ಕಾಂಗ್ರೆಸ್, ಜೆಡಿಎಸ್‌ನಲ್ಲಿ ಉಚ್ಛಾಟನೆ ಪರ್ವ!| ಪತಿಯೊಂದಿಗೆ ನಾಮಪತ್ರ ಸಲ್ಲಿಸಿದ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಇತರ ಮೂವರು ಜೆಡಿಎಸ್‌ನಿಂದ ಉಚ್ಛಾಟನೆ
ಬೆಂಗಳೂರು[ನ.21]: ಉಪಚುನಾವಣೆಯಲ್ಲಿ ಪತಿಯ ಜತೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಬಿಬಿಎಂಪಿ ಹಾಲಿ ಸದಸ್ಯೆಯೂ ಆಗಿರುವ ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ ಸೇರಿದಂತೆ ಮೂವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಕಾರಣ ನೀಡಿ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಈ ವಿಷಯ ತಿಳಿಸಿದರು. ಹೇಮಲತಾ ಜತೆಗೆ ಬಿಬಿಎಂಪಿ ಸದಸ್ಯ ಎಂ.ಮಹಾದೇವ್ ಮತ್ತು ಸ್ಥಳೀಯ ಮುಖಂಡ ಎನ್.ಜಯರಾಮ್ ಅವರನ್ನು ಸಹ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಕಾರಣಕ್ಕಾಗಿ ಉಚ್ಚಾಟಿಸಲಾಗಿದೆ ಎಂದರು.
undefined
ಮಹಾಲಕ್ಷ್ಮೇ ಲೇಔಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೋಪಾಲಯ್ಯ ನಾಮಪತ್ರ ಸಲ್ಲಿಸಿದ್ದಾರೆ. ಅವರ ಪತ್ನಿ ಹೇಮಲತಾ ಸಹ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ, ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪ್ರಚಾರ ಕೈಗೊಂಡು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿಗೆ ಆಮಿಷವೊಡ್ಡುವ ಮೂಲಕ ಅವರ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಸಲಾಗಿದೆ. ಬಸವೇಶ್ವರ ನಗರ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ಮೂಲಕ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಅಧಿಕಾರದ ದುರಾಸೆಯಿಂದ ಗೆದ್ದ ಬಂದ ಪಕ್ಷವನ್ನು ಮರೆತಿದ್ದಾರೆ ಎಂದು ಕಿಡಿಕಾರಿದರು.
ಕಣದಿಂದ ಹಿಂದೆ ಸರಿದಿಲ್ಲ: ನಾಶಿ
ತಾವು ಕಣದಿಂದ ಹಿಂದೆ ಸರಿದಿಲ್ಲ ಎಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ ಸ್ಪಷ್ಟಪಡಿಸಿದ್ದಾರೆ.
ನಾಶಿ ಅವರು ಕಣದಿಂದ ಹಿಂದೆ ಸರಿದಿದ್ದಾರೆ ಎಂಬ ವದಂತಿ ಬುಧವಾರ ಕ್ಷೇತ್ರದಾದ್ಯಂತ ಹಬ್ಬಿತ್ತು. ನಾಶಿ ಅವರ ಮನೆಯ ಮುಂಭಾಗದಲ್ಲಿನ ಪಕ್ಷದ ನಾಯಕರನ್ನು ಒಳಗೊಂಡ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದು ಇಂಬು ನೀಡುವಂತಿತ್ತು.
ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಗಿರೀಶ್ ನಾಶಿ, ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತಿದ್ದೇನೆ ಎಂಬುದಾಗಿ ಸುಳ್ಳು ವದಂತಿಗಳು ಹಬ್ಬಿಸಲಾಗುತ್ತಿದೆ. ಆದರೆ, ನಾನು ಚುನಾವಣೆ ಕಣದಿಂದ ಹಿಂದೆ ಸರಿಯುವುದಿಲ್ಲ. ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ಇದೆ. ಸುಳ್ಳು ಸುದ್ದಿಗಳಿಗೆ ಮತದಾರರು ಕಿವಿಗೊಡಬಾರದು ಎಂದರು.