ಭೂಸುಧಾರಣೆ ಬಗ್ಗೆ ಜೆಡಿಎಸ್‌ ದ್ವಂದ್ವ ನಿಲುವು: ಹೊರಗೆ ವಿರೋಧ, ಸದನದೊಳಗೆ ಬೆಂಬಲ

By Kannadaprabha News  |  First Published Sep 27, 2020, 8:13 AM IST

ಕಾಯ್ದೆ ತಿದ್ದುಪಡಿಗೆ ಸದನದ ಹೊರಗೆ ವಿರೋಧ| ಸದನದಲ್ಲಿ ತಿದ್ದುಪಡಿ ವಿಧೇಯಕಕ್ಕೆ ಎಚ್‌ಡಿಕೆ ಸ್ವಾಗತ| ಲೋಪದೋಷಗಳನ್ನು ಸರಿಪಡಿಸುವುದು ಹೊರತುಪಡಿಸಿದರೆ ವಿಧೇಯಕ ಜಾರಿಯಾದರೆ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ವಿಧೇಯಕವನ್ನು ಸ್ವಾಗತಿಸುತ್ತೇನೆ ಎಂದ ಎಚ್‌ಡಿಕೆ| 


ಬೆಂಗಳೂರು(ಸೆ.27): ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಭೂ ಸುಧಾರಣಾ (ತಿದ್ದುಪಡಿ) ವಿಧೇಯಕ ವಿರುದ್ಧ ಜೆಡಿಎಸ್‌ ದ್ವಂದ್ವ ನಿಲುವು ಹೊಂದಿರುವ ಅನುಮಾನ ವ್ಯಕ್ತವಾಗಿದ್ದು, ಸದನದ ಹೊರಗೆ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲಿ ಕೆಲ ಸಲಹೆಗಳನ್ನು ನೀಡುವ ಜೊತೆಗೆ ವಿಧೇಯಕವನ್ನು ಸ್ವಾಗತಿಸಿರುವುದು ಅಚ್ಚರಿಯನ್ನುಂಟು ಮಾಡಿದೆ.

ವಿಧೇಯಕ ಜಾರಿಗೊಳಿಸದಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಹಾಸನದಲ್ಲಿ ಹೋರಾಟ ನಡೆಸಿದರೆ, ಎಚ್‌.ಡಿ.ಕುಮಾರಸ್ವಾಮಿ ಸದನದಲ್ಲಿ ವಿಧೇಯಕವನ್ನು ಸ್ವಾಗತಿಸುವುದರೊಂದಿಗೆ ಕೆಲವೊಂದು ಲೋಪದೋಷಗಳನ್ನು ಸರಿಪಡಿಸುವಂತೆ ಸಲಹೆ ನೀಡಿದರು.

Tap to resize

Latest Videos

ವಿಧೇಯಕ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 79 ಎ,ಬಿ ಕಲಂನಲ್ಲಿ ಕೆಲವು ನ್ಯೂನತೆಗಳು ಇವೆ. ಕೆಲವರು ಇದನ್ನು ದ್ವೇಷಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಲೋಪದೋಷಗಳನ್ನು ಸರಿಪಡಿಸುವುದು ಹೊರತುಪಡಿಸಿದರೆ ವಿಧೇಯಕ ಜಾರಿಯಾದರೆ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ವಿಧೇಯಕವನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು. ಇದೇ ವೇಳೆ 79ಎ,ಬಿ ಕಲಂನ ನ್ಯೂನತೆಗಳಿಂದ ತಾವು ಜಮೀನು ಖರೀದಿಸುವ ವೇಳೆ ಎದುರಾದ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ವಿರೋಧದ ನಡುವೆಯೂ ಕರ್ನಾಟಕ ಭೂಸುಧಾರಣೆ ತಿದ್ದುಪಡಿ ವಿಧೇಯಕ ಅಂಗೀಕಾರ!

undefined

ಕೊರೋನಾ ಪರಿಸ್ಥಿತಿ ಎದುರಾಗಿರುವಾಗ ಕೆಲವು ಸಂಶಯ, ಅನುಮಾನ ಇರುವ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ತರುವ ಅವಶ್ಯಕತೆ ಏನಿದೆ? ವಿಧೇಯಕ ಜಾರಿಗೊಳಿಸುವ ಮುನ್ನ ಕೃಷಿ, ರೈತ ಸಂಘಟನೆ ಮತ್ತು ಕೃಷಿ ತಜ್ಞರ ಜತೆ ಚರ್ಚೆ ಮಾಡಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿತ್ತು. ನೂರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಮರೆತು ಧರಣಿ ಕುಳಿತಿದ್ದಾರೆ. ಇದಕ್ಕೆ ಆಸ್ಪದ ಕೊಡುವ ಮೂಲಕ ಕೊರೋನಾ ಹರಡುವಿಕೆಗೆ ನಾವೇ ಕಾರಣರಾಗುತ್ತೇವೆ. ಕಾಯ್ದೆಯನ್ನು ತರಾತುರಿಯಲ್ಲಿ ತರುವ ಅಗತ್ಯ ಇರಲಿಲ್ಲ. ತರಾತುರಿಯಲ್ಲಿ ತಂದಿರುವುದನ್ನು ಗಮನಿಸಿದರೆ ಮತ್ತೆ ಜಮೀನ್ದಾರಿ ಪದ್ಧತಿ ಜಾರಿಯಾಗಲಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.

ಕೃಷಿ ಕ್ಷೇತ್ರವನ್ನು ಲಘುವಾಗಿ ಪರಿಗಣಿಸಬಾರದು. ರೈತ ಲಾಭ ಬರಲಿ, ಬಿಡಲಿ ಹೊಲದಲ್ಲಿ ದುಡಿಯುತ್ತಾನೆ. ಬೆಂಗಳೂರಲ್ಲಿ ಬಡಾವಣೆಗಾಗಿ ಭೂಮಿ ವಶಪಡಿಸಿಕೊಂಡ ಬಳಿಕ ರೈತರಿಗೆ ಏನು ಅನುಕೂಲವಾಗಿದೆ? ಬೆಂಗಳೂರು ನಗರದ ಸುತ್ತಮುತ್ತಲಿನ ಜಮೀನು ಖರೀದಿಗೆ ಪೈಪೋಟಿ ಇರಬಹುದು. ಇನ್ನು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ಅರ್ಥವೇ ಇಲ್ಲ ಎಂದರು.
 

click me!