ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ನನಗೆ ಗೌರವ ಕೊಡಲಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ. ಗೌರವ ನೀಡಲು ಶೆಟ್ಟರೇನು ಮನೆ ಅಳಿಯನಾ? ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಗಿ ಪ್ರಶ್ನಿಸಿದರು.
ಹುಬ್ಬಳ್ಳಿ (ಏ.21) : ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ನನಗೆ ಗೌರವ ಕೊಡಲಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ. ಗೌರವ ನೀಡಲು ಶೆಟ್ಟರೇನು ಮನೆ ಅಳಿಯನಾ? ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಗಿ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರವ ಸಿಗಬೇಕೆಂದರೆ, ಮಾವನ ಜತೆ ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದರು.
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ(BS Yadiyurappa), ಅನಂತಕುಮಾರ(Ananta kumar), ಶೆಟ್ಟರ್(Jagadish shettar) ಹಾಗೂ ನಾನು ಸೇರಿ ಪಕ್ಷ ಕಟ್ಟಿದ್ದೇವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಅದಕ್ಕೆ ತಕ್ಕುದಾಗಿ ಪಕ್ಷವು ಅವರಿಗೆ ಎಲ್ಲ ರೀತಿಯ ಅಧಿಕಾರ ನೀಡಿದೆ. ಹೈಕಮಾಂಡ್ ವಿವಿಧ ಹುದ್ದೆಗಳನ್ನು ನೀಡುವಾಗ ಶೆಟ್ಟರ್ ಅವರಿಗೆ ಖುಷಿಯಿತ್ತು. ಇದೀಗ ನಿವೃತ್ತರಾಗಿ ಯುವಕರಿಗೆ ಅವಕಾಶ ಮಾಡಿಕೊಡಿ ಎಂದಾಗ ಹೈಕಮಾಂಡ್ ಕಹಿಯಾಯಿತಾ? ಎಂದು ಪ್ರಶ್ನಿಸಿದರು.
ನನ್ನ ವಿಚಾರದಲ್ಲಿ ಪ್ರಲ್ಹಾದ್ ಜೋಶಿ ಗಟ್ಟಿಯಾಗಿ ಧ್ವನಿ ಎತ್ತಲಿಲ್ಲ : ಶೆಟ್ಟರ್
ಬಿಜೆಪಿ ಹಿರಿಯರನ್ನು ಯಾವತ್ತೂ ಕೀಳಾಗಿ ನೋಡಿಲ್ಲ. ಅವರಿಗೆ ಕೊಡಬೇಕಾದ ಗೌರವ ಕೊಟ್ಟಿದೆ. ಟಕೆಟ್ ಕೊಟ್ಟಿಲ್ಲ ಎಂದ ಮಾತ್ರಕ್ಕೆ ಗೌರವ ನೀಡಿಲ್ಲ ಎಂಬರ್ಥದಲ್ಲಿ ಮಾತನಾಡುವುದು ಸರಿಯಲ್ಲ. ಹೈಕಮಾಂಡ್ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ ಎಂದರು.
ಮಾಜಿ ಸಿಎಂ ಶೆಟ್ಟರ್ ಬಿಜೆಪಿಯಲ್ಲಿ ಎಲ್ಲ ಅಧಿಕಾರ ಅನುಭವಿಸಿದ್ದರು. ಟಿಕೆಟ್ ಸಿಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಿದ್ದಾರೆ. ಕೇವಲ ಒಂದು ಎಂಎಲ್‌ಎ ಸೀಟಿಗಾಗಿ ಪಕ್ಷ ತೊರೆದು ಕಾಂಗ್ರೆಸ್ ಸೇರಿರುವುದು ದುರದೃಷ್ಟಕರ ಎಂದ ಅವರು, ಮುಸ್ಲಿಮರ ಟೋಪಿ ಹಾಕಿಕೊಳ್ಳಲು ಶೆಟ್ಟರ್ ಕಾಂಗ್ರೆಸಿಗೆ ಹೋಗಿದ್ದಾರಾ? ವಿಧಾನಸೌಧದಲ್ಲಿ ಹಿಂದುತ್ವ, ಗೋಹತ್ಯೆ ಬಗ್ಗೆ ಮಾತನಾಡುವವರು, ಈಗ ಅದರ ಬಗ್ಗೆ ಏನು ಹೇಳುತ್ತಾರೆ? ಟೋಪಿ ಹಾಕಿಕೊಳ್ಳೋಕೆ ಹೋಗುವವರು ಹೋಗಲಿ ಬಿಡಿ ಎಂದು ನಾವೇ ಸುಮ್ಮನಾಗಿದ್ದೇವೆ. ಈ ಬಗ್ಗೆ ಸ್ವರ್ಗದಲ್ಲಿರುವ ತಮ್ಮ ತಂದೆಯವರಿಗೆ ಏನೆಂದು ಉತ್ತರಿಸುತ್ತಾರೆ? ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಕಾರ್ಯಗಳ ಜತೆಗೆ ಭಾರತೀಯ ಸಂಸ್ಕೃತಿ ಉಳಿಸಲು ಪ್ರತ್ಯೇಕ ತಂಡ ರಚನೆ ಮಾಡುವುದು ಹೈಕಮಾಂಡ್ ಉದ್ದೇಶವಾಗಿದೆ. ಅದಕ್ಕಾಗಿ ಹಿರಿಯರನ್ನು ಚುನಾವಣಾ ರಾಜಕೀಯದಿಂದ ಹಿಂದೆ ಸರಿಸಿ ಪಕ್ಷ ಸಂಘಟನೆಗೆ ಬಳಸಿಕೊಳ್ಳುವ ಸದುದ್ದೇಶದಿಂದಲೇ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ತಮಗೆ ಟಿಕೆಟ್ ನೀಡದ ಹೈಕಮಾಂಡ್ ನಿರ್ಧಾರವನ್ನೂ ಸಮರ್ಥಿಸಿಕೊಂಡರು.
