ಮೇಕೆದಾಟು ಯೋಜನೆಯ ಡಿಪಿಆರ್‌ ತಂದಿದ್ದು ಎಚ್ಡಿಕೆ: ನಿಖಿಲ್‌ ಕುಮಾರಸ್ವಾಮಿ

By Govindaraj S  |  First Published Apr 27, 2022, 11:11 PM IST

ಅವರದ್ದೇ ಸರ್ಕಾರ ಇದ್ದಾಗ ಮೇಕೆದಾಟು ಅನುಷ್ಟಾನಗೊಳಿಸದ ಕಾಂಗ್ರೆಸ್‌ ಈಗ ಚುನಾವಣಾ ಸಂದರ್ಭದಲ್ಲಿ ಪಾದಯಾತ್ರೆ ಹೆಸರಿನ ರಾಜಕಾರಣ ಮಾಡುತ್ತಿದೆ. ಇದೇ ಮೇಕೆದಾಟು ಯೋಜನೆಯ ಡಿಪಿಆರ್‌ ತಂದಿದ್ದು ಎಚ್‌.ಡಿ.ಕುಮಾರಸ್ವಾಮಿ ಅನ್ನೋದು ಮರೆತಿದ್ದಾರೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದರು.


ಗುಬ್ಬಿ (ಏ.27): ಅವರದ್ದೇ ಸರ್ಕಾರ ಇದ್ದಾಗ ಮೇಕೆದಾಟು (Mekedatu) ಅನುಷ್ಟಾನಗೊಳಿಸದ ಕಾಂಗ್ರೆಸ್‌ (Congress) ಈಗ ಚುನಾವಣಾ ಸಂದರ್ಭದಲ್ಲಿ ಪಾದಯಾತ್ರೆ ಹೆಸರಿನ ರಾಜಕಾರಣ ಮಾಡುತ್ತಿದೆ. ಇದೇ ಮೇಕೆದಾಟು ಯೋಜನೆಯ ಡಿಪಿಆರ್‌ ತಂದಿದ್ದು ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅನ್ನೋದು ಮರೆತಿದ್ದಾರೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದರು. ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಜೆಡಿಎಸ್‌ ಘಟಕ ಆಯೋಜಿಸಿದ್ದ ಜನತಾ ಜಲಧಾರೆ ಯೋಜನೆಯ ರಥಕ್ಕೆ ಸ್ವಾಗತದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಸಂಪೂರ್ಣ ಬಹುಮತ ಕೊಟ್ಟಲ್ಲಿ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿ 25 ಸಾವಿರ ಕೋಟಿ ರು. ಗಳ ರೈತರ ಸಾಲ ಮನ್ನಾ ಮಾಡಿದ ಕುಮಾರಸ್ವಾಮಿಗೆ ಕೇವಲ 37 ಸ್ಥಾನ ಸಿಕ್ಕಿತ್ತು. ಆದರೆ ನುಡಿದಂತೆ ನಡೆದು, ಮಾತು ಉಳಿಸಿಕೊಂಡ ಜೆಡಿಎಸ್‌ ಮತ್ತೇ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ಪಿಎಸೈ ಹುದ್ದೆಗಳ ಮಾರಾಟ ಮಾಡಿದ ಭ್ರಷ್ಟಬಿಜೆಪಿ ಸರ್ಕಾರಕ್ಕೆ ಮಾರಾಟ ದಂಧೆಗೆ ಸಾಥ್‌ ನೀಡಿದ ಕಾಂಗ್ರೆಸ್‌ ಜನರಿಂದ ತಿರಸ್ಕಾರಗೊಳ್ಳಲಿದೆ. ಹಲಾಲ್‌, ಝಟ್ಕಾ ಕಟ್‌ ಎಂದು ಕೋಮು ಗಲಭೆಗೆ ಮುಂದಾದ ಬಿಜೆಪಿ ಈಗ ಚಿನ್ನ ಖರೀದಿ ಬಗ್ಗೆ ಸಲ್ಲದ ವಿವಾದ ಸೃಷ್ಟಿಸುತ್ತಿದೆ. 

