ಚನ್ನಪಟ್ಟಣ ಉಪಚುನಾವಣೆ: ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನೆಗೆ ಜೆಡಿಎಸ್‌ ಸಜ್ಜು!

By Kannadaprabha News  |  First Published Oct 19, 2024, 10:48 AM IST

ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿಯೂ ತಮ್ಮ ಪಕ್ಷದ ಅಸ್ತಿತ್ವ ಇದೆ ಎಂಬುದನ್ನು ತೋರಿಸಲು ಜೆಡಿಎಸ್ ವರಿಷ್ಠರು ಮುಂದಾಗಿದ್ದು, ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಲು ತಮ್ಮ ಪಕ್ಷದವರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ನಿರೂಪಿಸಲು ಜೆಡಿಎಸ್ ಅಣಿಯಾದಂತಿದೆ. 


ಎಂ. ಅಫ್ರೋಜ್ ಖಾನ್

ರಾಮನಗರ(ಅ.19):  ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ ಟಿಕೆಟ್ ವಿಚಾರವಾಗಿ ಗೊಂದಲ ಮೂಡಿರುವ ಹೊತ್ತಿನಲ್ಲಿಯೇ ಜೆಡಿಎಸ್ ನಾಯಕರು ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳಲ್ಲಿ ಪಕ್ಷದ ಶಕ್ತಿ ಪ್ರದರ್ಶಿಸುವ ಮೂಲಕ ಬಿಜೆಪಿ ವರಿಷ್ಠರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಲು ಮುಂದಾಗಿದೆ.

Tap to resize

Latest Videos

undefined

ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿಯೂ ತಮ್ಮ ಪಕ್ಷದ ಅಸ್ತಿತ್ವ ಇದೆ ಎಂಬುದನ್ನು ತೋರಿಸಲು ಜೆಡಿಎಸ್ ವರಿಷ್ಠರು ಮುಂದಾಗಿದ್ದು, ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಲು ತಮ್ಮ ಪಕ್ಷದವರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ನಿರೂಪಿಸಲು ಜೆಡಿಎಸ್ ಅಣಿಯಾದಂತಿದೆ.

ಚನ್ನಪಟ್ಟಣ ಬೈಎಲೆಕ್ಷನ್‌: ರಾಜಕೀಯ ಭವಿಷ್ಯ ನಿರ್ಧರಿಸುವ ಚುನಾವಣೆ

ಈ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು ಅ.18ರಂದು ಶನಿವಾರ ಎನ್ ಡಿಎ ಮೈತ್ರಿಕೂಟಕ್ಕೆ ಶಕ್ತಿ ತುಂಬುವ ಕಾರ್ಯತಂತ್ರದ ಭಾಗವಾಗಿ ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರನ್ನು ದೂರವಿಟ್ಟು ಜೆಡಿಎಸ್ ಸಭೆ ನಡೆಸುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ಇಕ್ಕಟ್ಟಿನಲ್ಲಿ ಬಿಜೆಪಿ - ಜೆಡಿಎಸ್ ನಾಯಕರು:

ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿತ್ತು. ಉಪಚುನಾವಣೆಯಲ್ಲಿ ಶಿಗ್ಗಾಂವಿ, ಸಂಡೂರು ಕ್ಷೇತ್ರ ಬಿಜೆಪಿ ಹಾಗೂ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಉಭಯ ಪಕ್ಷಗಳ ವರಿಷ್ಠರು ನಿರ್ಧರಿಸಿದ್ದಾರೆ. ಆದರೆ, ಚನ್ನಪಟ್ಟಣ ಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮೈತ್ರಿ ಟಿಕೆಟ್ ಗೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಟಿಕೆಟ್ ಕೈತಪ್ಪಿದರೆ ಕಾಂಗ್ರೆಸ್ ಅಥವಾ ಪಕ್ಷೇತರರಾಗಿ ಸ್ಪರ್ಧಿಸುತ್ತಾರೆಂಬ ವದಂತಿಗಳು ರಾಜಕೀಯ ವಲಯದಲ್ಲಿ ದಟ್ಟವಾಗಿ ಹರಿದಾಡುತ್ತಿದೆ. ಇದು ಜೆಡಿಎಸ್ - ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಬಿಜೆಪಿ ವರಿಷ್ಠರೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿದೆ. ಈ ಕಾರಣದಿಂದಲೇ ಬಿಜೆಪಿ ರಾಜ್ಯ ನಾಯಕರು ಯಾರೂ ಕೂಡ ಇಲ್ಲಿವರೆಗೆ ಚನ್ನಪಟ್ಟಣ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ.

