ರಾಜ್ಯದ ಮಧ್ಯ ಭಾಗದಲ್ಲಿರುವ ದಾವಣಗೆರೆ ರಾಜಕೀಯ ಸಮಾವೇಶಗಳಿಗೆ ಹೆಸರುವಾಸಿ. ರಾಜಕೀಯ ಪಕ್ಷಗಳು ತಮ್ಮ ಪ್ರಮುಖ ಸಮಾವೇಶಗಳನ್ನು ಆಯೋಜಿಸುವುದಕ್ಕೆ ಹೆಚ್ಚು ಆಯ್ಕೆ ಮಾಡಿಕೊಳ್ಳುವುದೇ ದಾವಣಗೆರೆಯನ್ನು.
ನಾಗರಾಜ ಎಸ್.ಬಡದಾಳ್
ಬೆಂಗಳೂರು (ಡಿ.12): ರಾಜ್ಯದ ಮಧ್ಯ ಭಾಗದಲ್ಲಿರುವ ದಾವಣಗೆರೆ ರಾಜಕೀಯ ಸಮಾವೇಶಗಳಿಗೆ ಹೆಸರುವಾಸಿ. ರಾಜಕೀಯ ಪಕ್ಷಗಳು ತಮ್ಮ ಪ್ರಮುಖ ಸಮಾವೇಶಗಳನ್ನು ಆಯೋಜಿಸುವುದಕ್ಕೆ ಹೆಚ್ಚು ಆಯ್ಕೆ ಮಾಡಿಕೊಳ್ಳುವುದೇ ದಾವಣಗೆರೆಯನ್ನು. ವೀರಶೈವ ಲಿಂಗಾಯತರ ಪ್ರಾಬಲ್ಯದ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಾಂಪ್ರದಾಯಿಕ ಎದುರಾಳಿಗಳು. ಒಂದೆರಡು ಕ್ಷೇತ್ರದಲ್ಲಿ ಎರಡೂ ಪಕ್ಷಗಳಿಗೆ ಜೆಡಿಎಸ್‌ನ ಸವಾಲಿದೆ. ಲಿಂಗಾಯತರ ಪ್ರಾಬಲ್ಯದ ನಡುವೆ ಕುರುಬರು, ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರ ಮತಗಳು ಕೂಡ ಇಲ್ಲಿ ನಿರ್ಣಾಯಕ. ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗಳು ಮಣೆ ಹಾಕುವುದು ಪ್ರಬಲ ಜಾತಿಗಳಿಗೆ.
1. ದಾವಣಗೆರೆ ಉತ್ತರ: ರವೀಂದ್ರನಾಥ ಈ ಬಾರಿಯೂ ಸ್ಪರ್ಧಿಸ್ತಾರಾ?
ಕಾಂಗ್ರೆಸ್ಸಿನ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಬಿಜೆಪಿಯ ಎಸ್.ಎ.ರವೀಂದ್ರನಾಥ್ ಅವರ ಅಖಾಡವಿದು. ಹಿಂದೊಮ್ಮೆ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ದಾವಣಗೆರೆಯಲ್ಲಿ ಕಾಂಗ್ರೆಸ್ಸಿಗೆ ಸರಿಸಮಾನವಾಗಿ ಬಿಜೆಪಿಯನ್ನು ಕಟ್ಟಿಬೆಳೆಸುವಲ್ಲಿ ರವೀಂದ್ರನಾಥರ ಶ್ರಮವಿದೆ. ಆದರೆ, 77ರ ಗಡಿ ದಾಟಿದ ರವೀಂದ್ರನಾಥ ಸ್ಪರ್ಧಿಸುತ್ತಾರೋ, ಇಲ್ಲವೋ ಎಂಬ ಗೊಂದಲವಿದೆ. ನ.26ರಂದು ರವೀಂದ್ರನಾಥ್‌ರ 77ನೇ ಜನ್ಮದಿನದಂದು ರವೀಂದ್ರನಾಥ ಮತ್ತೆ ಉತ್ತರದ ಅಭ್ಯರ್ಥಿ ಎಂದು ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಸಹ ರಾಜ್ಯರಾಜಕಾರಣದ ಬಗ್ಗೆ ಒಲವು ತೋರುತ್ತಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ, ಮಾಜಿ ಮೇಯರ್ ಎಸ್.ಟಿ.ವೀರೇಶ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ, ಕೊಂಡಜ್ಜಿ ಜಯಪ್ರಕಾಶ ಕೂಡ ಟಿಕೆಟ್ ಆಕಾಂಕ್ಷಿಗಳು. ಇನ್ನು, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ. ಪಕ್ಷದ ಸೂಚನೆಯಂತೆ 2 ಲಕ್ಷ ರು. ಡಿಡಿ ಕೊಟ್ಟಿಲ್ಲ. ನಾನು ಅರ್ಜಿ ಸಲ್ಲಿಸುತ್ತೇನೆ. ಆದರೆ, 2 ಲಕ್ಷ ರು. ಕೊಡುವುದಿಲ್ಲ ಎನ್ನುವ ಮೂಲಕ ಉತ್ತರಕ್ಕೆ ತಮ್ಮ ಟಿಕೆಟ್ ಮನೆಗೆ ಬರುವುದು ಪಕ್ಕಾ ಎಂಬ ಸಂದೇಶ ಸಾರಿದ್ದಾರೆ.
