
ಧಾರವಾಡ (ಅ.20): ‘ಶೆಟ್ಟರ್ ಸಿಎಂ ಆಗಿದ್ದ ಅವಧಿಯಲ್ಲಿ 2013ರಲ್ಲಿ ಒಂದು ಕಾರ್ಯಕ್ರಮಕ್ಕೆ ಜಾಗ ಕೇಳಿದಾಗ, ಶಿಕ್ಷಣ ಇಲಾಖೆಯ ಜಾಗದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅವಕಾಶವಿಲ್ಲವೆಂದು ಹೇಳಲಾಗಿತ್ತು. ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆದುಕೊಳ್ಳಬೇಕೆಂದು ಬಿಜೆಪಿ ಸರ್ಕಾರ ಆರ್‌ಎಸ್‌ಎಸ್ ಕುರಿತಾಗಿ ಆದೇಶಿಸಿತ್ತು. ಅದನ್ನೇ ನಾವು ಮುಂದುವರಿಸಿದ್ದೇವೆ’ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿರುವುದು ಸುಳ್ಳು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆ ಪತ್ರದಲ್ಲೇನಿದೆ? ಎನ್ನುವುದನ್ನು ಪ್ರಿಯಾಂಕ ಖರ್ಗೆ ಅವರು ಮೊದಲು ನೋಡಲಿ. ಅವರಿಗೆ ಧೈರ್ಯವಿದ್ದರೆ ಸಾರ್ವಜನಿಕ ಸ್ಥಳಗಳಲ್ಲಿ ಸಂಘದ ಚಟುವಟಿಕೆ ನಿಷೇಧಿಸಲಿ ನೋಡೋಣ ಎಂದು ಸವಾಲು ಹಾಕಿದರು. ಚಿತ್ತಾಪುರದಲ್ಲಿ ಪಥಸಂಚಲನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಪಥಸಂಚಲನದಲ್ಲಿ ಸಾವಿರಾರು ಯುವಕರು ಭಾಗವಹಿಸುತ್ತಿದ್ದಾರೆ. ಹೀಗಾಗಿ ಜನಪ್ರಿಯತೆ ಸಹಿಸಲು ಅವರಿಗೆ ಆಗುತ್ತಿಲ್ಲ. ಆದ್ದರಿಂದ ಚಿತ್ತಾಪುರದಲ್ಲಿ ಅದನ್ನು ತಡೆಯುವ ಪ್ರಯತ್ನ ಮಾಡಿದರು. ಧ್ವಜಗಳನ್ನು ಕಿತ್ತು ಹಾಕಿದರು. ಆದರೆ, ಹೈಕೋರ್ಟ್ ಪಥಸಂಚಲನಕ್ಕೆ ಅವಕಾಶ ನೀಡಿದೆ. ಒಂದು ವೇಳೆ ಕಾನೂನುಬಾಹಿರ ಆಗಿದ್ದರೆ ಅನುಮತಿ ಸಿಗುತ್ತಿರಲಿಲ್ಲ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆಯವರ ಅಹಂಕಾರದಿಂದ ಅಶಾಂತಿ ಉಂಟಾಗುತ್ತಿದೆ. ಹಿಂದೂ ಸಮಾಜ, ಲಿಂಗಾಯತ ಸಮಾಜ ಒಡೆಯುವುದೇ ಸಿದ್ದರಾಮಯ್ಯನವರ ಉದ್ದೇಶ. ಜತೆಗೆ, ಅಲ್ಪಸಂಖ್ಯಾತರ ತುಷ್ಟೀಕರಣವೂ ಅವರ ಕರ್ತವ್ಯವಾಗಿದ್ದು, ಇದರಿಂದಾಗಿ ಸಮಾಜ ಹಾಳಾಗುತ್ತಿದೆ. ಮುಖ್ಯಮಂತ್ರಿ, ರಾಜ್ಯ ಸರ್ಕಾರ ಆದಿಯಾಗಿ ಯಾರೇ ಆಗಲಿ, ಆರ್‌ಎಸ್‌ಎಸ್ ನ್ನು ಎದುರು ಹಾಕಿಕೊಂಡವರು ಭಸ್ಮ ಆಗಲಿದ್ದಾರೆ. ದೀಪ ಆರುವಾಗ ಜೋರಾಗಿ ಉರಿಯುತ್ತದೆ ಎಂಬಂತೆ ಸಿದ್ದರಾಮಯ್ಯ ಸರ್ಕಾರದ ಅಂತಿಮ ಕ್ಷಣ ಬಂದಿದೆ ಎಂದು ಶಾಪ ಹಾಕಿದರು.
ಆರ್‌ಎಸ್‌ಎಸ್‌ನಂತಹ ಸಂಘಗಳ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಲು ತೊಂದರೆ ಇಲ್ಲ. ಈ ಕುರಿತಾಗಿ ಕೇಂದ್ರ ಸರ್ಕಾರ ಆದೇಶಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಆದೇಶಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಹೀಗಾಗಿ ಲಿಂಗಸೂರಿನಲ್ಲಿ ಪಿಡಿಒ ಅಮಾನತು ಕಾನೂನುಬಾಹಿರ ಎಂದು ಶೆಟ್ಟರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.