ಟ್ರ್ಯಾಲಿ ಕುರ್ಚಿಯಲ್ಲಿ ದೇವೇಗೌಡ ರ್ಯಾಲಿ: ಜೆಡಿಎಸ್‌ಗೆ ಬಹುಮತ ಕೊಡಿಯೆಂದ ಮಾಜಿ ಪ್ರಧಾನಿ

By Kannadaprabha NewsFirst Published Mar 27, 2023, 5:41 AM IST
Highlights

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 90 ದಿನ ರಾಜ್ಯಾದ್ಯಂತ ಸಂಚರಿಸಿದ ಜೆಡಿಎಸ್‌ನ ಪಂಚರತ್ನ ರಥಯಾತ್ರೆಗೆ ಮೈಸೂರಿನಲ್ಲಿ ಭಾನುವಾರ ತೆರೆ ಎಳೆಯಲಾಯಿತು. 

ಮೈಸೂರು (ಮಾ.27): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 90 ದಿನ ರಾಜ್ಯಾದ್ಯಂತ ಸಂಚರಿಸಿದ ಜೆಡಿಎಸ್‌ನ ಪಂಚರತ್ನ ರಥಯಾತ್ರೆಗೆ ಮೈಸೂರಿನಲ್ಲಿ ಭಾನುವಾರ ತೆರೆ ಎಳೆಯಲಾಯಿತು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಮಾರೋಪ ಸಮಾವೇಶದಲ್ಲಿ ಭಾವನಾತ್ಮಕವಾಗಿ ಮಾತನಾಡಿ ಈ ಬಾರಿ ಜೆಡಿಎಸ್‌ಗೆ ಸಂಪೂರ್ಣ ಬಹುಮತ ನೀಡಿ ಎಂದು ಮನವಿ ಮಾಡಿದರು. ನಗರದ ಹೊರ ವಲಯದ ಉತ್ತನಹಳ್ಳಿ ತ್ರಿಪುರಸುಂದರಿ ದೇವಾಲಯ ಸಮೀಪ ಭಾನುವಾರ ಸಂಜೆ ಆಯೋಜಿಸಿದ್ದ ಪಂಚರತ್ನ ರಥಯಾತ್ರೆಯ ಸಮಾರೋಪದಲ್ಲಿ ಮೊದಲು ಮಾತನಾಡಿದ ದೇವೇಗೌಡರು, ನನ್ನ ಆರೋಗ್ಯದಲ್ಲಿ ಏರುಪೇರಾಗಿದ್ದು, ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದೇನೆ. 

ಭಗವಂತನ ಆಟ ಮತ್ತು ನಿಮ್ಮ ಶಕ್ತಿ ನೋಡಿದರೆ ಜನ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂಬ ಮುನ್ಸೂಚನೆ ಅನ್ನಿಸುತ್ತದೆ. ನಾನು ನಾಟಕದ ಮಾತಿನಿಂದ ಮೇಲೆ ಬಂದಿಲ್ಲ. ಜಾತಿ, ಧರ್ಮ ಒಡೆಯುವ ಮಾದರಿ ನನ್ನದಲ್ಲ. ಬ್ರಿಟಿಷರು ಹಾಗೆ ಮಾಡಿದ್ದರು. ಆದರೆ ಇತ್ತೀಚೆಗೆ ಕೆಲವರು ಹಾಗೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು. ನಾವು ನುಡಿದಂತೆ ನಡೆದುಕೊಂಡಿದ್ದೇವೆ. ನಾನೆಂದೂ ಜನರ ಕಣ್ಣಿಗೆ ಮಣ್ಣೆರಚಲಿಲ್ಲ. ಮತ ಭಿಕ್ಷೆ ಕೇಳಿದ್ದೇನೆ. ಖಾಲಿ ಕೈಯಲ್ಲಿ ನಿಂತಾಗ ಜನರು ಬೆಂಬಲಿಸಿ ಹುರಿದುಂಬಿಸಿದ್ದಾರೆ. ಆಭಿವೃದ್ಧಿ ಮಂತ್ರ ಪಠಿಸಿದ್ದೇನೆ ಎಂದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಾವಲುಗಾರನಾಗಿ ಸೇವೆ: ಎಚ್‌.ಡಿ.ಕುಮಾರಸ್ವಾಮಿ

