RR ನಗರ ಉಪಚುನಾವಣೆ: ನನ್ನ ವಿರುದ್ಧ ಅಪಪ್ರಚಾರ, ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ

By Kannadaprabha News  |  First Published Oct 27, 2020, 10:10 AM IST

ನನ್ನ ವಿರುದ್ಧ ತೇಜೋವಧೆ ಮಾಡಲು ಷಡ್ಯಂತ್ರ ಮಾಡಿರುವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ನನಗೆ ನ್ಯಾಯ ಒದಗಿಸುವಂತೆ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ| ನಾನು ಮಾರಾಟವಾಗಿದ್ದೇನೆ ಎಂಬುದಾಗಿ ಸುಳ್ಳು ಪ್ರಚಾರ| ಮಾರಾಟ ಆಗಿರುವುದು ನಾನಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ನವರು ಮಾರಾಟ| 


ಬೆಂಗಳೂರು(ಅ.27): ಭಯದಿಂದ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮತ್ತು ತೇಜೋವಧೆ ಮಾಡಲಾಗುತ್ತಿದ್ದು, ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ ಎಂದು ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ತೇಜೋವಧೆ ಮಾಡಲು ಷಡ್ಯಂತ್ರ ಮಾಡಿರುವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ನನಗೆ ನ್ಯಾಯ ಒದಗಿಸುವಂತೆ ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದೆ. ನಾನು ಮಾರಾಟವಾಗಿದ್ದೇನೆ ಎಂಬುದಾಗಿ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಮಾರಾಟ ಆಗಿರುವುದು ನಾನಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ನವರು ಮಾರಾಟವಾಗಿದ್ದಾರೆ. ನನ್ನ ಮೇಲೆ ಭಯ ಹುಟ್ಟಿರುವುದರಿಂದಲೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸುಖಾಸುಮ್ಮನೆ ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ. ಜೆಡಿಎಸ್‌ ಸಾಮಾನ್ಯ ಕಾರ್ಯಕರ್ತರಾಗಿದ್ದ ನನ್ನನ್ನು ಗುರುತಿಸಿ ಟಿಕೆಟ್‌ ನೀಡಿರುವುದು ತಪ್ಪೇ? ಯುವಕರು ಬೆಳೆಯಬಾರದೆ ಎಂದು ಪ್ರಶ್ನಿಸಿದರು.

Latest Videos

undefined

ವೋಟ್‌ ಫಿಕ್ಸಿಂಗ್‌ ಆಗಿದೆ:

ಉಪಚುನಾವಣೆ ಗೆಲ್ಲಲು ಒಂದು ಕಡೆ ಜಾತಿ, ಮತ್ತೊಂದೆಡೆ ಅಧಿಕಾರ ಬಳಸಲಾಗುತ್ತಿದೆ. ಕೊರೋನಾ ವೈರಸ್‌ಗಿಂತಲೂ ಇಂತಹ ನಾಯಕರು ಅಪಾಯಕಾರಿ. ಮತದಾರರಿಗೆ ಹಣ, ಹೆಂಡ ಹಂಚಿದ್ದಾಯಿತು, ಈಗ ಸೆಟ್‌ಆಪ್‌ ಬಾಕ್ಸ್‌ ನೀಡುತ್ತಿದ್ದಾರೆ ಎಂದು ಜೆಡಿಎಸ್‌ ಮುಖಂಡ ಟಿ.ಎ.ಶರವಣ ಕಿಡಿಕಾರಿದ್ದಾರೆ.

ಉಪಚುನಾವಣಾ ಕದನ: 'ಆರ್‌.ಆರ್‌.ನಗರದಲ್ಲಿ ಜೆಡಿಎಸ್‌ನದ್ದೇ ಗೆಲುವು'

ಚುನಾವಣೆ ವೇಳೆ ಹನುಮಂತರಾಯಪ್ಪ ಅವರಿಗೆ ಒಕ್ಕಲಿಗರ ಮೇಲೆ ಪ್ರೀತಿ ಬಂದಿದೆ. ಜಾತಿ ಹೆಸರು ಹೇಳುವುದಕ್ಕಿಂತ ಮುಂಚೆ ಸಮಾಜಕ್ಕೆ ಅವರು ಏನು ಮಾಡಿದ್ದಾರೆ ಎಂಬುದನ್ನು ಹೇಳಬೇಕು. ಐಎಎಸ್‌ ಅಧಿಕಾರಿ ಡಿ.ಕೆ.ರವಿ ಕುಟುಂಬ ಸಹ ಒಕ್ಕಲಿಗರಾಗಿದ್ದು, ಅವರಿಗೇಕೆ ಸಹಾಯ ಮಾಡಲಿಲ್ಲ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಒಕ್ಕಲಿಗರೇ. ಚುನಾವಣೆಯಲ್ಲಿ ಜಾತಿ ರಾಜಕಾರಣ ಏಕೆ ಮಾಡುತ್ತಿದ್ದಾರೆ. ಹನುಮಂತರಾಯಪ್ಪ ಅವರು ನಗರಸಭಾಧ್ಯಕ್ಷರಾಗಿದ್ದಾಗ ಏನು ಕೊಡುಗೆ ನೀಡಿದ್ದಾರೆ. ಹಣಬಲವಿಲ್ಲದೆ ಚುನಾವಣೆ ಎದುರಿಸಲು ರಾಷ್ಟ್ರೀಯ ಪಕ್ಷಗಳು ಸಿದ್ದ ಇವೆಯೇ ಎಂದು ಕಿಡಿಕಾರಿದರು.

ಕಾಂಗ್ರೆಸ್‌ ನಾಯಕರು ಜಾತಿ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ. ಹುಟ್ಟಿದಾಗ ಜಾತಿ-ಜಾತಕ, ಮಧ್ಯದಲ್ಲಿ ನಾಟಕ, ಸತ್ತಾಗ ಸೂಚಕ ಎಂದು ಎಲ್ಲರಿಗೂ ಗೊತ್ತಿದೆ. ಜಾತಿ ಬಿಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಸರ್ಕಾರ ಮ್ಯಾಚ್‌ಫಿಕ್ಸಿಂಗ್‌ ರೀತಿ ವೋಟ್‌ ಫಿಕ್ಸಿಂಗ್‌ ಮಾಡಿರುವಂತೆ ಕಾಣುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣಾ ಅಕ್ರಮ ಎಸಗುತ್ತಿದ್ದರೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

click me!