Ticket Fight: ಹಾಸನದಲ್ಲಿ ಪ್ರೀತಂಗೌಡ VS ಭವಾನಿ ರೇವಣ್ಣ?
2. ದಾವಣಗೆರೆ ದಕ್ಷಿಣ: ಮತ್ತೆ ಸ್ಪರ್ಧೆಗೆ ಶಾಮನೂರು ರೆಡಿ
ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್‌ನ ಅಭ್ಯರ್ಥಿ. 92ನೇ ವಯಸ್ಸಲ್ಲೂ ಉತ್ಸಾಹದಿಂದ ಕ್ಷೇತ್ರ ಸುತ್ತಾಡುತ್ತಾ ಮತ್ತೆ ತಾವೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಆದರೂ ನಾಯಕ ಸಮಾಜದ ಬಿ.ವೀರಣ್ಣ, ಅಲ್ಪಸಂಖ್ಯಾತ ಸಮುದಾಯದ ಸೈಯದ್ ಖಾಲಿದ್, ಸಾದಿಕ್, ಸಲೀಂ ಬಾಯಿ, ಇಬ್ರಾಹಿಂ ಖಲೀಲುಲ್ಲಾ, ಒಂಟಿ ಇಕ್ಬಾಲ್ ಆಕಾಂಕ್ಷಿಗಳಾಗಿ ಅರ್ಜಿ ಹಾಕಿದ್ದಾರೆ. ಅಂತಿಮವಾಗಿ ಕಾಂಗ್ರೆಸ್ಸಿನಿಂದ ಶಾಮನೂರು ಕಣಕ್ಕಿಳಿಯುವುದು ಸ್ಪಷ್ಟ. ಬಿಜೆಪಿಯಲ್ಲಿ 4 ಸಲ ಪ್ರಬಲ ಸ್ಪರ್ಧೆಯೊಡ್ಡಿ ಸೋತ ಯಶವಂತರಾವ್, ನಾಯಕ ಸಮಾಜದ ಟಿ.ಶ್ರೀನಿವಾಸ ದಾಸಕರಿಯಪ್ಪ, ಕುರುಬ ಸಮಾಜದ ಬಿ.ಎಂ.ಸತೀಶ ಕೊಳೇನಹಳ್ಳಿ, ರಾಜನಹಳ್ಳಿ ಶಿವಕುಮಾರ, ಲಿಂಗಾಯತ ಸಮಾಜದ ಬಿ.ಜಿ.ಅಜಯಕುಮಾರ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. ಜೆ.ಅಮಾನುಲ್ಲಾ ಖಾನ್ ಜೆಡಿಎಸ್‌ನಿಂದ ಕಣಕ್ಕಿಳಿಯಬಹುದು.
