
ಮೈಸೂರು: ಮೈಸೂರಿನಲ್ಲಿ ಜನತಾದಳ (ಜಾತ್ಯಾತೀತ) ಪಕ್ಷದೊಳಗಿನ ಅಸಮಾಧಾನ ಇದೀಗ ಬಹಿರಂಗ ವಾಗ್ದಾಳಿಯಾಗಿ ಪರಿವರ್ತನೆಯಾಗಿದ್ದು, ಶಾಸಕ ಜಿ.ಟಿ. ದೇವೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ನಡುವೆ ತೀವ್ರ ವಾಕ್ ಸಮರ ನಡೆಯುತ್ತಿದೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಲ್ಲ ಎಂದು ಜಿ.ಟಿ. ದೇವೇಗೌಡ ಹೇಳಿಕೊಂಡಿದ್ದಕ್ಕೆ, ಮಂಜೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾಲು ಸಾಲು ಚುನಾವಣೆಗಳಲ್ಲಿ ಜಿಟಿಡಿ ಪಕ್ಷದ ವಿರುದ್ಧವೇ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜೇಗೌಡ, ಜಿ.ಟಿ. ದೇವೇಗೌಡರ ನಡೆ ಮತ್ತು ಕಾರ್ಯಶೈಲಿಯನ್ನು ಕಟುವಾಗಿ ಟೀಕಿಸಿದರು. “ಜಿ.ಟಿ. ದೇವೇಗೌಡರು ಪಕ್ಷ ವಿರೋಧಿ ಕೆಲಸ ಮಾಡಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಆದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಅವರು ನನ್ನ ವಿರುದ್ಧವೇ ಕೆಲಸ ಮಾಡಿದ್ದರು, ಎಂಬ ಗಂಭೀರ ಆರೋಪ ಹೊರಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಇರುವಾಗಲೂ, ಜೆಡಿಎಸ್ ಅಭ್ಯರ್ಥಿ ರಿಜ್ವಾನ್ ಹರ್ಷದ್ ವಿರುದ್ಧವಾಗಿ ಜಿ.ಟಿ. ದೇವೇಗೌಡರು ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿಗೆ ಬೆಂಬಲ ನೀಡಿದ್ದರು. ಇದು ಸ್ಪಷ್ಟವಾದ ಪಕ್ಷ ವಿರೋಧಿ ನಡೆ ಎಂದು ಮಂಜೇಗೌಡ ಕಿಡಿಕಾರಿದರು.
“ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ಕುಸಿದವರನ್ನು ಜೆಡಿಎಸ್‌ಗೆ ಕರೆತಂದದ್ದು ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಾ.ರಾ. ಮಹೇಶ್. ಆದರೆ ಅದರ ಬಳಿಕವೂ ಕೆ.ಆರ್.ನಗರದಲ್ಲಿ ಸಾ.ರಾ. ಮಹೇಶ್ ಅವರ ಬಲ ಕುಗ್ಗಿಸುವ ಪ್ರಯತ್ನಗಳು ನಡೆಯಿತು. ಜಿ.ಟಿ. ದೇವೇಗೌಡರಿಂದ ನಿರಂತರವಾಗಿ ಪಕ್ಷದ ವಿರುದ್ಧ ಕೆಲಸ ನಡೆಯುತ್ತಿದೆ ಎಂಬದಕ್ಕೆ ಇನ್ನೆಷ್ಟು ಬೇಕು
ಎಂಸಿಡಿಸಿಸಿ (ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್) ಚುನಾವಣೆಯಲ್ಲೂ ಜಿ.ಟಿ. ದೇವೇಗೌಡ ಪಕ್ಷ ವಿರೋಧಿ ನಡೆ ತೋರಿದ್ದಾರೆ. ಸ್ವಂತ ಮಗನ ವಿರುದ್ಧವೇ ಜಿ.ಟಿ. ದೇವೇಗೌಡ ಕೆಲಸ ಮಾಡಿದ್ದಾರೆ. ದೊಡ್ಡಸ್ವಾಮೀಗೌಡ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಲು ಜಿಟಿಡಿ ಬೆಂಬಲ ನೀಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ರಾಜಕಾರಣದ ಕುರಿತೂ ಮಂಜೇಗೌಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ “ಸಾ.ರಾ. ಮಹೇಶ್ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ ತಕ್ಷಣ ಜಿ.ಟಿ. ದೇವೇಗೌಡರು ‘ನಾನು ಜೆಡಿಎಸ್‌ನಲ್ಲೇ ಇದ್ದೇನೆ’ ಎಂದು ಹೇಳುತ್ತಿದ್ದಾರೆ. ಆದರೆ ಕ್ಷೇತ್ರದ ಜನರು ಕಿವಿಗೆ ಹೂವು ಮುಡಿದುಕೊಂಡಿಲ್ಲ,” ಎಂದು ವ್ಯಂಗ್ಯವಾಡಿದರು. ಜಿ.ಟಿ. ದೇವೇಗೌಡರಿಗೆ ನಿಜಕ್ಕೂ ಸಾಮರ್ಥ್ಯವಿದ್ದರೆ, ಅವರು ಸ್ವಂತ ಶಕ್ತಿಯ ಮೇಲೆ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಂಜೇಗೌಡ, ಪಕ್ಷ ಅವಕಾಶ ನೀಡಿದರೆ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ, ಎಂದು ಸ್ಪಷ್ಟಪಡಿಸಿದರು. ಅದೇ ವೇಳೆ, ಮುಂದಿನ ಚುನಾವಣೆಗಳಲ್ಲಿ ಸಾ.ರಾ. ಮಹೇಶ್ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುವಂತೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಸೂಚಿಸಿದ್ದಾರೆ. ಪಕ್ಷದ ಹಿರಿಯರ ಸೂಚನೆಯಂತೆ ನಾವೆಲ್ಲರೂ ನಡೆದುಕೊಳ್ಳುತ್ತೇವೆ ಎಂದು ಮಂಜೇಗೌಡ ಹೇಳಿದರು.
ಶಾಸಕ ಜಿ.ಟಿ. ದೇವೇಗೌಡ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿರುವ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜೆಡಿಎಸ್ ಒಳರಾಜಕಾರಣದ ಬಿರುಕು ಇರುವುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಮೈಸೂರು ರಾಜಕೀಯ ವಲಯದಲ್ಲಿ ಈ ವಾಕ್ ಸಮರ ಮುಂದಿನ ದಿನಗಳಲ್ಲಿ ಪಕ್ಷದ ತಂತ್ರ ಮತ್ತು ಚುನಾವಣಾ ಸಮೀಕರಣಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.