ಆಡಳಿತದ ಹಿತಕ್ಕೆ ಹೋಟೆಲ್‌ನಲ್ಲಿರುತ್ತಿದ್ದ ಎಚ್‌ಡಿಕೆ: ಅಶ್ವತ್ಥ್‌ಗೆ ಸಾ. ರಾ. ಮಹೇಶ್‌ ತಿರುಗೇಟು

By Kannadaprabha News  |  First Published Aug 13, 2022, 1:44 PM IST

ನಮ್ಮವರು ಹೋಟೆಲ್‌ನಲ್ಲಿ ಇರುತ್ತಿದ್ದರು, ನಿಮ್ಮವರು ಗುಡಿಸಿಲಿನಲ್ಲಿ ಇದ್ದರಾ?: ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಪ್ರಶ್ನೆ


ಮೈಸೂರು(ಆ.13):  ನಮ್ಮವರು ಹೋಟೆಲ್‌ನಲ್ಲಿ ಇರುತ್ತಿದ್ದರು. ಹಾಗಾದರೇ ನಿಮ್ಮವರು ಗುಡಿಸಿಲಿನಲ್ಲಿ ಇದ್ದರಾ ಎಂದು ಜೆಡಿಎಸ್‌ ಶಾಸಕ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್‌ ಅವರು ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ ಅವರನ್ನು ಪ್ರಶ್ನಿಸಿದರು. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೋಟೆಲ್‌ನಲ್ಲಿ ಇದ್ದುಕೊಂಡು ಆಡಳಿತ ನಡೆಸುತ್ತಿದ್ದರು ಎಂಬ ಡಾ. ಅಶ್ವತ್ಥನಾರಾಯಣ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಾಂಬೆಯಲ್ಲಿ ಇದ್ದವರು ಗುಡಿಸಿಲಿನಲ್ಲಿ ಇದ್ದರಾ? ಅವರನ್ನೆಲ್ಲ ಬಾಂಬೆಯಲ್ಲಿ ಗುಡಿಸಿಲಿನಲ್ಲಿ ಇರಿಸಿದ್ರಾ? ಎಂದು ಕಿಡಿಕಾರಿದದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಿಎಂ ಅಧಿಕೃತ ನಿವಾಸ ಖಾಲಿ ಇರಲಿಲ್ಲ. ಹೀಗಾಗಿ ಕುಮಾರಸ್ವಾಮಿ ಮಧ್ಯಾಹ್ನದ ವೇಳೆ ವಿಧಾನಸೌಧಕ್ಕೆ ಸನಿಹದಲ್ಲಿದ್ದ ಖಾಸಗಿ ಹೋಟೆಲ್‌ನಲ್ಲಿ ಊಟಕ್ಕೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು. ಆಡಳಿತದ ಹಿತದೃಷ್ಟಿಯಿಂದ ಕುಮಾರಸ್ವಾಮಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ, ಇದೇ ವಿಚಾರ ಮುಂದಿಟ್ಟುಕೊಂಡು ಸಚಿವರು ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.

Tap to resize

Latest Videos

ಮಿಸ್ಟರ್‌ ಬ್ಲಾಕ್‌ಮೇಲರ್, ಅದೇನೋ ಬಿಚ್ಚಿಡ್ತಿಯೋ ಬಿಚ್ಚಿಡಪ್ಪ: ಎಚ್‌ಡಿಕೆಗೆ ಅಶ್ವತ್ಥನಾರಾಯಣ ಸವಾಲ್

ಅಶ್ವತ್ಥನಾರಾಯಣ ಒಳ್ಳೆಯ ಸ್ನೇಹಿತ. ನಾನೂ ಬಿಜೆಪಿಯಲ್ಲಿ ಇದ್ದವನು. ರಾಜ್ಯ, ರಾಷ್ಟ್ರೀಯ ನಾಯಕರು ಬಂದರೂ ಕಾರ್ಯಕರ್ತನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ನಮ್ಮದು ಸಮ್ಮಿಶ್ರ ಸರ್ಕಾರ ಇತ್ತು. ಆಗಿನ ಮಾಜಿ ಮುಖ್ಯಮಂತ್ರಿ ಮನೆ ಖಾಲಿ ಮಾಡಿರಲಿಲ್ಲ. ಕುಮಾರಸ್ವಾಮಿ ಅವರ ಮನೆ ಜೆ.ಪಿ. ನಗರದಲ್ಲಿದೆ. ಹೀಗಾಗಿ, ಅವರು ಹೋಟೆಲ್‌ನಲ್ಲಿದ್ದರು. ನಮ್ಮಲ್ಲೂ ಮಾತನಾಡುವವರು ಇದ್ದಾರೆ. ದೇವೇಗೌಡರು ಇತಿಮಿತಿಯಲ್ಲಿ ಮಾತನಾಡಿ ಎಂದು ಹೇಳಿದ್ದಾರೆ ಎಂದರು.

