Siddaramotsava: ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ: ಸಿ.ಟಿ.ರವಿ ಪ್ರಶ್ನೆ

Published : Aug 03, 2022, 07:32 PM IST
Siddaramotsava: ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ: ಸಿ.ಟಿ.ರವಿ ಪ್ರಶ್ನೆ

ಸಾರಾಂಶ

ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ 13ಕ್ಕೂ ಹೆಚ್ಚು ಜನ ಅಕಾಲ ಮೃತ್ಯುವಿಗೀಡಾಗಿದ್ದು, ನೂರಾರು ಮಂದಿ ನಿರ್ವಸತಿಗರಾಗಿದ್ದಾರೆ. ಅವರೇ ಹೇಳುವ ರೀತಿಯಲ್ಲಿ ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನಿಸಿದರು.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.03): ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ 13ಕ್ಕೂ ಹೆಚ್ಚು ಜನ ಅಕಾಲ ಮೃತ್ಯುವಿಗೀಡಾಗಿದ್ದು, ನೂರಾರು ಮಂದಿ ನಿರ್ವಸತಿಗರಾಗಿದ್ದಾರೆ. ಅವರೇ ಹೇಳುವ ರೀತಿಯಲ್ಲಿ ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟರ ಮಟ್ಟಿಗೆ ಸರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನಿಸಿದರು.

ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ, ಸಿ.ಟಿ.ರವಿ ಪ್ರಶ್ನೆ: ಕಾಂಗ್ರೆಸ್ ಪಕ್ಷ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಸಿದ್ದರಾಮೋತ್ಸವ ಕುರಿತು ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ ರವಿ  ಅತೀವೃಷ್ಟಿಯಲ್ಲಿ ನಿಧನರಾದವರು, ಜನ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸಂಭ್ರಮ ಆಚರಿಸಿಕೊಳ್ಳೋದು, ಈ ಬಗ್ಗೆ ಏನು ಅನಿಸುತ್ತಿಲ್ಲವಾ? ಕಾಂಗ್ರೆಸ್ ಪಕ್ಷ ಸಂವೇದನಾ ಶೀಲತೆಯನ್ನು ಕಳೆದುಕೊಂಡಿತು ಇದೊಂದು ದುರದೃಷ್ಟಕರ. ಸಿದ್ದರಾಮಯ್ಯನವರ 75ನೇ ವರ್ಷದ ಬದುಕಿನ ಸಾರ್ಥಕತೆ ಬೇರೆ ಆದರೆ ಜನ ಸಂಕಷ್ಟದಲ್ಲಿದ್ದಾಗ ಈ ಬಗ್ಗೆ ಆ ಪಾರ್ಟಿ ಆಲೋಚನೆ ಮಾಡಬೇಕಾಗಿತ್ತು. ಆ ಪಕ್ಷದ ರಾಷ್ಟ್ರೀಯ ನಾಯಕರುಗಳೆಲ್ಲಾ ಬಂದಿದ್ದಾರೆ. ಜನ ಸಂಕಷ್ಟದಲ್ಲಿದ್ದಾಗ ಹಾಡಿ ಹೊಗಳೋದು ಸಂವೇದನಾಶೀಲತೆ, ಮಾನವೀಯತೆ ಇರೋರಿಗೆ ಶೋಭೆ ತರೋದಲ್ಲ ಎಂದು ಕಿಡಿಕಾರದರು. 