ಆದರೆ, ಸಿ.ಪಿ.ಯೋಗೇಶ್ವರ್ ರಾಜಕೀಯ ವೇಗ, ಟೀಕೆಗಳು ಕುಮಾರಸ್ವಾಮಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿಯೇ ಯೋಗೇಶ್ವರ್ ರಾಜಕೀಯ ಆಟಕ್ಕೆ ಕಡಿವಾಣ ಹಾಕುವಂತೆ ಬಿಜೆಪಿ ವರಿಷ್ಠರಿಗೆ ಸಂದೇಶ ರವಾನಿಸುವ ಉದ್ದೇಶದಿಂದಲೇ ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಹೆಸರಿನಲ್ಲಿ ಕುಮಾರಸ್ವಾಮಿ ರಾಜಕೀಯ ದಾಳ ಉರುಳಿಸಲು ಮುಂದಾಗಿದ್ದಾರೆ.

ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಬಿಜೆಪಿ ಆಯ್ಕೆ ಮಾಡಿದ ಮೈತ್ರಿ ಅಭ್ಯರ್ಥಿ ಪರವಾಗಿ ಶ್ರಮಿಸಲು ಜೆಡಿಎಸ್ ಮುಖಂಡರು - ಕಾರ್ಯಕರ್ತರು ಸಿದ್ಧರಾಗಿದ್ದಾರೆ. ಅದೇ ರೀತಿ ಚನ್ನಪಟ್ಟಣ ಕ್ಷೇತ್ರ ಉಪ ಚುನಾವಣೆಯಲ್ಲಿಯೂ ಜೆಡಿಎಸ್ ಗುರುತಿಸಿದ ಮೈತ್ರಿ ಅಭ್ಯರ್ಥಿ ಗೆಲುವಿಗೆ ಬಿಜೆಪಿ ಮುಖಂಡರು - ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿಯಬೇಕು. ಇಲ್ಲದಿದ್ದರೆ ಮೂರು ಕ್ಷೇತ್ರಗಳ ಫಲಿತಾಂಶಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರಿಗೆ ರವಾನಿಸುವ ಉದ್ದೇಶದಿಂದಲೇ ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಲ್ಲಿ ಪಕ್ಷದ ಸಭೆ ಆಯೋಜನೆ ಮಾಡಲಾಗಿದೆ ಎಂದು ಜೆಡಿಎಸ್ ನಾಯಕರೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಶಿಗ್ಗಾಂವಿ - ಸಂಡೂರು ಕ್ಷೇತ್ರದಲ್ಲಿ ಜೆಡಿಎಸ್ 3 -4 ನೇ ಸ್ಥಾನ :

ಜೆಡಿಎಸ್ ಪಕ್ಷ ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿಯೂ ತನ್ನದೇ ಆದ ಮತಗಳನ್ನು ಹೊಂದಿದೆ. ಕಳೆದ ಮೂರು ವಿಧಾನಸಭಾ ಚುನಾವಣೆ ಫಲಿತಾಂಶ ನೋಡಿದಾಗ ಈ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ 3 ಅಥವಾ 4ನೇ ಸ್ಥಾನ ಅಲಂಕರಿಸಿದೆ. ಚುನಾವಣೆ ಎಂದ ಮೇಲೆ ಒಂದೊಂದು ಮತಗಳು ಅಮೂಲ್ಯವಾಗಿರುವ ಕಾರಣದಿಂದಲೇ ಜೆಡಿಎಸ್ ತನ್ನ ಮತ ಬ್ಯಾಂಕ್ ಅನ್ನು ಗಟ್ಟಿ ಮಾಡಿಕೊಳ್ಳಲು ಮಂದಾಗಿದೆ.

