ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಹಾಗೂ ಮಳೆ ಪ್ರವಾಹದಿಂದ ಸಂಕಷ್ಟ ಪರಿಸ್ಥಿತಿ ಎದುರಾಗಿರುವುದರಿಂದ ಚರ್ಚೆ ನಡೆಸಿ ಜನರ ನೆರವಿಗೆ ಧಾವಿಸಬೇಕಾಗಿರುವ ಕಾರಣ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಬೇಕೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.
ರಾಮನಗರ (ಆ.03): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಹಾಗೂ ಮಳೆ ಪ್ರವಾಹದಿಂದ ಸಂಕಷ್ಟ ಪರಿಸ್ಥಿತಿ ಎದುರಾಗಿರುವುದರಿಂದ ಚರ್ಚೆ ನಡೆಸಿ ಜನರ ನೆರವಿಗೆ ಧಾವಿಸಬೇಕಾಗಿರುವ ಕಾರಣ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಬೇಕೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸರಣಿ ಕೊಲೆಗಳು, ಅಪರಾಧಗಳಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದು ಒಂದೆಡೆಯಾದರೆ, ಮಳೆ ಪ್ರವಾಹದಿಂದ ಜನರ ಪರಿಸ್ಥಿತಿ ಭೀಕರವಾಗಿದೆ. ಈ ಬಗ್ಗೆ ಕಲಾಪದಲ್ಲಿ ಚರ್ಚೆ ನಡೆಸಿ ತಕ್ಷಣ ಜನರ ನೆರವಿಗೆ ಧಾವಿಸಬೇಕಿದೆ ಎಂದರು.
ಕರಾವಳಿಯಲ್ಲಿ ಕೊಲೆಗೀಡಾಗಿದ್ದ ಮೂವರು ಯುವಕರ ಮನೆಗಳಿಗೆ ಭೇಟಿ ನೀಡಿದ್ದೆ. ಆ ಕುಟುಂಬಗಳು ತೀವ್ರ ಭೀತಿಯಲ್ಲಿವೆ. ಮನೆಯವರು ಒಬ್ಬೊಬ್ಬರಾಗಿ ಹೊರಗೆ ಬರಲು ಹೆದರುತ್ತಿದ್ದಾರೆ. ಕರಾವಳಿಯಲ್ಲಿನ ಸರಣಿ ಕೊಲೆಗಳು ಬೆಚ್ಚಿ ಬೀಳಿಸಿವೆ. ಆದರೆ, ಬಿಜೆಪಿ ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಸರ್ಕಾರದ ವೈಫಲ್ಯಗಳೇ ಸಮಸ್ಯೆಗೆ ಕಾರಣ ಎಂದು ಆರೋಪಿಸಿದರು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ನಾಚಿಗೆ ಆಗಬೇಕು. ಗೃಹ ಸಚಿವರಾಗಲು ಅವರು ಸಮರ್ಥರಲ್ಲ. ಅವರಿಗೆ ಮನುಷ್ಯತ್ವ ಇಲ್ಲ. ಹತ್ಯೆಯಾದ ಹಿಂದು ಯುವಕರ ಕುಟುಂಬಗಳಿಗೆ 50 ಲಕ್ಷ ಏಕೆ ನೀಡಿದರು.
ಕರಾವಳಿಯ ಎಲ್ಲ ಹತ್ಯೆ ಕೇಸ್ ಎನ್‌ಐಎಗೆ ವಹಿಸಿ: ಎಚ್‌ಡಿಕೆ
ಆ ಪ್ರಕರಣಗಳ ತನಿಖೆ ಮುಗಿದಿಯೇ. ಫಾಝಿಲ್ ಕುಟುಂಬ ಏನು ತಪ್ಪು ಮಾಡಿತ್ತು. ಆ ಯುವಕ 18 ಜನರ ಜೀವ ಉಳಿಸಿದವನು. ಅವನನ್ನು ಹತ್ಯೆ ಮಾಡಿದರೂ ಪರಿಹಾರ ನೀಡಿಲ್ಲ. ಈ ಹತ್ಯೆಗಳ ತನಿಖೆ ಪೂರ್ಣಗೊಂಡಿಲ್ಲ. ಗೃಹ ಸಚಿವರ ಹೇಳಿಕೆಯೇ ಸರಿ ಇಲ್ಲ ಎಂದರು. ಬೆಳ್ಳಾರೆ ಮಸೂದ್, ಪ್ರವೀಣ್ ನೆಟ್ಟಾರೆ ಹತ್ಯೆ ಪೊಲೀಸರು ತಡೆಯಬಹುದಿತ್ತು. ಫಾಝಿಲ್ ಹತ್ಯೆ ಬಗ್ಗೆ ಪೊಲೀಸರಿಗೆ ಘಟನೆ ನಡೆದ ದಿನದ ಮಧ್ಯಾಹ್ನದಿಂದಲ್ಲೇ ಮಾಹಿತಿ ಇದ್ದರೂ, ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಗೃಹ ಇಲಾಖೆಯನ್ನು ಹಾಳು ಮಾಡಿದ ಅರಗ ಜ್ಞಾನೇಂದ್ರ ಅತ್ಯಂತ ಅಸಮರ್ಥ ಗೃಹ ಸಚಿವ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಂಚರತ್ನ ಯಾತ್ರೆ ವೇಳೆ 104 ಅಸೆಂಬ್ಲಿ ಕ್ಷೇತ್ರಗಳಲ್ಲಿ ಗ್ರಾಮವಾಸ್ತವ್ಯ: ಎಚ್‌ಡಿಕೆ
ಭಟ್ಕಳದಲ್ಲಿ ನಾಲ್ವರು, ಕುಕ್ಕೆ ಸುಬ್ರಮಣ್ಯದಲ್ಲಿ ಇಬ್ಬರು ಮಳೆಯಿಂದಾಗಿ ಮೃತಪಟ್ಟಿದ್ದಾರೆ. ಅನೇಕ ಕಡೆ ರೈತರು ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಕೃಷಿ ಇಲಾಖೆಯಲ್ಲಿ ಎಲ್ಲವೂ ಸರಿ ಇಲ್ಲದಾಗಿದೆ. ಹೀಗಾಗಿ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯಬೇಕು. ಎಲ್ಲದರ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಪರಿಸ್ಥಿತಿ ಮುಂದುವರಿದರೆ, ಆಡಳಿತ ಪಕ್ಷಕ್ಕೆ ಮಾತ್ರವಲ್ಲ, ವಿರೋಧ ಪಕ್ಷವೂ ಜನರ ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ವಿಧಾನಸಭಾಧ್ಯಕ್ಷರ ಕ್ಷೇತ್ರದಲ್ಲಿಯೇ ದೊಡ್ಡ ಪ್ರಮಾಣದ ಹಾನಿಯಾಗಿದೆ. ವಿಧಾನಸಭಾಧ್ಯಕ್ಷರು ಕೂಡಲೇ ಕಲಾಪ ನಡೆಸಲು ಸರ್ಕಾರಕ್ಕೆ ಕಿವಿ ಹಿಂಡಿ ಸೂಚನೆ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.