ದತ್ತಾ ಜೆಡಿಎಸ್‌ ತೊರೆಯುತ್ತಾರಾ? ಮಂತ್ರಿಯಾಗ್ತಾರಾ? ಆಡಿಯೋ ವೈರಲ್

By Suvarna News  |  First Published May 12, 2022, 11:49 AM IST

* ನಾನು ಕಾಂಗ್ರೆಸ್ ಸೇರುತ್ತಿದ್ದೇನೆ
* ವೈ.ಎಸ್.ವಿ. ದತ್ತಾ ಮಾತಾನಾಡಿರೋ ಆಡಿಯೋ ವೈರಲ್
* ವೈ.ಎಸ್.ವಿ.ದತ್ತಾ, ಕಡೂರು ಕ್ಷೇತ್ರದ ಮಾಜಿ ಜೆಡಿಎಸ್ ಶಾಸಕ


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು, (ಮೇ.12):
ಮಾಜಿ ಪ್ರಧಾನಿ ದೇವೇಗೌಡರ ಮಾನಸಪುತ್ರ ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್ವಿ ದತ್ತಾ ಅವರು ಜೆಡಿಎಸ್‌ ಕಾರ್ಯಚಟುವಟಿಕೆಗಳಿಂದ ದೂರು ಉಳಿದಿದ್ದು, ಕಾಂಗ್ರೆಸ್‌ ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ದತ್ತಾ ಅವರ ಆಡಿಯೋ ಒಂದು ಫುಲ್ ವೈರಲ್ ಆಗುತ್ತಿದೆ. 

ನಾನು ಕಾಂಗ್ರೆಸ್ ಸೇರುತ್ತಿದ್ದೇನೆ, ಸಿದ್ರಾಮಣ್ಣ ಕರೀತಿದ್ದಾರೆ, ನಿಮಗೆ ಅನುಕೂಲ ಮಾಡಿಕೊಡ್ತೀವಿ, ಮಂತ್ರಿ ಮಾಡ್ತೀವಿ ಬನ್ನಿ ಅಂತ ಇದು ಮಾಜಿ ಪ್ರಧಾನಿ ದೇವೇಗೌಡರ ಮಾನಸಪುತ್ರ ವೈ ಎಸ್ ವಿ ದತ್ತಾ ಮಾತಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ. 

Latest Videos

undefined

ದತ್ತಾ ಆಡಿಯೋ ವೈರಲ್
ಹೌದು... ಮಾಜಿ ಪ್ರಧಾನಿ ದೇವೇಗೌಡರ ಮಾನಸಪುತ್ರ ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್ವಿ ದತ್ತಾ ಅವರು ಕಾಂಗ್ರೆಸ್ ಸೇರ್ಪಡೆಯಾಗುವುದು ಅಕ್ಷರಶಃ ನಿಜ ಎಂಬುದಕ್ಕೆ ದತ್ತಾ ಅವರು ಹಣಕಾಸು ವಿಚಾರದಲ್ಲಿ ತಮ್ಮ ಆತ್ಮೀಯರೊಂದಿಗೆ ಕಳೆದ ಫೆಬ್ರವರಿಯಲ್ಲಿ ನಡೆಸಿದ ಮೊಬೈಲ್ ಸಂಭಾಷಣೆಯೊಂದರಲ್ಲಿ ಸಷ್ಟನೆ ಸಿಕ್ಕಿದೆ. ಕಡೂರು ಕ್ಷೇತ್ರದಲ್ಲಿ ಈ ಹಿಂದೆ ಜೆಡಿಎಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ವೈಎಸ್ವಿ ದತ್ತಾ ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ, ಮಾಜಿ ಪ್ರಧಾನಿ ದೇವೇಗೌಡ ಅವರ ಮಾನಸ ಪುತ್ರ ಎಂದೇ ಬಿಂಬಿತರಾಗಿದ್ದಾರೆ.

