
ಬೆಂಗಳೂರು, (ಜೂನ್.12): ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಆರೋಪ -ಪ್ರತ್ಯಾರೋಪ ಜೋರಾಗಿದೆ.
ಬಿಜೆಪಿಯ ಬಿ ಟೀಂ ಪಿತಾಮಹ ಸಿದ್ದರಾಮಯ್ಯ ಡೀಲ್ ರಾಮಯ್ಯ ಸಿದ್ದರಾಮಯ್ಯ. ನಮ್ಮ ಶಾಸಕರನ್ನ ಮನೆಗೆ ಕರೆಸಿಕೊಂಡು ಡೀಲ್ ಮಾಡ್ಕೊಂಡಿದ್ದೀರಾ ಎಂದು ಜೆಡಿಎಸ್ ವಿಧಾನಪರಿಷ್ ಸದಸ್ಯ ಟಿ.ಎ. ಶರವಣ ಅವರು ಸಿದ್ದರಾಮಯ್ಯ ವಿರುದ್ದ ಆರೋಪ ಮಾಡಿದ್ದಾರೆ.
ಡೀಲ್ ರಾಮಯ್ಯ ಹೇಳೋದು ಆಚಾರ ತಿನ್ನೋದು ಬದನೆಕಾಯಿ. ನಿಮಗೆ ಎಷ್ಟು ಸೂಟ್ ಕೇಸ್ನಲ್ಲಿ ಬಂದಿದೆ ಅನ್ನೋದನ್ನು ಡೀಲ್ ರಾಮಯ್ಯ ಹೇಳಬೇಕು. ರಾಜ್ಯಸಭಾ ಚುನಾವಣೆಯಲ್ಲಿ ಬಣ್ಣ ಬಯಲಾಗಿದೆ. ಸಿದ್ದರಾಮಯ್ಯ ಯಾರ ಮಾತೂ ಕೇಳಲ್ಲ. ಸಿದ್ದರಾಮಯ್ಯ ತಾವೇ ಹೈಕಮಾಂಡ್ ತರ ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್ನವರೇ ಹೇಳುತ್ತಿದ್ದಾರೆ. ದೇವೇಗೌಡರು ನನಗೆ ಫಾರೂಕ್ಗೆ ಸಿದ್ದರಾಮಯ್ಯ ಭೇಟಿ ಮಾಡುವುದಕ್ಕೆ ಹೇಳಿದ್ದರು. ಸಿದ್ದರಾಮಯ್ಯ ಭೇಟಿ ಮಾಡಿದಾಗ ನಾವು ರಿಕ್ವೆಸ್ಟ್ ಮಾಡಿಕೊಂಡಿದ್ದೇವು. ಅಲ್ಲಿ ನಡೆದದ್ದನ್ನು ಹೇಳದೇ ಶರವಣ ಸ್ವೀಟ್ ಕೊಡೋದಕ್ಕೆ ಬಂದ ಅಂತ ತಿರುಚಿ ಹೇಳೋ ಸಿದ್ದರಾಮಯ್ಯರನ್ನು ಏನಂತ ಕರೆಯಬೇಕು ಎಂದು ಕಿಡಿಕಾರಿದರು,
ಲೋಕಸಭೆ ಎಲೆಕ್ಷನ್‌ನಲ್ಲಿ ಜೆಡಿಎಸ್ ಜತೆ ಹೋಗಿ ನಾವು ಕೆಟ್ಟೆವು: ಸಿದ್ದು
ಕುಮಾರಣ್ಣ ದೇವೇಗೌಡ ಕಣ್ಣಲ್ಲಿ ಕಣ್ಣೀರು ಹಾಕಿಸಿದ್ದೀರಾ ನೀವು ಅದಕ್ಕೆ ಬೆಲೆ ತೆರಲೇಬೇಕು. ನಮ್ಮ ಇಬ್ಬರು ಸೂಟ್ ಕೇಸ್ ಶ್ರೀನಿವಾಸರಿಗೆ ತಿರುಪತಿ ಶ್ರೀನಿವಾಸನ ಶಾಪ ತಟ್ಟುತ್ತದೆ. ನಮ್ಮ ಪಕ್ಷದಲ್ಲಿ ಗೆದ್ದು ತಾಯಿನ ಮಾರಾಟ ಮಾಡಿದ್ದೀರಾ. ಪುಡಿ ರೌಡಿಗಳಂತೆ ಮಾತನಾಡ್ತಿದ್ದೀರಾ. ನಮ್ಮ ಕಾರ್ಯಕರ್ತರು ಸನ್ಯಾಸಿಗಳಲ್ಲ ಬುದ್ದಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಸಿದ್ದರಾಮಯ್ಯ ವಿರುದ್ಧ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ 12 ಶಾಸಕರನ್ನು ಮುಂಬೈಗೆ ಕಳುಹಿಸಿ
