
ಬೆಂಗಳೂರು (ಮೇ.30): ಜೆಡಿಎಸ್ ಬೆಂಬಲದೊಂದಿಗೆ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರು ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಭಾನುವಾರ ಸದಾಶಿವನಗರದ ಶಿವಕುಮಾರ್ ನಿವಾಸದಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದು, ಶಿವಕುಮಾರ್ ಅವರು ರಾಜ್ಯಸಭೆ ಚುನಾವಣೆ ಬಗ್ಗೆ ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡಲಿದೆ. ಹೈಕಮಾಂಡ್ ಸೂಚನೆ ನೀಡಿದರೆ ಬೆಂಬಲಿಸುವುದಾಗಿ ಹೇಳಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುಪೇಂದ್ರರೆಡ್ಡಿ ಅವರು ಕಾಂಗ್ರೆಸ್ ಪಕ್ಷವು ಒಂದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ತನ್ನ ಅಭ್ಯರ್ಥಿಯ ಗೆಲುವಿನ ಬಳಿಕ ಉಳಿದ ಹೆಚ್ಚುವರಿ ಮತಗಳನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ. ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಮತ ನೀಡಲು ಸಾಧ್ಯವಾಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿಯೂ ಕುಪೇಂದ್ರರೆಡ್ಡಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಶಿವಕುಮಾರ್ ಅವರು, ‘ಪಕ್ಷದ ನಾಯಕರು ಹಾಗೂ ಹೈಕಮಾಂಡ್ ಜತೆ ಚರ್ಚಿಸಿ ಪಕ್ಷದ ನಿರ್ಧಾರ ಪ್ರಕಟಿಸಲಾಗುವುದು. ಯಾವುದೇ ಖಚಿತ ಭರವಸೆಯನ್ನು ಈ ಕ್ಷಣದಲ್ಲೇ ನೀಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.
Rajya Sabha Election: ಸಿದ್ದು, ಡಿಕೆಶಿ ಭೇಟಿಯಾದ ಜೈರಾಂ: 30ಕ್ಕೆ ನಾಮಪತ್ರ?
ರಾಜ್ಯಸಭೆಗೆ ಕುಪೇಂದ್ರ ಜೆಡಿಎಸ್ ಅಭ್ಯರ್ಥಿ?: ವಿಧಾನಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಸಜ್ಜಾಗುತ್ತಿದ್ದು, ಅವಶ್ಯ ಮತಗಳ ಕೊರತೆಯ ನಡುವೆಯೂ ಕುಪೇಂದ್ರ ರೆಡ್ಡಿ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಶನಿವಾರ ದೇವೇಗೌಡ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕೆಲವು ಮುಖಂಡರು ಸಮಾಲೋಚನೆ ನಡೆಸಿದ್ದು, ಕುಪೇಂದ್ರ ರೆಡ್ಡಿಗೆ ಟಿಕೆಟ್ ನೀಡುವತ್ತ ಹೆಚ್ಚಿನ ಒಲವು ವ್ಯಕ್ತವಾಗಿದೆ. ಆದರೆ, ಇದಕ್ಕೆ ಅಂತಿಮ ಮುದ್ರೆ ಬೀಳುವುದು ಮಾತ್ರ ಬಾಕಿ ಇದೆ. ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಅಥವಾ ಮಂಗಳವಾರ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ವಿಧಾನಪರಿಷತ್‌ನ ಹಾಲಿ ಸದಸ್ಯ ಬಿ.ಎಂ.ಫಾರೂಕ್ ಅವರು ಸಹ ರಾಜ್ಯಸಭೆಗೆ ಆಕಾಂಕ್ಷಿಯಾಗಿದ್ದರು. ಫಾರೂಕ್ ಅವಧಿ ಇನ್ನೂ ಎರಡು ವರ್ಷಗಳ ಕಾಲ ಇದೆ. ಒಂದು ವೇಳೆ ಫಾರೂಕ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಆ ಸ್ಥಾನವು ಪಕ್ಷದಿಂದ ಕೈ ತಪ್ಪುವ ಸಾಧ್ಯತೆ ಇದೆ. ಈ ಬಗ್ಗೆ ಲೆಕ್ಕಾಚಾರ ಹಾಕಿದ ದೇವೇಗೌಡ ಅವರು ಫಾರೂಕ್ ಅವರ ಮನವೊಲಿಕೆ ಮಾಡಿದ್ದಾರೆ. ಮುಂದಿನ ದಿನದಲ್ಲಿ ಒಳ್ಳೆಯ ಅವಕಾಶಗಳು ಲಭಿಸಲಿದೆ. ರಾಜ್ಯಸಭೆಗೆ ಬೇಡ ಎಂದು ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.
Congress ಗೆ ಮುಖ್ಯಮಂತ್ರಿ ಚಂದ್ರು ರಾಜೀನಾಮೆ
ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡರೂ ಅಗತ್ಯ ಮತಗಳು ಇಲ್ಲ. ಆಡಳಿತಾರೂಢ ಬಿಜೆಪಿ ಎರಡು ಮತ್ತು ಪ್ರತಿಪಕ್ಷ ಕಾಂಗ್ರೆಸ್ ಒಂದು ಸ್ಥಾನ ಸುಲಭವಾಗಿ ಗೆಲುವು ಸಾಧಿಸಲಿದೆ. ನಾಲ್ಕನೇ ಸ್ಥಾನಕ್ಕೆ ಈಗ ಸೆಣಸಾಟ ಶುರುವಾಗಿದೆ. ವಿಧಾನಸಭೆಯಲ್ಲಿ ಜೆಡಿಎಸ್ 32 ಮತಗಳನ್ನು ಹೊಂದಿದೆ. ಒಟ್ಟು 46 ಮತಗಳ ಅಗತ್ಯ ಇದೆ. ಇನ್ನು 14 ಮತಗಳ ಕೊರತೆ ಇದ್ದು, ಕುಪೇಂದ್ರ ರೆಡ್ಡಿ ಅವರು ತಮ್ಮ ಶಕ್ತಿಗನುಗುಣವಾಗಿ ಹೆಚ್ಚುವರಿ ಮತಗಳನ್ನು ಗಳಿಸಿಕೊಳ್ಳಬೇಕಾಗಿದೆ. ಕಾಂಗ್ರೆಸ್‌ನ ಹೆಚ್ಚುವರಿ ಮತಗಳನ್ನು ಪಡೆಯಲು ದೇವೇಗೌಡ ಅವರು ಆಸಕ್ತಿ ತೋರಿದ್ದಾರೆ. ಆದರೆ, ರಾಜ್ಯ ಕಾಂಗ್ರೆಸ್ಸಿಗರಿಗೆ ಜೆಡಿಎಸ್‌ಗೆ ಮತ ನೀಡಲು ಮನಸ್ಸಿಲ್ಲ. ಇನ್ನು ಆಡಳಿತಾರೂಢ ಬಿಜೆಪಿಯ ಹೆಚ್ಚುವರಿ ಮತಗಳನ್ನು ಪಡೆದುಕೊಂಡರೆ ವಿಧಾನಸಭೆ ಚುನಾವಣೆ ವೇಳೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಬೀಳುವ ಸಾಧ್ಯತೆ ಇದೆ ಎಂಬ ಅಂಶಗಳ ಕುರಿತು ಚರ್ಚಿಸಲಾಗಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.