ಕಲಘಟಗಿ: ಕಾಂಗ್ರೆಸ್ ಟಿಕೆಟ್‌ ವಂಚಿತ ನಾಗರಾಜ ಛಬ್ಬಿ ಇಂದು ರಾಜೀನಾಮೆ ಸಾಧ್ಯತೆ

By Ravi JanekalFirst Published Apr 7, 2023, 10:01 AM IST
Highlights

ಕಾಂಗ್ರೆಸ್‌ ಹಿರಿಯ ಮುಖಂಡ, ವಿಧಾನಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರಿಗೆ ಕಲಘಟಗಿ ಕ್ಷೇತ್ರದ ಟಿಕೆಟ್‌ ಕೈ ತಪ್ಪಿದೆ. ಅಲ್ಲಿ ಈ ಸಲವೂ ಮಾಜಿ ಸಚಿವ ಸಂತೋಷ ಲಾಡ್‌ಗೆ ಕೆಪಿಸಿಸಿ ಮಣೆ ಹಾಕಿದೆ. ಇದರಿಂದ ಮುನಿಸಿಕೊಂಡಿರುವ ಛಬ್ಬಿ ಇಂದು ರಾಜೀನಾಮೆ ನೀಡುವ ಸಾದ್ಯತೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ (ಏ.7) :  ಕಾಂಗ್ರೆಸ್‌ ಹಿರಿಯ ಮುಖಂಡ, ವಿಧಾನಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರಿಗೆ ಕಲಘಟಗಿ ಕ್ಷೇತ್ರದ ಟಿಕೆಟ್‌ ಕೈ ತಪ್ಪಿದೆ. ಅಲ್ಲಿ ಈ ಸಲವೂ ಮಾಜಿ ಸಚಿವ ಸಂತೋಷ ಲಾಡ್‌ಗೆ ಕೆಪಿಸಿಸಿ ಮಣೆ ಹಾಕಿದೆ. ಇದರಿಂದ ಮುನಿಸಿಕೊಂಡಿರುವ ಛಬ್ಬಿ, ಕಾಂಗ್ರೆಸ್ಸಿಗೆ ಶುಕ್ರವಾರ ರಾಜೀನಾಮೆ ಸಲ್ಲಿಸಲಿದ್ದಾರೆ. ಇದೀಗ ಅವರ ಚಿತ್ತ ಬಿಜೆಪಿಯತ್ತ ನೆಟ್ಟಿದೆ ಎಂದು ಮೂಲಗಳು ತಿಳಿಸಿವೆ. ಛಬ್ಬಿ ಬೆಂಬಲಿಗರಲ್ಲಿ ಕೆಲವರು ಈಗಾಗಲೇ ಕಾಂಗ್ರೆಸ್ಸಿ…ಗೆ ರಾಜೀನಾಮೆ ಕೊಟ್ಟಿದ್ದಾರೆ.

Latest Videos

ಕಲಘಟಗಿ ಟಿಕೆಟ್‌(Kalaghatagi congress Ticket)ಗಾಗಿ ಛಬ್ಬಿ ಹಾಗೂ ಲಾಡ್‌(Nagaraj Chhabbi and santosh lad) ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿತ್ತು. 2008ರಲ್ಲೂ ಛಬ್ಬಿ ಟಿಕೆಟ್‌ ಬಯಸಿದ್ದರು. ಆಗ ಹೈಕಮಾಂಡ್‌ ಸಮಾಧಾನ ಪಡಿಸಿ ಸಂತೋಷ ಲಾಡ್‌ಗೆ ಟಿಕೆಟ್‌ ಕೊಟ್ಟಿತ್ತು. ಮುಂದೆ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಉಪಚುನಾವಣೆಯಲ್ಲಿ ಛಬ್ಬಿಗೆ ಟಿಕೆಟ್‌ ನೀಡಿತ್ತು. ಆಗ ವಿಪ ಸದಸ್ಯರಾಗಿದ್ದರು ಛಬ್ಬಿ. ಅದರ ಅವಧಿ ಮುಗಿದ ಬಳಿಕ ಮತ್ತೆ ವಿಪ ಚುನಾವಣೆಗೂ ಟಿಕೆಟ್‌ ಕೊಟ್ಟಿರಲಿಲ್ಲ. ಆಗ ಶ್ರೀನಿವಾಸ ಮಾನೆಗಾಗಿ ಛಬ್ಬಿ ಟಿಕೆಟ್‌ ಬಿಟ್ಟುಕೊಟ್ಟಿದ್ದರು.

ಕಲಘಟಗಿ ಕ್ಷೇತ್ರ: ಕಾಂಗ್ರೆಸ್ಸಿನಿಂದ ಸಂತೋಷ ಲಾಡ್‌ ಸ್ಪರ್ಧೆ : ಟಿಕೆಟ್‌ ವಂಚಿತರು ಬಿಜೆಪಿಯತ್ತ?