ಒಕ್ಕಲಿಗರ ಲೀಡರ್‌ ಅಗುವ ಆಸೆ

ಒಕ್ಕಲಿಗ ಸಮಾಜದ ದೊಡ್ಡ ಲೀಡರ್‌ ಆಗಬೇಕೆಂದುಕೊಂಡು ಸಚಿವ ಡಾ. ಅಶ್ವತ್ಥನಾರಾಯಣ್‌ ಅವರು ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಇದು ಸಾಧ್ಯವಾಗುವುದಿಲ್ಲ. ಕುಮಾರಸ್ವಾಮಿ ಒಕ್ಕಲಿಗ ಸಮುದಾಯ ಮಾತ್ರವಲ್ಲದೇ ಎಲ್ಲಾ ಸಮುದಾಯಗಳಿಗೂ ನಾಯಕ. ಅವರನ್ನು ಟೀಕಿಸಿದರೆ ದೊಡ್ಡ ನಾಯಕನಾಗುತ್ತೇನೆ, ಸಚಿವ ಆರ್‌. ಅಶೋಕ್‌ಗೆ ಪರ್ಯಾಯವಾಗಿ ನಾಯಕನಾಗುವ ಭ್ರಮೆಯಲ್ಲಿದ್ದಾರೆ ಎಂದು ಅವರು ಟೀಕಿಸಿದರು.

ಮಳೆಯಿಂದ ಮನೆಗಳು ಕುಸಿದರೂ ಎಷ್ಟು ಜನಕ್ಕೆ ಪರಿಹಾರ ಸಿಕ್ಕಿದೆ. 100 ಕೋಟಿ ಸಾಲ ಮನ್ನಾ ಅನುದಾನ ಬಿಡುಗಡೆ ಆಗಿದ್ದರೂ ರೈತರಿಗೆ ಹಣ ತಲುಪಿಲ್ಲ. ನಾವು ಇದೆಲ್ಲವನ್ನೂ ಮಾತನಾಡುತ್ತಿದ್ದೀವಾ? ಉನ್ನತ ಶಿಕ್ಷಣ ಸಚಿವರಾಗಿ ಇದೇನಾ ನಿಮ್ಮ ಸಂಸ್ಕಾರ? ಟೀಕೆ ಮಾಡಬೇಡಿ ಎಂದು ಹೇಳಲ್ಲ. ಟೀಕೆ, ಭಾಷೆ ಮಾದರಿಯಾಗಿರಬೇಕು ಎಂದರು.

ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್‌ ನಾಯಕರು ಎಷ್ಟು ಕಾರಣವೋ ನಿಮ್ಮದೂ ಅಷ್ಟೇ ಪಾತ್ರವಿದೆ. ರಾಜಕಾರಣದಲ್ಲಿ ನೂರಕ್ಕೆ ನೂರು ಯಾರೂ ಸರಿಯಿಲ್ಲ. ನನ್ನನ್ನೂ ಸೇರಿದಂತೆ ಯಾರೂ ಸರಿಯಿಲ್ಲ. ಕುಮಾರಸ್ವಾಮಿ ಏನು, ಅಶ್ವತ್ಥನಾರಾಯಣ ಏನು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಎರಡೂ ರಾಷ್ಟ್ರೀಯ ಪಕ್ಷದವರು ಪ್ರಾದೇಶಿಕ ಪಕ್ಷ ಇರಬಾರದು ಎಂದು ಏನೇನು ಮಾಡಿದ್ದೀರಿ ಎನ್ನುವುದೂ ಗೊತ್ತಿದೆ ಎಂದು ಅವರು ಹೇಳಿದರು. ವಿಧಾನ ಪರಿಷತ್ತು ಸದಸ್ಯ ಸಿ.ಎನ್‌. ಮಂಜೇಗೌಡ, ಮಾಜಿ ಮೇಯರ್‌ ಆರ್‌. ಲಿಂಗಪ್ಪ, ನಗರ ಪಾಲಿಕೆ ಸದಸ್ಯೆ ಪ್ರೇಮಾ ಶಂಕರೇಗೌಡ ಮೊದಲಾದವರು ಇದ್ದರು.