ಚಿಕ್ಕಮಗಳೂರು: ವಿಕ್ರಾಂತ್ ರೋಣ ಚಿತ್ರ ವೀಕ್ಷಣೆ ವೇಳೆ ಗಲಾಟೆ ಪ್ರಕರಣ, ಆರೋಪಿಗಳ ಬಂಧನ

ಒಗ್ಗಟ್ಟು ಎಷ್ಟು ದಿನ ಇರುತ್ತೆ ಅನ್ನೋದು ಪ್ರಶ್ನಾರ್ಥಕ ಸಂಗತಿ: ಕಾಂಗ್ರೆಸ್ ಪಕ್ಷದ ಒಗ್ಗಟ್ಟು ಎಷ್ಟು ದಿನ ಇರುತ್ತದೆ ಅನ್ನೋದು ಒಂದು ಪ್ರಶ್ನಾರ್ಥಕ ಸಂಗತಿ, ಹೀಗೆಯೇ ಒಗ್ಗಟ್ಟು ತೋರಿಸದ ಜನರೇ ಪರಮೇಶ್ವರ್ ಅವರನ್ನು ಸೋಲಿಸಿ ಕಾಲೆಳೆದರು. ಒಗ್ಗಟ್ಟು ಎಷ್ಟು ದಿನ ಇರುತ್ತದೊ ಕಾದು ನೋಡೋಣ ಇಂದೇ ಎಲ್ಲ ನಿರ್ಣಯ ಹೇಳಲು ಬರುವುದಿಲ್ಲ. ರಾಮಮಂದಿರ ಕಟ್ಟಬೇಕೆಂದಾಗ ಶಾಲೆ ಕಟ್ಟಿ ಎಂದು ಬಿಜೆಪಿಗೆ ಪಾಠ ಹೇಳುತ್ತಿದ್ದವರು ಇಂದು ಈ ಕಾರ್ಯಕ್ರಮಕ್ಕೆ ನೂರು ಕೋಟಿಯಷ್ಟು ಖರ್ಚು ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆ ನೂರು ಕೋಟಿಯಲ್ಲಿ ಬಹಳಷ್ಟು ಬಡಜನರ ಬದುಕು ಕಟ್ಟಿಕೊಡಬಹುದಿತ್ತು. ಆಗ ಆ ಜನರೆಲ್ಲಾ ಸಾಯೋವರೆಗೂ ಇವರ  ಪೋಟೋ ಇಟ್ಟುಕೊಂಡು ಹಾಡಿ ಹೊಗಳೋರು ಎಂದು ಶಾಸಕ ರವಿ ಹೇಳಿದರು. 

ದೇವರು ಆರೋಗ್ಯ ಕೊಟ್ಟು, ನೂರ್ಕಾಲ ಆಯಸ್ಸು ನೀಡಲಿ: ಸಿದ್ದರಾಮಯ್ಯನವರು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ರಾಜಕಾರಣ ಕ್ಷೇತ್ರಕ್ಕೆ ಬಂದು ಮುಖ್ಯಮಂತ್ರಿ, ವಿಪಕ್ಷ ನಾಯಕರಾಗಿ 75ನೇ ವರ್ಷಾಚರಣೆ ನಡೆಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ದೇವರು ಆರೋಗ್ಯ ಕೊಟ್ಟು, ನೂರ್ಕಾಲ ಆಯಸ್ಸು ನೀಡಲಿ ಎಂದು ಹಾರೈಸಿದರು. 

ಒಂದು ಕೋಮು ಗಲಭೆ ಹಿನ್ನೆಲೆ ಮತ್ತೊಂದು ವ್ಯಕ್ತಿಗತ ಜಗಳ: ದಕ್ಷಿಣ ಕನ್ನಡದಲ್ಲಾದ ಹತ್ಯೆಗಳು ಒಂದು ಕೋಮು ಗಲಭೆ ಹಿನ್ನೆಲೆ ಮತ್ತೊಂದು ವ್ಯಕ್ತಿಗತ ಜಗಳವೆಂದು ಸಿ.ಟಿ ರವಿ ತಿಳಿಸಿದರು. ಪ್ರಾಥಮಿಕ ವರದಿ ಪ್ರಕಾರ ವ್ಯಕ್ತಿಗತ ಜಗಳದಲ್ಲಿ ಆಕಸ್ಮಿಕವಾಗಿ ಸೋಡಾ ಬಾಟಲ್‌ನಲ್ಲಿ ಪಕ್ಕದ ಮನೆಯವನು ಹೊಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಒಟ್ಟೊಟ್ಟಿಗೆ ಕುಳಿತು ಮಾತಿಗೆ ಮಾತು ಬೆಳೆದು ಸೋಡಾ ಬಾಟಲ್‌ನಲ್ಲಿ ಮಸೂದ್ ಹತ್ಯೆಯಾಗಿದೆ. ಕಮ್ಯೂನಲ್ ವೈಲೆನ್ಸ್ ಕಾರಣಕ್ಕಾಗಿರುವುದಲ್ಲ. ಈ ಘಟನೆ ಹಿಂದೆ ಕಮ್ಯೂನಲ್ ಎಂಬುದು ಎಲ್ಲೂ ಇಲ್ಲ. 

