ನನ್ನ ಬಳಿ ಮಾತು ಹೇಳಿ ಹೋಗ್ತಿದ್ದರೆ ಏನಾಗ್ತಿತ್ತು?: ಜೆಡಿಎಸ್-ಬಿಜೆಪಿ ಮೈತ್ರಿಗೆ ಇಬ್ರಾಹಿಂ ಅಸಮಾಧಾನ!

By Kannadaprabha NewsFirst Published Oct 1, 2023, 10:23 PM IST
Highlights

ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗಿನ ಮೈತ್ರಿ ವಿಚಾರ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಅ.16ರ ಚಿಂತನ-ಮಂಥನ ಸಭೆಯಲ್ಲಿ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ಹೇಳಿದ್ದಾರೆ. 
 

ಬೆಂಗಳೂರು (ಅ.01): ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗಿನ ಮೈತ್ರಿ ವಿಚಾರ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಅ.16ರ ಚಿಂತನ-ಮಂಥನ ಸಭೆಯಲ್ಲಿ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಮಾಹಿತಿ ನೀಡದೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ದೆಹಲಿಗೆ ತೆರಳಿ ಬಿಜೆಪಿ ನಾಯಕರ ಜತೆ ಮೈತ್ರಿ ಬಗ್ಗೆ ತೀರ್ಮಾನ ಮಾಡಿರುವುದು ಬೇಸರ ಮೂಡಿಸಿದೆ. 

ಮೈತ್ರಿ ವಿಚಾರದಲ್ಲಿ ಜೆಡಿಎಸ್‌ ಮುಖಂಡರೇ ಬಿಜೆಪಿಯ ಬಳಿ ಹೋಗಿದ್ದು ತಪ್ಪು. ಅವರೇ ನಮ್ಮ ಬಳಿ ಬರಬೇಕಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ ಹೊರತಾಗಿ ಮೂರನೇ ಶಕ್ತಿ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅ.16ರಂದು ಗಟ್ಟಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಜೆಡಿಎಸ್‌ ಸೇರಲು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಕಾರಣ. ಜಾತ್ಯಾತೀತ ಸಿದ್ಧಾಂತ ಎಂದು ಜೆಡಿಎಸ್‌ಗೆ ಹೋದೆ. ಅಂದು ಪರಿಷತ್‌ ಸದಸ್ಯ ಸ್ಥಾನ ಬಿಟ್ಟು ಬಂದು, ಪಕ್ಷದ ಅಧ್ಯಕ್ಷನಾಗಿದ್ದೇನೆ. ಅ.16ರಂದು ಮೈತ್ರಿ ಮಾತುಕತೆ ಸರಿಯೇ? ತಪ್ಪೇ? ಮುಂದಿನ ನಡೆ ಏನು ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಾಗುವುದು. 

ವಿಧಾನಪರಿಷತ್‌ ಸದಸ್ಯ ತಿಪ್ಪೇಸ್ವಾಮಿ ಮೂಲಕ ನನ್ನ ಜತೆ ಮಾತನಾಡಲು ಪ್ರಯತ್ನ ಪಟ್ಟಿದ್ದಾರೆ. ಅ.16ರ ನಂತರ ಮಾತನಾಡುತ್ತೇನೆ ಎಂದಿದ್ದೇನೆ ಎಂದರು. ಯಾವುದೇ ನಿರ್ಧಾರವಾಗಬೇಕಾದರೆ ಪಕ್ಷದಲ್ಲಿ ಚರ್ಚೆಯಾಗಬೇಕಲ್ಲವೇ? ಇವತ್ತಿನವರೆಗೂ ನನ್ನ ಸಹಿ ಇಲ್ಲದೆ ಯಾವ ಪೇಪರ್‌ ಹೊರಬಂದಿದೆ? ಕೋರ್‌ ಕಮಿಟಿ ಪ್ರವಾಸದ ನಂತರ ಮುಂದಿನ ತೀರ್ಮಾನ ಎಂದಿದ್ದರು. ಆದರೆ, ಮೊದಲೇ ದೆಹಲಿಗೆ ಹೋಗಿ ಬಿಜೆಪಿ ನಾಯಕರನ್ನು ಭೇಟಿಯಾಗಿ ಬಂದರು. ನನ್ನ ಜತೆ ಯಾವುದೇ ಚರ್ಚೆ ಮಾಡಲಿಲ್ಲ ಎಂದು ಹೇಳಿದರು. 

ಕೂಡಲೇ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಾಗಲಿ: ಕೆ.ಎಸ್‌.ಈಶ್ವರಪ್ಪ

ಮೈತ್ರಿಯಿಂದ ಜೆಡಿಎಸ್‌ಗೆ ಲಾಭ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮೂರೋ-ನಾಲ್ಕೋ ಸೀಟು ಬಂದರೂ, ಬಾರದಿದ್ದರೂ ನಮ್ಮ ಸಿದ್ಧಾಂತ ಏನಾಯಿತು? ನಮ್ಮ ಸಿದ್ಧಾಂತವನ್ನು ಬಿಜೆಪಿ ಒಪ್ಪುತ್ತದೆಯೇ? ಜೆಡಿಎಸ್‌ ಹಿಂದೂ, ಮುಸ್ಲಿಂ ಪಕ್ಷ ಅಲ್ಲ. ಬದಲಿಗೆ ರಾಜ್ಯದ ಜನತೆಯ ಪಕ್ಷವಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶೇ.20ರಷ್ಟು ಮುಸ್ಲಿಂ ಸಮುದಾಯದ ಮತಗಳು ಬಂದಿವೆ. ಶ್ರೀನಿವಾಸಪುರ, ಮುಳಬಾಗಿಲು, ಚನ್ನಪಟ್ಟಣ ಸೇರಿದಂತೆ 19 ಜೆಡಿಎಸ್‌ ಶಾಸಕರ ಗೆಲುವಿನಲ್ಲಿಯೂ ಮುಸ್ಲಿಮರ ಮತಗಳಿವೆ. ಆದರೆ, ಪಕ್ಷಕ್ಕೆ ಬರುತ್ತಿದ್ದ ಒಕ್ಕಲಿಗರ ಮತಗಳು ನಿರೀಕ್ಷೆಯಷ್ಟು ಬಂದಿಲ್ಲ. ಒಕ್ಕಲಿಗ ಮತ ಕಾಂಗ್ರೆಸ್‌ಗೆ ಹೋಗಿದೆ. ಈ ಬಗ್ಗೆ ಯಾರೂ ಚರ್ಚೆ ನಡೆಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

click me!