ಕುಮಾರಸ್ವಾಮಿ ನಡೆಗೆ ದತ್ತಾ ಅಸಮಾಧಾನ, ಜೆಡಿಎಸ್‌ಗೆ ಗುಡ್‌ ಬೈ ಹೇಳ್ತಾರಾ ದೇವೇಗೌಡ್ರ ಮಾನಸ ಪುತ್ರ

ಇಂದಿಗೂ ಜೆಡಿಎಸ್ ಪಕ್ಷದಲ್ಲೇ ಗುರುತಿಸಿಕೊಂಡಿರುವ ಅವರು ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ನಗರದಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಇತ್ತೀಚೆಗೆ ವೈಎಸ್ವಿ ದತ್ತಾ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ವದಂತಿಗಳು ವ್ಯಾಪಕವಾಗಿ ಜಿಲ್ಲೆಯಲ್ಲಿ ಚರ್ಚೆಯಲ್ಲಿದ್ದು. ಈ ಸಂಬಂಧ ಮಾಧ್ಯಮದವರು ಹಲವು ಬಾರಿ ವೈಎಸ್ವಿ ಅವರಿಂದ ಸ್ಪಷ್ಟನೆ ಕೇಳಿದಾಗ ಅವರು ನಾಜೂಕಿನಿಂದಲೇ, ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದಿದ್ದರು. ವೈಎಸ್ವಿ ದತ್ತ ಕಾಂಗ್ರೆಸ್ ಸೇರ್ಪಡೆ ವಿಚಾರ ವ್ಯಾಪಕ ಚರ್ಚೆಯಲ್ಲಿರುವ ಮಧ್ಯೆಯೇ ಅವರು ಕಳೆದ ಫೆಬ್ರವರಿ, 2022ರಂದು ತಮ್ಮ ಆತ್ಮೀಯರೊಂದಿಗೆ ಮೊಬೈಲ್ನಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ಮಾತನಾಡಿದ್ದು, ಈ ಹಳೆಯ ಆಡಿಯೊ ಸಂಭಾಷಣೆಯ ತುಣುಕು ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹಣಕಾಸಿನ ವ್ಯವಹಾರದ ವೇಳೆಯಲ್ಲಿ ಕಾಂಗ್ರೆಸ್‌ ಸೇರುವ ಹೇಳಿಕೆ
ವೈಎಸ್ವಿ ದತ್ತಾ ಅವರು ವ್ಯಕ್ತಿಯೊಬ್ಬರಿಂದ ಹಣಕಾಸಿನ ನೆರವು ಪಡೆದಿದ್ದು, ಹಣ ನೀಡಿದ್ದ ವ್ಯಕ್ತಿ ವೈಎಸ್ವಿ ದತ್ತ ಅವರಿಗೆ ಕರೆ ಮಾಡಿ ಹಣದ ತುರ್ತು ಇರುವ ಬಗ್ಗೆ ಕೇಳಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೈಎಸ್ವಿ ದತ್ತಾ ಅವರು ಹಣ ನೀಡಿದ್ದ ವ್ಯಕ್ತಿಗೆ ಚೆಕ್ ನೀಡಿ, ಆ ಚೆಕ್ ಅನ್ನು ಮಾರ್ಚ್ 15ಕ್ಕೆ ಕಲೆಕ್ಷನ್‌ಗೆ ಹಾಕುವಂತೆ ವಿನಂತಿಸಿದ್ದಾರೆ. ಈ ವೇಳೆ ಅವರು, ನಾನು ಮುಂದಿನ ತಿಂಗಳು ಕಾಂಗ್ರೆಸ್ ಸೇರುತ್ತಿದ್ದೇನೆ. ಸಿದ್ದರಾಮಯ್ಯ ಕರೆದಿದ್ದಾರೆ. ಮಂತ್ರಿಯಾಗುವ ಯೋಗ್ಯತೆ ಸಹ ಇದೆ. ಮಂತ್ರಿ ಆದ ಮೇಲೆ ಅನುಕೂಲ ಆಗುತ್ತೆ ಎಂದು ವೈಎಸ್ವಿ ದತ್ತಾ ಅವರು ಹಣ ನೀಡಿದ್ದ ವ್ಯಕ್ತಿಗೆ ಹೇಳುವ ಮಾತುಗಳು ಆಡಿಯೋ ಸಂಭಾಷಣೆಯಲ್ಲಿದೆ. 

