Karnataka Politics: ವಿಹಿಂಪ, ಬಜರಂಗದಳದವರು ಕಿಡಿಗೇಡಿಗಳು: ಎಚ್‌ಡಿಕೆ ಗರಂ

By Kannadaprabha News  |  First Published Apr 1, 2022, 4:02 PM IST

ವಿಶ್ವ ಹಿಂದೂ ಪರಿಷತ್‌, ಬಜರಂಗದಳದವರು ಕಿಡಿಗೇಡಿಗಳು, ಸಮಾಜಘಾತುಕರ ರೀತಿಯಂತೆ ಆಡುತ್ತಿದ್ದು, ಅವರಿಗೆ ರೈತರ ಬದುಕು ಗೊತ್ತಿದೆಯಾ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹಿಂದೂಪರ ಸಂಘಟನೆಗಳ ವಿರುದ್ಧ ಕೆಂಡಕಾರಿದರು.


ಚನ್ನಪಟ್ಟಣ (ಏ.01): ವಿಶ್ವ ಹಿಂದೂ ಪರಿಷತ್‌ (VHP), ಬಜರಂಗದಳದವರು (Bajrang Dal) ಕಿಡಿಗೇಡಿಗಳು, ಸಮಾಜಘಾತುಕರ ರೀತಿಯಂತೆ ಆಡುತ್ತಿದ್ದು, ಅವರಿಗೆ ರೈತರ ಬದುಕು ಗೊತ್ತಿದೆಯಾ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಹಿಂದೂಪರ ಸಂಘಟನೆಗಳ ವಿರುದ್ಧ ಕೆಂಡಕಾರಿದರು.

ತಾಲೂಕಿನ ಚಕ್ಕೆರೆ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು (BJP) ಹಲಾಲ್‌ ಕಟ್‌, ಜಟ್ಕಾಕಟ್‌ ಎಂಬ ಹೆಸರಿನಲ್ಲಿ ರಾಜಕೀಯ ಮಾತನಾಡಲು ಹೊರಟಿದ್ದಾರೆ. ಇದನ್ನು ಪ್ರಶ್ನಿಸಿದರೆ ಎಲ್ಲಿ ಮತ ಕಳೆದುಕೊಳ್ಳುತ್ತೇವೋ ಎಂಬ ಭೀತಿ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದೆ. ನನಗೆ ವೋಟ್‌ ಬ್ಯಾಂಕ್‌ (Vote Bank) ರಾಜಕೀಯಕ್ಕಿಂತ ಜನರ, ಈ ನಾಡಿನ ಹಿತ ಮುಖ್ಯ, ನಮ್ಮ ರಾಜ್ಯದಲ್ಲಿ ಶಾಂತಿಕದಡುವ ಶಕ್ತಿಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Tap to resize

Latest Videos

ಮಾಂಸ ಕ್ಲೀನ್‌ ಮಾಡೋರು ಯಾರು?: ನಮ್ಮ ರೈತರು ಕಟ್‌ ಮಾಡುವ ಮಾಂಸ ಕ್ಲೀನ್‌ ಮಾಡಲು ಯಾವ ಸಮುದಾಯವನ್ನು ನೆಚ್ಚೆಕೊಳ್ಳಬೇಕಿದೆಯಲ್ಲದೇ ಆ ಸಮಾಜದವರೇ ಬರಬೇಕು. ಈಗ ಹಲಾಲ್‌, ಜಟ್ಕಾ ಕಟ್‌ ಎಂಬ ಹೆಸರಿಟ್ಟುಕೊಂಡು ರಾಜ್ಯದಲ್ಲಿ ಕೋಮು ದ್ವೇಷದ ಬೀಜ ಬಿತ್ತಿ ರಾಜಕೀಯ ಮಾಡಲು ಹೊರಟಿದ್ದಾರೆ. ನಿಮ್ಮ ಜಟ್ಕಾ ಮಾಡೋಕು, ಇನ್ನೊಂದು ಮಾಡೋಕು ಆ ಸಮುದಾಯದವರೇ ಬೇಕು. ಅಲ್ಲದೇ ರೈತರು ಬೆಳೆದ ರೇಷ್ಮೆ, ಮಾವು ಬೆಳೆ ಮಾರಾಟಕ್ಕೆ ಈ ಪೋಲಿಗಳು ಬರುತ್ತಾರಾ ಎಂದು ಹಿಂದೂಪರ ಸಂಘಟನೆಗಳ ವಿರುದ್ಧ ಕಿಡಿಕಾರಿದರು.

