ಆರ್‌ಆರ್‌ ನಗರ ಬೈಎಲೆಕ್ಷನ್‌: ರಾಜರಾಜೇಶ್ವರಿ ದೇಗುಲದಲ್ಲಿ ಉರುಳು ಸೇವೆ ಸಲ್ಲಿಸಿದ ಕುಸುಮಾ

By Kannadaprabha NewsFirst Published Oct 27, 2020, 9:09 AM IST
Highlights

ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಬಿರುಸಿನ ಪ್ರಚಾರ| ಪ್ರಜ್ಞಾವಂತ ಹೆಣ್ಣುಮಗಳಿಗೆ ಮತ ನೀಡಿ: ಡಿಕೆಶಿ| ಇಂದು ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ|  

ಬೆಂಗಳೂರು(ಅ.27): ರಾಜರಾಜೇಶ್ವರಿ ವಿಧಾನಸಭೆ ಉಪಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಸೋಮವಾರ ಬಿರುಸಿನ ಪ್ರಚಾರ ನಡೆಸಿದ್ದು, ನಾನು ಅಧಿಕಾರಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ನಿಮ್ಮ ಮನೆ ಮಗಳಾಗಿ ನಿಮ್ಮ ಸೇವೆಗೆ ಅವಕಾಶ ಕೋರಿ ಬಂದಿದ್ದೇನೆ. ನಿಮ್ಮ ಸೇವಕಿಯಾಗಿ ಕೆಲಸ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು. ರಾಜರಾಜೇಶ್ವರಿನಗರದಲ್ಲಿ ಬೆಳಗ್ಗೆಯಿಂದಲೇ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಿದ ಅವರು ಕ್ಷೇತ್ರದ ರಾಜರಾಜೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಉರುಳು ಸೇವೆ ಸಲ್ಲಿಸಿದರು.

ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಸ್ಥಳೀಯ ಮುಖಂಡರೊಂದಿಗೆ ಹಲವೆಡೆ ಪ್ರಚಾರ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ವಿವಿಧ ಭಾಗಗಳಲ್ಲಿ ಪಾದಯಾತ್ರೆ, ಮೆರವಣಿಗೆ ನಡೆಸುತ್ತಿದ್ದೇನೆ. ಜನತೆ ಸ್ವಯಂ ಪ್ರೇರಿತವಾಗಿ ಜೊತೆಯಾಗಿ ಉತ್ಸಾಹ ತುಂಬುತ್ತಿದ್ದಾರೆ. ಕ್ಷೇತ್ರದ ಹಲವು ಸಮಸ್ಯೆಗಳು ಹಾಗೂ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುರಿತು ನನ್ನದೇ ದೃಷ್ಟಿಕೋನ ಚಿಂತನೆಗಳಿಗೆ ಇನ್ನಷ್ಟು ಹೊಸ ರೂಪ ಸಿಗುತ್ತಿದೆ ಎಂದರು.
ನಿಮ್ಮ ಸೇವೆಯೇ ನಾನು ಬಂದಿರುವ ಪ್ರಮುಖ ಉದ್ದೇಶ. ಹೀಗಾಗಿ ನಿಮ್ಮ ಮನೆ ಮಗಳಾದ ನನಗೆ ಆಶೀರ್ವಾದ ಮಾಡಿ. ನಿಮ್ಮೆಲ್ಲರ ಪ್ರತಿನಿಧಿಯಾಗಿ, ಸೇವಕಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನ.3ರಂದು ನಡೆಯುವ ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡಿ ಆಶೀರ್ವಾದಿಸಿ ಎಂದು ಮನವಿ ಮಾಡಿದರು.

RR ನಗರ ಬೈ ಎಲೆಕ್ಷನ್: ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ FIR ದಾಖಲಿಸಿದ್ದ ಇನ್ಸ್‌ಪೆಕ್ಟರ್‌ಗೆ ಶಾಕ್

ಇಂದು ಸಿದ್ದರಾಮಯ್ಯ ಪ್ರಚಾರ:

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು(ಮಂಗಳವಾರ) ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಜೆ.ಪಿ. ಪಾರ್ಕ್ ವಾರ್ಡ್‌ನಲ್ಲಿ ಪ್ರಚಾರ ನಡೆಸಲಿದ್ದು, ಬಳಿಕ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಯಶವಂತಪುರ ವಾರ್ಡ್‌ನಲ್ಲಿ ಪ್ರಚಾರ ಮಾಡಲಿದ್ದಾರೆ.

ಪ್ರಜ್ಞಾವಂತ ಹೆಣ್ಣುಮಗಳಿಗೆ ಮತ ನೀಡಿ

ನಾಗರಬಾವಿಯಲ್ಲಿ ವಾಸವಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮೂಲನಿವಾಸಿಗಳ ಸಭೆ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ನೀವೆಲ್ಲರೂ ಪ್ರಜ್ಞಾವಂತ ಹಾಗೂ ವಿದ್ಯಾವಂತ ಹೆಣ್ಣು ಮಗಳಾದ ಕುಸುಮಾ ಅವರಿಗೆ ಮತ ನೀಡಬೇಕು. ಕಳೆದ ಚುನಾವಣೆಯಲ್ಲಿ ಮೂವರು ಮಹಿಳೆಯರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ಇದೀಗ ಮತ್ತೊಮ್ಮೆ ಯುವ ಮಹಿಳೆಗೆ ಅವಕಾಶ ನೀಡಿದ್ದೇವೆ. ಬಿಜೆಪಿಯವರು ಹಾಗೂ ಜೆಡಿಎಸ್‌ನ ಪ್ರಬುದ್ಧ ಮತದಾರರೂ ಸಹ ಇವರಿಗೆ ಬೆಂಬಲ ನೀಡುತ್ತಿದ್ದಾರೆ. ನೀವೆಲ್ಲರೂ ಜಾತಿ, ಧರ್ಮ ಬಿಟ್ಟು ತೀರ್ಮಾನ ಮಾಡಬೇಕು ಎಂದು ಕರೆ ನೀಡಿದರು.

ಕುಸುಮಾರನ್ನು ಬೆಂಬಲಿಸಲು ಏರ್ಪಡಿಸಿದ್ದ ಕೋಲಾರ, ಚಿಕ್ಕಬಳ್ಳಾಪುರ ಮೂಲನಿವಾಸಿಗಳ ಸಭೆಯಲ್ಲಿ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಆರ್‌. ಸುದರ್ಶನ್‌, ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಎಚ್‌, ಡಿ.ಕೆ. ರವಿ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಮುರಳೀಗೌಡ ಸೇರಿ ಹಲವರು ಹಾಜರಿದ್ದರು.
 

click me!