ಶಿವಮೊಗ್ಗ ಲೋಕಸಭೆ ಕ್ಷೇತ್ರ ಜೆಡಿಎಸ್​ಗೆ, ಅಭ್ಯರ್ಥಿಯೂ ಫೈನಲ್.!

By Web DeskFirst Published Feb 25, 2019, 7:58 PM IST
Highlights

2019 ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯೊಂದಿಗೆ ಅಖಾಡಕ್ಕಿಳಿಯಲಿದ್ದು, ಸೀಟು ಹಂಚಿಕೆ ಮೊದಲೇ ಜೆಡಿಎಸ್ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.

ಬೆಂಗಳೂರು, [ಫೆ.25]: ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಮೊದಲೇ ಜೆಡಿಎಸ್​​ ವರಿಷ್ಠ ಹೆಚ್​​.ಡಿ.ದೇವೇಗೌಡ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. 

ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತರಾಗಿದ್ದ ಮಧು ಬಂಗಾರಪ್ಪರನ್ನೇ ಮತ್ತೇ ಸ್ಪರ್ಧಿಸುವಂತೆ ದೇವೇಗೌಡರು ಹೇಳಿದ್ದಾರೆ. 

ಇಂದು [ಸೋಮವಾರ] ಬೆಂಗಳೂರಿನ ಸದಾಶಿವನಗರದಲ್ಲಿರುವ ಮಧುಬಂಗಾರಪ್ಪ ನಿವಾಸಕ್ಕೆ ಭೇಟಿ ನೀಡಿ ಲೋಕಸಭಾ ಚುನಾವಣೆ ಬಗ್ಗೆ ಮಾತುಕತೆ ನಡೆಸಿದರು.ಇದೇ ವೇಳೆ ಶಿವಮೊಗ್ಗ ಕ್ಷೇತ್ರಕ್ಕೆ ಮಧುಬಂಗಾರಪ್ಪ ಹೆಸರನ್ನು ಘೋಷಣೆ ಮಾಡಿದರು.

ಟಿಕೆಟ್ ಫೈಟ್: ಶಿವಮೊಗ್ಗದಿಂದ ಮಧು ಸ್ಪರ್ಧಿಸ್ತಾರಾ? ಗೀತಾ ಕಣಕ್ಕಿಳೀತಾರಾ?

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮಧುಬಂಗಾರಪ್ಪ, 'ದೇವೇಗೌಡ ಅವರು ನಮ್ಮ ಮನೆಗೆ ಬಂದಿದ್ದು  ನನ್ನ ತಂದೆಯವರೇ ಬಂದಷ್ಟು ಖುಷಿಯಾಗಿದ್ದು, ಕಾಂಗ್ರೆಸ್ -ಜೆಡಿಎಸ್ ನಾಯಕರು ಒಪ್ಪಿದ್ದಾರೆ. ಆ ಕಾರಣಕ್ಕಾಗಿಯೇ ದೇವೇಗೌಡರು ನನ್ನ ಹೆಸರು ಫೈನಲ್ ಮಾಡಿದ್ದಾರೆ' ಎಂದು ಕನ್ಫರ್ಮ್ ಮಾಡಿದರು.

ಈ ಮೂಲಕ ಮತ್ತೆ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮಧುಬಂಗಾರಪ್ಪ ನಡುವೆ ಜಿದ್ದಾಜಿದ್ದಿಗೆ ಶಿವಮೊಗ್ಗ ಸಾಕ್ಷಿಯಾವುದಂತೂ ಪಕ್ಕಾ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ವಿರುದ್ಧ ಸುಮಾರು 4 ಲಕ್ಷ ಮತಗಳಿಂದ ಭರ್ಜರಿ ಜಯಗಳಿಸಿದ್ದರು. ಬಳಿಕ ಯಡಿಯೂರಪ್ಪ ವಿಧಾನಸಭೆಗೆ ಆಯ್ಕೆಯಾಗಿದ್ದರಿಂದ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ತದನಂತರ ನಡೆದ ಉಪಚುನಾವಣೆಯಲ್ಲಿ ಬಿಎಸ್.ವೈ ತಮ್ಮ ಪುತ್ರ ರಾಘವೇಂದ್ರ ಅವರನ್ನು ಕಣಕ್ಕಿಳಿಸಿದ್ದರು. ಆದ್ರೆ ರಾಘವೇಂದ್ರ ಗೆಲುವಿನ ಅಂತರ ಸುಮಾರು 50 ಸಾವಿರ ಮತಗಳು ಮಾತ್ರ.

ಇನ್ನು ಎಲೆಕ್ಷನ್ ಗೆ ಕೇವಲ 10 ರಿಂದ 15 ದಿನ ಬಾಕಿ ಇರುವಾಗಲೇ ವಿದೇಶ ಪ್ರವಾಸದಲ್ಲಿದ್ದ ಮಧು ಬಂಗಾರಪ್ಪ ಅವರನ್ನು ಕರೆಸಿಕೊಂಡು ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದರು. ಆದರೂ ಸಹ ಜೆಡಿಎಸ್ ಗಮನರ್ಹ ಮತಗಳನ್ನು ಪಡೆದಿದದೆ. 

ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಮಧುಬಂಗಾರಪ್ಪ ಅವರನ್ನು ಕಣಕ್ಕಳಿಸಿದರೆ ವರ್ಕೌಟ್ ಆಗಬಹುದು ಎನ್ನುವುದು ಜೆಡಿಎಸ್ ಲೆಕ್ಕಾಚಾರ. ಹೀಗಾಗಿ ದೊಡ್ಡಗೌಡ್ರು ಪುನಃ ಮಧು ಬಂಗಾರಪ್ಪಗೆ ಮತ್ತೊಮ್ಮೆ ಚಾನ್ಸ್ ನೀಡಿದ್ದಾರೆ.

click me!