ಡ್ಯೂಪ್ಲಿಕೇಟ್‌ ಕಾರ್ಡ್‌: ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ ಕುರಿತು ಎಚ್‌.ಡಿ.ಕುಮಾರಸ್ವಾಮಿ ಅವರು ಸಮಾವೇಶದಲ್ಲಿ ತೀವ್ರ ಕಿಡಿಕಾರಿದರು. ಈಗ ಕಾಂಗ್ರೆಸ್‌ ಸರ್ಕಾರ ನೀಡುತ್ತಿರುವುದು ಗ್ಯಾರಂಟಿ ಕಾರ್ಡ್‌ ಅಲ್ಲ. ಡ್ಯೂಪ್ಲಿಕೇಟ್‌ ಕಾರ್ಡ್‌ ಎಂಬುದನ್ನು ಮರೆಯಬೇಡಿ. ಮತ್ತೊಂದೆಡೆ ಬಿಜೆಪಿಯು ಜನರ ತೆರಿಗೆ ಹಣದಲ್ಲಿ ಕಾರ್ಯಕ್ರಮ ಮಾಡಿ ಜನರನ್ನು ಸೇರಿಸುತ್ತಿದೆ ಎಂದರು. ನಾನು ಆ ಭಾಗ್ಯ ಕೊಟ್ಟೆ, ಈ ಭಾಗ್ಯ ಕೊಟ್ಟೆ, .29 ಸಾವಿರ ಕೋಟಿ ಕೊಟ್ಟೆಎಂದು ಹೇಳುವ ನಾಯಕರೇ, ನಿಮ್ಮ ಕೋಟಿಗಳೆಲ್ಲಾ ಏನಾಯಿತು? ಉತ್ತರ ಕರ್ನಾಟಕ ಭಾಗದಲ್ಲಿ ಪಾನಿಪುರಿ ಅಂಗಡಿ ನಡೆಸಲು ದಲಿತ ಸಮುದಾಯದ ಹೆಣ್ಣು ಮಗಳಿಗೆ ನಾನು ಹಣ ಕೊಟ್ಟೆನಲ್ಲ, ನಿಮ್ಮ ಹಣ ಯಾರಿಗೆ ಕೊಟ್ಟಿರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ನಾನು ಮುಖ್ಯಮಂತ್ರಿ ಆಗುವುದಕ್ಕಲ್ಲ, ನಿಮ್ಮ ಬದುಕಿಗಾಗಿ, ಭವಿಷ್ಯದ ಮಕ್ಕಳಿಗಾಗಿ ಜೆಡಿಎಸ್‌ಗೆ ಬಹುಮತ ನೀಡಿ. ದೇವೇಗೌಡರ ಹೋರಾಟದ ಪ್ರತಿಫಲ ಇಂದು ನಾಡಿನ ಅನೇಕರಿಗೆ ದೊರಕಿದೆ. ಮಣ್ಣಿನ ಮಗ ಕೊಟ್ಟಕೊಡುಗೆಯನ್ನು ಬಾಯಿತುಂಬಾ ಹೊಗಳಲು ವಿರೋಧ ಪಕ್ಷದವರಿಗೆ ಆಗುತ್ತಿಲ್ಲ. ಆದರೆ ಪಂಜಾಬ್‌ನ ಜನ ಭತ್ತಕ್ಕೆ ಇವರ ಹೆಸರಿಟ್ಟಿದ್ದಾರೆ. ನಾನು ಈ ನಾಡಿನ ಜನರ ಕಣ್ಣೀರು ಒರೆಸಬೇಕೆಂಬ ಶಪಥ ಮಾಡಿದ್ದೇನೆ. ಅದನ್ನು ನೋಡಲು ದೇವೇಗೌಡರು ಇರಬೇಕು ಎಂದು ದೇವರಿಗೆ ಕೈಮುಗಿದು ಪ್ರಾರ್ಥಿಸಿ ಅವರನ್ನು ಉಳಿಸಿಕೊಂಡಿದ್ದೇವೆ ಎಂದು ಭಾವನಾತ್ಮಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಡಿನ ಮೂಲೆಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಜೆಡಿಎಸ್‌ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪುಲಕೇಶಿ ಕಿರೀಟ, ಚಿನ್ನದ ನೇಗಿಲು ಕೊಟ್ಟು ಗೌರವಾರ್ಪಣೆ: ಪಂಚರತ್ನ ಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ದೇವೇಗೌಡರನ್ನು ಸುಮಾರು 50 ಮೀ.ವರೆಗೆ ವಿಶೇಷವಾಗಿ ಸಿದ್ಧಪಡಿಸಿದ್ದ ಟ್ರ್ಯಾಲಿಯ ನೆರವಿನಿಂದ ಜನರ ಮಧ್ಯೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ದು ವಿಶೇಷ. ದೇವೇಗೌಡರನ್ನು ಕಾಣುತ್ತಲೇ ಕಾರ್ಯಕರ್ತರ ಹರ್ಷೋದ್ಗಾರ ಇಮ್ಮಡಿಯಾಯಿತು. ವೇದಿಕೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಅಂಗರಕ್ಷಕರು ಮತ್ತು ಕಾರ್ಯಕರ್ತರು ವ್ಹೀಲ್‌ ಚೇರ್‌ನಲ್ಲಿ ಕರೆತರುತ್ತಲೇ ನೆರೆದಿದ್ದ ಲಕ್ಷಾಂತರ ಮಂದಿ ಕಾರ್ಯಕರ್ತರು ಚಪ್ಪಾಳೆ, ತಟ್ಟಿ, ಶಿಳ್ಳೆ ಹೊಡೆದು ಸ್ವಾಗತಿಸಿದರು. ದೇವೇಗೌಡರಿಗೆ ದಕ್ಷಿಣಪಥೇಶ್ವರ ಇಮ್ಮಡಿ ಪುಲಕೇಶಿಯ ಕಿರೀಟ ಮಾದರಿ ತೊಡಿಸಿ, ಚಿನ್ನದ ನೇಗಿಲನ್ನು ಸಮರ್ಪಿಸಿದರು. 

