
ಮಂಡ್ಯ/ಮಳವಳ್ಳಿ(ಜ.14): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ ಮಾಡಿದ ಬೆನ್ನಲ್ಲೇ ಅವರ ಮನೆ ದೇವರು ಎರಡು ಕ್ಷೇತ್ರದಿಂದ ಸ್ಪರ್ಧಿಸುವಂತೆ ನುಡಿ ಸಂದೇಶ ನೀಡಿದೆ ಎನ್ನಲಾಗಿದ್ದು, ತೀವ್ರ ಸಂಚಲನ ಮೂಡಿಸಿದೆ. ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಸಿದ್ದರಾಮಯ್ಯ ಎರಡು ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸಿದ್ದರಾಮಯ್ಯನವರ ಮನೆ ದೇವರು ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯಲ್ಲಿರುವ ಆದಿನಾಡು ಶ್ರೀ ಚಿಕ್ಕಮ್ಮದೇವಿ ದೇವಸ್ಥಾನಕ್ಕೆ ಪುತ್ರ ಡಾ.ಯತೀಂದ್ರ ಭೇಟಿ ನೀಡಿದ್ದ ಸಮಯದಲ್ಲಿ ಈ ಸಂದೇಶ ನೀಡಿರುವುದಾಗಿ ತಿಳಿದುಬಂದಿದೆ.
‘ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಪ್ರಬಲ ಶಕ್ತಿಗಳ ವಿರೋಧ ಇದೆ. ಒಂದು ಕಡೆ ಬಾಹುಬಲ ಚಾಚುವುದರಿಂದ ಫಲ ಸಿಗುವುದಿಲ್ಲ. ಎರಡು ಕಡೆ ಬಾಹುಬಲ ಚಾಚಬೇಕು. ಒಂದು ಕಡೆ ಚಾಚಿದರೆ ತಪ್ಪಾಗುತ್ತೆ. ಅರ್ಥ ಮಾಡಿಕೊಳ್ಳಿ. ಎರಡೂ ಕಡೆ ಚಾಚಿದರೆ ನಾನು ಗೆಲ್ಲಿಸಿಕೊಂಡು ಬರುತ್ತೇನೆ’ ಎಂದು ದೇವರು ಪೂಜಾರಿ ಮೂಲಕ ನುಡಿ ಹೇಳಿದ್ದಾಗಿ ತಿಳಿದುಬಂದಿದೆ.
Mandya: ಇಬ್ರಾಹಿಂರಿಂದಲೇ ಜೆಡಿಎಸ್ ಅವನತಿ: ಸಿ.ಪಿ.ಯೋಗೇಶ್ವರ್
‘ನಾನು ನಿಮ್ಮ ಮನೆ ದೇವತೆ. ನಾನೇ ಮೂಲದೇವರು. ಅವಕಾಶ ಸಿಕ್ಕರೆ ಯಾವಾಗಲಾದರೂ ಬಂದು ಸಿದ್ದರಾಮಯ್ಯಗೆ ನನ್ನ ಆಶೀರ್ವಾದ ತೆಗೆದುಕೊಂಡು ಹೋಗಲು ಹೇಳು’ ಎಂದು ಪುತ್ರ ಡಾ.ಯತೀಂದ್ರ ಅವರು ದೇವಿಗೆ ಪೂಜೆ ಸಲ್ಲಿಸುವ ವೇಳೆ ದೇವಾಲಯದ ಅರ್ಚಕ ಡಾ.ಲಿಂಗಣ್ಣ ಅವರ ಮೈಮೇಲೆ ಬಂದ ಶಕ್ತಿ ದೇವತೆ ಸೂಚನೆ ಕೊಟ್ಟಿದೆ ಎನ್ನಲಾಗಿದೆ.
ಡಾ.ಯತೀಂದ್ರ ಅವರು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಜತೆಗೆ ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ದೇವಿ ಈ ಸೂಚನೆ ನೀಡಿದ್ದು, ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೇವಿ ಆಜ್ಞೆಯಂತೆ ಸಿದ್ದರಾಮಯ್ಯ ಎರಡು ಕ್ಷೇತ್ರಗಳಿಂದ ಸ್ಪರ್ಧೆಗಿಳಿಯುವರೇ ಎನ್ನುವುದು ಈಗಿನ ಕುತೂಹಲ.
ಪಕ್ಷ ಸೇರ್ಪಡೆ ಬಗ್ಗೆ ಸಂಸದೆ ಸುಮಲತಾ ಸ್ಪಷ್ಟನೆ
ಒಂದೇ ಕಡೆ ಸ್ಪರ್ಧೆ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೆಂಬ ಅಭಿಪ್ರಾಯ ನನ್ನದಲ್ಲ. ಅದು ಯತೀಂದ್ರನ ಅಭಿಪ್ರಾಯ. ತಂದೆಯ ಮೇಲಿನ ಪ್ರೀತಿಯಿಂದ ವರುಣದಲ್ಲೂ ನಿಲ್ಲುವಂತೆ ಹೇಳುತ್ತಿದ್ದಾರೆ. ನನ್ನ ಅಭಿಪ್ರಾಯ ಒಂದೇ ಕಡೆ ನಿಲ್ಲುವುದು ಅಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಅಪ್ಪನಿಗೆ ಹೇಳಿಲ್ಲ
ಅರ್ಚಕರು ಎರಡು ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೇಳಿರೋ ವಿಚಾರವನ್ನು ಯಾವ ರೀತಿ ಸ್ವೀಕರಿಸಬೇಕೆಂದು ಯೋಚಿಸಿಲ್ಲ. ಈ ವಿಚಾರ ತಂದೆಯ ಜತೆ ಚರ್ಚಿಸಿಲ್ಲ. ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟ ವಿಚಾರ ಅಂತ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.