3. ಮಾಯಕೊಂಡ: ಟಿಕೆಟ್ ಆಕಾಂಕ್ಷಿಗಳ ಪಟ್ಟಿದೊಡ್ಡದು
ಪರಿಶಿಷ್ಟಜಾತಿಗೆ ಮೀಸಲಾದ ಮಾಯಕೊಂಡ ಕ್ಷೇತ್ರಕ್ಕೆ ಬಿಜೆಪಿ-ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದೊಡ್ಡ ಸಾಲು ಇದೆ. ಮೀಸಲು ಕ್ಷೇತ್ರವಾಗುವ ಮುಂಚೆಯಿಂದ ಮಾಯಕೊಂಡ ಬಿಜೆಪಿಯ ಭದ್ರಕೋಟೆ. ಪ್ರೊ.ಲಿಂಗಣ್ಣ ಆಯ್ಕೆಯಾಗುವ ಮುನ್ನ ಇದು ಕಾಂಗ್ರೆಸ್ಸಿನ ವಶದಲ್ಲಿತ್ತು. ಈಗ ಪ್ರೊ.ಲಿಂಗಣ್ಣ ಮತ್ತೆ ಬಿಜೆಪಿಯಿಂದ ಪುನರಾಯ್ಕೆ ಬಯಸಿ, ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರೆ, ಸ್ವಪಕ್ಷದಲ್ಲೇ ಸಾಕಷ್ಟುಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಯುವ ಮುಖಂಡರಾದ ಜಿ.ಎಸ್.ಶ್ಯಾಮ್, ಆಲೂರು ನಿಂಗರಾಜ, ಕೆ.ಎಸ್.ಬಸವರಾಜ, ಹನುಮಂತ ನಾಯ್ಕ, ಆರ್.ಶಿವಾನಂದ, ಆರ್.ಎಲ್.ಶಿವಪ್ರಕಾಶ, ಅನಿಲ್ ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಅದೇ ರೀತಿ, ಕೆ.ಎಸ್.ಬಸವಂತಪ್ಪ, ಡಿ.ಬಸವರಾಜ, ಎಚ್.ದುಗ್ಗಪ್ಪ ಅವಾಂತರ, ಬಿ.ಎಚ್.ವೀರಭದ್ರಪ್ಪ, ಕೆ.ಶಿವಮೂರ್ತಿನಾಯ್ಕ, ಸವಿತಾ ಬಾಯಿ ಮಲ್ಲೇಶ ನಾಯ್ಕ, ಡಾ.ವೈ.ರಾಮಪ್ಪ, ಎಚ್.ಆನಂದಪ್ಪ ಹೀಗೆ ಸಾಲು ಸಾಲು ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್‌ಗಾಗಿ ಕೆಪಿಸಿಸಿ ಕಚೇರಿ, ನಾಯಕರ ಬಳಿ ಎಡತಾಕುತ್ತಿದ್ದಾರೆ. ಮಾಯಕೊಂಡದ ಟಿಕೆಟ್ ಅನ್ನು ಯಾರಿಗೆ ಕೊಡಬೇಕು ಎಂಬುದೇ ಎರಡೂ ಪಕ್ಷಕ್ಕೂ ಯಕ್ಷಪ್ರಶ್ನೆಯಾಗಿದೆ.
4. ಹರಿಹರ: ಕಾಂಗ್ರೆಸ್ ಅಭ್ಯರ್ಥಿ ಮೇಲೆ ಫಲಿತಾಂಶ
ತುಂಗಭದ್ರಾ ತಟದ ಹರಿಹರ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲೂ ತ್ರಿಕೋನ ಸ್ಪರ್ಧೆ ಸಹಜ. ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದರ ಮೇಲೆ ಇಲ್ಲಿನ ಫಲಿತಾಂಶ ನಿರ್ಧಾರವಾಗಲಿದೆ. ಶಾಸಕ ಎಸ್.ರಾಮಪ್ಪ, ಡಾ.ಮಹೇಶಪ್ಪ ದೀಟೂರು, ವಕೀಲ ನಾಗೇಂದ್ರಪ್ಪ, ಶ್ರೀನಿವಾಸ ನಂದಿಗಾವಿ, ಎ.ಗೋವಿಂದರೆಡ್ಡಿ, ಕೃಷ್ಣ ಸಾ ಭೂತೆ, ಬಾಬುಲಾಲ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು. ಬಿಜೆಪಿಯಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ, ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಚಂದ್ರಶೇಖರ ಪೂಜಾರ ಆಕಾಂಕ್ಷಿಗಳು. ಜೆಡಿಎಸ್‌ನಿಂದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಸ್ಪರ್ಧೆ ನಿಶ್ಚಿತ. ಲಿಂಗಾಯತರ ಮತ ಛಿದ್ರವಾಗಿದ್ದರಿಂದ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಪರಿಶಿಷ್ಟರ ಮತಗಳ ಆಧಾರದಲ್ಲಿ ಕಳೆದ ಚುನಾವಣೆ ಗೆದ್ದಿದ್ದ ಕಾಂಗ್ರೆಸ್ಸಿಗೆ ಈ ಸಲ ಎರಡೂ ಪಕ್ಷಗಳು ತೀವ್ರ ಪೈಪೋಟಿ ನೀಡಲಿವೆ.
5. ಜಗಳೂರು: ರಾಮಚಂದ್ರ ಬಿಜೆಪಿ ಅಭ್ಯರ್ಥಿ?