ಜನಾದೇಶ ಮಾರಿಕೊಂಡವರಿಗೆ ತಕ್ಕ ಪಾಠ ಕಲಿಸಿ: ಎಚ್‌.ಡಿ.ಕುಮಾರಸ್ವಾಮಿ

ದೇವೇಗೌಡರಿಗೆ ಅನಾರೋಗ್ಯ ಕಾರಣ ಮೊದಲು ಮಾತನಾಡಲು ಅವಕಾಶ ನೀಡಲಾಯಿತು. ಬಳಿಕ ವಿಶೇಷವಾದ ಟ್ರ್ಯಾಲಿಯಲ್ಲಿ ಕೂರಿಸಿ, ಜನರ ಮಧ್ಯದವರೆಗೂ ಕರೆದೊಯ್ಯಲಾಯಿತು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ‘ವೈದ್ಯರು ಅನುಮತಿ ನೀಡಿದ್ದಾರೆ ಬನ್ನಿ ಅಣ್ಣ, ಇಷ್ಟುವರ್ಷ ಇವರೇ ನಿಮ್ಮನ್ನು ಕೈ ಹಿಡಿದು ಬೆಳೆಸಿದ್ದು, ಅವರಿಗೆ ಕೃತಜ್ಞತೆ ಅರ್ಪಿಸಲು ಇದೊಂದು ಸುಸಂದರ್ಭ. ಬನ್ನಿ ಧೈರ್ಯವಾಗಿ ಬನ್ನಿ, ನಿಮ್ಮೊಡನೆ ಹೆಚ್ಚು ಜನರು ಬರುವುದಿಲ್ಲ. ನಾವು ಇರುತ್ತೇವೆ’ ಎಂಬ ಭಾವನಾತ್ಮಕ ಮಾತುಗಳನ್ನಾಡಿ ಗಾಲಿ ಕುರ್ಚಿಯಲ್ಲಿ ಕೂರಿಸಿದರು. ಈ ವೇಳೆ ದೇವೇಗೌಡರ ಪಕ್ಕದಲ್ಲಿ ಎಚ್‌.ಡಿ. ಕುಮಾರಸ್ವಾಮಿ, ಹಿಂದೆ ಪ್ರಜ್ವಲ್‌ ರೇವಣ್ಣ, ಸೂರಜ್‌ ರೇವಣ್ಣ, ನಿಖಿಲ್‌ ಕುಮಾರಸ್ವಾಮಿ ಮತ್ತು ಅವರ ಹಿಂದೆ ಎಚ್‌.ಡಿ.ರೇವಣ್ಣ ಮಾತ್ರ ಇದ್ದರು.

click me!