ಕಿತ್ತಾಟ, ನಾಯಕತ್ವ ವಿಚಾರ ಕೈಬಿಡಿ: ರಾಹುಲ್‌ ಸೂಚನೆ

By Kannadaprabha NewsFirst Published Aug 3, 2022, 10:06 AM IST
Highlights
  • ಕಿತ್ತಾಟ, ನಾಯಕತ್ವ ವಿಚಾರ ಕೈಬಿಡಿ: ರಾಹುಲ್‌ ಸೂಚನೆ
  • ಹುಬ್ಬಳ್ಳಿಯಲ್ಲಿ ಮೊದಲ ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆ
  • ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಲಹೆ

ಹುಬ್ಬಳ್ಳಿ (ಆ.3) : ಪರಸ್ಪರ ಕಿತ್ತಾಟ, ನಾಯಕತ್ವ ವಿಚಾರ ಕೈಬಿಡಿ, ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಇಲ್ಲಿನ ಗೋಕುಲ ರಸ್ತೆಯಲ್ಲಿ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ರಾತ್ರಿ ಇದೇ ಮೊದಲ ಬಾರಿಗೆ ನಡೆದ ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಈ ರೀತಿ ಎಚ್ಚರಿಕೆ ನೀಡುವ ಮೂಲಕ ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ನಡೆದ ನಾಯಕತ್ವ ಕಿತ್ತಾಟಕ್ಕೆ ಇತಿಶ್ರೀ ಹಾಡಲು ಸೂಚಿಸಿದರು. ಅಲ್ಲದೇ, ಭಿನ್ನಮತದ ರಾಗ ಎಳೆಯುವವರಿಗೆ ಚಾಟಿ ಬೀಸಿದರು.

ಸಭೆ ಬಳಿಕ ಮಾಧ್ಯಮಗಳೊಂದಿಗೆ ಸಭೆಯಲ್ಲಿನ ಚರ್ಚೆಯ ವಿಷಯ ಹಂಚಿಕೊಂಡ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಮುಂದಿನ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವುದು. ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಇದ್ದರು.

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ಐತಿಹಾಸಿಕ ಸಭೆ

ಇಂದು ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್‌ ಭೇಟಿ:

ಹುಬ್ಬಳ್ಳಿ: ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ(Rahul Gandhi) ಅವರು ಬುಧವಾರ ಸಂಜೆ ಇಲ್ಲಿಯ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ಸಿಬ್ಬಂದಿ ಹಾಗೂ ಇತರರ ಜೊತೆ ಚರ್ಚೆ ನಡೆಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್‌ ಅಹ್ಮದ್‌ ಅವರು ಮಂಗಳವಾರ ಸಂಜೆ ಸುದ್ದಿಗಾರರಿಗೆ ಈ ವಿಷಯ ತಿಳಿಸಿ, ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯ ಅಮೃತೋತ್ಸವ ಕಾರ್ಯಕ್ರಮ ಹಾಗೂ ಚಿತ್ರದುರ್ಗದ ಕಾರ್ಯಕ್ರಮ ಮುಗಿಸಿ ಸಂಜೆ ಹುಬ್ಬಳ್ಳಿಗೆ ಆಗಮಿಸಿದ ಬಳಿಕ ಅವರು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.

ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ರಾಹುಲ್‌ ಗಾಂಧಿ ಸಲಹೆ

ಬೆಂಗೇರಿ ಖಾದಿ ಗ್ರಾಮೋದ್ಯೋಗಕ್ಕೆ ರಾಹುಲ್ ಗಾಂಧಿ ಭೇಟಿ ನೀಡುತ್ತಿರುವ ಹಿನ್ನೆಲೆ ಕಳೆದ ಜುಲೈ 23ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ  ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು.   ಧ್ವಜ ತಯಾರಿಸುವ ಮಹಿಳಾ ಸಿಬ್ಬಂದಿ, ಕೇಂದ್ರದ ಕಾರ್ಯದರ್ಶಿಗಳಿಂದ ಧ್ವಜಕ್ಕೆ ಈ ಬಾರಿ ಬಂದಿರುವ ಬೇಡಿಕೆ ಕುರಿತು ವಿವರ ಪಡೆದುಕೊಂಡಿದ್ದರು.

click me!