ಬರವನ್ನೇ ಹಾಸು ಹೊದ್ದ ಕ್ಷೇತ್ರವೆಂಬ ಹಣೆಪಟ್ಟಿಜಗಳೂರಿಗೆ ಅಂಟಿಕೊಂಡಿದೆ. ಭದ್ರಾ ಮೇಲ್ದಂಡೆ, 57 ಕೆರೆ ತುಂಬಿಸುವ ಮೂಲಕ ಭೂತಾಯಿಗೆ ಹಸಿರುಡುಗೆ ತೊಡಿಸಲು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರು ಶಾಸಕ ಎಸ್.ವಿ.ರಾಮಚಂದ್ರಗೆ ಬೆನ್ನೆಲುಬಾಗಿ ನಿಂತ ಪರಿಣಾಮ ಕ್ಷೇತ್ರಕ್ಕೆ ರಾಮಚಂದ್ರ ಅಭ್ಯರ್ಥಿಯಾಗುವುದು ಸ್ಪಷ್ಟ. ಎಸ್ಟಿಮೀಸಲು ಕ್ಷೇತ್ರದಲ್ಲಿ ರಾಮಚಂದ್ರ ಅವರ ಗೆಲುವಿಗೆ ತಡೆಯೊಡ್ಡಲು ಕಾಂಗ್ರೆಸ್ ಸಮರ್ಥ ಸೇನಾನಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದೆ. ಕಾಂಗ್ರೆಸ್ಸಿನಿಂದ ಮಾಜಿ ಶಾಸಕ ಎಚ್.ಪಿ.ರಾಜೇಶ, ಪುಷ್ಪಾ ಲಕ್ಷ್ಮಣಸ್ವಾಮಿ, ಚಿಕ್ಕಮ್ಮನಹಟ್ಟಿದೇವೇಂದ್ರಪ್ಪ, ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ ಟಿಕೆಟ್ ಆಕಾಂಕ್ಷಿಗಳು. ಪರಿಶಿಷ್ಟರು ಹೆಚ್ಚಾಗಿರುವ ಈ ಕ್ಷೇತ್ರದಲ್ಲಿ ಲಿಂಗಾಯತರು, ಪರಿಶಿಷ್ಟರು, ಅಲ್ಪಸಂಖ್ಯಾತರು ನಿರ್ಣಾಯಕರು. ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಗೌಪ್ಯತೆ ಕಾಯ್ದುಕೊಂಡಿದೆ. ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕೆ.ಬಿ.ಕಲ್ಲೇರುದ್ರೇಶ ಸಕ್ರಿಯವಾಗಿ ಪಕ್ಷ ಸಂಘಟಿಸುತ್ತಿದ್ದು, ಯಾರನ್ನು ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಾರೆಂಬ ಕುತೂಹಲವಿದೆ.
6. ಚನ್ನಗಿರಿ: ವಿರುಪಾಕ್ಷಪ್ಪ ಅಥವಾ ಮಲ್ಲಿಕಾರ್ಜುನ ಪೈಕಿ ಒಬ್ಬರಿಗೆ ಬಿಜೆಪಿ ಟಿಕೆಟ್ ಪಕ್ಕಾ
ಅಡಿಕೆ ನಾಡು ಚನ್ನಗಿರಿಯನ್ನು ಬಿಜೆಪಿಯ ಮಾಡಾಳ್ ವಿರುಪಾಕ್ಷಪ್ಪ ಪ್ರತಿನಿಧಿಸುತ್ತಿದ್ದಾರೆ. 75 ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಎಂಬ ಬಿಜೆಪಿಯ ಅಲಿಖಿತ ನಿಯಮ ಇಲ್ಲಿಗೂ ಅನ್ವಯವಾದರೆ ವಿರುಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಸ್ಪರ್ಧೆಗೆ ತಾಲೀಮು ನಡೆಸಿದ್ದಾರೆ. ಇಲ್ಲಿ ಕಾಂಗ್ರೆಸ್ಸಿಗೆ ಸರಿಸಮಾನ ಪೈಪೋಟಿ ನೀಡುವ ಶಕ್ತಿ ಇದ್ದರೆ ಅದು ಬಿಜೆಪಿಯ ಮಾಡಾಳ್ ವಿರುಪಾಕ್ಷಪ್ಪಗೆ ಮಾತ್ರ. ವಯೋಮಿತಿ ಲಕ್ಷ್ಮಣ ರೇಖೆ ಇರದಿದ್ದರೆ ಮಾಡಾಳ್ ವಿರುಪಾಕ್ಷಪ್ಪ ಹಾದಿ ಸುಗಮ. ವಿರುಪಾಕ್ಷಪ್ಪ ಅಥವಾ ಮಲ್ಲಿಕಾರ್ಜುನ ಪೈಕಿ ಒಬ್ಬರಿಗೆ ಟಿಕೆಟ್ ಪಕ್ಕಾ. ಇನ್ನು ಕಾಂಗ್ರೆಸ್ಸಿನಿಂದ ವಡ್ನಾಳ್ ರಾಜಣ್ಣ ನಿಲ್ಲಬೇಕೆಂಬ ಮಾತಿದೆ. ರಾಜಣ್ಣ ಆಸಕ್ತಿ ತೋರದಿದ್ದರೆ ಹೊಸ ಮುಖಕ್ಕೆ ಅವಕಾಶ ಖಚಿತ. ಮಾಜಿ ಸಿಎಂ ದಿವಂಗತ ಜೆ.