ಬಿಜೆಪಿ ಜತೆಗಿನ ಮೈತ್ರಿ ಬಳಿಕ ದಳಪತಿಗಳಿಗೆ ತಲೆಬಿಸಿ ಹೆಚ್ಚಾಯ್ತಾ?: ಹಾಸನದಲ್ಲಿ ಜೆಡಿಎಸ್‌ ಒಗ್ಗಟ್ಟು ಪ್ರದರ್ಶನ

Published : Nov 08, 2023, 05:10 AM IST
ಬಿಜೆಪಿ ಜತೆಗಿನ ಮೈತ್ರಿ ಬಳಿಕ ದಳಪತಿಗಳಿಗೆ ತಲೆಬಿಸಿ ಹೆಚ್ಚಾಯ್ತಾ?: ಹಾಸನದಲ್ಲಿ ಜೆಡಿಎಸ್‌ ಒಗ್ಗಟ್ಟು ಪ್ರದರ್ಶನ

ಸಾರಾಂಶ

ಹಾಸನಾಂಬ ದೇವಾಲಯದ ದರ್ಶನದ ಜತೆಗೆ ಎಲ್ಲರೂ ಒಗ್ಗೂಡಿ ಊಟ ಮಾಡುವ ನೆಪದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಜೆಡಿಎಸ್‌ನ ಎಲ್ಲಾ ಶಾಸಕರು ಒಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಪ್ರಯತ್ನ ನಡೆಸಲಾಗಿದೆ. ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಎರಡು ದಿನಗಳ ಕಾಲ ಒಗ್ಗಟ್ಟಿನ ಪ್ರದರ್ಶನ ಕೈಗೊಂಡಿದ್ದಾರೆ. ಮಂಗಳವಾರ ಕೆಲವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಬುಧವಾರ ಎಲ್ಲರೊಂದಿಗೆ ಸಭೆ ನಡೆಸಲು ಉದ್ದೇಶಿಸಲಾಗಿದೆ. 

ಹಾಸನ/ ಬೆಂಗಳೂರು(ನ.08): ಬಿಜೆಪಿ ಜತೆಗಿನ ಮೈತ್ರಿ ವಿಚಾರದಲ್ಲಿ ಅಪಸ್ವರ ಮತ್ತು ಕೆಲ ನಾಯಕರು ಕಾಂಗ್ರೆಸ್‌ ಜತೆ ಸಂರ್ಪಕದಲ್ಲಿರುವ ವದಂತಿ ದಳಪತಿಗಳಿಗೆ ತಲೆಬಿಸಿ ಉಂಟು ಮಾಡಿದ್ದು, ಎಲ್ಲರನ್ನೂ ಹಿಡಿತದಲ್ಲಿಟ್ಟುಕೊಳ್ಳಲು ಜೆಡಿಎಸ್‌ ವರಿಷ್ಠರು ಕಸರತ್ತು ಆರಂಭಿಸಿದ್ದಾರೆ.

ಈ ನಿಟ್ಟಿನಲ್ಲಿ ಹಾಸನಾಂಬ ದೇವಾಲಯದ ದರ್ಶನದ ಜತೆಗೆ ಎಲ್ಲರೂ ಒಗ್ಗೂಡಿ ಊಟ ಮಾಡುವ ನೆಪದಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಜೆಡಿಎಸ್‌ನ ಎಲ್ಲಾ ಶಾಸಕರು ಒಟ್ಟಾಗಿದ್ದೇವೆ ಎಂಬ ಸಂದೇಶ ಸಾರುವ ಪ್ರಯತ್ನ ನಡೆಸಲಾಗಿದೆ. ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಎರಡು ದಿನಗಳ ಕಾಲ ಒಗ್ಗಟ್ಟಿನ ಪ್ರದರ್ಶನ ಕೈಗೊಂಡಿದ್ದಾರೆ. ಮಂಗಳವಾರ ಕೆಲವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದ್ದು, ಬುಧವಾರ ಎಲ್ಲರೊಂದಿಗೆ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆಪರೇಷನ್ ಸುಳಿವು ನೀಡಿದ ಸಿಎಂ: ಜೆಡಿಎಸ್ ಭದ್ರಕೋಟೆಯಲ್ಲೇ ಡಿನ್ನರ್ ಮೀಟಿಂಗ್ !

