
ಹುಬ್ಬಳ್ಳಿ (ಮಾ.23): ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆಯಲ್ಲಿ ಜನಸಂಖ್ಯೆಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಬಾರದು. ಇದಕ್ಕೆ ಭೌಗೋಳಿಕ ಅಂಶಗಳನ್ನು ಪರಿಗಣಿಸದೇ ಇದ್ದಲ್ಲಿ ದೇಶದ ಸಮಗ್ರತೆಗೆ ಭಂಗ ತರುವ ಸಾಧ್ಯತೆಗಳಿವೆ. ಒಟ್ಟು ದೇಶದ ಚಿತ್ರಣವನ್ನು ಪರಿಗಣಿಸಬೇಕೇ ಹೊರತು ಕೆಲವು ರಾಜ್ಯಗಳನ್ನಷ್ಟೇ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ.ವೀರಪ್ಪ ಮೊಯ್ಲಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿವೆ. ಲೋಕಸಭೆ ಕ್ಷೇತ್ರ ಮರು ವಿಂಗಡಣೆಯಲ್ಲಿ ಜನಸಂಖ್ಯೆಯನ್ನು ಪರಿಗಣಿಸಿದರೆ ಈ ರಾಜ್ಯಗಳಿಗೆ ಅನ್ಯಾಯವಾಗಲಿದೆ. ರಾಷ್ಟ್ರದ ಹಿತದೃಷ್ಟಿಯಿಂದ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದಿದ್ದಕ್ಕೆ ಶಿಕ್ಷೆ ಕೊಟ್ಟಂತಾಗಲಿದೆ. ಬಿಜೆಪಿಯವರು ಆಲೋಚನೆ ಮಾಡುತ್ತಿರುವ ಕ್ಷೇತ್ರ ವಿಂಗಡಣೆಯ ಸೂತ್ರವು ದೇಶದಲ್ಲಿ ಅತಂತ್ರತೆ ಹಾಗೂ ಸಮಗ್ರತೆಗೆ ಭಂಗ ತರುವ ಸಾಧ್ಯತೆ ಇದೆ ಎಂದರು.
ತ್ರಿಭಾಷಾ ಸೂತ್ರ ಹೇರಿಕೆ ಸರಿಯಲ್ಲ: ತ್ರಿಭಾಷಾ ಸೂತ್ರವನ್ನು ಹೇರಿಕೆ ಮಾಡಬಾರದು. ಯಾವುದೇ ಭಾಷೆಯನ್ನು ರಾಜ್ಯಗಳ ಮೇಲೆ ಹೇರಿಕೆ ಮಾಡಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದಿಂದಲೂ ಕೂಡ ಸಾಧ್ಯವಿಲ್ಲ. ಭಾಷಾ ಕಲಿಕೆ ವಿಷಯದಲ್ಲಿ ಆಯಾ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕು ಎನ್ನುವ ನೀತಿ ಕರ್ನಾಟಕದಲ್ಲಿದೆ. ಕೇಂದ್ರ ಕಾಂಗ್ರೆಸ್ ಕೂಡ ಇದೇ ನೀತಿಯನ್ನು ಹೊಂದಿದೆ. ದ್ವಿಭಾಷಾ ಸೂತ್ರ ಮಾಡುವುದು ಬಿಡುವುದು ಆಯಾ ರಾಜ್ಯಗಳಿಗೆ ಬಿಟ್ಟಿದ್ದು. ಅವುಗಳಿಗೆ ಅವಕಾಶವಿದೆ ಎಂದರು.
ಹನಿಟ್ರ್ಯಾಪ್ ಹೊಸದಲ್ಲ: ಹನಿಟ್ರ್ಯಾಪ್‌ನಂತಹ ವಿಚಾರ ಹೊಸದೇನಲ್ಲ. ವಿರೋಧ ಪಕ್ಷದವರು ಸದಾಕಾಲ ಇಂತಹ ವಿಷಯಗಳನ್ನು ಹುಡುಕುತ್ತಲೇ ಇರುತ್ತಾರೆ. ಅವರ ಪ್ರಚೋದನೆಗೆ ಯಾರೂ ಒಳಗಾಗಬಾರದು. ಸದನದಲ್ಲಿ ವಿರೋಧ ಪಕ್ಷದವರ ವರ್ತನೆ ಸರಿಯಲ್ಲ. ಇದು ಸಭ್ಯತೆಯ ಲಕ್ಷಣವೂ ಅಲ್ಲ. ಅವರ ವರ್ತನೆ ವಿಕೋಪಕ್ಕೆ ಹೋದ ಹಿನ್ನೆಲೆ ವಿರೋಧ ಪಕ್ಷದ ಶಾಸಕರನ್ನು ಅಮಾನತ್ತು ಮಾಡಲಾಗಿದೆ ಎಂದರು. ಸದನದಲ್ಲಿ ಹನಿಟ್ರ್ಯಾಪ್ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದ್ದೇ ನಮ್ಮ ಪಕ್ಷದವರು. ನಮ್ಮ ಪಕ್ಷದ ಮಂತ್ರಿಗಳು ಇದನ್ನು ಆಂತರಿಕವಾಗಿ ಚರ್ಚೆ ಮಾಡಬೇಕಿತ್ತು. ಆದರೆ, ಬಹಿರಂಗವಾಗಿ ಸದನದಲ್ಲಿ ಚರ್ಚೆ ಮಾಡಬಾರದಿತ್ತು. ಇದರಿಂದಾಗಿ ಪಕ್ಷಕ್ಕೆ ಮುಜುಗರ, ಅಭದ್ರತೆ ಹೆಚ್ಚಾಗುತ್ತದೆ ಎಂದರು.
ಹನಿಟ್ರ್ಯಾಪ್ ಪ್ರಕರಣ, ಅಗತ್ಯ ಬಿದ್ದರೆ ಸಿಎಂ ಭೇಟಿ: ಸಚಿವ ಕೆ.ಎನ್.ರಾಜಣ್ಣ
ಇಂಡಿ ಒಕ್ಕೂಟದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ 350-400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಂಡಿದ್ದ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬ್ರೇಕ್ ಹಾಕಿದ್ದೇ ಇಂಡಿ ಒಕ್ಕೂಟ. ವಿಧಾನಸಭಾ ಚುನಾವಣೆಯಲ್ಲಿ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ಪ್ರಾದೇಶಿಕ ಪಕ್ಷಗಳು ತಮ್ಮದೇ ಆದ ನಿರ್ಧಾರ ಕೈಗೊಳ್ಳಲು ಸ್ವತಂತ್ರ್ಯವಾಗಿರುತ್ತವೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ತಾಕತ್ತು ಇಂಡಿ ಒಕ್ಕೂಟಕ್ಕಿದೆ ಎಂದರು. ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳಿಂದ ಸರ್ಕಾರಕ್ಕೆ ಅಭದ್ರತೆ ಕಾಡುವುದು ನಿಶ್ಚಿತ. ಇಂತಹ ಚರ್ಚೆಗಳನ್ನು ಸಾರ್ವಜನಿಕವಾಗಿ ಮಾಡಬಾರದು. ಅಧಿಕಾರ ಹಂಚಿಕೆ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಣಯ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.