'ಕುಮಾರಸ್ವಾಮಿಯವರಿಗೆ ಒಂದೆರಡಲ್ಲ, ಮೂರು-ಮೂರು ಕಡೆ ಗಂಡಸ್ತನ ತೋರಿಸುವುದು ಗೊತ್ತು'

ಅಕಾಲಿಕ ಮಳೆಯಿಂದಾಗಿ ದ್ರಾಕ್ಷಿ ಬೆಳೆ, ಮಾವು ನಷ್ಟವಾಗಿದೆ. ಅದನ್ನ ಖರೀದಿ ಮಾಡಲು ಆ ಸಮಾಜದವರೇ ಬರಬೇಕು. ಇವ್ಯಾವೋ ವಿಶ್ವ ಹಿಂದೂ ಪರಿಷತ್‌ನವರು ಬಜರಂಗದಳದವರು, ಇವರ ಹೊಟ್ಟೆಪಾಡಿಗೆ, ದೇಶ ಹಾಳು ಮಾಡೋಕೆ ಇಂತಹ ವಿಚಾರ ಇಟ್ಟುಕೊಂಡು ಬಂದಿದ್ದಾರೆ. ಇದಕ್ಕೆಲ್ಲ ನಾನು ಕೇರ್‌ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಹಲಾಲ್‌ ತಿಂದರೆ ಏನಾಗುತ್ತೆ?: ಇಷ್ಟು ವರ್ಷ ಹಲಾಲ್‌ ತಿಂದಿದ್ದೇವೆ, ಏನಾಗಿದೆ ಚೆನ್ನಾಗಿದ್ದೀವಲ್ಲ. ಈಗ ಹಲಾಲ್‌ ತಿಂದರೆ ತೊಂದರೆ ಆಗುತ್ತದಾ, ನಮ್ಮ ದೇವರು ಮೆಚ್ಚಲ್ವಾ, ಹಲಾಲ್‌ ತಿಂದಾಗ ನಮ್ಮ ಹಿಂದೂ ದೇವರು ಕನಸಲ್ಲಿ ಬಂದು ಹೇಳಲಿಲ್ಲವಲ್ಲ. ಅಲ್ಲದೇ ಹಲವಾರು ವರ್ಷಗಳಿಂದ ಹಲಾಲ್‌ ನಡೆಯುತ್ತಿದೆ, ಈಗಿನದ್ದಲ್ಲ ಎಂದ ಅವರು ಕೋವಿಡ್‌ ಬಂದು ಆಸ್ಪತ್ರೆಯಲ್ಲಿ ಆಕ್ಸಿಜನ್‌ ಇಲ್ಲದೇ ಜನ ಸತ್ತರು. ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಅಗಲಿಲ್ಲ. ಆಗ ಎಲ್ಲಿದ್ದರೂ ವಿಶ್ವ ಹಿಂದೂ ಪರಿಷತ್‌, ಬಜರಂಗದಳದವರು ಎಂದು ಪ್ರಶ್ನಿಸಿದರು.

ಸಿಎಂಗೆ ಮರ್ಯಾದೆ ಇಲ್ಲವೇ?: ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಸಿಎಂ ಬೊಮ್ಮಾಯಿಗೆ ತಾಕತ್ತು ಇದ್ದರೆ, ಕೂಡಲೆ ಈ ರೀತಿ ಮಾತನಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಏನು ಗೊತ್ತಿಲ್ಲದಂತೆ ಮೌನವಾಗಿರಬಾರದು. ನೀವು ಸಂವಿಧಾನವನ್ನು ಗೌರವಿಸುತ್ತೀವಿ ಎನ್ನುತ್ತೀರಿ, ಅಂಬೇಡ್ಕರ್‌ ಜಯಂತಿ ಆಚರಿಸುತ್ತೀರಿ ಇದನ್ನೆಲ್ಲ ಮಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಎಚ್‌ಡಿಕೆ ಕೂಡಲೇ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.