ಸ್ವಾತಂತ್ರ್ಯಕ್ಕೆ ಸಿದ್ದರಾಮಯ್ಯ ಕೊಡುಗೆ ಏನು?

ದೇಶದ ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆ ಏನು? ಸ್ವಾತಂತ್ರ್ಯ ಚಳವಳಿಯಲ್ಲಿ ನೀವೇನಾದರು ಭಾಗಿಯಾಗಿದ್ರಾ? ನಿಮ್ಮ ಕೊಡುಗೆ ಬಗ್ಗೆ ಏನಾದರೂ ಪುಸ್ತಕ ಬರೆದಿದ್ದೀರಾ ಎಂದು ಶಾಸಕ ಸಾ.ರಾ. ಮಹೇಶ್‌ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಸರ್ಕಾರ ಬೀಳಿಸಲು ಏನೇನ್ ಮಾಡಿದೆ ನನಗೆ ಗೊತ್ತು, ಅಶ್ವತ್ಥ್ ನಾರಾಯಣ ವಿರುದ್ಧ ಎಚ್‌ಡಿಕೆ ಬಾಂಬ್

ದೇಶದ ಸ್ವಾತಂತ್ರ್ಯಕ್ಕೆ ಜೆಡಿಎಸ್‌ ಕೊಡುಗೆ ಏನು ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ನಲ್ಲಿದ್ದಾಗ ಹಣಕಾಸು ಸಚಿವರಾಗಿ ಏಳು ಬಾರಿ ಬಜೆಟ್‌ ಮಂಡಿಸಿದ್ರಿ, ಡಿಸಿಎಂ ಆಗಿದ್ರೀ. ಮೈಸೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

19 ರಂದು ದಾಖಲೆ ಸಲ್ಲಿಕೆ

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ಆರೋಪದ ತನಿಖೆಯ ಭಾಗವಾಗಿ ಕೆಲವು ದಾಖಲೆಗಳನ್ನು ಕೇಳಿದ್ದಾರೆ. ಆ.19ರ ಬೆಳಗ್ಗೆ 11.30ಕ್ಕೆ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಾಖಲೆಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್‌ ತಿಳಿಸಿದರು.

ತಾವೇ ತಪ್ಪು ಮಾಡಿ ಮೈಸೂರು ಜನರನ್ನು ಅನಗತ್ಯವಾಗಿ ಕೆಣಕಿದರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಉದಾಹರಣೆ. ಸತ್ಯ ಮೇವ ಜಯತೇ ಎನ್ನುವ ಮಾತು ಈಗ ನಿಜವಾಗಿದೆ. ಈಗಾಗಲೇ ರೋಹಿಣಿ ಸಿಂಧೂರಿಯನ್ನು ಸಸ್ಪೆಂಡ್‌ ಮಾಡಬೇಕಾಗಿತ್ತು. ಈಗಲಾದರೂ ತನಿಖೆ ಚುರುಕುಗೊಂಡಿರುವುದು ಸಂತೋಷ ಎಂದರು.

ಎಸಿಬಿ ರದ್ದುಗೊಳಿಸಿ ಲೋಕಾಯುಕ್ಕೆ ಮಾನ್ಯತೆ ನೀಡಿರುವ ನ್ಯಾಯಾಲಯದ ಆದೇಶ ಸ್ವಾಗತಿಸುತ್ತೇನೆ. ಲೋಕಾಯುಕ್ತಕ್ಕೆ ಕೇವಲ ಮಾನ್ಯತೆ ಕೊಟ್ಟಿರುವುದು ಪೂರ್ಣ ಸಮಾಧಾನ ತಂದಿಲ್ಲ. ಲೋಕಾಯುಕ್ತಕ್ಕೆ ಪರಿಣಾಮಕಾರಿ ಆಗಿರುವ ಅಧಿಕಾರಿಗಳನ್ನು ನೇಮಿಸುವ ಅಗತ್ಯವಿದೆ ಅಂತ ಶಾಸಕ ಸಾ.ರಾ. ಮಹೇಶ್‌ ತಿಳಿಸಿದ್ದಾರೆ.  
 

click me!