
ರಾಮನಗರ (ಆ.03): ಡಿಕೆ ಸಹೋದರರ ಜತೆ ಆಡಿದ ಆಟವನ್ನು ನನ್ನ ಹತ್ತಿರ ಆಡಿದರೆ ನಡೆಯಲ್ಲ. ಸಚಿವರಾದರು ತಲೆಯಲ್ಲಿ ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ನಾಲಿಗೆ ಹೊರಳಿದಂತೆಲ್ಲ ಮಾತನಾಡುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿ, ದುಡ್ಡಿನ ಮದ ಅಶ್ವತ್ಥ ನಾರಾಯಣ ಅವರನ್ನು ಹೀಗೆಲ್ಲ ಮಾತನಾಡಿಸುತ್ತಿದೆ.
ಹತ್ಯೆಯಾದವರಿಗೆ 25 ಲಕ್ಷ ಕೊಡಲು ಪ್ರಾರಂಭಿಸಿದ್ದು ಯಾರು. ಒಂದೊಂದು ಕಡೆ ಒದೊಂದು ರೂಲ್ಸ್ ಮಾಡಿದ್ದಾರೆ. ದುಡ್ಡಿನ ಮದದಿಂದ ಮಾತಿನ ಮೇಲೆ ಹಿಡಿತ ಮೀರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿ ಬಗ್ಗೆ ಕುಟುಕಿದ ಕುಮಾರಸ್ವಾಮಿ, ಇನ್ನೊಂದಷ್ಟು ಹೆಣಗಳನ್ನು ಬೀಳಿಸಲು ಅವರು ರಾಜ್ಯಕ್ಕೆ ಬರುತ್ತಿರಬೇಕು. ಗುಜರಾತ್ ನಲ್ಲಿನ ಹತ್ಯೆಗಳನ್ನೇ ಇಲ್ಲಿ ಮುಂದುವರಿಸಲು ಅವರು ಇಲ್ಲಿಗೆ ಬರುತ್ತಿರಬಹುದು ಎಂದು ಟೀಕಿಸಿದರು.
ಹತ್ಯೆಯಾದ ಮೂರೂ ಯುವಕರ ಮನೆಗೆ ಎಚ್‌ಡಿಕೆ ಭೇಟಿ, ಸೂಕ್ತ ತನಿಖೆಗೆ ಸರ್ಕಾರಕ್ಕೆ ಒತ್ತಾಯ
ಪ್ರಧಾನಿ ಮೋದಿ ಅವರು ಫೋಟೋ ರಾಜಕೀಯ ಶುರು ಮಾಡಿದ್ದರು. ಅದನ್ನು ಮುಂದುವರೆಸಿರುವ ಅವರ ಶಿಷ್ಯ ಪ್ರತಾಪ್ ಸಿಂಹ ಕೂಡ ಫೋಟೋಗೆ ಸೀಮಿತವಾಗಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಕಾಮಾಗಾರಿ ಕಳಪೆಯಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಯಾರದೋ ಸರ್ಕಾರದಲ್ಲಿ ಆಗಿದ್ದ ಕೆಲಸಕ್ಕೆ ಬಿಜೆಪಿ ಸರ್ಕಾರ ಟೇಪ್ ಕತ್ತರಿಸಿ ಬಿಲ್ಡಪ್ ತೆಗೆದುಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಚಾಟಿ ಬೀಸಿದರು.
ರಾಮನಗರ ಡೀಸಿ, ಎಸ್ಪಿ ವಿರುದ್ಧ ಕಿಡಿ: ರಾಮನಗರ ಜಿಲ್ಲೆಯಲ್ಲಿ ಡಿಸಿ, ಎಸ್ಪಿ ಇಬ್ಬರೂ ಎಂಜಿನಿಯರ್ ಗಳನ್ನು ಹೆದರಿಸಿ, ರಸ್ತೆಯ ಹಂಫ್ಸ್ ಗಳನ್ನು ತೆಗೆಸಿದ್ದಾರೆ. ಬಸವನಪುರದ ಬಳಿ ಪಿಡಿಒ ಒಬ್ಬರು ಮೃತಪಟ್ಟರೆ, ಒಬ್ಬರು ಕಾಲು ಕಳೆದುಕೊಂಡಿದ್ದಾರೆ. ನಿತ್ಯವೂ ಅಪಘಾತಗಳು ಆಗುತ್ತಿವೆ. ಅಧಿಕಾರಿಗಳು ಇರುವುದು ಜನರ ರಕ್ಷಣೆ ಮಾಡುವುದಕ್ಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ತೋಟದ ಮನೆಯ ಮುಂದೆಯೇ ಅಪಘಾತ ಆಗಿ ಒಬ್ಬರು ಮೃತಪಟ್ಟಿದ್ದಾರೆ. ಹಂಫ್ಸ್ ಹಾಕಿ ಎಂದರು ಈವರೆಗೂ ಹಾಕಿಲ್ಲ. ಇವರಿಗೆ ಯಾವ ಕೋರ್ಟ್ ಆದೇಶ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.
ದೇವೇಗೌಡರ ಆರೋಗ್ಯ ನೆನೆದು ಸಮಾವೇಶದಲ್ಲಿ ಎಚ್‌ಡಿಕೆ ಕಣ್ಣೀರು!
ಮಾಜಿ ಶಾಸಕ ಬಾಲಕೃಷ್ಣ ಅವರು, ನನಗೂ ಒಂದು ಚಾನ್ಸ್ ನೀಡಿ ಎಂದಿದ್ದಾರೆ. ಇದರಲ್ಲಿ ತಪ್ಪೇನಿದೆ? ರಾಜಕೀಯದಲ್ಲಿ ತೀರ್ಮಾನ ತೆಗೆದುಕೊಳ್ಳುವಾಗ ಕೆಲವೊಂದು ನಿರ್ಣಯ ಮಾಡಬೇಕಾಗುತ್ತದೆ. 2006ರಲ್ಲಿ ಎಂ.ಪಿ.ಪ್ರಕಾಶ್ ಮನೆಗೆ ಹೋಗಿ ನೀವೇ ಸಿಎಂ ಆಗಿ ಎಂದಿದ್ದೆ. ಆ ಸನ್ನಿವೇಶ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಇನ್ನಾರೋ ನನ್ನನ್ನು ಸಿಎಂ ಮಾಡಿದ್ದಲ್ಲ.
-ಕುಮಾರಸ್ವಾಮಿ, ಮಾಜಿ ಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.