ಕೇಂದ್ರ ಮಾಜಿ ಸಚಿವ, ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದ್ರೆ ಸಕ್ರಿಯ ರಾಜಕಾರಣದಲ್ಲಿ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ, (ಫೆ.25): 'ಇದೇ ನನ್ನ ಕೊನೆ ಚುನಾವಣೆ (ಲೋಕಸಭಾ ಚುನಾವಣೆ 2019). ಮುಂದಿನ ಎಲೆಕ್ಷನ್‌ಗೆ ಸ್ಪರ್ಧಿಸಿದ್ರೆ ಥೂ, ಥೂ ಅಂತ ಉಗಿಯಿರಿ' ಎಂದು ದಾವಣಗೆರೆ ಬಿಜೆಪಿ ಸಂಸದ ಜಿ. ಎಂ. ಸಿದ್ದೇಶ್ವರ್ ಹೇಳಿದ್ದಾರೆ.
ಇದೇ ನನ್ನ ಕೊನೆ ಚುನಾವಣೆ. ನಂತರ ಚುನಾವಣಾ ರಾಜಕಾರಣದಿಂದ ವಿಮುಖನಾಗುತ್ತೇನೆ. ಆದ್ರೆ, ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದ ಜಿ ಎಂ ಸಿದ್ದೇಶ್ವರ್ ಸ್ಪಷ್ಟಪಡಿಸಿದರು.
ಟಿಕೆಟ್ ಫೈಟ್: ದಾವಣಗೆರೆಯಲ್ಲಿ ಕೈ-ಕಮಲ ನಡುವೆ ಪ್ರಬಲ ಪೈಪೋಟಿ
ನಮ್ಮ ಅಪ್ಪನಿಗೆ ಮೂರು ಬಾರಿ ಬಿಜೆಪಿಯಿಂದ ಟಿಕೇಟ್ ಕೊಡಲಾಗಿದೆ. ನನಗೆ ಮೂರು ಬಾರಿ ಕೊಡಲಾಗಿದೆ. ಟಿಕೇಟ್ ಎನ್ನುವುದು ನಮ್ಮ ಮನೆ ಆಸ್ತಿಯಲ್ಲ. ಬೇರೆಯವರಿಗೆ ಅವಕಾಶ ದೊರಕಲಿ ಎಂಬ ಉದ್ದೇಶದಿಂದ ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ಅವರೂ ಇದೇ ರೀತಿ ಹೇಳುತ್ತಾ ಚುನಾವಣೆಗೆ ನಿಲ್ಲುತ್ತಿದ್ದಾರೆ ಎನ್ನುವ ಪ್ರಶ್ನೆಗೆ, ಅದನ್ನು ಅವರನ್ನು ಕೇಳಿ. ನಾನು ಒಂದು ಸಾರಿ ನಿರ್ಧಾರ ಮಾಡಿದ ಮೇಲೆ ಮುಗಿಯಿತು. ನಾವು ಇನ್ನೊಬ್ಬರ ರೀತಿ ಸುಳ್ಳು ಹೇಳೊಲ್ಲ ಎಂದರು.
ಇನ್ನು ಇದೇ ವೇಳೆ ಈ ಬಾರಿಯ ಲೋಕಸಭಾ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಟಿಕೇಟ್ ಕನ್ಫರ್ಮ್ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಹಾಗಾಗಿ ಸರ್ವೇ ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಈ ಬಾರಿಯ ದಾವಣಗೆರೆ ಲೋಕಸಭಾ ಟಿಕೇಟ್ ಸಿದ್ದೇಶ್ವರ್ ಅವರಿಗೆ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಯಾಕಂದ್ರೆ ದಾವಣಗೆರೆಯಲ್ಲಿ ಸಿದ್ದೇಶ್ವರ್ ಅವರನ್ನು ಬಿಟ್ಟರೆ ಬಿಜೆಪಿಗೆ ಬೇರೆ ಯಾರು ಇಲ್ಲ.
ಇನ್ನು ಕಾಂಗ್ರೆಸ್‌ನಿಂದ ಶಾಮನೂರು ಶಿವಶಂಕ್ರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಮತ್ತೊಂದೆಡೆ ನಾನು ಟಿಕೇಟ್ ಆಕಾಂಕ್ಷಿ ಅಂತ ಸಿದ್ದರಾಮಯ್ಯ ಪರಮಾಪ್ತ ಎಚ್.ಎಂ.ರೇವಣ್ಣ ಹೇಳಿದ್ದಾರೆ.