
ಕಾಗವಾಡ(ನ.01): ಬಿಜೆಪಿಯವರು ತಿಪ್ಪರಲಾಗ ಹಾಕಿದರೂ ಸರ್ಕಾರಕ್ಕೆ ಏನೂ ಆಗಲ್ಲ. ಈ ಹಿಂದೆ ಆಪರೇಷನ್ ಕಮಲ ಮಾಡಿದ್ದಕ್ಕೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಮಂಗಸೂಳಿ ಗ್ರಾಮದಲ್ಲಿ ಮಂಗಳವಾರ ಮಂಗಸೂಳಿ ಕಾರಿಮಠದ ವಸತಿಯಲ್ಲಿ ₹ 52 ಲಕ್ಷ ವೆಚ್ಚದ ನೀರಿನ ಟ್ಯಾಂಕ್ ಹಾಗೂ ಪೈಪ್‌ಲೈನ್ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಕೂಡ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ. 135 ಸ್ಥಾನಗಳನ್ನು ಗೆಲ್ಲುವ ಮೂಲಕ ಸುಭದ್ರ ಸರ್ಕಾರ ಇದೆ. ಏನೂ ಆಗಲ್ಲ. ಬಿಜೆಪಿಯವರು ತಮ್ಮ ಸಮಸ್ಯೆ ಮೊದಲು ಬಗೆಹರಿಸಿಕೊಳ್ಳಲಿ ಎಂದು ರಮೇಶ ಜಾರಕಿಹೊಳಿ ಹೇಳಿಕೆಗೆ ಟಾಂಗ್ ನೀಡಿದರು.
14 ವರ್ಷದ ಬಾಲಕನ ಬರ್ಬರ ಹತ್ಯೆ: ಸ್ನೇಹಿತೆಯ ಬಗ್ಗೆ ಮಾತನ್ನಾಡಿದಕ್ಕೆ ಕೊಲೆ..!
ರಾಜ್ಯದಲ್ಲಿ ಚುನಾವಣೆ ನಡೆದು ಐದೂವರೆ ತಿಂಗಳು ಗತಿಸಿದರೂ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲಾಗದ ಬಿಜೆಪಿ ಒಡೆದ ಮನೆಯಾಗಿದೆ. ಅವರು ಕೇವಲ ಜಾತಿ- ಜಾತಿಗಳ, ಧರ್ಮ-ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದು ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯವಷ್ಟೇ ಅಲ್ಲ ಇಡೀ ದೇಶ ಮೆಚ್ಚಿಕೊಳ್ಳುವ ಕೆಲಸ ಮಾಡಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ರಮೇಶ ಜಾರಕಿಹೊಳಿ ಹತಾಶೆಯಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.
ತಹಸೀಲ್ದಾರ್ ರಾಜೇಶ ಬುರ್ಲಿ, ಗುತ್ತಿಗೇದಾರ ಸುನೀಲ ಅವಟಿ, ಮುಖಂಡರಾದ ಸಹದೇವ ನಾಯಿಕ, ರವೀಂದ್ರ ಪೂಜಾರಿ, ಚಿದಾನಂದ ಮಾಳಿ, ಸಂಜಯ ತಳವಲಕರ, ಗ್ರಾಪಂ ಅಧ್ಯಕ್ಷ ಬಾಳು ಭಜಂತ್ರಿ, ಶಂಕರ ವಾಘಮೊಡೆ, ಅಮರ ಪಾಟೀಲ, ಪಿಡಿಒ ಎಸ್.ಜೆ. ಸೂರ್ಯವಂಶಿ, ಸಾವಂತ ಅದುಕೆ, ಪರಾಗ ಕಾಂಬಳೆ, ಭೀಮಣ್ಣ ನಾಯಿಕ, ದೊಂಡಿರಾಮ ವಾಘಮೊಡೆ ಇತರರು ಇದ್ದರು. ನೀರಿನ ಜಲಕುಂಭ ನಿರ್ಮಿಸಲು ಭೂದಾನ ಮಾಡಿದ ಸಹದೇವ ನಾಯಿಕ ಅವರನ್ನು ಶಾಸಕ ರಾಜು ಕಾಗೆ ಸನ್ಮಾನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.