ಹೈಕಮಾಂಡ್‌ನಿಂದ ನನಗೆ ಫೋನ್ ಕರೆ ಬಂದಂತೆ, ಶೆಟ್ಟರಗೂ ಬಂದಿದೆ. ನಾನು ಹೈಕಮಾಂಡ್ ನಿರ್ಧಾರಕ್ಕೆ ತಲೆಬಾಗಿ ಚುನಾವಣಾ ನಿವೃತ್ತಿ ಘೋಷಣೆ ಮಾಡಿದೆ. ಅದನ್ನೇ ಶೆಟ್ಟರ್ ಮಾಡಿದ್ದರೆ ಅವರು ದೊಡ್ಡವರಾಗುತ್ತಿದ್ದರು. ಅದನ್ನು ಬಿಟ್ಟು ತಾವು ನಂಬಿ ಬಂದ ತತ್ವ ಸಿದ್ಧಾಂತಕ್ಕೆ ತಿಲಾಂಜಲಿ ನೀಡಿದರು. ಕಾಂಗ್ರೆಸ್ ಸೇರಿದ್ದಕ್ಕೆ ರಾಜ್ಯದ ಕಾರ್ಯಕರ್ತರಲ್ಲಿ ಆಕ್ರೋಶವಿದೆ ಎಂದ ಅವರು, ಸಂಘಟನೆ ವಿಚಾರದಲ್ಲಿ ಬಿಜೆಪಿ ಬಹಳ ಕಟ್ಟುನಿಟ್ಟಾಗಿ ವಿಚಾರ ಮಾಡುತ್ತದೆ. ಯಾರಿಗೆ ಟಿಕೆಟ್ ನೀಡಿದರೆ, ಪಕ್ಷಕ್ಕೆ ಅನುಕೂಲ ಎಂಬುದನ್ನು ಚಿಂತನೆ ಮಾಡಿಯೇ ಅಂತಿಮಗೊಳಿಸಲಾಗುತ್ತದೆ. ಅದು ಅಲ್ಲದೇ ಟಿಕೆಟ್ ಅನ್ನು ಯಾರೊಬ್ಬರೂ ನಿರ್ಧಾರ ಮಾಡುವುದಿಲ್ಲ. ಯಾರಿಗೆ ಕೊಡಬೇಕು, ಯಾರಿಗೆ ಬಿಡಬೇಕು ಎನ್ನುವುದನ್ನು ಕಮಿಟಿ ನಿರ್ಧರಿಸುತ್ತದೆ ಎಂದು ಹೇಳಿದರು.
ಹಾಗಾದರೆ, ಕಮಿಟಿಯಲ್ಲಿ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಯಾರಿಗೆ ಅಂತಿಮವಾಗಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಗರಂ ಆದ ಈಶ್ವರಪ್ಪ, ಅದನ್ನು ಕೇಳಲು ನೀವ್ಯಾರು? ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆ ಆಗಿದ್ದನ್ನು ಹೇಳುವುದಕ್ಕೆ ಆಗುತ್ತಾ? ಎಂದು ಗುಡುಗಿದರು.
'ಹಡದ್ ತಾಯಿಗೆ ದ್ರೋಹ ಮಾಡೂದು ಹ್ಯಾಂಗ್ ಅಂದ್ರ ಅದಕ್ ಈ ಶೆಟ್ರ ಉದಾಹರಣೆ' -ಬಸನಗೌಡ ಪಾಟೀಲ ಯತ್ನಾಳ
ಈ ಬಾರಿ ಹೆಚ್ಚು ಯುವಕರಿಗೆ ಅವಕಾಶ ಕಲ್ಪಿಸಿದೆ. ಬಹಳಷ್ಟುಯುವಕರು ಆಯ್ಕೆಯಾಗಲಿದ್ದಾರೆ. ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಿಧಾನಸೌಧ ಪ್ರವೇಶಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅರವಿಂದ ಬೆಲ್ಲದ, ಅಭ್ಯರ್ಥಿ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಬಸವರಾಜ ಕುಂದಗೋಳಮಠ ಸೇರಿದಂತೆ ಹಲವರಿದ್ದರು.