ನಾನು ಸುಮ್ಮನೆ ಇರುವುದಿಲ್ಲ: ಹಿಜಾಬ್‌ ಆಯ್ತು ಇದೀಗ ಹಲಾಲ್‌, ಜಟ್ಕಾ ಕಟ್‌ ಎಂದು ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿರುವ ವಿಶ್ವ ಹಿಂದೂ ಪರಿಷತ್‌, ಬಜರಂಗದಳದವರು ರೈತರು ಹಾಗೂ ಜನರ ಬದುಕಿಗೆ ಕೊಳ್ಳಿ ಇಡಲು ಹೊರಟಿದ್ದಾರೆ. ನಾನು ಇದನ್ನು ನೋಡಿಕೊಂಡು ಕೈ ನಾಯಕರಂತೆ ಕೈಕಟ್ಟಿಳಿತುಕೊಳ್ಳಲ್ಲ. ಉತ್ತರಪ್ರದೇಶದಲ್ಲಿ ನಿಮ್ಮ ಆಟ ಆಡಿಕೊಳ್ಳಿ ಇದು ಶಾಂತಿಯ ಬೀಡಾಗಿದ್ದು ಇಲ್ಲಿ ನಿಮ್ಮ ಆಟ ನಡೆಯಲ್ಲ ಜನರು ಮಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆಂದು ಎಚ್ಚರಿಕೆ ನೀಡಿದರು.

Karnataka Politics: ಹೊರಟ್ಟಿ ಬಿಜೆಪಿ ಸೇರೋದು ಪಕ್ಕಾನಾ?: ಎಚ್‌ಡಿಕೆ ಹೇಳಿದ್ದಿಷ್ಟು

ಯುಗಾದಿ ಜೂಜಿಗೆ ಅವಕಾಶ ನೀಡಿ: ಯುಗಾದಿ ಹಬ್ಬದ ದಿನ ಜೂಜಾಟ ಆಡುವುದು ಇಲ್ಲಿನ ಸಂಸ್ಕೃತಿ, ಯಾರೂ ಲಕ್ಷ ಲಕ್ಷ ಹಣ ಕಟ್ಟಿಕೊಂಡು ಜೂಜಾಡುವುದಿಲ್ಲ. ಹಬ್ಬದ ರಂಜನೆಗೆ ಸ್ನೇಹಿತರು ಮತ್ತು ಸಂಬಂ​ಕರು ಸಣ್ಣ ಪ್ರಮಾಣದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಡುತ್ತಾರೆ. ಇವರಿಗೆ ತೊಂದರೆ ನೀಡುವುದು ಬೇಡ. 2 ದಿನ ಅವಕಾಶ ನೀಡಿ, ಬಳಿಕ ಜೂಜಾಟ ಆಡಿದರೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಕುಮಾರಸ್ವಾಮಿ ಪೊಲೀಸ್‌ ಇಲಾಖೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ.ಜಯಮುತ್ತು, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಜೆಡಿಎಸ್‌ ಮುಖಂಡರಾದ ಬೋರ್‌ವೆಲ್‌ ರಾಮಚಂದ್ರು, ನಿಸರ್ಗ ಲೋಕೇಶ್‌, ಜಿಪಂ ಮಾಜಿ ಸದಸ್ಯೆ ರಾಧಮ್ಮ ರಂಗಸ್ವಾಮಿ, ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ, ತಾಪಂ ಮಾಜಿ ಸದಸ್ಯ ಎ.ಸಿ.ಪುಟ್ಟಸ್ವಾಮಿ(ರಾಜು) ಇದ್ದರು.

click me!