ಒಟ್ಟು 19 ಶಾಸಕರ ಪೈಕಿ ಶರಣಗೌಡ ಕಂದಕೂರು ಒಬ್ಬರನ್ನು ಬಿಟ್ಟು ಇನ್ನುಳಿದ ಎಲ್ಲಾ ಶಾಸಕರು ಮಂಗಳವಾರ ಹಾಸನದ ರೆಸಾರ್ಟ್‌ವೊಂದರಲ್ಲಿ ಸೇರಿದ್ದಾರೆ. ದೇವದುರ್ಗ ಶಾಸಕಿ ಕರೆಮ್ಮ ಅವರು ಬುಧವಾರ ಬೆಳಗ್ಗೆ ಹಾಸನ ತಲುಪುವ ನಿರೀಕ್ಷೆಯಿದೆ. ಬಿಜೆಪಿ ಜತೆಗಿನ ಮೈತ್ರಿಗೆ ಶರಣಗೌಡ ಮತ್ತು ಕರೆಮ್ಮ ಸೇರಿದಂತೆ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಭೆಯು ಮಹತ್ವ ಪಡೆದುಕೊಂಡಿದ್ದು, ಕುಮಾರಸ್ವಾಮಿ ಅವರು ಭಿನ್ನಮತಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಮಂಗಳವಾರ ರಾತ್ರಿ ನಡೆದ ಭೋಜನಕೂಟದ ವೇಳೆ ಮಾತುಕತೆಯಲ್ಲಿ ಕುಮಾರಸ್ವಾಮಿ ಅವರು ಪ್ರತ್ಯೇಕವಾಗಿ ಶಾಸಕರ ಜತೆ ಚರ್ಚಿಸಿ ಅವರ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಯಾವುದಾದರೂ ಕರೆಗಳು ಬಂದಿವೆಯೇ, ಬಿಜೆಪಿ ಜತೆಗಿನ ಮೈತ್ರಿಗೆ ಸಮಸ್ಯೆ ಇದೆಯೇ ಎಂಬುದರ ಕುರಿತು ಮುಕ್ತವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಬುಧವಾರ ಎಲ್ಲರೊಂದಿಗೆ ಸಭೆ ನಡೆಸಿ ಶಾಸಕರಲ್ಲಿನ ಎಲ್ಲಾ ಅನುಮಾನಗಳಿಗೂ ತೆರೆ ಎಳೆಯಲಿದ್ದಾರೆ. ಇದಕ್ಕೂ ಮುನ್ನ ಎಲ್ಲಾ ಶಾಸಕರ ಜತೆ ಹಾಸನಾಂಬೆಯ ದರ್ಶನ ಪಡೆದುಕೊಳ್ಳಲಾಗುತ್ತದೆ. ಬಳಿಕ ಸಭೆ ನಡೆಸಿ, ಸುಧೀರ್ಘ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

ಈ ನಡುವೆ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್‌ನಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ತೋರಿಸಲು ಪಕ್ಷದ ಎಲ್ಲಾ ಶಾಸಕರು ವಿಶೇಷವಾಗಿ ಹಾಸನದಲ್ಲಿ ಸಭೆ ಸೇರಿ ಒಗ್ಗಟ್ಟು ಪ್ರದರ್ಶನ ಮಾಡಲಿದ್ದಾರೆ. ನಮ್ಮ ಪಕ್ಷದ ಶಾಸಕರ ಮೇಲೆ ಗದಾಪ್ರಹಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಶಾಸಕರು ಹಾಸನಾಂಬ ದರ್ಶನಕ್ಕೆ ಆಗಮಿಸಲಿದ್ದು, ಹಾಸನಾಂಬೆ ದೇವಿಯ ಪವಿತ್ರ ಕ್ಷೇತ್ರದಿಂದಲೇ ತಾವು ಒಗ್ಗಟ್ಟು ಪ್ರದರ್ಶನ ಮಾಡುವುದಾಗಿ ಹೇಳಿದರು.

ನಮ್ಮ ಶಾಸಕರು ಬೇರೆಯವರ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹ ಕೆಲದಿನಗಳಿಂದ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಒಗ್ಗಟ್ಟಿನ ಸಂದೇಶವನ್ನು ಈ ಸಭೆಯ ಮೂಲಕ ರಾಜ್ಯಕ್ಕೆ ನೀಡುತ್ತೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಗಳಿಲ್ಲ ಎಂಬುದನ್ನು ತೋರಿಸುತ್ತೇವೆ. ಸಭೆಯಲ್ಲಿ ರಾಜಕೀಯ ಬೆಳವಣಿಗೆಗಳ ವಿಚಾರವಷ್ಟೇ ಅಲ್ಲದೆ, ರಾಜ್ಯದ ಬರ ಪರಿಸ್ಥಿತಿ ಬಗ್ಗೆಯೂ ಚರ್ಚಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಸರ್ಕಾರಗಳಿಂದ ರಾಜ್ಯ ಸಾಲದ ಸುಳಿಗೆ: ಸಚಿವ ರಾಮಲಿಂಗಾರೆಡ್ಡಿ

ಇದೇ ವೇಳೆ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಪಕ್ಷದ ಕೋರ್‌ ಕಮಿತಿ ಸದಸ್ಯ ಬಂಡೆಪ್ಪ ಕಾಶೆಂಪುರ ಅವರು, ಜೆಡಿಎಸ್‌ನಲ್ಲಿ ಒಡಕು ಮೂಡಿದೆ. ಕೆಲವರು ಪಕ್ಷ ಬಿಟ್ಟು ಹೋಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಈ ಸಭೆಯ ಮೂಲಕ ಉತ್ತರ ನೀಡಲಿದ್ದೇವೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂಬ ಸ್ಪಷ್ಟ ಸಂದೇಶ ಈ ಸಭೆ ಮೂಲಕ ರವಾನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಸಂದೇಶ

ನಮ್ಮ ಶಾಸಕರು ಬೇರೆಯವರ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹವಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಒಟ್ಟು ಸೇರಿ ಒಗ್ಗಟ್ಟಿನ ಸಂದೇಶವನ್ನು ಈ ಸಭೆಯ ಮೂಲಕ ರಾಜ್ಯಕ್ಕೆ ನೀಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.  

ಒಗ್ಗಟ್ಟಿನ ಉತ್ತರ

ಜೆಡಿಎಸ್‌ನಲ್ಲಿ ಒಡಕಿದೆ, ಕೆಲವರು ಬಿಟ್ಟು ಹೋಗ್ತಾರೆ ಎಂದು ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಈ ಸಭೆ ಒಂದು ಉತ್ತರ. ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಈ ಸಭೆಯಿಂದ ಸಿಗಲಿದೆ ಎಂದು ಜೆಡಿಎಸ್‌ ಕೋರ್‌ ಕಮಿಟಿ ಸದಸ್ಯ ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!