ಸಿಬಿಐಯನ್ನು ಛೂ ಬಿಟ್ರು ಬಿಜೆಪಿಯವರು: ಜನಾರ್ದನ ರೆಡ್ಡಿ

By Govindaraj SFirst Published Jan 7, 2023, 11:22 AM IST
Highlights

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹುಟ್ಟು ಹಾಕುತ್ತಿದ್ದಂತೆ ಬಿಜೆಪಿಯ ಮುಖಂಡರು ಸರ್ಕಾರಿ ಸಂಸ್ಥೆ ಸಿಬಿಐಯನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಮೇಲೆ ಛೂ ಬಿಟ್ಟಿದ್ದಾರೆ. ನೂರು ಜನ್ಮ ಎತ್ತಿ ಬಂದರೂ ತಮ್ಮ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ಕಲ್ಯಾಣ ರಾಜ್ಯ ಕ್ರಾಂತಿ ಪಕ್ಷ ಸಂಸ್ಥಾಪಕ ಜನಾರ್ದನರೆಡ್ಡಿ ಸವಾಲು ಹಾಕಿದರು.

ಸಿಂಧನೂರು (ಜ.07): ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹುಟ್ಟು ಹಾಕುತ್ತಿದ್ದಂತೆ ಬಿಜೆಪಿಯ ಮುಖಂಡರು ಸರ್ಕಾರಿ ಸಂಸ್ಥೆ ಸಿಬಿಐಯನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಮೇಲೆ ಛೂ ಬಿಟ್ಟಿದ್ದಾರೆ. ನೂರು ಜನ್ಮ ಎತ್ತಿ ಬಂದರೂ ತಮ್ಮ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದು ಕಲ್ಯಾಣ ರಾಜ್ಯ ಕ್ರಾಂತಿ ಪಕ್ಷ ಸಂಸ್ಥಾಪಕ ಜನಾರ್ದನರೆಡ್ಡಿ ಸವಾಲು ಹಾಕಿದರು.

ಅವರು ಸ್ತ್ರೀಶಕ್ತಿ ಭವನದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ವತಿಯಿಂದ ಶುಕ್ರವಾರ ನಡೆದ ಕಾರ್ಯಕರ್ತರ ಬೃಹತ್‌ ಸಭೆ ಹಾಗೂ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 2018ರಲ್ಲೇ ಪಕ್ಷ ಸ್ಥಾಪಿಸಲು ಕಾರ್ಯಯೋಜನೆ ಹಾಕಿಕೊಂಡಿದ್ದೆ. ಆಗ ಯಡಿಯೂರಪ್ಪರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಲು ಅಡ್ಡಿಯಾಗುತ್ತೇನೆಂಬ ದೃಷ್ಠಿಯಿಂದ ಹಿಂದೆ ಸರಿದೆ. ಈಗ ಹೊಸ ಪಕ್ಷ ಸ್ಥಾಪಿಸುತ್ತಿದ್ದಂತೆ ಬಿಜೆಪಿ ಸರ್ಕಾರ ಮತ್ತೆ ದಾಳಿ ನಡೆಸುವ ಭಯ ತೋರಿಸುತ್ತಿದೆ. ಕಷ್ಟಪಟ್ಟು ದುಡಿದು ಹಣ ಸಂಪಾದಿಸಿ ಆಸ್ತಿ ಮಾಡಿದ್ದೇನೆ. ರಾಜಕೀಯವಾಗಿ ತಮ್ಮನ್ನು ಮುಗಿಸಲು ಬಿಜೆಪಿಯವರು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಜನಾರ್ದನ ರೆಡ್ಡಿ ಸಾಮಾಜಿಕ ಜಾಲತಾಣಗಳ ಖಾತೆ ಹ್ಯಾಕ್: ದೂರು ದಾಖಲು