ಇದೀಗ 2018ರಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲಿನ ಬಳಿಕ ಛಬ್ಬಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದರು. ಪಕ್ಷ ಸಂಘಟನೆಯನ್ನೂ ಮಾಡಿದ್ದರು. ಕೊರೋನಾ ವೇಳೆಯಲ್ಲೂ ಅಲ್ಲಿನ ಜನರ ಸಂಕಷ್ಟಕ್ಕೆ ಕಿವಿಯಾಗಿದ್ದರು. ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಈ ನಡುವೆ ಲಾಡ್‌ ಕೂಡ ಕ್ಷೇತ್ರದಲ್ಲಿ ಮತ್ತೆ ಓಡಾಡಲು ಶುರು ಮಾಡಿ ತಾವೇ ಅಭ್ಯರ್ಥಿಯೆಂದು ಘೋಷಿಸಿಕೊಂಡಿದ್ದರು. ಇದರಿಂದಾಗಿ ಲಾಡ್‌ ಹಾಗೂ ಛಬ್ಬಿ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್ಸಿನಲ್ಲಿ ಅಕ್ಷರಶಃ ಎರಡು ಬಣಗಳಾಗಿ ಪರಿವರ್ತನೆಗೊಂಡಿದ್ದವು. ಟಿಕೆಟ್‌ಗೂ ಮುನ್ನವೇ ಇಬ್ಬರು ಮುಖಂಡರು ಪರಸ್ಪರ ಬಹಿರಂಗವಾಗಿ ಕಿತ್ತಾಡಿಕೊಂಡಿದ್ದರು.

ಇದೀಗ ನಿರಾಸೆ:

ಇದೀಗ ಹೈಕಮಾಂಡ್‌ ಮತ್ತೆ ಸಂತೋಷ ಲಾಡ್‌ಗೆ ಟಿಕೆಟ್‌ ನೀಡಿದೆ. ಇದು ಛಬ್ಬಿ ಹಾಗೂ ಅವರ ಬೆಂಬಲಿಗರಲ್ಲಿ ನಿರಾಸೆಯನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಪಕ್ಷದೊಂದಿಗೆ ಮುನಿಸಿಕೊಂಡಿರುವ ಛಬ್ಬಿ ಶುಕ್ರವಾರ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಜತೆಗೆ ಈ ಸಲ ಶತಾಯ ಗತಾಯ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂದು ನಿರ್ಣಯ ಕೈಗೊಂಡಿದ್ದಾರೆ. ಇದು ಕಾಂಗ್ರೆಸ್‌ನಲ್ಲಿ ಬಂಡಾಯದ ಕೂಗು ಎಬ್ಬಿಸಿದೆ.

ಬಿಜೆಪಿಯತ್ತ ಛಬ್ಬಿ ಚಿತ್ತ?

ಕಾಂಗ್ರೆಸ್‌ ಟಿಕೆಟ್‌ ವಂಚಿತವಾಗಿರುವ ಛಬ್ಬಿ ಚಿತ್ತ ಇದೀಗ ಬಿಜೆಪಿಯತ್ತ ನೆಟ್ಟಿದೆ. ಬಿಜೆಪಿಗೆ ಸೇರಿ ಟಿಕೆಟ್‌ ಪಡೆದು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಸಂಬಂಧ ಆ ಪಕ್ಷದ ಮುಖಂಡರೊಂದಿಗೆ ಚರ್ಚೆಯನ್ನೂ ನಡೆಸಿದ್ದಾರೆನ್ನಲಾಗಿದೆ. ಇದನ್ನು ಛಬ್ಬಿ ಅವರು ಖಚಿತ ಪಡಿಸಿಲ್ಲ. ಆದರೆ ಕ್ಷೇತ್ರದ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಇನ್ನೆರಡು ದಿನಗಳಲ್ಲಿ ಚರ್ಚಿಸಿ ತಮ್ಮ ಮುಂದಿನ ನಡೆ ಏನು ಎಂಬುದನ್ನು ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.

ಧಾರವಾಡದಿಂದಲೇ ವಿನಯ್‌ ಕಣಕ್ಕೆ, ಹುಸಿಯಾಯ್ತು ಸಿಎಂ ವಿರುದ್ಧ ಸ್ಪರ್ಧೆ

ನಾನು ಕ್ಷೇತ್ರದಲ್ಲಿ ಸಂಘಟನೆ ಮಾಡಿದ್ದೆ. ಆದರೆ ಇದೀಗ ಪಕ್ಷದ ಟಿಕೆಟ್‌ ನನಗೆ ಕೊಟ್ಟಿಲ್ಲ. ಇದು ಬೇಸರವನ್ನುಂಟು ಮಾಡಿದೆ. ಮುಂದೆ ಏನು ಮಾಡಬೇಕು ಎಂಬುದನ್ನು ಎರಡು ದಿನಗಳಲ್ಲಿ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ.

- ನಾಗರಾಜ ಛಬ್ಬಿ, ವಿಪ ಮಾಜಿ ಸದಸ್ಯ

click me!