ಇಂದಿನ ಬಿಜೆಪಿಯ ಭ್ರಷ್ಟ ಅಧಿಕಾರವನ್ನು ನೋಡಿ ರಾಜ್ಯದ ಎಲ್ಲ ಸಮುದಾಯದವರು ಬಿಜೆಪಿ ಧಿಕ್ಕರಿಸಿ, ನಮ್ಮತ್ತ ಮುಖ ಮಾಡುವ ದಿನಗಳು ದೂರವಿಲ್ಲ. ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗುವುದರಲ್ಲಿ ಎರಡು ಮಾತಿಲ್ಲ: ಇಬ್ರಾಹಿಂ
ಚನ್ನಮ್ಮನ ಕಿತ್ತೂರು(ಡಿ.01): ರಾಜ್ಯದಲ್ಲಿ ಜನತಾ ಪಕ್ಷ ವೀಕ್ ಆದ ಹಿನ್ನಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಬಿಜೆಪಿಯ ಭ್ರಷ್ಟ ಅಧಿಕಾರವನ್ನು ನೋಡಿ ರಾಜ್ಯದ ಎಲ್ಲ ಸಮುದಾಯದವರು ಬಿಜೆಪಿ ಧಿಕ್ಕರಿಸಿ, ನಮ್ಮತ್ತ ಮುಖ ಮಾಡುವ ದಿನಗಳು ದೂರವಿಲ್ಲ. ಎಚ್.ಡಿ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗುವುದರಲ್ಲಿ ಎರಡು ಮಾತಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಚಿಂತೆ ನಮಗಿಲ್ಲ. ಎಲ್ಲ ಸಮುದಾಯದವರನ್ನು ಅಪ್ಪಿಕೊಂಡು ಬಸವ ತತ್ವದ ಆಧಾರದ ಮೇಲೆ ನಾವು ಆಡಳಿತ ನಡೆಸುತ್ತೇವೆ ಎಂದರು.
ನಮ್ಮ ಸರ್ಕಾರ ಅಧಿಕಾರ ಬಂದರೇ ಒಂದೇ ಒಂದು ಹನಿ ನೀರು ಸಮುದ್ರಕ್ಕೆ ಹೋಗದಂತೆ ತಡೆದು, ಅರ್ಧಕ್ಕೆ ನಿಂತ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ಗ್ರಾಮ ಮಟ್ಟದಲ್ಲಿಯೂ ಸಹ ಸಿಗುವ ಯೋಜನೆ ನಮ್ಮದಿದೆ. ರಾಜ್ಯದ ಪ್ರತಿ ವ್ಯಕ್ತಿಗೂ ಉಚಿತ ಚಿಕಿತ್ಸೆ ನೀಡಲು 80 ಸಾವಿರ ಕೋಟಿ ಯೋಜನೆ ರೂಪಿಸಲಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೇ ಈ ಎಲ್ಲ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದರು.
ರೈತರ ಹಿತಕ್ಕಾಗಿ ಕೆಆರ್‌ಎಸ್ ಡ್ಯಾಂಗೆ ಅಡಿಗಲ್ಲಿಟ್ಟ ಟಿಪ್ಪು ಸುಲ್ತಾನ: ಸಿ.ಎಂ.ಇಬ್ರಾಹಿಂ
ಇಂದು ಉಭಯ ರಾಷ್ಟ್ರೀಯ ಪಕ್ಷಗಳ ನಡೆಗೆ ಬೇಸತ್ತು, ಅನೇಕ ನಾಯಕರು ನಮ್ಮ ಪಕ್ಷದ ಕಡೆಗೆ ಮುಖ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿಯೂ ಪ್ರಭಾವಿ ಮುಖಂಡರು ನಮ್ಮ ಪಕ್ಷಕ್ಕೆ ಸೇರಿಕೊಳ್ಳಲಿದ್ದಾರೆ. ಈ ಕುರಿತು ಎಚ್. ಡಿ. ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಶುಭ ಸಮಯ ನೋಡಿ ಅಧಿಕೃತವಾಗಿ ನಮ್ಮ ಪಕ್ಕಕ್ಕೆ ಸೇರಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ತಾಲೂಕು ಅಧ್ಯಕ್ಷ ಎಂ.ವೈ.ಸೋಮಣ್ಣವರ, ರಾಣಿ ಶುಗರ್ಸ್ ಅಧ್ಯಕ್ಷ ನಾಶೀರ್ ಭಾಗವಾನ, ಪ್ರತಾಪಗೌಡ ಪಾಟೀಲ, ಬಸವರಾಜ ಅವರಾದಿ, ಹುಮಾಯೂನ ಹುಣಶೀಕಟ್ಟಿ, ಸಮೀಉಲ್ಲಾ ತಿಗಡೊಳ್ಳಿ ಸೇರಿದಂತೆ ಕಿತ್ತೂರು ಮತ್ತು ನೇಸರಗಿ ಮಂಡಲದ ಜೆಡಿಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.