ಆದರೆ ಪ್ರವೀಣ್ ಹತ್ಯೆ ಹಾಗಾಗಿಲ್ಲ ಅವರು ನಮ್ಮ ಕಾರ್ಯಕರ್ತ. ಯಾವುದೇ ಕಾರಣವಿಲ್ಲದೆ ಕೋಮು ಗಲಭೆ ಹುಟ್ಟುಹಾಕಬೇಕೆಂಬ ಸಂಚಿನಿಂದಲೆ ಮಾಡಿದ್ದಾರೆಂಬ ಮಾಹಿತಿಯಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನಮ್ಮ ಕಾರ್ಯಕರ್ತನ ಮನೆಗೆ ಹೋಗೋದು ನಮ್ಮ ಕರ್ತವ್ಯ. ಸರ್ಕಾರಕ್ಕೆ ಯಾವ ಜಾತಿಯೂ ಇಲ್ಲ ಸಂವಿಧಾನದಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಪ್ರಾಥಮಿಕ ವರದಿ ಬಂದ ನಂತರ ಯಾರ್ಯಾರಿಗೆ ಪರಿಹಾರ ನ್ಯಾಯುತವಾಗಿ ನೀಡಬೇಕಾಗುತ್ತದೊ ಅವರಿಗೆ ಸರ್ಕಾರ ಕೊಟ್ಟೆ ಕೊಡುತ್ತದೆ ತಾರತಮ್ಯ ಮಾಡುವ ಪ್ರಶ್ನೆ ಇಲ್ಲ ಎಂದರು. 

ವ್ಯಕ್ತಿಗತವಾಗಿ ಹೋಗಿ ಸ್ವಾಗತಿಸಿ, ಸಮಾಲೋಚನೆ ಮಾಡುತ್ತೇವೆ: ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವ ಇದೊಂದು ಅಮೃತಕಾಲ, ಮುಂದಿನ ದೇಶ ಎಲ್ಲಾ ಕ್ಷೇತ್ರಗಳಲ್ಲೂ ಆತ್ಮ ನಿರ್ಭರ ಭಾರತವಾಗಬೇಕೆಂದ ದೃಷ್ಟಿಯಿಂದ ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದಾರೆ. ರಾಷ್ಟ್ರೀಯ ನಾಯಕರು ಬರಬೇಕಾದರೆ ವ್ಯಕ್ತಿಗತವಾಗಿ ಹೋಗಿ ಸ್ವಾಗತಿಸಿ, ಸಮಾಲೋಚನೆ ಮಾಡುತ್ತೇವೆ. ಬೇರಾವುದೇ ವಿಶೇಷವಿಲ್ಲವೆಂದರು. 