Tap to resize

Latest Videos

ಕರಗ ಮಹೋತ್ಸವ: ನಿಖಿಲ್‌ಗೆ ಗರ್ಭಗುಡಿ ಪ್ರವೇಶ ನಿಷೇಧ, ನೆಟ್ಟಿಗರ ಆಕ್ರೋಶ

ಆದರೆ ಚಿನ್ನ ನಮಗೆ ಬರುವುದೇ ಮುಸ್ಲಿಂ ದೇಶದಿಂದ ಎಂಬ ಪರಿಜ್ಞಾನವಿಲ್ಲ ಎಂದು ಛೇಡಿಸಿದ ಅವರು ಕಮಿಷನ್‌ ವ್ಯವಹಾರ ಈಗ ಶೇ.10ರಷ್ಟುರಿಯಾಯತಿ ಮಾಡಿದೆ ಎನ್ನುವ ಸುದ್ದಿ ನೋಡಿ ಆಶ್ಚರ್ಯ ಉಂಟಾಯಿತು ಎಂದು ಲೇವಡಿ ಮಾಡಿದರು. ಜೆಡಿಎಸ್‌ ಮುಖಂಡ ಬಿ.ಎಸ್‌.ನಾಗರಾಜು ಮಾತನಾಡಿ, ಕಳೆದ 25 ವರ್ಷದಿಂದ ಜೆಡಿಎಸ್‌ ಕಟ್ಟಿಬೆಳೆಸಿದ ನಿಷ್ಟಾವಂತ ಕಾರ್ಯಕರ್ತರು ಇಂದು ಪಕ್ಷದಲ್ಲೇ ಇದ್ದಾರೆ. ಅವರ ಪರಿಶ್ರಮದಿಂದ ಮತ್ತೇ ಜೆಡಿಎಸ್‌ ಗೆಲ್ಲುವ ವಿಶ್ವಾಸವಿದೆ. ಅಭ್ಯರ್ಥಿಯಾಗಿ ನನ್ನ ಕಳುಹಿಸಿದ ಪಕ್ಷವನ್ನು ಬಲಿಷ್ಟಗೊಳಿಸಿ ಮನೆ ಮಗನಾಗಿ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಜೆಡಿಎಸ್‌ಗೆ ಮತ ನೀಡಿ ನನ್ನನ್ನು ಆಶೀರ್ವಾದಿಸಿ ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಆರ್‌.ಸಿ.ಆಂಜಿನಪ್ಪ ಮಾತನಾಡಿದರು. ವೇದಿಕೆಗೆ ಮುನ್ನ ಜಲಧಾರೆ ಯಾತ್ರೆಯ ರಥವನ್ನು ದೊಣೆಗಂಗಾ ಕ್ಷೇತ್ರದಿಂದ ದೊಡ್ಡಗುಣಿ, ನಿಟ್ಟೂರಿಗೆ ತಲುಪಿ ಅಲ್ಲಿ ಬೈಕ್‌ ಮೆರವಣಿಗೆ ಮೂಲಕ ಗುಬ್ಬಿ ಪಟ್ಟಣ ಪ್ರವೇಶ ಮಾಡಲಾಯಿತು. ನಂತರ ಪೂರ್ಣ ಕುಂಭ ಮೆರವಣಿಗೆ ಹಾಗೂ ನಿಖಿಲ್‌ ಕುಮಾರಸ್ವಾಮಿ ಅವರನ್ನು ರೋಡ್‌ ಶೋ ಮೂಲಕ ವೇದಿಕೆಗೆ ಕರೆ ತರಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಆರ್‌.ದೇವರಾಜು, ಗಂಗಣ್ಣ, ಬೆಳ್ಳಿ ಲೋಕೇಶ್‌, ಕರಿಯಪ್ಪ, ಕಳ್ಳಿಪಾಳ್ಯ ಲೋಕೇಶ್‌, ಸುರೇಶ್‌ ಗೌಡ, ಶಿವಣ್ಣ, ಚಿಕ್ಕಿರಯ್ಯ, ಗಾಯತ್ರಿದೇವಿ, ಎಚ್‌.ಡಿ.ಯಲ್ಲಪ್ಪ ಇತರರು ಇದ್ದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ನೀರಾವರಿ ಸೌಲಭ್ಯ: ನಿಖಿಲ್‌ ಕುಮಾರಸ್ವಾಮಿ

ಯುವ ಶಕ್ತಿಯನ್ನು ಕಡೆಗಣಿಸಿದ ಬಿಜೆಪಿ: ಸುಳ್ಳು ಆಶ್ವಾಸನೆಗೆ ಬೇಸತ್ತ ಜನ ಜೆಡಿಎಸ್‌ ಸರ್ಕಾರ ಅಪೇಕ್ಷಿಸಿದ್ದಾರೆ. ದೇವೇಗೌಡರ ನೀರಾವರಿ ಬಗ್ಗೆಯ ದೂರ ಪರಿಕಲ್ಪನೆ ಇಂದು ಜಲಧಾರೆ ಮೂಲಕ ಸಾಕಾರಗೊಳ್ಳಲಿದೆ. ಉದ್ಯೋಗ ನೀಡುವ ಸುಳ್ಳು ಆಶ್ವಾಸನೆ ನೀಡಿದ ಬಿಜೆಪಿ ಇಂದು ಯುವ ಶಕ್ತಿಯನ್ನು ಕಡೆಗಣಿಸಿದೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು. ಪ್ರಾದೇಶಿಕ ಪಕ್ಷದ ಅಗತ್ಯತೆ ಈಗ ಜನರಿಗೆ ಮನದಟ್ಟಾಗಿದೆ. ಗುಬ್ಬಿ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದ ಜೆಡಿಎಸ್‌ ಪಕ್ಷದ ಬಗ್ಗೆ ಮಾತೃ ಭಾವನೆ ತಾಳಬೇಕಿತ್ತು. ಇಂದಿಗೂ ಜೆಡಿಎಸ್‌ ತೊರೆದಿಲ್ಲ ಎನ್ನುವ ಗುಬ್ಬಿ ಶಾಸಕರು ಯಾವ ಪಕ್ಷದಲ್ಲಿದ್ದಾರೆ ಎಂಬುದೇ ಗೊಂದಲ. ಬೆಳೆದ ಪಕ್ಷಕ್ಕೆ ಗೌರವ ನೀಡದೆ ಚೂರಿ ಹಾಕುವ ಕೆಲಸ ಮಾಡಬಾರದಿತ್ತು. ಪಕ್ಷ ಸಂಘಟನೆಗೆ ಮಾತ್ರ ಗಮನ ಹರಿಸಿ. ನಮ್ಮ ಅಭ್ಯರ್ಥಿ ನಾಗರಾಜು ಗೆಲುವಿಗೆ ಕಾರ್ಯಕರ್ತರು ಬಲಿಷ್ಠತೆ ಪ್ರದರ್ಶಿಸಿ ಎಂದು ಕರೆ ನೀಡಿದರು.

click me!