ರಾಜ್ಯದ ಕಲ್ಯಾಣಕ್ಕಾಗಿ ಹೊಸ ಪಕ್ಷ ಕಟ್ಟಿದ್ದೇನೆ. ಆದರೆ, ಕರ್ನಾಟಕದ 6 ಕೋಟಿ ಜನ ರೆಡ್ಡಿ ಜೊತೆ ನಾವಿದ್ದೇವೆಂದು ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ನನ್ನ ಕಾರಿಗೆ ಡಿಸೇಲ್‌ ಹಾಕಿಸಿಕೊಂಡು ಮುಂದೆ ನಡೆದರೆ ಸಾಕು ಜನರೇ ತಮ್ಮ ಮನೆಗಳಿಂದ ಬುತ್ತಿ ಕಟ್ಟಿಕೊಂಡು ಬಂದು ಊಟ ಮಾಡಿಸಿ ಪಕ್ಷದ ಸಂಘಟನೆಗೆ ಬಲ ನೀಡುತ್ತಿದ್ದಾರೆ. ನನ್ನ ಮಗಳು ಸಹ ನನ್ನೊಂದಿಗೆ ಪ್ರಚಾರಕ್ಕೆ ಬರಲು ಸಿದ್ಧವಾಗಿದ್ದಾಳೆ. ನಮ್ಮ ಕುಟುಂಬ ಜನಸೇವೆಗೆ ನಿರ್ಧರಿಸಿದೆ. ಇನ್ನೂ ನೂರು ದಿನಗಳಲ್ಲಿ ಕಲ್ಯಾಣ ಕರ್ನಾಟಕದ 13 ಜಿಲ್ಲೆ ಸೇರಿ ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರಗಳ ಪ್ರತಿಯೊಂದು ಹಳ್ಳಿಯಲ್ಲಿಯೂ ಸಂಚರಿಸಿ ಪಕ್ಷ ಸಂಘಟಿಸಿ ಚುನಾವಣೆ ಕಣಕ್ಕಿಳಿಯಲಾಗುವುದು. ಆದಷ್ಟುಶೀಘ್ರ ಎಲ್ಲ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಘೋಷಿಸಲಾಗುವುದು. ಈ ಪಕ್ಷ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. 2028ಕ್ಕೆ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಕಿತ್ತೆಸೆದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಅಧಿಕಾರ ಕೊಟ್ಟರೆ ವಿಧಾನಸಭೆಯ ಮೂರನೇ ಮಳಿಗೆಯಲ್ಲಿ ಕುಳಿತು ಆಡಳಿತ ನಡೆಸುವುದಲ್ಲ, ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಕೆಲಸ ಮಾಡುವಂತೆ ಮಾಡಿ ತೋರಿಸುತ್ತೇನೆ. ಜಾತಿ, ಮತ, ಧರ್ಮ ಬೇಧವಿಲ್ಲದೆ ಸರ್ವರ ಏಳಿಗೆಗಾಗಿ ಸೇವೆ ಸಲ್ಲಿಸಲಿದೆ. ಇನ್ನೂ ಸಿಂಧನೂರಿನಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರು ನೀರಿನ ರಾಜಕಾರಣ ಮಾಡಿ ಇವ್ರು ಬಿಟ್‌ ಅವ್ರು, ಅವ್ರು ಬಿಟ್‌ ಇವ್ರು ಎಂದು ಅಧಿಕಾರ ಅನುಭವಿಸುತ್ತಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ನೀರು ಬಿಡಿ ಅಂತ ಕೇಳುವ ಪರಿಸ್ಥಿತಿ ಇರದು. ನೀರಿನ ಜವಾಬ್ದಾರಿ ಸಂಪೂರ್ಣ ನನ್ನದೇ ಎಂದರು.

ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿ ನೀಡದ ಸರ್ಕಾರ: ಹೈಕೋರ್ಟ್‌ಗೆ ಸಿಬಿಐ ಮೊರೆ

ಇದೇ ಸಂದರ್ಭದಲ್ಲಿ ಗ್ರಾಪಂ, ತಾಪಂ ಹಾಲಿ-ಮಾಜಿ 250 ಸದಸ್ಯರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡರು. ಮುಖಂಡರಾದ ಶ್ರೀಕಾಂತ ಬಂಡಿ, ಅಮರೇಶ ನಾಯಕ ಲಿಂಗಸುಗೂರು, ಮಲ್ಲನಗೌಡ ನಾಗರಬೆಂಚಿ, ಬಸವರೆಡ್ಡಿ ಇದ್ದರು. ಇದಕ್ಕೂ ಮುನ್ನ ಪಿಡಬ್ಲ್ಯೂಡಿ ಕ್ಯಾಂಪಿನ ಅಂಬೇಡ್ಕರ್‌ ವೃತ್ತದಿಂದ ಸ್ತ್ರೀಶಕ್ತಿ ಭವನದವರೆಗೆ ಬೃಹತ್‌ ಬೈಕ್‌ ರಾರ‍ಯಲಿ ನಡೆಸಲಾಯಿತು. ಗಾಂಧಿ ವೃತ್ತದಲ್ಲಿ ಜೆಸಿಬಿ ಮೂಲಕ ಅಭಿಮಾನಿಗಳು ಬೃಹತ್‌ ಸೇಬಿನ ಹಾರ ಹಾಕಿ ಭವ್ಯವಾಗಿ ಸ್ವಾಗತಿಸಿದರು. ಮುಖಂಡರಾದ ಮಲ್ಲಿಕಾರ್ಜುನ ನೆಕ್ಕಂಟಿ, ಶ್ರೀಕಾಂತ ಮತ್ತಿತರರು ಇದ್ದರು.

click me!