಸಿದಂತೆ... ಹಾಗಾಯ್ತು ಎಂದಿದ್ದಾರೆ!
ನಾನು ಹೊಸದಾಗಿ ಬಂದಿರುವ ಸಂಸದೆ. ಆದರೆ ಅವರಿಗೆ ಮೊದಲಿನಿಂದಲೂ ಇಲ್ಲಿಯ ನೀತಿ-ನಿಯಮಗಳ ಅರಿವು ಇರಬೇಕು. ಹೊಸದಾಗಿ ಬಂದಿರುವ ನಾನೇ ಸಂಸತ್ತಿನ ಸಂಪೂರ್ಣ ರೂಲ್ಸ್ ತಿಳಿದುಕೊಂಡಿರುವೆ. ಆದರೆ ಎಲ್ಲಿ ಏನು ಮಾತನಾಡಬೇಕು ಎನ್ನುವ ತಿಳಿವಳಿಕೆ ಇಲ್ಲದವರು ಸುಮ್ಮನೇ ಹೇಳಿಕೆ ನೀಡಲು ಸಾಧ್ಯವೇ ಇಲ್ಲ. ಬಹುಶಃ ಅವರು ಡ್ರಗ್ಸ್ ಇಲ್ಲವೇ ಮಾದಕ ದ್ರವ್ಯ ಸೇವನೆ ಮಾಡಿಕೊಂಡೇ ಸಂಸತ್ತನ್ನು ಪ್ರವೇಶ ಮಾಡುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ. ದಯವಿಟ್ಟು ಅವರು ಸಂಸತ್ತನ್ನು ಪ್ರವೇಶಿಸುವ ಪೂರ್ವದಲ್ಲಿ ಅವರ ಪರೀಕ್ಷೆ ಮಾಡಿಸಿದರೆ ಉತ್ತಮ ಎಂದು ವಿವಾದಾತ್ಮಕ ಹೇಳಿಕೆ ಕೂಡ ನೀಡಿದ್ದಾರೆ ಕಂಗನಾ.
ಕಂಗನಾ ಸ್ನೇಹ ವಿವರಿಸುತ್ತಲೇ ಮದುವೆ ವಿಷಯ ತಿಳಿಸಿದ ತರುಣಿಯರ ಕ್ರಷ್ ಸಂಸದ ಚಿರಾಗ್ ಪಾಸ್ವಾನ್!