ತಮ್ಮ ನಾಯಕರ ವಿರುದ್ಧವೇ ಸಿಡಿದೆದ್ದ JDS ಶಾಸಕ: ಪಕ್ಷ ತೊರೆಯುವ ಪರೋಕ್ಷ ಎಚ್ಚರಿಕೆ

By Suvarna NewsFirst Published Jan 7, 2021, 2:26 PM IST
Highlights

ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ನೇತೃತ್ವದಲ್ಲಿ ಗುರುವಾರ ಕರೆದಿದ್ದ ಪಕ್ಷ ಸಂಘಟನಾ ಸಭೆಗೆ ಹೋಗುವ ಮುನ್ನ ಮಾತನಾಡಿದ ಗುಬ್ಬಿ ಶ್ರೀನಿವಾಸ್, ಜೆಡಿಎಸ್ ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು, (ಜ.07): ನನ್ನನ್ನ ಯಾವ ನಾಯಕರೂ ಬೆಳೆಸಿಲ್ಲ. ನಮ್ಮ ಅಪ್ಪ ನನ್ನನ್ನು ಬೆಳೆಸಿದ್ದಾರೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಸಹಿಸಲು ಆಗಲ್ಲ. ನನ್ನ ಅಪ್ಪನ ಮಾತೇ ನಾನು ಕೇಳಲ್ಲ. ಪ್ರೀತಿಯಿಂದ ಹೇಳಿದ್ರೆ ಕೇಳುತ್ತೇನೆ. ಆದ್ರೆ, ದೊಡ್ಡವರೇ ನನ್ನ ಬಗ್ಗೆ ಮಾತನಾಡಿದ್ರೆ ಸುಮ್ನೆ ಇರೋದಕ್ಕೆ ಸಾಧ್ಯನಾ? ಎಂದು ಜೆಡಿಎಸ್​ನ ರೆಬೆಲ್ ಶಾಸಕ ಗುಬ್ಬಿ ಶ್ರೀನಿವಾಸ್ ತಮ್ಮ ನಾಯಕರುಗಳ ವಿರುದ್ಧ ಸಿಡಿದೆದ್ದಿದ್ದಾರೆ. 

ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ನೇತೃತ್ವದಲ್ಲಿ ಗುರುವಾರ ಕರೆದಿದ್ದ ಪಕ್ಷ ಸಂಘಟನಾ ಸಭೆಗೆ ಹೋಗುವ ಮುನ್ನ ಮಾತನಾಡಿದ ಗುಬ್ಬಿ ಶ್ರೀನಿವಾಸ್,  ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಸಹಿಸಲು ಆಗಲ್ಲ. ನಾನು ಪಕ್ಷ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಬಹಿರಂಗವಾಗಿ ನಾಯಕರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಅವರೇ ನನ್ನ ಬಗ್ಗೆ ಮಾತನಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜೆಡಿಎಸ್, ಕಾಂಗ್ರೆಸ್ ಲೀಡರ್ಸ್ ಜಂಟಿ ಸುದ್ದಿಗೋಷ್ಠಿ: ಕುಮಾರಸ್ವಾಮಿಗೆ ಸೆಡ್ಡು ಹೊಡೆದ ನಾಯಕ

ದೇವೇಗೌಡರನ್ನು ಸೋಲಿಸಿದ್ರು, ಎಂ.ಟಿ. ಕೃಷ್ಣಪ್ಪನನ್ನು ಸೋಲಿಸಿದ್ರು ಎಂದು ಹೇಳುತ್ತಾರೆ. ಮನುಷ್ಯರಾದವರಿಗೆ ಬೇಜಾರು ಆಗುತ್ತೆ. ಆತ್ಮಸಾಕ್ಷಿ ಇದ್ದವರಿಗೆ ಖಂಡಿತ ಬೇಜಾರು ಆಗುತ್ತೆ. ಸತ್ಯ ಹೇಳೋದೆ ದೊಡ್ಡ ಸಮಸ್ಯೆ ಆಗಿದೆ ಎಂದು ಅಸಮಾಧಾನ ಹೊರಹಾಕಿದರು. 

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲವು ನಾಯಕರನ್ನು ಭೇಟಿ ಮಾಡಿದ್ದೆ. ನನಗೆ ಯಾರ ಮೇಲೂ ಪ್ರೀತಿ-ದ್ವೇಷ ಇಲ್ಲ. ಜೆಡಿಎಸ್​ನಲ್ಲಿ ನನ್ನ ಸ್ವಾಭಿಮಾನಕ್ಕೆ ಈವರೆಗೂ ಧಕ್ಕೆ ಆಗಿಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಆದರೆ ಸಹಿಸಲಾರೆ ಎಂದು ಪರೋಕ್ಷವಾಗಿ ಜೆಡಿಎಸ್ ತೊರೆಯುವುದಾಗಿ ಎಚ್ಚರಿಕೆ ನೀಡಿದರು. 

ಬ್ಯಾಂಕ್​ನಲ್ಲಿ ಲೋನ್ ಕೊಡಿಸುವ ವಿಚಾರಕ್ಕೆ ರಾಜಣ್ಣರ ಮನೆಗೆ ಹೋಗಿದ್ದೆ. ನಾನು ಯಾವ ಕಾಂಗ್ರೆಸ್ ಮುಖಂಡರ ಸಂಪರ್ಕದಲ್ಲೂ ಇಲ್ಲ. ಪ್ರೀತಿಯಿಂದ ಹೇಳಿದ್ರೆ ಮಾತು ಕೇಳುವೆ. ದಬ್ಬಾಳಿಕೆಯಿಂದ ಹೇಳಿದ್ರೆ ಕೇಳಲ್ಲ. ಅದು ನಮ್ಮ ಅಪ್ಪ ಹೇಳಿದರೂ ಅಷ್ಟೇ ಕೇಳಲ್ಲ ಎಂದು ಖಾರವಾಗಿ ಹೇಳಿದರು.

click me!