ಉಪಚುನಾವಣೆ: ದೇವೇಗೌಡ್ರು ನೋ ಅಂದ್ರು..ಎಚ್‌ಡಿಕೆ ಯೆಸ್‌.... ದಳಪತಿಗಳ ಗೇಮ್ ಚೇಂಜ್

By Suvarna NewsFirst Published Feb 14, 2021, 8:38 PM IST
Highlights

ಬೈಎಲೆಕ್ಷನ್​ಗೆ ಜೆಡಿಎಸ್ ಸ್ಪರ್ಧಿಸಲ್ಲ ಎಂದು ಎಚ್‌.ಡಿ ದೇವೇಗೌಡ ಹೇಳಿದ್ದರು. ಆದ್ರೆ, ಇದೀಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.

ಬೆಂಗಳೂರು, (ಫೆ.14): ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಪಕ್ಷ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಎದುರಿಸಲು ನಮ್ಮ ಬಳಿ ಹಣ ಇಲ್ಲ. ಹಾಗಾಗಿ ಬೆಳಗಾವಿ ಲೋಕಸಭಾ, ಮಸ್ಕಿ, ಸಿಂದಗಿ ಹಾಗೂ ಬಸವಕಲ್ಯಾಣ ಕ್ಷೇತ್ರಗಳ ಬೈ ಎಲೆಕ್ಷನ್​ಗೆ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಲ್ಲ ಎಂದು ​ಪಕ್ಷದ ವರಿಷ್ಠ ಎಚ್​.ಡಿ. ದೇವೇಗೌಡ ಹೇಳಿದ್ದರು.

ಆದ್ರೆ, ಇದೀಗ ಮಸ್ಕಿ, ಸಿಂದಗಿ ಹಾಗೂ ಬಸವ ಕಲ್ಯಾಣ ಕ್ಷೇತ್ರಗಳಲ್ಲಿ ಜೆಡಿಎಸ್​ ಸ್ಪರ್ಧಿಸಲಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಬೈ ಎಲೆಕ್ಷನ್‌ ಕಣದಿಂದ ಹಿಂದೆ ಸರಿದ ಜೆಡಿಎಸ್: ಬಿಜೆಪಿಗೆ ಪ್ಲಸ್...!

ಅರಮನೆ ಮೈದಾನದಲ್ಲಿ ಇಂದು (ಭಾನುವಾರ) ನಡೆದ ಜೆಡಿಎಸ್ ಪಕ್ಷ ಸಂಘಟನೆ ಸಮಾವೇಶ ಮತ್ತು ಗ್ರಾ.ಪಂ. ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ದೇವೇಗೌಡರು ಆರ್ಥಿಕ ಪರಿಸ್ಥಿತಿಯ ಕಾರಣದಿಂದ ಸಿಂದಗಿ, ಬಸವ ಕಲ್ಯಾಣ, ಮಸ್ಕಿ ಕ್ಷೇತ್ರಗಳ ಬೈ ಎಲೆಕ್ಷನ್​ಗೆ ಜೆಡಿಎಸ್​ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲ್ಲ ಎಂದಿದ್ದರು. ಆದರೆ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ಈ ಮೂರು ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದು ತಿಳಿಸಿದರು.

ಜೆಡಿಎಸ್​ ಬಿಟ್ಟು ಹೋದವರಿಗೆ ನಮ್ಮ ಪಕ್ಷದ ಬಗ್ಗೆ ಚಿಂತೆ ಏಕೆ? ಬೈ ಎಲೆಕ್ಷನ್​ಗೆ ಅಭ್ಯರ್ಥಿಯನ್ನು ಕಣಕ್ಕಿಳಿಸೋದಿಲ್ಲ ಎಂದು ದೇವೇಗೌಡರು ಹೇಳಿದ್ರೆ ಅವರು ಏಕೆ ತಲೆಕೆಡಿಸಿಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಚ್​ಡಿಕೆ ಕಿಡಿಕಾರಿದರು.

ದೇವೇಗೌಡರು ಸಾಲ ಮಾಡಿ ಜೆಡಿಎಸ್​ ಕಟ್ಟಿದ್ದಾರೆ. ಅವರ ಮಾರ್ಗದರ್ಶನವನ್ನು ನಾವು ಮುಂದುವರಿಸುತ್ತಲೇ ಪಕ್ಷ ಕಟ್ಟುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು. ದೇವೇಗೌಡರನ್ನು ಪ್ರಧಾನಿ ಮಾಡಿ ಎಂದು ಕಾಂಗ್ರೆಸ್ ಬಳಿ ನಾವು ಹೋಗಿರಲಿಲ್ಲ, ಕಾಂಗ್ರೆಸ್​ನವರೇ ಕಾಲು ಹಿಡಿದುಕೊಂಡು ದೇವೇಗೌಡರನ್ನು ಪ್ರಧಾನಿ ಮಾಡಿಕೊಂಡ್ರು ಎಂದರು.

click me!