ಬಳ್ಳಾರಿ (ಅ.19): ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾಗೇಂದ್ರ ಅವರಿಗೆ ದೊಡ್ಡಪ್ರಮಾಣದ ಶಿಕ್ಷೆಯಾಗುವುದು ಗ್ಯಾರಂಟಿ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿಸಿದ ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆಸಿ, ಅದೇ ಸಮುದಾಯದ ವ್ಯಕ್ತಿಯಾಗಿ ಆ ಜನಾಂಗಕ್ಕೆ ನಾಗೇಂದ್ರ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು.
ನಿಗಮದ ಹಣದಲ್ಲಿ ಕೋಟ್ಯಂತರ ಮೌಲ್ಯದ ಕಾರು ಖರೀದಿ, ವಿಮಾನ ಪ್ರಯಾಣ ಭತ್ಯೆ, ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಪ್ರತಿ ಮತಕ್ಕೆ ₹200ನಂತೆ ಮೂವರು ಶಾಸಕರ ಮೂಲಕ ಒಟ್ಟು ₹14.80 ಕೋಟಿ ಹಂಚಿಕೆ ಸೇರಿ ₹20 ಕೋಟಿ ಚುನಾವಣೆಗೆ ಬಳಸಿಕೊಂಡಿರುವ ಬಗ್ಗೆ, ಕಂಡ ಕಂಡವರಿಗೆ ಹಣ ವರ್ಗಾವಣೆ ಮಾಡಿರುವ ಕುರಿತು ಇ.ಡಿ. ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ನಾಗೇಂದ್ರ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಕುರಿತು ಇಂಚಿಂಚು ಮಾಹಿತಿಯನ್ನು ಜಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ಸಿಬಿಐ ತನಿಖೆಯಿಂದ ಇನ್ನಷ್ಟು ಅಂಶ ಹೊರಬರಲಿದೆ ಎಂದರು.
2011ರ ಸೆ.5ರಂದು ಆಗ ಸಿಬಿಐ ನನ್ನನ್ನು ಬಂಧಿಸಿದ್ದ ವೇಳೆ ಕೇಂದ್ರದಲ್ಲೂ ಯುಪಿಎ ಸರ್ಕಾರ ಆಡಳಿತದಲ್ಲಿತ್ತು. ಅಂದು ನಾಗೇಂದ್ರ ಸೇರಿ ಐವರು ಶಾಸಕರು ಬಂಧಿಯಾಗಿದ್ದೆವು. ಯುಪಿಎ ಅವಧಿಯಲ್ಲೇ ಎರಡು ವರ್ಷ ಜೈಲಿನಲ್ಲಿದ್ದ ಕುರಿತು ನಾಗೇಂದ್ರ ಮರೆಯಬಾರದು. ಈಗ ವಿನಾಕಾರಣ ಕೇಂದ್ರದ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮೂರು ತಿಂಗಳ ಕಾಲ ಜೈಲುವಾಸ ಅನುಭವಿಸಿ ಹೊರಬಂದಿರುವ ಶಾಸಕ ನಾಗೇಂದ್ರ ಇ.ಡಿ. ಪ್ರಕರಣದಲ್ಲಿ ಎ1 ಆರೋಪಿ ಎಂಬುದನ್ನು ಮರೆಯಬಾರದು ಎಂದು ರೆಡ್ಡಿ ಹರಿಹಾಯ್ದರು.
ರಾಯಚೂರು ವಿಶ್ವವಿದ್ಯಾಲಯ, ವಸತಿ ಶಾಲೆಗೆ ವಾಲ್ಮೀಕಿ ಹೆಸರು: ಸಿಎಂ ಸಿದ್ದರಾಮಯ್ಯ ಘೋಷಣೆ
ಸಂಡೂರಿನಲ್ಲಿ ವಾಸ್ತವ್ಯ: ಸಂಡೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿಯೇ ವಾಸ್ತವ್ಯ ಮಾಡುತ್ತಿದ್ದು, ಶುಕ್ರವಾರ ಗೃಹಪ್ರವೇಶವಾಗಲಿದೆ. ಅಲ್ಲೇ ಇದ್ದು ಚುನಾವಣೆ ಜವಾಬ್ದಾರಿ ಕೆಲಸ ನಿರ್ವಹಿಸಲಾಗುವುದು. ಸಂಡೂರು ಉಪ ಚುನಾವಣೆ ಮೂಲಕ ಬಿಜೆಪಿ ವಿಜಯಯಾತ್ರೆ ಶುರುವಾಗಲಿದೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಸರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.