ಎಚ್.ಪಟೇಲರ ಸಹೋದರನ ಪುತ್ರ, ಜಿಪಂ ಮಾಜಿ ಸದಸ್ಯ ತೇಜಸ್ವಿ ವಿ.ಪಟೇಲ್, ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರೂ ಆಗಿರುವ ಉದ್ಯಮಿ ಸಂತೆಬೆನ್ನೂರ್ ಲಿಂಗರಾಜ, ಕಿಸಾನ್ ಮೋರ್ಚಾ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜ, ವಡ್ನಾಳ್ ರಾಜಣ್ಣ ಸಹೋದರನ ಪುತ್ರ ವಡ್ನಾಳ್ ಜಗದೀಶ, ವಡ್ನಾಳ್ ಅಶೋಕ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ನಾಯಕ ಸಮಾಜದ ಹೊದಿಗೆರೆ ರಮೇಶ, ನಿರಂಜನ, ಪುನೀತ್‌ಕುಮಾರ ಸಹ ಟಿಕೆಟ್ ಆಕಾಂಕ್ಷಿಗಳು. ಜೆಡಿಎಸ್‌ನಿಂದ ಇಲ್ಲಿ ಎಂ.ಯೋಗೇಶ ಪ್ರಬಲ ಆಕಾಂಕ್ಷಿ.
Ticket Fight: ಕೊಡಗಿನ ಎರಡು ಕ್ಷೇತ್ರಗಳಿಗೆ ಆಕಾಂಕ್ಷಿಗಳ ದಂಡು
7. ಹೊನ್ನಾಳಿ: ರೇಣುಕಾಚಾರ್ಯಗೆ ಸ್ಪರ್ಧಿ ಯಾರು?
ಸದಾ ಸುದ್ದಿಯಲ್ಲಿರುವ ಕ್ಷೇತ್ರ ಹೊನ್ನಾಳಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ. ಬಿಜೆಪಿಯಿಂದ ರೇಣುಕಾಚಾರ್ಯ ಪುನರಾಯ್ಕೆ ಬಯಸಿ ಸ್ಪರ್ಧಿಸುವುದು ಮೇಲ್ನೋಟಕ್ಕೆ ಸ್ಪಷ್ಟ. ರೇಣುಕಾಚಾರ್ಯಗೆ ಟಿಕೆಟ್ ವಿಚಾರದಲ್ಲಿ ಒಂದು ಕಾಲದ ಆತ್ಮೀಯ, ಕುರುಬ ಸಮಾಜದ ಎಂ.ಆರ್.ಮಹೇಶ, ಮೆಸ್ಕಾಂ ನಿರ್ದೇಶಕ ಎಸ್.ರುದ್ರೇಶ್ ಪೈಪೋಟಿಯೊಡ್ಡುತ್ತಿದ್ದಾರೆ. ಕಾಂಗ್ರೆಸ್ಸಿನಲ್ಲಿ ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಬಿ.ಸಿದ್ದಪ್ಪ, ಜಿಪಂ ಮಾಜಿ ಸದಸ್ಯ ಡಿ.ಜಿ.ವಿಶ್ವನಾಥ ಚೀಲೂರು, ಎಚ್.ಎ.ಉಮಾಪತಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಟಿಕೆಟ್‌ಗಾಗಿ ವೀರಶೈವ ಲಿಂಗಾಯತ-ಕುರುಬ ಸಮಾಜದವರ ಮಧ್ಯೆ ಇಲ್ಲಿ ಪೈಪೋಟಿ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ ಇದೆ. ಜೆಡಿಎಸ್‌ನಿಂದ ಶಿವಮೂರ್ತಿಗೌಡ ಒಬ್ಬರೇ ಆಕಾಂಕ್ಷಿ.
ಜಿಲ್ಲೆ: ದಾವಣಗೆರೆ
ಕ್ಷೇತ್ರ-07
ಬಿಜೆಪಿ-05
ಕಾಂಗ್ರೆಸ್-02