'16 ಸಾವಿರ ಸ್ಥಾನಗಳಲ್ಲಿ ಜೆಡಿಎಸ್‌ಗೆ ಗೆಲುವು'

By Kannadaprabha NewsFirst Published Feb 15, 2021, 9:44 AM IST
Highlights

ಜೆಡಿಎಸ್ 16 ಸಾವಿರ ಸ್ಥಾನಗಳಲ್ಲಿ ಜಯಗಳಿಸಿ ಹೆಚ್ಚು ಸಾಧನೆ ಮಾಡಿದೆ. ತನ್ನ ಶಕ್ತಿ ಕಡಿಮೆ ಏನಿಲ್ಲ ಎಂದು ಜೆಡಿಎಸ್ ಮುಖಂಡ ಎಚ್.ಡಿ ದೇವೇಗೌಡ ಹೇಳಿದ್ದಾರೆ. 

ಬೆಂಗಳೂರು (ಫೆ.15):  ಪಕ್ಷವನ್ನು ಸಂಘಟಿಸಲು ನಮ್ಮಲ್ಲಿ ಶಕ್ತಿ ಇದೆಯಾದರೂ ಐಕ್ಯತೆ ಇಲ್ಲ. ಸಣ್ಣಪುಟ್ಟವ್ಯತ್ಯಾಸಗಳನ್ನು ಪರಿಗಣಿಸದೆ ಐಕ್ಯತೆಯಿಂದ ಹೋರಾಟ ನಡೆಸಬೇಕು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕರೆ ನೀಡಿದ್ದಾರೆ.

ಪಕ್ಷದ ಬಲವರ್ಧನೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರನ್ನು ಅಭಿನಂದಿಸಲು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಭಾನುವಾರ ನಡೆದ ಜೆಡಿಎಸ್‌ ವಿಚಾರ, ವಿಕಾಸ, ವಿಕೇಂದ್ರೀಕರಣ ಸಮಾವೇಶದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು, ನಾಯಕರೆಲ್ಲಾ ಐಕ್ಯತೆಯಿಂದ ಹೋರಾಟ ನಡೆಸಿ ಪಕ್ಷವನ್ನು ಸಂಘಟಿಸಬೇಕು. ಪಕ್ಷಕ್ಕೆ ಚೈತನ್ಯ ತುಂಬಲು ಪಕ್ಷದ ರಾಜ್ಯಾಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ರೂಪರೇಷೆ ರೂಪಿಸಿದ್ದಾರೆ. ಪಕ್ಷಕ್ಕೆ ಮಾರ್ಗದರ್ಶನ ಮಾಡುವ ಕೆಲಸ ಮಾತ್ರ ನಾನು ಮಾಡುತ್ತೇನೆ. ಪಕ್ಷ ಸಂಘಟನೆಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

ಕುಮಾರಸ್ವಾಮಿಗೆ ಬುದ್ಧಿ ಇಲ್ಲಾಂತ ನಂಗೂ ಇಲ್ವಾ?: ಸಿದ್ದರಾಮಯ್ಯ ..

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷವನ್ನು ಲಘುವಾಗಿ ಕಾಣಲಾಗಿತ್ತು. ಆದರೆ, ಚುನಾವಣೆಯಲ್ಲಿ 16 ಸಾವಿರದಷ್ಟುಜೆಡಿಎಸ್‌ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಯಾರಿಗೂ ನಾವು ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ. ನಮ್ಮಲ್ಲಿ ಶಕ್ತಿ ಇದೆ, ಆದರೆ ಐಕ್ಯತೆ ಇಲ್ಲ. ಸೀಟು ಹಂಚಿಕೆ ವೇಳೆ ಸಣ್ಣಪುಟ್ಟವ್ಯತ್ಯಾಸಗಳು ಇರಬಹುದು. ಅದನ್ನು ಪರಿಗಣಿಸದೆ ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಬಹಳಷ್ಟುಮಂದಿ ಪಕ್ಷಕ್ಕೆ ನಿಷ್ಠೆಯಿಂದ ದುಡಿಯುತ್ತಿದ್ದಾರೆ. ರಾಯಚೂರು, ಯಾದಗಿರಿ, ವಿಜಯಪುರದಲ್ಲಿ ಪಕ್ಷದ ಕಾರ್ಯಕರ್ತರು ಶಕ್ತಿ ತುಂಬಿದ್ದಾರೆ. ಪಕ್ಷದ ಬಗ್ಗೆ ಕೆಲವರು ಲಘುವಾಗಿ ಮಾತನಾಡಿದ್ದು, ಈಗ ಅದಕ್ಕೆ ಉತ್ತರ ನೀಡುವುದಿಲ್ಲ. ಚುನಾವಣೆ ಬಳಿಕ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ಟಾಂಗ್‌ ಕೊಟ್ಟರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಜೆಡಿಎಸ್‌ ಎಲ್ಲಿದೆ ಎಂದು ಕೇಳುತ್ತಾರೆ. ಬೀದರ್‌ನಿಂದ ಚಾಮರಾಜನಗರದವರೆಗೂ ಪಕ್ಷ ಇದೆ. ವಿಧಾನಸೌಧದಲ್ಲಿ ಜೆಡಿಎಸ್‌ ಬಹುಮತ ಪಡೆಯಲು ನಾವು ಪಣ ತೊಡಬೇಕು. 120 ಸ್ಥಾನಗಳನ್ನು ಗೆಲ್ಲಲು ನಾವು ಶ್ರಮವಹಿಸಬೇಕು. ಕಾಂಗ್ರೆಸ್‌ನವರು 130ರಿಂದ 78 ಸ್ಥಾನಕ್ಕೆ ಬಂದಿದ್ದಾರೆ. ಬಿಜೆಪಿ ಅವಧಿಯಲ್ಲಿ ಕೆಲಸಗಳಾಗುತ್ತಿಲ್ಲ. ಬಿಜೆಪಿ ಶಾಸಕರೇ ನಮ್ಮ ಕ್ಷೇತ್ರಗಳಿಗೆ ಹಣ ಕೊಡುತ್ತಿಲ್ಲ ಎನ್ನುತ್ತಿದ್ದಾರೆ. ಬೇರೆ ಪಕ್ಷದವರ ಜತೆ ಮೈತ್ರಿ ಸಾಕಾಗಿದೆ. ನಮಗೆ ಯಾರ ಸಹವಾಸವೂ ಬೇಡ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಸ್ವಂತ ಬಲದ ಮೇಲೆ ಗೆದ್ದು ಅಧಿಕಾರಕ್ಕೇರಲು ಶ್ರಮಿಸಬೇಕು ಎಂದರು.

click me!