ವೈಎಸ್ವಿ ದತ್ತಾ ಹಾಗೂ ಹಣ ನೀಡಿದ್ದ ವ್ಯಕ್ತಿ ನಡುವೆ ನಡೆದ ಮೊಬೈಲ್ ಸಂಭಾಷಣೆಯ ತುಣುಕು ಕಳೆದ ಫೆಬ್ರವರಿ ತಿಂಗಳಿನದ್ದಾಗಿದ್ದು, ಈ ಆಡಿಯೋ ತುಣುಕು ಈಗ ಏಕೆ ವೈರಲ್ ಆಗುತ್ತಿದೆ ಎಂಬುದು ತಿಳಿದಿಲ್ಲವಾದರೂ ವೈಎಸ್ವಿ ದತ್ತಾ ಅವರು ಕಾಂಗ್ರೆಸ್ ಸೇರುವುದು ಖಚಿತ ಎಂಬುದು ಈ ಆಡಿಯೊ ತುಣುಕಿನಿಂದ ಸ್ಪಷ್ಟವಾಗುತ್ತಿದೆ.ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿದ ದತ್ತಾ ಆಡಿಯೋದಲ್ಲಿರುವುದು ನನ್ನದೇ ಧ್ವನಿ. ಆತ್ಮೀಯರೊಂದಿಗೆ ಮಾತನಾಡುತ್ತಿದ್ದ ವೇಳೆ ಕ್ಷೇತ್ರದ ಜನರ ಅಭಿಪ್ರಾಯವನ್ನು ಅವರ ಬಳಿ ಹೇಳಿದ್ದೇನೆ ಅಷ್ಟೆ, ನಾನು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ. ನಾನು ಕಾಂಗ್ರೆಸ್ ಸೇರಿದಲ್ಲಿ ಗೆಲುವು ಸಾಧಿಸುವುದು ಸುಲಭ ಎಂದು ಜನರು ಅಭಿಪ್ರಾಯಿಸುತ್ತಿದ್ದಾರೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆಂದು ಅವರ ಬಳಿ ಹೇಳಿದ್ದೇನೆ. ನಾನಿನ್ನೂ ಜೆಡಿಎಸ್‌ನಲ್ಲೇ ಇದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. 