ಶಿಗ್ಗಾಂವಿ ಕ್ಷೇತ್ರದ ಫಲಿತಾಂಶ:

2023ರ ಶಿಗ್ಗಾಂವಿ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ 1,00,016 ಮತಗಳನ್ನು ಪಡೆದರೆ ಜೆಡಿಎಸ್ ನ ಶಶಿಧರ್ ಎಲಿಗರ್ 12,928 ಮತ ಗಳಿಸಿ 3ನೇ ಸ್ಥಾನ ತೃಪ್ತರಾದರು. 2018ರಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ 83,868 ಮತ ಪಡೆದರೆ, ಜೆಡಿಎಸ್ ನ ಅಶೋಕ್ ಬೇವಿನಮರ್ 1353 ಮತ ಹಾಗೂ 2013ರಲ್ಲಿ ಜೆಡಿಎಸ್ ಸುಮಂಗಲಾ ಕಾಡಪ್ಪ 1531 ಮತ ಗಳಿಸಿ 4ನೇ ಸ್ಥಾನ ಅಲಂಕರಿಸಿದ್ದರು.

ಸಂಡೂರು ಕ್ಷೇತ್ರದ ಫಲಿತಾಂಶ:

ಸಂಡೂರು ಕ್ಷೇತ್ರದ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಇ.ತುಕರಾಂ 85,223 ಮತ ಗಳಿಸಿದರೆ, ಜೆಡಿಎಸ್ ಎನ್ ಸೋಮಪ್ಪ 2617 ಮತ, 2018ರಲ್ಲಿ ಕಾಂಗ್ರಸ್ ನ ಇ.ತುಕರಾಂ 78,106 ಮತ, ಜೆಡಿಎಸ್ ನ ಬಿ.ವಸಂತ ಕುಮಾರ್ 4343 ಮತ ಪಡೆದು 4ನೇ ಸ್ಥಾನ ಅಲಂಕರಿಸಿದ್ದರು. 2013ರಲ್ಲಿ ಕಾಂಗ್ರೆಸ್ ನ ಇ.ತುಕರಾಂ 62,246 ಮತ ಪಡೆದರೆ, ಜೆಡಿಎಸ್ ನ ಆರ್. ಧನಂದಯ್ಯ 27,615 ಮತ ಗಳಿಸಿ 2ನೇ ಸ್ಥಾನಕ್ಕೆ ತೃಪ್ತರಾದರು.

ಚನ್ನಪಟ್ಟಣ ಟಿಕೆಟ್‌ ನನಗೇ ಎಂದ ಯೋಗೇಶ್ವರ್‌: ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಿಷ್ಟು

ಚನ್ನಪಟ್ಟಣ ಕ್ಷೇತ್ರದ ತೀರ್ಮಾನವನ್ನು ಬಿಜೆಪಿ ವರಿಷ್ಠರು ನನಗೆ ಬಿಟ್ಟಿದ್ದಾರೆ. ಇನ್ನು ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ನಮ್ಮ ಪಾತ್ರ ಕಡಿಮೆ ಇರಬಹುದು. ಆದರೆ, ಚುನಾವಣೆಗಳಲ್ಲಿ ಒಂದೊಂದು ಮತ ಕೂಡ ಮುಖ್ಯ ಆಗುತ್ತದೆ. ಮೂರು ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿ ಗೆಲ್ಲಬೇಕು ಎಂಬುದು ನಮ್ಮ ಉದ್ದೇಶ. ಉಭಯ ಪಕ್ಷಗಳ ವರಿಷ್ಠರೊಂದಿಗೆ ಚರ್ಚಿಸಿಯೇ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಂದೆರೆಡು ದಿನಗಳಲ್ಲಿ ಫೈನಲ್ ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.  

ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡುವ ಅವರ ಸಂಕಲ್ಪದ ಭಾಗವಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯವರ ಮಾರ್ಗದರ್ಶನದಲ್ಲಿ ಸಭೆಗಳನ್ನು ಆಯೋಜನೆ ಮಾಡಲಾಗಿದೆ. ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಗಳನ್ನು ಗೆಲ್ಲಿಸುವ ಭಾಗವಾಗಿ ಜೆಡಿಎಸ್ ಮುಖಂಡರು, ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸಭೆ ಆಯೋಜನೆ ಮಾಡಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. 

click me!