ಸಾ.ರಾ ಮಹೇಶ್ ಮೈಸೂರು ಕೊಡಗು ಲೋಕಸಭಾ ಅಭ್ಯರ್ಥಿ ಆಗ್ತಾರಾ?

By Girish Goudar  |  First Published Nov 30, 2023, 1:00 AM IST

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದಿಂದ ಮಾಜಿ ಸಚಿವ, ಕೊಡಗು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಕಣಕ್ಕೆ ಇಳಿಯುತ್ತಾರೆ ಎನ್ನುವ ಸುಳಿವು ಸಿಕ್ಕಿದೆ. ಅದಕ್ಕೆ ಪೂರಕವಾಗಿ ಸಾ.ರಾ. ಮಹೇಶ್ ಅವರ ಜೊತೆ ನಿನ್ನೆಯಷ್ಟೇ ಕೊಡಗು ಜಿಲ್ಲೆಗೆ ಬಂದಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿರುವುದು ಆ ಸುಳಿವಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ. 


ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ನ.30): ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದು ಬೀಗಿರುವ ಕಾಂಗ್ರೆಸ್ ಅನ್ನು ಕಟ್ಟಿ ಹಾಕಲು ರಾಷ್ಟ್ರೀಯ ಪಕ್ಷ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಎರಡು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿರುವುದು ಗೊತ್ತಿರುವ ವಿಷಯವೇ. ಆದರೆ ಯಾವ ಕ್ಷೇತ್ರಕ್ಕೆ ಯಾವ ಪಕ್ಷದ ಅಭ್ಯರ್ಥಿ ಮತ್ತು ಯಾರೂ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. 

Latest Videos

undefined

ಈ ನಡುವೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದಿಂದ ಮಾಜಿ ಸಚಿವ, ಕೊಡಗು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಕಣಕ್ಕೆ ಇಳಿಯುತ್ತಾರೆ ಎನ್ನುವ ಸುಳಿವು ಸಿಕ್ಕಿದೆ. ಅದಕ್ಕೆ ಪೂರಕವಾಗಿ ಸಾ.ರಾ. ಮಹೇಶ್ ಅವರ ಜೊತೆ ನಿನ್ನೆಯಷ್ಟೇ ಕೊಡಗು ಜಿಲ್ಲೆಗೆ ಬಂದಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿರುವುದು ಆ ಸುಳಿವಿಗೆ ಮತ್ತಷ್ಟು ಬಲ ಬಂದಂತೆ ಆಗಿದೆ. 

ಜನತಾ ದರ್ಶನವನ್ನು ಜನಸ್ಪಂದನ ಎಂದ ಸಿಎಂ: ಕುಮಾರಸ್ವಾಮಿ ಅಭಿನಂದನೆ..!

ಹೌದು ಮಾಜಿ ಸಚಿವ ಸಾ.ರಾ. ಮಹೇಶ್ ಅವರ ತೋಟದ ಮನೆಯಲ್ಲೇ ಈ ಸಭೆ ನಡೆದಿದ್ದು ಈ ವೇಳೆ ಹೆಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರು ಉತ್ತರ ಅಥವಾ ತುಮಕೂರು ಕ್ಷೇತ್ರಗಳನ್ನು ತ್ಯಾಗ ಮಾಡಿಯಾದರೂ ಸರಿಯೇ ಮೈಸೂರು ಕೊಡಗು ಕ್ಷೇತ್ರಕ್ಕೆ ತಮ್ಮ ಪಕ್ಷದಿಂದಲೇ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಬೇಕು. ಅದು ಕೂಡ ಸಾ.ರಾ. ಮಹೇಶ್ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ದೃಢ ನಿರ್ಧಾರ ಮಾಡಿರುವುದಾಗಿ ಕಾರ್ಯಕರ್ತರ ಸಭೆಯಲ್ಲಿ ಕುಮಾರಸ್ವಾಮಿ ಅವರು ಹೇಳಿದ್ದಾರೆ ಎಂದು ಹೆಸರು ಹೇಳದ ಕೊಡಗು ಜೆಡಿಎಸ್ ಮುಖಂಡರೊಬ್ಬರು ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ. 

ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಅವರು, ಮೈಸೂರು ಕೊಡಗು ಕ್ಷೇತ್ರ ಬಿಡುವುದಿಲ್ಲ ಎನ್ನುವುದಕ್ಕೆ ಅದೇನು ನನ್ನಪ್ಪನ ಮನೆಯ ಆಸ್ತಿಯೇ ಎಂದು ಪ್ರಶ್ನಿಸಿದ್ದಾರೆ. ಅವರ ಈ ಮಾತು ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನಾಗಿ ಸಾ.ರಾ ಮಹೇಶ್ ಅವರನ್ನು ಮಾಡುತ್ತೇವೆ ಎನ್ನುವ ಚರ್ಚೆ ಸತ್ಯ ಎನ್ನುವುದನ್ನು ಸಾಬೀತು ಪಡಿಸಿದಂತೆ ಇದೆ. 

ಯಾವ ಪ್ರಾಂತ್ಯದಲ್ಲಿ ನಾವು ಪ್ರಬಲ ಎನ್ನುವುದಕ್ಕಿಂತ 28 ಸ್ಥಾನಗಳಲ್ಲೂ ಗೆಲ್ಲುವುದೇ ನಮ್ಮ ಆದ್ಯತೆ: ಎಚ್‌ಡಿಕೆ

ಈ ಕುರಿತು ಮಂಗಳವಾರ ಹಾಕತ್ತೂರಿನಲ್ಲಿ ಸಾ.ರಾ. ಮಹೇಶ್ ಅವರ ತೋಟದ ಮನೆಯಲ್ಲಿ ನಡೆದ ಸಭೆಗೂ ಮೊದಲೇ ಮಾತನಾಡಿದ್ದ ಕುಮಾರಸ್ವಾಮಿ ಅವರು ನಾವು ಯಾವ ಕ್ಷೇತ್ರದಲ್ಲಿ ಅಥವಾ ಯಾವ ಭಾಗದಲ್ಲಿ ಪ್ರಾಬಲ್ಯ ಹೊಂದಿದ್ದೇವೆ ಎನ್ನುವುದು ಮುಖ್ಯವಲ್ಲ. ಬದಲಾಗಿ 28 ಕ್ಷೇತ್ರಗಳಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು ಎನ್ನುವುದು ನಮ್ಮ ಆಶಯ. ನಾವಿನ್ನು ಟಿಕೆಟ್ ಹಂಚಿಕೆ ಕುರಿತು ಯಾವುದೇ ನಿರ್ಧಾರಗಳನ್ನು ಮಾಡಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ದೇವೇಗೌಡರು ಸೇರಿದಂತೆ ಪ್ರಮುಖರು ಕುಣಿತು ಈ ಕುರಿತು ಚರ್ಚೆ ಮಾಡುತ್ತಾರೆ ಎಂದಿದ್ದಾರೆ. 

ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಗೆ ಭೇಟಿ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಜಿ ಸಚಿವ ಸಾರಾ. ಮಹೇಶ್ ಮತ್ತು ಮಾಜಿ ಶಾಸಕ ಮಹದೇವ ಅವರನ್ನು ಕರೆಸಿ ಸಭೆ ಮಾಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಏನೇ ಆಗಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಯಾರು ಎನ್ನುವ ನಿರ್ಧಾರಕ್ಕೆ ಸ್ವಲ್ಪ ದಿನಗಳಲ್ಲೇ ಉತ್ತರ ಸಿಗಲಿದೆ.

click me!