ಆಡಿಯೋದಲ್ಲಿ  ಏನಿದೆ?
ದತ್ತಾ : ಹಲೋ
ವ್ಯಕ್ತಿ; ಅಣ್ಣ ನಮಸ್ಕಾರ
ದತ್ತಾ : ಅದೇನೆ ನಾನು ಚೆಕ್ ಕೊಟ್ಟಿದ್ದೇನಲ್ಲಾ ಅದನ್ನು ಕಲೆಕ್ಷನ್ಗೆ ಹಾಕಿಕೊಳ್ಳಿ, ಅದಕ್ಕೆ ಮೂರು ತಿಂಗಳು ಟೈಂ ಇದೆ. ಒಂದು ತಿಂಗಳು ಬಿಟ್ಟು ಹಾಕಿಕೊಳ್ಳಿ, ಯಾಕೆಂದ್ರೆ ನಾನು ಕಾಂಗ್ರೆಸ್ ಪಾರ್ಟಿ ಸೇರುತ್ತಿದ್ದೇನೆ 'ನೆಕ್ಸ್ಟ್ ಮಂತ್', ಅಲ್ಲಿಂದ ನನ್ನದೆಲ್ಲ ವ್ಯವಸ್ಥೆ ಆಗುತ್ತಿದೆ. ಹಾಗಾಗಿ, ದಯವಿಟ್ಟು ನೀವು ಊರು ಮನೆಯವರು ಆಗಿರುವುದರಿಂದ ರಿಕ್ವೆಸ್ಟ್ ಮಾಡುತ್ತಿದ್ದೇನೆ, ಚೆಕ್ ಅನ್ನು 'ನೆಕ್ಸ್ಟ್ಮಂತ್' ಹಾಕಿಕೊಳ್ಳಿಪ್ಪಾ.
ವ್ಯಕ್ತಿ: ಏ ಹೌದಣ್ಣಾ, ಅರ್ಜೆಂಟ್ ಇತ್ತು ಯಾರಿಗೋ ಮಾತು ಕೊಟ್ಟಿದ್ದೆವು ಇಲ್ಲಿ
ದತ್ತಾ: ನೋಡಣ್ಣಾ ನೀನು ಊರು ಮನೆಯವನಾಗಿ, ನಾಳೆ ಬರೆದಿಟ್ಟುಕೋ ನನ್ಮಗಂದು ಮಂತ್ರಿಯಾಗಿಲ್ಲ ಅಂದ್ರೆ ಹೆಸರು ದತ್ತ ಅಲ್ಲ. ಮಂತ್ರಿಯಾಗುವ ಶಕ್ತಿ ದೇವರು ಕೊಟ್ಟಿದ್ದಾನೆ, ನಿಮಗೆಲ್ಲ ಅನುಕೂಲ ಆಗುತ್ತೆ. ನಿಮ್ಮ ದೊಡ್ಡವರು ಶ್ರೀಮಂತರು, ನೀವು ಅವರ ಜೊತೆ ಕೆಲಸ ಮಾಡುತ್ತಿದ್ದೀರಾ 'ನೆಕ್ಸ್ಟ್ ಮಂತ್ 'ಹಾಕಿಕೊಳ್ಳಿ, 15ನೇ ತಾರೀಖು ಕ್ಲೋಸ್ ಮಾಡ್ಕೊ ಪ್ಲೀಸ್.
ವ್ಯಕ್ತಿ: 15ರಂದು ಮಿಸ್ ಮಾಡ್ಬೇಡಿ ಅಣ್ಣ, ನಾನು 'ಕನ್ವಿನ್ಸ್' ಮಾಡುತ್ತೇನೆ.
ದತ್ತಾ: ಮಾರ್ಚ್ 15
ವ್ಯಕ್ತಿ: ಅಣ್ಣ ಈಗ ಕಾಂಗ್ರಸ್ ಸೇರುತ್ತಿದ್ದಿರಾ
ದತ್ತಾ: ಕರೆಯುತ್ತಿದ್ದಾರೆ ಸಿದ್ದರಾಮಣ್ಣ, ನಿನಗೆ ಎಲ್ಲ ಅನುಕೂಲ ಮಾಡಿಕೊಡುತ್ತೇವೆ, ಮಂತ್ರಿ ಮಾಡ್ತೀವಿ ಬನ್ನಿ ಅಂತ, ತೀರ್ಮಾನ ಮಾಡ್ತೀನಿ, ನಿಮಗೆ ಹೇಳುತ್ತೇನೆ.
ವ್ಯಕ್ತಿ: ಸರಿ ಅಣ್ಣ, ಆಯ್ತು ಅಣ್ಣ
ದತ್ತಾ: ಮಾರ್ಚ್ 15ಕ್ಕೆ ಹಾಕಣ್ಣ
ವ್ಯಕ್ತಿ: ಸರಿ ಅಣ್ಣ, ನಿಮಗೆ ಫೋನ್ ಮಾಡಿ 15ರಂದು ಬೆಳಿಗ್ಗೆ ಹಾಕುತ್ತೇನೆ ಅಣ್ಣ
ದತ್ತಾ: ಮಾರ್ಚ್ 15
ವ್ಯಕ್ತಿ: ಆಯ್ತು ಅಣ್ಣ.

click me!