ಕಾಂಗ್ರೆಸ್ ಪಕ್ಷ ಕ್ಷಮೆಯಾಚಿಸಬೇಕು: ಕೋಮುಗಲಭೆ ಹುಟ್ಟು ಹಾಕುವಂತಹ ಸಂಚು ನಡೆಸಿದಂತವರನ್ನು ಕೇಸು ಹಿಂಪಡೆದು ಮಹಾಪರಾಧ ಮಾಡಿದ ಕಾಂಗ್ರೆಸ್ ಪಕ್ಷ ಸಾರ್ವಜನಿಕ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದರು. ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಯನ್ನು ಬಿಜೆಪಿಯವರೇ ಸಾಕುತ್ತಿರುವುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿರುವ ಬಗ್ಗೆ ಪ್ರಕ್ರಿಯಿಸಿ, ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಯವರ ಮೇಲಿದ್ದ 2500 ಕೇಸುಗಳನ್ನು ಕಾಂಗ್ರೆಸ್ ಆಡಳಿತಾವಧಿಯಲ್ಲಿ ಏಕಾಗಿ ವಾಪಸ್ಸು ತೆಗೆದುಕೊಂಡಿರಿ ಎಂದು ಹೇಳಿ ಆಗ ನಿಮಗೂ ಆ ಕ್ರಿಮಿನಲ್‌ಗಳಿಗೂ ಏನು ನೆಂಟಸ್ತನವಿದೆ ಎಂಬುದು ಜಗತ್ತಿಗೆ ಬಹಿರಂಗವಾಗುತ್ತದೆ ಕಿಡಿಕಾರಿದರು. 

ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸಿದ ಕಾಫಿನಾಡು ಚಂದು ಯಾರು?, ಇವರ ಆಸೆ ಏನು?

ನೈತಿಕತೆ ಇದ್ದರೆ ಈ ಸಂಘಟನೆಗಳ ಬಗ್ಗೆ ಹೇಳಿಕೆ ಕೊಡುವ ಮುನ್ನ ಕ್ರಿಮಿನಲ್‌ಗಳ ಕೇಸು ವಾಪಸ್ಸು ಪಡೆದು ನಾನು ತಪ್ಪು ಮಾಡಿದೆ ಎಂದು ಸಾರ್ವಜನಿಕ ಕ್ಷಮೆಯಾಚಿಸಬೇಕು. ಕ್ರಿಮಿನಲ್ ಕೇಸ್ ಹಿಂಪಡೆದ ಕೆಟ್ಟ ಪರಿಣಾಮದಿಂದ ಅವರದ್ದೆ ಪಕ್ಷದ ಶಾಸಕರಾದ ತನ್ವೀರ್ ಸೇಠ್‌ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದರು. ದಲಿತ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿದರು, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ, ಮಂಗಳೂರು, ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಬೆಂಕಿ ಹಾಕಿದ್ದರು ಎಂದರು. ಪಿಎಫ್‌ಐನವರು ಟಾರ್ಗೆಟ್ ಮಾಡುತ್ತಿರುವುದು ಆರ್‌ಎಸ್ಎಸ್ ಮತ್ತು ಭಜರಂಗದಳವನ್ನು. ರಾಷ್ಟ್ರೀಯವಾದಿ ಸಂಘಟನೆಗಳನ್ನು, ಒಂದೆಡೆ ಪಿಎಫ್‌ಐ, ಎಸ್‌ಡಿಪಿಐ , ಮತ್ತೊಂದೆಡೆ ಕಾಂಗ್ರೆಸ್ ಕೂಡ ಆರ್‌ಎಸ್‌ಎಸ್‌ನ್ನು ಟಾರ್ಗೆಟ್ ಮಾಡುತ್ತದೆ. ಅಲ್ಲಿಗೆ ನಿಮ್ಮಿಬ್ಬರದ್ದು ಸಮಾನ ಉದ್ದೇಶ. ಹಾಗಾಗಿ ನೆಂಟಸ್ತನವಿದ್ದರೆ ನಿಮ್ಮಿಬ್ಬರಲ್ಲಿ ಹಾಗಾಗಿಯೇ ಕೇಸು ವಾಪಸ್ಸು ಪಡೆದಿದ್ದೀರಿ ಎಂದು ಕುಟುಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್