ಮುಂಬರುವ ಮೂರು ವಿಧಾನಸಭಾ ಉಪಚುನಾವಣೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತೊಮ್ಮೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಲಬುರಗಿ, (ಫೆ.25): ಮುಂಬರುವ ಮಸ್ಕಿ, ಬಸವ ಕಲ್ಯಾಣ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಜೆಡಿ ಎಸ್ ನಿಂದ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯಲ್ಲಿ ಇಂದು (ಗುರುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ನಿರ್ಧರಿಸಿದ್ದರು, ಆದರೆ ಪಕ್ಷದ ಕಾರ್ಯಕರ್ತರ ಒತ್ತದಿಂದಾಗಿ ಈ ಯೋಚನೆಯನ್ನು ಪುನರ್ ಪರಿಶೀಲಿಸಿ ಸಮರ್ಥ ಅಭ್ಯರ್ಥಿಗಳನನ್ನು ಕಣಕ್ಕಿಳಿಸುವುದಾಗಿ ತಿಳಿಸಿದರು.
ಬಿಜೆಪಿ ಹಾಗೂ ಕಾಂಗ್ರೆಸ್ ನೊಂದಿಗೆ ಚುನಾವಣೆಯನ್ನು ಸಮಾನ ಹೋರಾಟ ನಡೆಸಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
ಹೈದರಾಬಾದ್ ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದರೆ ಸಾಲದು. ಅಭಿವೃದ್ಧಿಗೆ ಹಣವನ್ನೂ ನೀಡಬೇಕು. ಆದರೆ ದುರದೃಷ್ಟವಶಾತ್ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹೊಂದಾಣಿಕೆ ಸಂಬಂಧ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅದು ಸ್ಥಳೀಯ ನಾಯಕರುಗಳ ನಡುವಿನ ಹೊಂದಾಣಿಕೆ ಎಂದರು.