ಮಂಚದ ಮೇಲೆ ಮಲಗಿಸಿ ವಿಡಿಯೋ ಮಾಡಿಸಿ, ಬಿ.ಎಸ್.ಯಡಿಯೂರಪ್ಪನನ್ನು ಸಿಎಂ ಮಾಡಿದ್ರಿ ಎಂದು ಜೆಡಿಎಸ್ ಪ್ರತಿಭಟನೆಯಲ್ಲಿ ಸಿ.ಎಂ.ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಈಗಲೂ ಬಿಎಸ್ವೈ ಜೊತೆ ಡೀಲ್ ಮಾಡ್ಕೊಂಡ್ರಲ್ಲ. ಏರ್ಪೋರ್ಟ್ನಲ್ಲಿ ಸಿದ್ದರಾಮಯ್ಯ ಡೀಲ್ ಮಾಡಿದ್ರಲ್ಲ. ಸಿ.ಟಿ.ರವಿ ಅದಕ್ಕೆ ಸಿದ್ದರಾಮಯ್ಯಗೆ ವಿಧಾನಸೌಧದ ಕಾಂಗ್ರೆಸ್ ಕಚೇರಿಗೆ ಹೋಗಿ ಅಭಿನಂದನೆ ಸಲ್ಲಿಸಿದ್ದರು. ತಾಳಿ ಕಟ್ಟಿಸಿಕೊಳ್ಳುವುದು ಒಬ್ಬರ ಜತೆ ಪ್ರಸ್ತ ಮತ್ತೊಬ್ಬರ ಜತೆ. ನಾಚಿಕೆಗೆಟ್ಟವರು ನೀವು, ಮಾನಗೆಟ್ಟವರು ನೀವು ಎಂದು ಇಬ್ರಾಹಿಂ ಕಿಡಿಕಾರಿದ್ದಾರೆ.
ಸಿದ್ದು ಭೇಟಿ ಮಾಡಿದ್ದ ಶರವಣ
ರಾಜ್ಯಸಭೆ ಚುನಾವಣೆ ಸಂಬಂಧ ತಮ್ಮ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿಗೆ ಬೆಂಬಲ ನೀಡುವಂತೆ ಕೋರಿ ಪರಿಷತ್ ಸದಸ್ಯ ಟಿ.ಎ. ಶರವಣ ನೇತೃತ್ವದ ಜೆಡಿಎಸ್ ನಿಯೋಗ ಪ್ರತಿಪಕ್ಷ ನಾಯಕರೂ ಆಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು.
ಪರಿಷತ್ ಸದಸ್ಯ ಟಿ.ಎ. ಶರವಣ ಹಾಗೂ ಬಿ.ಎಂ.ಫಾರೂಕ್ ಅವರು ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ರಾಜ್ಯಸಭೆ ಚುನಾವಣೆ ಸಂಬಂಧ ಬೆಂಬಲ ಕೋರಿದರು. ಭೇಟಿ ಬಳಿಕ ಮಾತನಾಡಿದ ಟಿ.ಎ. ಶರವಣ ಅವರು, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿಕೆ ಅವರ ಆದೇಶದ ಮೇರೆಗೆ ನಾನು ಮತ್ತು ಬಿ.ಎಂ. ಫಾರೂಕ್ ಸಿದ್ದರಾಮಯ್ಯರನ್ನು ಭೇಟಿ ಮಾಡಿದೆವು. ರಾಜ್ಯಸಭೆ ಅಭ್ಯರ್ಥಿ ವಿಚಾರವಾಗಿ ನಾವು ಜಾತ್ಯತೀತರು, ಜಾತ್ಯತೀತತೆಯನ್ನು ಉಳಿಸಲು ಎಲ್ಲರೂ ಒಂದೇ ಧ್ವನಿಯಲ್ಲಿ ಹೋರಾಟ ಮಾಡಬೇಕು. ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲಲು ಅವಕಾಶ ನೀಡಬಾರದು. ಇದು ಕಾಂಗ್ರೆಸ್ ಹಾಗೂ ನಮ್ಮ ಮನಸ್ಥಿತಿಯೂ ಹೌದು. ಈ ಕಾರಣಕ್ಕೆ ಭೇಟಿಯಾಗಿ, ಬೆಂಬಲಕ್ಕೆ ಮನವಿ ಮಾಡಿದೆವು ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.